ದೆಹಲಿಯಲ್ಲಿ ಶನಿವಾರ (ಸೆಪ್ಟೆಂಬರ್ 9) ನಡೆಯಲಿರುವ ಜಿ 20 ಶೃಂಗಸಭೆ ಔತಣಕೂಟಕ್ಕೆ ರಾಜ್ಯಸಭಾ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆಹ್ವಾನ ನೀಡಿಲ್ಲ ಎಂದು ಅವರ ಕಚೇರಿ ಶುಕ್ರವಾರ (ಸೆಪ್ಟೆಂಬರ್ 8) ಹೇಳಿದೆ.
ಔತಣಕೂಟದ ನೇತೃತ್ವವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಹಿಸಿದ್ದಾರೆ. ಖರ್ಗೆ ಅವರು ಸಂಪುಟ ದರ್ಜೆಯ ಸಚಿವರ ಶ್ರೇಯಾಂಕ ಹೊಂದಿದ್ದು ದೇಶದ ದೀರ್ಘಾವಧಿಯ ಪಕ್ಷದ ಅಧ್ಯಕ್ಷರಾಗಿದ್ದಾರೆ.
ಇತರ ಪಕ್ಷಗಳ ಯಾವ ನಾಯಕರನ್ನೂ ಜಿ 20 ಶೃಂಗಸಭೆ ಔತಣಕೂಟಕ್ಕೆ ಆಮಂತ್ರಿಸಿಲ್ಲ ಎಂದು ಮೂಲಗಳು ಹೇಳಿವೆ.
ಎಲ್ಲ ಸಂಪುಟ ಮತ್ತು ರಾಜ್ಯ ಸಚಿವರು, ಇತರ ಎಲ ಸಚಿವರನ್ನು ಔತಣ ಕೂಟಕ್ಕೆ ಆಹ್ವಾನಿಸಲಾಗಿದೆ. ಉದ್ಯಮಿಗಳು ಮತ್ತು ಭಾರತ ಸರ್ಕಾರದ ಎಲ್ಲ ಇಲಾಖೆಗಳ ಕಾರ್ಯದರ್ಶಿಗಳು, ಅತಿಥಿಗಳೂ ಔತಣ ಕೂಟದ ಪಟ್ಟಿಯಲ್ಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮಾಜಿ ಪ್ರಧಾನಿಗಳಾದ ಡಾ.ಮನಮೋಹನ್ ಸಿಂಗ್ ಹಾಗೂ ಎಚ್.ಡಿ.ದೇವೇಗೌಡ ಅವರನ್ನೂ ಜಿ 20 ಶೃಂಗಸಭೆ ಔತಣಕೂಟಕ್ಕೆ ಆಹ್ವಾನಿಸಲಾಗಿದೆ ಎಂದು ವರದಿಯಾಗಿದೆ.
ಬಿಹಾರದ ನಿತೀಶ್ ಕುಮಾರ್, ಜಾರ್ಖಂಡ್‌ನ ಹೇಮಂತ್ ಸೊರೇನ್, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ತಮಿಳುನಾಡಿನ ಎಂ.ಕೆ.ಸ್ಟಾಲಿನ್, ದೆಹಲಿಯ ಅರವಿಂದ್ ಕೇರ್ಜಿವಾಲ್ ಮತ್ತು ಪಂಜಾಬ್‌ನ ಭಗವಂತ್ ಮಾನ್ ಮೊದಲಾದ ಮುಖ್ಯಮಂತ್ರಿಗಳು ಔತಣಕೂಟದಲ್ಲಿ ಭಾಗವಹಿಸುವಿಕೆಯನ್ನು ಖಚಿತಪಡಿಸಿದ್ದಾರೆ.
ಭಾರತ ಮಂಟಪಂ ಔತಣಕೂಟಕ್ಕೆ ತೆರಳಲು ಎಲ್ಲ ಅತಿಥಿಗಳಿಗೆ ಶನಿವಾರ ಸಂಜೆ 6 ಗಂಟೆ ಸುಮಾರಿಗೆ ಸಂಸತ್ ಕಟ್ಟಡಕ್ಕೆ ಆಗಮಿಸಲು ಕೇಂದ್ರ ಸರ್ಕಾರ ಕೋರಿದೆ.