ಮಲ್ಲಿಕಾರ್ಜುನ ಖರ್ಗೆ ಕರ್ನಾಟಕ ರಾಜ್ಯ ಕಂಡ ಉತ್ತಮ ರಾಜಕಾರಣಿ ಅನ್ನೋದ್ರಲ್ಲಿ ಯಾಔಉದೇ ಅನುಮಾನವಿಲ್ಲ. ಸೋಲಿಲ್ಲದ ಸರದಾರ ಅನ್ನೋ ಪಟ್ಟ ಪಡೆದುಕೊಂಡಿದ್ದ ಮಲ್ಲಿಕಾರ್ಜುನ ಖರ್ಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲುಂಡು ಪಟ್ಟವನ್ನು ಕಳೆದುಕೊಳ್ಳಬೇಕಾಯ್ತು. ಆ ಸೋಲಿಗೆ ಕಾರಣ ಕಳೆದ ಬಾರಿ ಲೋಕಸಭೆಗೆ ಅಧಿಕೃತ ವಿರೋಧ ಪಕ್ಷದ ನಾಯಕ ಅಲ್ಲದಿದ್ದರೂ ಅನುವಾರ್ಯವಾಗಿ ಕಾಂಗ್ರೆಸ್ ನಾಯಕನಾಗಿ ನೇಮಕವಾಗಿದ್ದು. ಬಿಜೆಪಿಯನ್ನು ಖಂಡಾತುಂಡವಾಗಿ ಖಂಡಿಸುತ್ತಿದ್ದ ಮಲ್ಲಿಕಾರ್ಜುನ ಖರ್ಗೆ ಮೇಲೆ ನಾಗ್ಪುರ ನಾಯಕರ ಕಣ್ಣು ಬಿದ್ದಿತ್ತು. ಬೆಳೆಯುವ ಸಿರಿ ಮೊಳಕೆಯಲ್ಲಿ ಅನ್ನೋ ರೀತಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ನೋಡಿದ ನಾಗ್ಪುರ ಟೀಂ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅಸ್ತ್ರಗಳನ್ನು ಬಳಕೆ ಮಾಡಿಕೊಂಡಿತ್ತು. ಅದೂ ಕೂಡ ಖರ್ಗೆ ಗೂಡಿನಲ್ಲೇ ಬೆಳೆದ ನಾಯಕನನ್ನು ಬಳಸಿಕೊಂಡಿತ್ತು.
ಉಮೇಶ್ ಜಾಧವ್ ಬಳಸಿ ಸೋಲುಣಿಸಿದ್ದ ಬಿಜೆಪಿ..!
ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಟಾರ್ಗೆಟ್ ಮಾಡಿದ್ದ ಭಾರತೀಯ ಜನತಾ ಪಾರ್ಟಿ, ಮಲ್ಲಿಕಾರ್ಜುನ ಶಿಷ್ಯ ಎಂದೇ ಗುರುತಿಸಿಕೊಂಡಿದ್ದ ಉಮೇಶ್ ಜಾಧವ್ ಅವರನ್ನು ಸೆಳೆದು ಬಿಜೆಪಿ ಅಭ್ಯರ್ಥಿಯನ್ನಾಗಿ ಮಾಡಿತ್ತು. ಕೋಳಿ ಸಮಾಜದ ಪ್ರಮುಖ ನಾಯಕನಾಗಿದ್ದ ಬಾಬುರಾವ್ ಚಿಂಚನಸೂರ್ ಅವರನ್ನು ಸೆಳೆದು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿತ್ತು. ಈ ಮೂಲಕ ಮಲ್ಲಿಕಾರ್ಜು ಖರ್ಗೆಯನ್ನು ಹೊಡೆದು ಉರುಳಿಸುವಲ್ಲಿ ಯಶಸ್ವಿಯಾಗಿತ್ತು. ಮಲ್ಲಿಕಾರ್ಜುನ ಖರ್ಗೆ ನರೇಂದ್ರ ಮೋದಿ ಅವರ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ತಿದ್ದ ಘಟಾನುಘಟಿ ನಾಯಕ ಲೋಕಸಭೆ ಪ್ರವೇಶ ಮಾಡುವುದನ್ನೇ ತಡೆದು ಕೇಸರಿ ಪಡೆ ದಾಳ ಉರುಳಿಸಿತ್ತು. ಆದರೆ ಕಾಂಗ್ರೆಸ್ ರಾಜ್ಯಸಭೆಗೆ ತಂದು ಕೂರಿಸಿ ವಿರೋಧ ಪಕ್ಷದ ನಾಯಕನನ್ನಾಗಿ ಮಾಡಿದೆ. ಈಗ ಮತ್ತೊಂದು ಸಂಕಷ್ಟ ಎದುರಾಗಿದೆ.
ಪ್ರಧಾನಿ ಮೋದಿಗೆ ಖರ್ಗೆ ಎದುರಾಳಿ ಮಾಡಿ ದಾಳ..
ನರೇಂದ್ರ ಮೋದಿ 2ನೇ ಅವಧಿಯನ್ನು ಯಶಸ್ವಿಯಾಗಿ ಮುಗಿಸಿ ಮೂರನೇ ಅವಧಿಗೂ ಪ್ರಧಾನಿ ಆಗುವ ಹುಮ್ಮಸ್ಸಿನಲ್ಲಿ ಚುನಾವಣೆಗೆ ಸಿದ್ಧತೆ ಮಾಡುತ್ತಿದ್ದಾರೆ. ಆದರೆ I.N.D.I.A ರಾಜಕೀಯ ಒಕ್ಕೂಟ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡುವ ಬಗ್ಗೆ ಚರ್ಚೆ ಶುರು ಮಾಡಿದೆ. ನಿತೀಶ್ ಕುಮಾರ್ ಸೇರಿದಂತೆ ಹಲವಾರು ನಾಯಕರು ಈ ಬಗ್ಗೆ ಮೂಗು ಮುರಿದಿದ್ದು, ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಘೋಷಣೆ ಮಾಡುವುದರಿಂದ ಕಾಂಗ್ರೆಸ್ಗೆ ಲಾಭ ಆಗಬಹುದು. ಆದರೆ ನಮಗಾಗುವ ಲಾಭ ಏನು..? ಪ್ರಧಾನಿ ಅಭ್ಯರ್ಥಿಯನ್ನಾಗಿ ಈಗಲೇ ಘೋಷಣೆ ಮಾಡಬೇಕಾ..? ಅನ್ನೋ ಬಗ್ಗೆ ಒಕ್ಕೂಟದ ಒಳಗೇ ಚರ್ಚೆಗಳು ನಡೆಯುತ್ತಿವೆ. ಆದರೆ ಈ ರೀತಿಯ ಚರ್ಚೆಗಳು ಕೂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ಟಾರ್ಗೆಟ್ ಮಾಡುವ ಸಾಧ್ಯತೆಗಳಾಗಿವೆ.

ಈ ಬಾರಿ ಎಲ್ಲಿಂದ ಸ್ಪರ್ಧೆ ಅನ್ನೋದೇ ಗೌಪ್ಯ..!
ಮಲ್ಲಿಕಾರ್ಜುನ ಖರ್ಗೆಯನ್ನು ಪ್ರಧಾನಿ ನರೇಂದ್ರ ಮೋದಿ ಎದುರು ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಿದರೆ ಬಿಜೆಪಿ ಟಾರ್ಗೆಟ್ ಮಾಡುವ ಸಾಧ್ಯತೆಯಿದೆ. ಆಗೊಂದು ವೇಳೆ ಕಲಬುರಗಿಯಿಂದ ಸ್ಪರ್ಧೆ ಮಾಡಿದರೆ ಈ ಬಾರಿ ಗೆಲ್ಲುವ ಅವಕಾಶ ಹೆಚ್ಚಾಗಿದೆ ಎನ್ನುವುದು ಸತ್ಯ. ಬಾಬುರಾವ್ ಚಿಂಚನಸೂರು ಈಗಾಗಲೇ ಮರಳಿ ಕಾಂಗ್ರೆಸ್ಗೆ ಬಂದಿದ್ದು, ಉಮೇಶ್ ಜಾಧವ್ಗೆ ಈ ಹಿಂದೆ ಇದ್ದ ಪ್ರಖ್ಯಾತಿ ಉಳಿದುಕೊಂಡಿಲ್ಲ. ಹೀಗಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಎದುರಿಸಿ ಗೆಲ್ಲುವ ಸಾಮರ್ಥ್ಯ ಇಲ್ಲ ಎಂದೇ ಯಾದಗಿರಿ ಹಾಗು ಕಲಬುರಗಿ ಜನ ಮಾತನಾಡುತ್ತಿದ್ದಾರೆ. ಆದರೂ ಭಾರತೀಯ ಜನತಾ ಪಾರ್ಟಿ ಪ್ರಬಲ ಅಭ್ಯರ್ಥಿಯನ್ನು ಎದುರಾಳಿಯನ್ನಾಗಿ ಮಾಡಿ ಮಲ್ಲಿಕಾರ್ಜುನ ಖರ್ಗೆಯನ್ನು ಸೋಲಿಸುವ ಸಾಧ್ಯತೆಗಳಿವೆ. ಈಗಾಗಲೇ ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಇಡೀ ದೇಶಾದ್ಯಂತ ಸಂಚಾರ ಮಾಡಬೇಕಾದ ಅನಿವಾರ್ಯತೆ ಇದೆ. ಹೀಗಿರುವಾಗ ಕ್ಷೇತ್ರದಲ್ಲಿ ಮತಯಾಚನೆ ಮಾಡುವುದು ಕಷ್ಟಸಾಧ್ಯ. ಇದನ್ನೇ ಬಂಡವಾಳ ಮಾಡಿಕೊಂಡು ಸೋಲಿಸಿದರೆ ಖರ್ಗೆ ರಾಜಕೀಯ ಇತಿಹಾಸ ಅಂತ್ಯವಾಗುವ ಸಾಧ್ಯತೆ ಹೆಚ್ಚಾಗಿವೆ ಎನ್ನಬಹುದು.
ಕೃಷ್ಣಮಣಿ