ನವದೆಹಲಿ: ಕೇಂದ್ರ ಸರ್ಕಾರವು ಭಾರತದ ವೀಸಾ ವ್ಯವಸ್ಥೆಯನ್ನು (Indian visa system) ಸಂಪೂರ್ಣವಾಗಿ ಬದಲಾಯಿಸಿದ್ದು, ಮುಖ್ಯ ವೀಸಾ ವಿಭಾಗಗಳ (main visa categories) ಸಂಖ್ಯೆಯನ್ನು 13ರಿಂದ 9ಕ್ಕೆ ಇಳಿಕೆ ಮಾಡಿದೆ.

ಅಲ್ಲದೆ, ಉಪ-ವಿಭಾಗಗಳನ್ನು (sub-categories) 49ರಿಂದ 23ಕ್ಕೆ ಕಡಿತಗೊಳಿಸಿ ಬುಧವಾರ, ನವೆಂಬರ್ 11ರಂದು ಆದೇಶ ಹೊರಡಿಸಿದೆ. ವಿದೇಶಿ ಪ್ರಜೆಗಳಿಗೆ ಭಾರತದ ಭೇಟಿಯನ್ನು ಮತ್ತಷ್ಟು ಸುಲಭಗೊಳಿಸುವ ಮತ್ತು ವ್ಯವಸ್ಥೆಯನ್ನು ಹೆಚ್ಚು ಸ್ಪಂದನಶೀಲ ಹಾಗೂ ಸರಳವಾಗಿಸುವ (compact, coherent and responsive) ಉದ್ದೇಶದಿಂದ ಗೃಹ ಸಚಿವಾಲಯವು (Ministry of Home Affairs) ಈ ಮಹತ್ವದ ನಿರ್ಧಾರ ಕೈಗೊಂಡಿದೆ.

ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಮಾದರಿ
ವೀಸಾ ವ್ಯವಸ್ಥೆಯನ್ನು ಸರಳೀಕರಿಸುವ ಮುನ್ನ ಸರ್ಕಾರವು ಅಭಿವೃದ್ಧಿ ಹೊಂದಿದ ದೇಶಗಳ ವೀಸಾ ವ್ಯವಸ್ಥೆಗಳು ಮತ್ತು ಜಾಗತಿಕ ಮಾನದಂಡಗಳನ್ನು ಅಧ್ಯಯನ ಮಾಡಿದೆ. ಪ್ರಯಾಣದ ಒಂದೇ ರೀತಿಯ ಉದ್ದೇಶಗಳನ್ನು ಒಗ್ಗೂಡಿಸುವ ಮೂಲಕ ವಿದೇಶಿಗರಿಗೆ ಸೂಕ್ತ ವೀಸಾ ವಿಭಾಗವನ್ನು ಗುರುತಿಸಲು ಸುಲಭವಾಗುವಂತೆ ಮಾಡಲಾಗಿದೆ. ಅಕ್ಟೋಬರ್ 2025ರಲ್ಲಿಯೇ ವೀಸಾ ವಿಭಾಗಗಳನ್ನು 22ರಿಂದ 13ಕ್ಕೆ ಇಳಿಸಲಾಗಿತ್ತು, ಇದೀಗ ಮತ್ತಷ್ಟು ಕಡಿತಗೊಳಿಸಲಾಗಿದೆ. ಸದ್ಯ 172 ದೇಶಗಳ ಪ್ರಜೆಗಳಿಗೆ ಇ-ವೀಸಾ ಸೌಲಭ್ಯ ಲಭ್ಯವಿದೆ. ಅರ್ಜಿ ನಮೂನೆಗಳಲ್ಲೂ ಗಣನೀಯ ಬದಲಾವಣೆ ತರಲಾಗಿದ್ದು, ತುಂಬಬೇಕಾದ ಮಾಹಿತಿಯ ಪ್ರಮಾಣವನ್ನು ಶೇಕಡಾ 65ರಿಂದ 70ರಷ್ಟು ಕಡಿಮೆ ಮಾಡುವುದರೊಂದಿಗೆ ವೀಸಾ ಪ್ರಕ್ರಿಯೆಗೆ ತಗಲುವ ಸಮಯವನ್ನು ಉಳಿಸಲಾಗಿದೆ.
ಪ್ರವಾಸಿ ವೀಸಾ ಇದೀಗ ಸಂದರ್ಶಕ ವೀಸಾ
ಹಳೆಯ ಪ್ರವಾಸಿ ವೀಸಾವನ್ನು ‘ಸಂದರ್ಶಕ ವೀಸಾ’ (Visitor Visa) ಎಂದು ಮರುನಾಮಕರಣ ಮಾಡಲಾಗಿದೆ. ಇದನ್ನು ವಿ-1 ಮತ್ತು ವಿ-2 ಎಂಬ ಎರಡು ಉಪವಿಭಾಗಗಳಾಗಿ ವಿಂಗಡಿಸಲಾಗಿದೆ. ವಿ-1 ವೀಸಾ ಅಡಿ ವ್ಯಾಪಾರ ಸಭೆಗಳು, ವೈದ್ಯಕೀಯ ಸಮಾಲೋಚನೆ, ಭಾಷೆ ಮತ್ತು ಕಲೆಗಳ ಅಲ್ಪಾವಧಿ ಕೋರ್ಸ್ ಮುಂತಾದ ಅಲ್ಪಾವಧಿ ಚಟುವಟಿಕೆಗಳಿಗೆ ಅವಕಾಶವಿದ್ದು, 30 ದಿನಗಳ ಮಾನ್ಯತೆ ಸಿಗಲಿದೆ. ವಿ-2 ವೀಸಾವು ದೀರ್ಘಾವಧಿಯ ಭೇಟಿಗೆ ಉದ್ದೇಶಿಸಿದ್ದು, ಒಂದು, ಐದು ಅಥವಾ ಹತ್ತು ವರ್ಷಗಳ ಮಾನ್ಯತೆ ಹೊಂದಿರುತ್ತದೆ. ಇದರಲ್ಲಿ ಪರ್ವತಾರೋಹಣಕ್ಕೂ ಅವಕಾಶವಿದ್ದು, ಅದಕ್ಕಾಗಿ ಆರು ತಿಂಗಳ ಬಹು-ಪ್ರವೇಶ (Multiple entry) ವೀಸಾ ನೀಡಲಾಗುತ್ತದೆ.
ವೈದ್ಯಕೀಯ ಮತ್ತು ವಿದ್ಯಾರ್ಥಿ ವೀಸಾ ನಿಯಮಗಳು
ವೈದ್ಯಕೀಯ ವೀಸಾದಲ್ಲಿ ಸಾಮಾನ್ಯ ಚಿಕಿತ್ಸೆಗಳಿಗೆ ಎಂ-1 ಮತ್ತು ಆಯುಷ್ ಚಿಕಿತ್ಸೆಗಳಿಗೆ ಎಂ-3 ವೀಸಾವನ್ನು ನೀಡಲಾಗುತ್ತದೆ. ಇವೆರಡೂ ಬಹು-ಪ್ರವೇಶ ಆಯ್ಕೆಯೊಂದಿಗೆ ಒಂದು ವರ್ಷದ ಮಾನ್ಯತೆ ಹೊಂದಿರುತ್ತವೆ. ರೋಗಿಗಳ ಜತೆಗಿರುವವರಿಗೆ ಅನುಕ್ರಮವಾಗಿ ಎಂ-2 ಮತ್ತು ಎಂ-4 ವೀಸಾ ನೀಡಲಾಗುತ್ತದೆ. ಇದು ಭಾರತದಲ್ಲಿ ವೈದ್ಯಕೀಯ ಪ್ರವಾಸೋದ್ಯಮವನ್ನು ಉತ್ತೇಜಿಸಲಿದೆ. ಇನ್ನು ವಿದ್ಯಾರ್ಥಿ ವೀಸಾಗಳನ್ನು ಎಸ್-1 ಮತ್ತು ಎಸ್-2 ಎಂದು ವಿಂಗಡಿಸಲಾಗಿದೆ. ಶಾಲಾ, ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣಕ್ಕೆ ಎಸ್-1 ವೀಸಾ ಮತ್ತು ಪಿಎಚ್ಡಿ, ಸಂಶೋಧನೆ ಮತ್ತು ಇಂಟರ್ನ್ಶಿಪ್ಗಳಿಗೆ ಎಸ್-2 ವೀಸಾ ಅನ್ವಯವಾಗುತ್ತದೆ. ‘ಸ್ಟಡಿ ಇನ್ ಇಂಡಿಯಾ’ ಪೋರ್ಟಲ್ ಮೂಲಕ ಬರುವವರಿಗೆ ಐದು ವರ್ಷಗಳವರೆಗೆ ಇ-ಎಸ್1 ವೀಸಾ ನೀಡಲಾಗುತ್ತದೆ.
ವಾಣಿಜ್ಯ ಹಾಗೂ ಇತರೆ ವೀಸಾಗಳ ವಿವರ
ವಾಣಿಜ್ಯ (ಬಿಸಿನೆಸ್) ವೀಸಾಗಳನ್ನು ಬಿ-1 ಮತ್ತು ಬಿ-2 ಎಂದು ವಿಂಗಡಿಸಲಾಗಿದೆ. ಕೈಗಾರಿಕೆ ಅಥವಾ ವ್ಯವಹಾರಗಳನ್ನು ಸ್ಥಾಪಿಸಲು ದೀರ್ಘಾವಧಿಯ ಬಿ-1 ವೀಸಾ ನೀಡಲಾಗುತ್ತದೆ. ಅಲ್ಪಾವಧಿಯ ಒಪ್ಪಂದ ಆಧಾರಿತ ವ್ಯವಹಾರ, ಕ್ರೀಡೆ, ಸಿನೆಮಾ ಹಾಗೂ ತಾಂತ್ರಿಕ ಪರಿಣಿತರಿಗೆ ಬಿ-2 ವೀಸಾ ಅನ್ವಯವಾಗುತ್ತದೆ. ಈ ಪರಿಷ್ಕೃತ ವ್ಯವಸ್ಥೆಯು ವಾಣಿಜ್ಯ, ರಾಜತಾಂತ್ರಿಕ, ಕೆಲಸ, ಪತ್ರಕರ್ತ, ವೈದ್ಯಕೀಯ, ಅಧಿಕೃತ, ವಿದ್ಯಾರ್ಥಿ, ಸಂದರ್ಶಕ ಮತ್ತು ಇತರೆ ಎಂಬ ಒಂಬತ್ತು ಮುಖ್ಯ ವಿಭಾಗಗಳನ್ನು ಹೊಂದಿದೆ. ‘ಇತರೆ’ (Miscellaneous) ವೀಸಾ ವಿಭಾಗವು ಭಾರತೀಯ ಮೂಲದ ವ್ಯಕ್ತಿಗಳು, ಅವರ ಕುಟುಂಬ ವರ್ಗ, ಆರೋವಿಲ್ ಫೌಂಡೇಶನ್ನಂತಹ ಸಂಸ್ಥೆಗಳಿಗೆ ಸೇರುವವರು ಹಾಗೂ ನೆರೆಹೊರೆಯ ದೇಶಗಳ ನಿರ್ದಿಷ್ಟ ನಾಗರಿಕರಿಗೆ ಅನ್ವಯವಾಗುತ್ತದೆ. ಐಟಿ ವ್ಯವಸ್ಥೆಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದ್ದು, ಈ ಹೊಸ ವೀಸಾ ವ್ಯವಸ್ಥೆಯು ಇದೇ ವರ್ಷಾಂತ್ಯದ ವೇಳೆಗೆ ಜಾರಿಗೆ ಬರಲಿದೆ.
ಜನಸಾಮಾನ್ಯರಿಗೆ ಬಿಗ್ ಶಾಕ್ : ಇದೇ ಮೊದಲ ಬಾರಿಗೆ ಕೆ.ಜಿ ಜೋಳದ ಬೆಲೆ 100 ರೂ. ಗಡಿಪಾರು!






