ಕಲಬುರಗಿಯಲ್ಲಿ ನಿಮಾನ್ಸ್ ಆಸ್ಪತ್ರೆಯ ಶಾಖೆ ಸ್ಥಾಪಿಸುವಂತೆ ರಾಜ್ಯಸಭೆ ವಿರೋಧಪಕ್ಷದ ನಾಯಕರಾದ ಎಂ ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಅವರನ್ನು ಒತ್ತಾಯಿಸಿದರು.
ಕಲಬುರಗಿ ಯ ಜಯದೇವ ಆಸ್ಪತ್ರೆಯ ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಒತ್ತುಕೊಡುವಂತೆ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಖರ್ಗೆ ಅವರು ಈ ಭಾಗದ ಜನರು ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕೆಂದರೆ ದೂರದ ಬೆಂಗಳೂರಿಗೆ ಹೋಗಬೇಕಾಗುತ್ತದೆ. ಹಾಗಾಗಿ ಇಲ್ಲಿ ನಿಮಾನ್ಸ್ ಶಾಖೆ ತೆರೆಯಬೇಕು ಎಂದು ಒತ್ತಾಯಿಸಿದರು.
ನಿಮಾನ್ಸ್ ಜೊತೆಗೆ ಗುಲಬರ್ಗಾ ವಿವಿಗೆ ಅಗತ್ಯ ಆರ್ಥಿಕ ನೆರವು ನೀಡುವ ಮೂಲಕ ಅಭಿವೃದ್ದಿಗೊಳಿಸ ಬೇಕು ಹಾಗೂ ಅಗತ್ಯವಿರುವ ಫ್ರೊಫೆಸರ್ ಹಾಗೂ ಇತರೆ ಸಿಬ್ಬಂದಿಗಳನ್ನು ನೇಮಿಸಬೇಕು. ಮತ್ತು ಪ್ರಮುಖವಾಗಿ ಹೊಸ ಹೊಸ ವಿಭಾಗಗಳನ್ನು ಸ್ಥಾಪಿಸುವ ಮೂಲಕ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸ ಮಾಡಲು ಅನುಕೂಲ ಮಾಡಿಕೊಡಬೇಕು. ಬೆಂಗಳೂರು ಹಾಗೂ ಮೈಸೂರು ವಿವಿಗಳ ರೀತಿ ಅಭಿವೃದ್ದಿಗೊಳಿಸಬೇಕು. ಜೊತೆಗೆ ಕಲಬುರಗಿ ಯಲ್ಲಿ ಇನ್ಸ್ಟ್ಯೂಟ್ ಆಫ್ ಡಯಾಬೆಟಾಲಜಿ ಸ್ಥಾಪಿಸುವಂತೆ ಅವರು ಹೇಳಿದರು.
ಕಲಬರಗಿಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯಾಗಿದೆ ಆದರೆ ಇತ್ತೀಚಿಗೆ ವಿಮಾನಗಳು ಹಾರಾಟ ನಿಲ್ಲಿಸಿವೆ. ಈ ಬಗ್ಗೆ ಸಿಎಂ ಗಮನಹರಿಸಬೇಕು ಎಂದ ಅವರು ನಮ್ಮ ಭಾಗದ ಸಚಿವರು ಶಾಸಕರು ಸಿಎಂ ಅವರನ್ನು ಭೇಟಿ ಮಾಡಿ ಈ ಬೇಡಿಕೆಗಳ ಈಡೇರಿಕೆಗಾಗಿ ಪ್ರಯತ್ನಿಸಬೇಕು ಎಂದರು.
ಕಲ್ಯಾಣ ಕರ್ನಾಟಕದಲ್ಲಿ ಹಾಗೂ ವಿಶೇಷವಾಗಿ ಕಲಬುರಗಿಯಲ್ಲಿ ಅಭಿವೃದ್ದಿ ಕೆಲಸ ನಡೆಯುತ್ತಿವೆ. ಬೇರೆ ಕಡೆ ಹೋದ ಕಡೆ ಸ್ವಲ್ಪ ಅಭಿವೃದ್ದಿ ಕೆಲಸ ನಡೆಯುತ್ತಿವೆ ಎನ್ನುತ್ತಿದ್ದಾರೆ. ಆದರೆ ಸ್ವಲ್ಪದರ ಬದಲು ಸಂಪೂರ್ಣ ಅಭಿವೃದ್ದಿ ಆಗಬೇಕು ಎಂದರು.
ಜಯದೇವ ಆಸ್ಪತ್ರೆ ಸಿಎಂ ಹಾಗೂ ಶರಣಪ್ರಕಾಶ ಪಾಟೀಲ ಅವರು ಕೊಡುಗೆ ಎಂದು ಖರ್ಗೆ, ಈ ಆಸ್ಪತ್ರೆ ಸಂವಿಧಾನ ಆರ್ಟಿಕಲ್ 371(J) ಜಾರಿಗೆ ಬಂದು ಹತ್ತು ವರ್ಷಗಳ ನೆನಪಿಗಾಗಿ ನಿರ್ಮಾಣ ಮಾಡಲಾಗಿದೆ. ಇದು ಏಷ್ಯಾದಲ್ಲೇ ಬಹಳ ದೊಡ್ಡ ಆಸ್ಪತ್ರೆಯಾಗಲಿದೆ. ಈ ಆಸ್ಪತ್ರೆಯಲ್ಲಿ ಸ್ವಚ್ಚತೆ ಕಾಪಾಡಬೇಕು. ಯಾಕೆಂದರೆ, ನಮ್ಮ ಕಲಬುರಗಿ ಯಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಿಸಾಡುತ್ತಾರೆ. ಹಾಗಾಗಿ, ಬೆಂಗಳೂರು ಹಾಗೂ ಮೈಸೂರು ಜಯದೇವ ಮಾದರಿಯಲ್ಲಿ ಕಲಬುರಗಿ ಯ ಜಯದೇವ ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ದೇಶದಲ್ಲಿ ಬಡವರಿಗೆ ಶೈಕ್ಷಣಿಕ ಹಾಗೂ ಆರೋಗ್ಯದ ಸವಲತ್ತು ಸಿಗಬಾರದು ಎಂದು ಕೆಲವರ ಪ್ರಯತ್ನ ನಡೆದಿದೆ ಹಾಗಾಗಿ ಈ ಭಾಗದ ಜನರು ಶಿಕ್ಷಣಕ್ಕೆ ಒತ್ತು ನೀಡಬೇಕು. ಈ ಭಾಗ ಹಿಂದುಳಿದ ಹಣೆಪಟ್ಟಿಯಿಂದ ಹೊರಬರಬೇಕು. ಬೆಳಗಾವಿ, ಮೈಸೂರು ಹಾಗೂ ವಿಜಯಪುರದಲ್ಲಿ ಶೈಕ್ಷಣಿಕ ಸಂಸ್ಥೆ ಗಳು ಬೆಳೆದಿವೆ. ಇಲ್ಲಿ ಕೂಡಾ ಮಹಾದೇವಪ್ಪ ರಾಂಪುರೆ ಅವರು ಶೈಕ್ಷಣಿಕ ಸಂಸ್ಥೆ ಕಟ್ಟಿದ್ದಾರೆ. ಅಂತಹ ಶಿಕ್ಷಣ ಸಂಸ್ಥೆ ಗಳಿಗೆ ಪ್ರೋತ್ಸಾಹ ನೀಡಿ ಬೆಳೆಸಬೇಕು. ಜೊತೆಗೆ ಮತ್ತಷ್ಟು ಶಿಕ್ಷಣ ಸಂಸ್ಥೆಗಳು ಬೆಳೆಸಿ ಎಂದು ಸಲಹೆ ನೀಡಿದ ಅವರು ಈ ವಿಚಾರದಲ್ಲಿ ನಿಯತ್ತು ಇರಬೇಕು ಎಂದರು.
ಸಂವಿಧಾನದ ಕಲಂ 371 ಜೆ ತಿದ್ದುಪಡಿ ಬಂದು 10 ವರ್ಷಗಳು ಸಂದ ಹಿನ್ನೆಲೆಯಲ್ಲಿ 371 ಬೆಡ್ ಗಳ ಸಾಮರ್ಥ್ಯದ ಜಯದೇವ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಇದು ಜನವರಿ ಮೊದಲ ವಾರದಲ್ಲಿಯೇ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಜಯದೇವ ಸಂಸ್ಥೆ ವ್ಯವಸ್ಥಿತ ನಿರ್ವಹಣೆಗೆ ಹೆಸರಾಗಿದೆ. ಬೆಂಗಳೂರು ಹಾಗೂ ಮೈಸೂರಿನಂತೆ ಇಲ್ಲಿಯೂ ಕೂಡಾ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿ ಸ್ವಚ್ಚತೆಗೆ ಆದ್ಯತೆ ನೀಡುವಂತೆ ಸಚಿವ ಶರಣಪ್ರಕಾಶ ಪಾಟೀಲ್ ಸೂಚಿಸಿದ್ದೇನೆ.
ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಸೂಚೆನಯಂತೆ ಕಲಬುರಗಿ ಹಾಗೂ ಮೈಸೂರಿನಲ್ಲಿ ನಿಮಾನ್ಸ್ ಆಸ್ಪತ್ರೆ ನಿರ್ಮಾಣ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. institute diabatology ಕೂಡಾ ಸ್ಥಾಪನೆ ಮಾಡಲಾಗುವುದು ಇದರ ಜೊತೆಯಲ್ಲಿ ಗುಲಬರ್ಗಾ ವಿವಿಯಲ್ಲಿ ಅಭಿವೃದ್ದಿ ಕೆಲಸ ಮಾಡುವುದರ ಜೊತೆಗೆ ಖಾಲಿ ಇರುವ ಹುದ್ದೆಗಳನ್ನು ತುಂಬಲಾಗುವುದು ಎಂದು ಭರವಸೆ ನೀಡಿದರು. ಜೊತೆಗೆ ಈ ಬಗ್ಗೆ ಕ್ರಮವಹಿಸುವಂತೆ ಸಚಿವ ಶರಣಪ್ರಕಾಶ ಪಾಟೀಲ ಅವರಿಗೆ ಸೂಚಿಸಿದರು.
ಅಲೆಯನ್ಸ್ ಯೂನಿವರ್ಸಿಟಿಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಿಂದ ಸಚಿವ ಪ್ರಿಯಾಂಕ್ ಖರ್ಗೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ, ನಿನ್ನೆಯವರೆಗೂ ಇಲ್ಲಿಯೇ ಇದ್ದು ಕಾರ್ಯಕ್ರಮದ ತಯಾರಿ ಬಗ್ಗೆ ಪರಶೀಲನೆ ನಡೆಸಿ ಬೆಂಗಳೂರಿನ ಸಭೆಯಲ್ಲಿ ಭಾಗಿಯಾಗಿದ್ದಾರೆ ಹಾಗೂ ಯಾರೂ ಅನ್ಯಥಾ ಯೋಚಿಸಬಾರದು ಎಂದರು.
ಆರ್ಟಿಕಲ್ 371 ಜೆ ಜಾರಿಗೆ ಬಂದ ನಂತರ ಬೋರ್ಡ್ ಗೆ 35,000 ಕೋಟಿ ಅನುದಾನ ಬಿಡುಗಡೆ ಮಾಡಿ ಈ ಭಾಗದ ಅಭಿವೃದ್ದಿಗೆ ಪ್ರಯತ್ನಿಸಲಾಗಿದೆ. ಇದೂವರೆಗೆ ಸುಮಾರು 80,000 ಎಂದ ಸಿಎಂ, ನಂಜುಂಡಪ್ಪ ವರದಿ ಪ್ರಕಾರ ಈ ಭಾಗದ ಹಿಂದುಳಿದ ತಾಲೂಕುಗಳ ಅಭಿವೃದ್ದಿಗೆ ಸರ್ಕಾರ ಬದ್ಧವಾಗಿದೆ. ಇತ್ತೀಚಿಗೆ ಬೆಳಗಾವಿಯಲ್ಲಿ ಈ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಗಿದೆ ಎಂದರು.
ಕರ್ನಾಟದ ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ, ಮಲೆನಾಡು ಪ್ರದೇಶಗಳ ಅಭಿವೃದ್ದಿಗೆ ಸರ್ಕಾರ ಪ್ರಯತ್ನಪಡುತ್ತಿದೆ ಎಂದ ಸಿಎಂ ನಂಜುಂಡಪ್ಪ ವರದಿ ಪ್ರಕಾರ ರಾಜ್ಯದ ಯಾವ ಭಾಗ ಎಷ್ಟು ಅಭಿವೃದ್ದಿಯಾಗಿದೆ ಎನ್ನುವುದನ್ನು ಪರಿಶೀಲಿಸಲು ಆರ್ಥಿಕ ತಜ್ಞ ಗೋವಿಂದರಾವ್ ಅವರ ಸಮಿತಿ ನೇಮಕ ಮಾಡಲಾಗಿದ್ದು ಅವರ ವರದಿ ಅನ್ವಯ ಹಿಂದುಳಿದ ಪ್ರದೇಶಗಳ ಅಭಿವೃದ್ದಿ ಮಾಡಲಾಗುವುದು ಎಂದರು.
ತೊಗರಿ ಬೆಳೆ ಹಾನಿ ವರದಿ ನೀಡುವಂತೆ ಸೂಚಿಸಲಾಗಿದೆ. ವರದಿ ಬಂದ ನಂತರ ಈಭಾಗದ ರೈತರಿಗೆ ಅನ್ಯಾಯವಾಗಿದ್ದರೆ ಸರಿಪಡಿಸಲಾಗುವುದು ಎಂದ ಸಿದ್ದರಾಮಯ್ಯ ಈ ಭಾಗ ಬಸವಣ್ಣನವರ ನಾಡು. ಅವರನ್ನು ಸಾಂಸ್ಕೃತಿಕ ನಾಯಕ ಎಂದು ನಮ್ಮ ಸರ್ಕಾರ ಘೋಷಿಸಿದೆ. ಜೊತೆಗೆ ಅನುಭವ ಮಂಟಪ ನಿರ್ಮಾಣ ಮಾಡುತ್ತಿದ್ದೇವೆ ಎಂದರು.
ಸಚಿವರಾದ ಶರಣಪ್ರಕಾಶ್ ಪಾಟೀಲ, ಶರಣಬಸಪ್ಪ ದರ್ಶನಾಪುರ, ಸುಧಾಕರ, ಈಶ್ವರ ಖಂಡ್ರೆ, ರಹೀಂ ಖಾನ್, ರಾಧಾಕೃಷ್ಣ ದೊಡ್ಡಮನಿ, ಅಲ್ಲಮಪ್ರಭು ಪಾಟೀಲ, ಎಂ ವೈ ಪಾಟೀಲ, ಅಜಯ ಸಿಂಗ್, ಬಿ.ಆರ್. ಪಾಟೀಲ ಸೇರಿದಂತೆ ಹಲವರಿದ್ದರು.