ಮಂಗಳೂರು ಏರ್‌ಪೋರ್ಟ್‌ನಲ್ಲಿ ಬಾಂಬ್ ಇರಿಸಿ ದುಷ್ಕೃತ್ಯ ಎಸಗಲು ಯತ್ನಿಸಿದ್ದ ಶಂಕಿತ ಉಗ್ರ ಆದಿತ್ಯ ರಾವ್ ಗೆ ನ್ಯಾಯಾಲಯವು 20 ವರ್ಷಗಳ ಸಜೆ ವಿಧಿಸಿದೆ. ಸುಮಾರು ಎರಡು ವರ್ಷಗಳ ನಿರಂತರ ವಿಚಾರಣೆಯ ಬಳಿಕ ಕೋರ್ಟ್ ತೀರ್ಪು ನೀಡಿದೆ. ಈ ವೇಳೆ, ಬಾಂಬ್ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳನ್ನು ಅಮೇಜಾನ್ ಮೂಲಕ ತರಿಸಿಕೊಂಡಿರುವ ಸತ್ಯಾಂಶ ಬಯಲಾಗಿದೆ.
ಸುಮಾರು 80 ಪುಟಗಳ ತೀರ್ಪಿನಲ್ಲಿ ತನಿಖಾ ದಳ ಕಂಡುಹಿಡಿದ ಅಂಶಗಳ ಕುರಿತು ಪ್ರಸ್ತಾಪಿಸಲಾಗಿದೆ. ಜನರ ಜೀವಕ್ಕೆ ಹಾಣಿ ಉಂಟು ಮಾಡುವ ಹಾಗೂ ಭಯ ಹುಟ್ಟಿಸುವ ಉದ್ದೇಶದಿಂದ ಆದಿತ್ಯ ರಾವ್ ಬಾಂಬ್ ಸ್ಫೋಟಿಸುವ ಸಂಚು ರೂಪಿಸಿದ್ದ. ಹಾಗಾಗಿ, ಬಾಂಬ್ ನಿರ್ಮಿಸುವ ವಿಧಾನವನ್ನು ತಿಳಿಯಲು ‘Just Dial’ ಸಂಸ್ಥೆಯೊಂದಿಗೆ ಸಂಪರ್ಕ ಬೆಳೆಸಿದ್ದ, ಎಂದು ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ.
ಬಾಂಬ್ ತಯಾರಿ ಕುರಿತು ತಿಳಿಯಲು ಹಲವು ಸೈಬರ್ ಸೆಂಟರ್ಗಳಿಗೆ ರಾವ್ ಭೇಟಿ ನೀಡಿದ್ದ. ಹಲವು ಅಂತರ್ಜಾಲ ತಾಣಗಳಿಂದ ಮಾಹಿತಿ ಪಡೆದು ಬಾಂಬ್ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳನ್ನು ಅಮೇಜಾನ್ ಮೂಲಕ ಸಂಪಾದಿಸಿದ್ದ. ಯಾವುದೇ ಪರವಾನಗಿ ಇಲ್ಲದೇ ಬಾಂಬ್ ತಯಾರಿಕಾ ವಸ್ತುಗಳನ್ನು ಸಂಗ್ರಹಿಸಿದ್ದ ಆದಿತ್ಯ ರಾವ್, ಅವುಗಳನ್ನು ಮಂಗಳೂರಿನ ಹೋಟೆಲ್ ಒಂದರ ಕಾರ್ಮಿಕರ ಮನೆಗಳಲ್ಲಿ ಬಚ್ಚಿಟ್ಟಿದ್ದ. ಇದರ ಬಳಿಕ, ಕಚ್ಚಾ ವಸ್ತುಗಳನ್ನು ಬಳಸಿ ಸ್ಫೋಟಕವನ್ನು ತಯಾರಿಸಿದ್ದ. ಬಳಿಕ, ಕಪ್ಪು ಬಣ್ಣದ ಬ್ಯಾಗ್ ನಲ್ಲಿ ಸ್ಫೋಟಕ ತುಂಬಿ ಜನನಿಬಿಡ ಸ್ಥಳವಾದ ಮಂಗಳೂರು ಏರ್‌ಪೋರ್ಟ್‌ನ ನಿರ್ಗಮನ ಗೇಟ್ ಬಳಿ ಇರಿಸಿದ್ದ ಎಂದು ತನಿಖಾದಳವು ವರದಿ ನೀಡಿದೆ.
2018ರಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೆಕ್ಯುರಿಟಿ ಸೂಪರ್ವೈಸರ್ ಕೆಲಸಕ್ಕೆ ಆದಿತ್ಯ ರಾವ್ ಅರ್ಜಿ ಸಲ್ಲಿಸಿದ್ದ. ಅದಕ್ಕಾಗಿ ಸುಮಾರು ರೂ. 7,500 ಖರ್ಚು ಮಾಡಿದ್ದ. ಆ ಕೆಲಸ ಸಿಗದ ಕಾರಣ, ವಿಮಾನ ನಿಲ್ದಾಣದಲ್ಲಿ ಹಾಗೂ ರೈಲು ನಿಲ್ದಾಣದಲ್ಲಿ ಬಾಂಬ್ ಇರುವುದಾಗಿ ಸುಳ್ಳು ಬೆದರಿಕೆ ಕರೆ ಮಾಡಿ ಆತಂಕ ಸೃಷ್ಟಿಸಿದ್ದ.

ಈ ಕಾರಣಕ್ಕಾಗಿ ಅವನಿಗೆ ಒಂದು ವರ್ಷದ ಜೈಲು ಶಿಕ್ಷೆಯೂ ಆಗಿತ್ತು. ಇದರಿಂದಾಗಿ ಸರ್ಕಾರದ ವಿರುದ್ದ ದ್ವೇಷ ಭಾವನೆಯನ್ನು ಬೆಳೆಸಿಕೊಂಡಿದ್ದ ಆದಿತ್ಯ ರಾವ್, ಬಾಂಬ್ ಸ್ಫೋಟದಂತಹ ದುಷ್ಕೃತ್ಯಗಳನ್ನು ಮಾಡಲು ನಿರ್ಧರಿಸಿದ್ದ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.
ಸ್ಫೋಟಕ ವಸ್ತುಗಳ ಕಾಯ್ದೆ (1908)ರ ಸೆಕ್ಷನ್ 4 ಹಾಗೂ ಯುಎಪಿಎ 1967ರ ಸೆಕ್ಷನ್ 16ರ ಅಡಿಯಲ್ಲಿ ಆದಿತ್ಯ ರಾವ್ ನನ್ನು ದೋಷಿ ಎಂದು ಪರಿಗಣಿಸಿ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ರೂ. ಹತ್ತು ಸಾವಿರ ದಂಡವನ್ನು ವಿಧಿಸಿ ತೀರ್ಪು ನೀಡಿದೆ. ಜನವರಿ 20, 2020ರಂದು ಆದಿತ್ಯ ರಾವ್ ಬಾಂಬ್ ಇರಿಸಿದ್ದ. ಭದ್ರತಾ ಅಧಿಕಾರಿಗಳು ಅಂದೇ ಬಾಂಬ್ ಪತ್ತೆ ಮಾಡಿ ಅದನ್ನು ನಿಷ್ಕ್ರೀಯಗೊಳಿಸಿದ್ದರು.
ಘಟನೆಯ ಬಳಿಕ ತಲೆಮರೆಸಿಕೊಂಡಿದ್ದ ಆದಿತ್ಯ ಕೊನೆಗೆ ಡಿಜಿಪಿ ಕಚೇರಿಯಲ್ಲಿ ಶರಣಾಗಿದ್ದ. ನ್ಯಾಯಾಲಯದಲ್ಲಿ ತಾನೇ ತಪ್ಪಿತಸ್ಥ ಎಂದು ಆದಿತ್ಯ ಒಪ್ಪಿಕೊಂಡಿದ್ದರೂ, CrPC ಸೆಕ್ಷನ್ 229ರ ಅಡಿಯಲ್ಲಿ ಅವನ ಮೇಲಿನ ಆರೋಪಗಳನ್ನು ಸಾಬೀತುಪಡಿಸಲು ಸರ್ಕಾರಿ ವಕೀಲರಿಗೆ ನ್ಯಾಯಾಲಯ ಆದೇಶ ನೀಡಿತ್ತು.