ರತ್ನಗಿರಿ ಜಿಲ್ಲೆಯ ರಾಜಾಪುರ ತಾಲೂಕಿನ ಬಾರ್ಸು-ಸೋಲ್ಗಾಂವ್ ಪ್ರದೇಶದಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಹಸಿರು’ ಸಂಸ್ಕರಣಾಗಾರ ಯೋಜನೆಯನ್ನು ವಿರೋಧಿಸಿ ಪ್ರತಿಭಟನಾಕಾರರ ವಿರುದ್ಧ ಒತ್ತಡದ ಹೇರುತ್ತಿರುವ ನಡುವೆಯೇ, ಯೋಜನೆಯ ವಿರುದ್ಧ ಸಕ್ರಿಯವಾಗಿ ವರದಿ ಮಾಡುತ್ತಿದ್ದ ಸ್ಥಳೀಯ ಪತ್ರಕರ್ತರೊಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅದೂ ಕೂಡಾ, ಯೋಜನೆಯ ಪ್ರಭಾವಿ ಬೆಂಬಲಿಗನ ಕಾರಿಗೆ ಪತ್ರಕರ್ತ ಬಲಿಯಾಗಿರುವುದು ದಟ್ಟ ಅನುಮಾನಗಳಿಗೆ ಕಾರಣವಾಗಿದೆ. ಕುತೂಹಲವೆಂದರೆ, ಅಪಘಾತಕ್ಕೆ ಕಾರಣವಾದ ಕಾರಿನ ಮಾಲಿಕನ ವಿರುದ್ಧ ಮೃತ ಪತ್ರಕರ್ತ ಮಾಡಿದ ವರದಿ ಪ್ರಕಟವಾದ ಕೆಲವೇ ಗಂಟೆಗಳಲ್ಲಿ ಈ ಅಪಘಾತ ನಡೆದಿರುವುದು ಅನುಮಾನಗಳಿಗೆ ಇನ್ನಷ್ಟು ಬಲ ತುಂಬಿದೆ.
ಸ್ಥಳೀಯ ಮರಾಠಿ ಪತ್ರಿಕೆ ದೈನಿಕ್ ಮಹಾನಗರಿ ಟೈಮ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತ ಶಶಿಕಾಂತ್ ವರಿಶೆ ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಆರೋಪಿ ಪಂಢರಿನಾಥ್ ಅಂಬರಕರ್ ಅವರು ವರದಿ ಮಾಡಿದ್ದಕ್ಕೆ ಪ್ರತೀಕಾರವಾಗಿ ಈ ಘಟನೆ ನಡೆದಿದೆ ಎಂದು ಸ್ಥಳೀಯರು ಮತ್ತು ಸಾಮಾಜಿಕ ಕಾರ್ಯಕರ್ತರು ಆರೋಪಿಸಿದ್ದಾರೆ. ಅಂಬರ್ಕರ್ ವಿರುದ್ಧ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿ ರಾಜಾಪುರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ಕೂಡಾ ನಡೆಸಲಾಗುತ್ತಿದೆ.
“ಅಂಬರ್ಕರ್ ಅವರು ಸ್ಥಳೀಯ ಪ್ರದೇಶದಲ್ಲಿ ಭೂ ಏಜೆಂಟ್ ಆಗಿದ್ದು, ಆತ ರಿಫೈನರಿ ಯೋಜನೆಯ ಬೆಂಬಲಿಗ ಮತ್ತು ಮೊದಲಿನಿಂದಲೂ ಈ ಪ್ರದೇಶದಲ್ಲಿ ನಡೆದ ಹೆಚ್ಚಿನ ಭೂ ವ್ಯವಹಾರಗಳಲ್ಲಿ ಸಕ್ರಿಯ ಪಾತ್ರವನ್ನು ವಹಿಸಿದ್ದಾನೆ” ಎಂದು ಯೋಜನೆಯ ವಿರುದ್ಧದ ಚಳವಳಿ ನಡೆಸುತ್ತಿರುವ ಕಾರ್ಯಕರ್ತ ಸತ್ಯಜಿತ್ ಚವಾಣ್ ಹೇಳಿದ್ದಾರೆ.

ಸೋಮವಾರ, ವರಿಶೆ ಸ್ಥಳೀಯ ಪತ್ರಿಕೆ ದೈನಿಕ್ ಮಹಾನಗರಿ ಟೈಮ್ಸ್‌ನಲ್ಲಿ ವರದಿಯನ್ನು ಪ್ರಕಟಿಸಿದರು, ಅದರಲ್ಲಿ ಅವರು ಅಂಬರ್ಕರ್ ಅವರನ್ನು “ಗಂಭೀರ ಅಪರಾಧಗಳಲ್ಲಿ ಆರೋಪಿ” ಎಂದು ಉಲ್ಲೇಖಿಸಿದ್ದಾರೆ. ಆರಂಭದಲ್ಲಿ ನಾನಾರ್ ರಿಫೈನರಿ ಯೋಜನೆ ಮತ್ತು ಈಗ ಬರ್ಸು-ಸೋಲ್ಗಾಂವ್ ರಿಫೈನರಿ ಯೋಜನೆಯನ್ನು ವಿರೋಧಿಸುವ ಜನರನ್ನು ಬೆದರಿಸುವ ಮತ್ತು ಹಲ್ಲೆ ಮಾಡಿದ ಆರೋಪದಲ್ಲಿ ಅಂಬರ್ಕರ್ ವಿರುದ್ಧ ಪೊಲೀಸರು ಈ ಹಿಂದೆ ಕೆಲವು ಬಾರಿ ಪ್ರಕರಣ ದಾಖಲಿಸಿದ್ದಾರೆ. ಇತ್ತೀಚೆಗೆ ಆ ಭಾಗದ ಅಂಗ್ನೇವಾಡಿ ಗ್ರಾಮದಲ್ಲಿ ಸಂಸ್ಕರಣಾಗಾರಕ್ಕೆ ಬೆಂಬಲ ಸೂಚಿಸಿ ಬ್ಯಾನರ್ ಹಾಕಿದ್ದರು. ಬ್ಯಾನರ್‌ಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಫೋಟೋಗಳೊಂದಿಗೆ ಆರೋಪಿಯ ಛಾಯಾಚಿತ್ರಗಳಿದ್ದವು. ಇಂತಹ ಗಂಭೀರ ಅಪರಾಧಗಳ ಆರೋಪ ಹೊತ್ತಿರುವ ವ್ಯಕ್ತಿಯೊಂದಿಗೆ ಸರ್ಕಾರ ಹೇಗೆ ಸಂಬಂಧ ಹೊಂದಿದೆ ಎಂದು ವರಿಶೆ ತಮ್ಮ ವರದಿಯಲ್ಲಿ ಪ್ರಶ್ನಿಸಿದ್ದರು.
ದೈನಿಕ್ ಮಹಾನಗರಿ ಟೈಮ್ಸ್‌ನ ಸೋಮವಾರದ ಆವೃತ್ತಿಯಲ್ಲಿ ವರದಿ ಪ್ರಕಟವಾದ ಕೆಲವೇ ಗಂಟೆಗಳ ನಂತರ, ತನ್ನ ವಾಹನವನ್ನು ರಸ್ತೆ ಬದಿಯಲ್ಲಿದ್ದ ಪತ್ರಕರ್ತ ವರಿಶೆಯ ಮೇಲೆ ಹತ್ತಿಸಿದ್ದಾನೆ ಎಂದು ವರದಿಯಾಗಿದೆ.
“ವರಿಶೆ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಕೊಲ್ಹಾಪುರಕ್ಕೂ ಕರೆದುಕೊಂಡು ಹೋದೆವು. ಆದರೆ ಆತನನ್ನು ಉಳಿಸಲಾಗಲಿಲ್ಲ. ಅವರು ಇಂದು (ಮಂಗಳವಾರ) ಬೆಳಿಗ್ಗೆ ಕೊನೆಯುಸಿರೆಳೆದರು, ”ಎಂದು ಚವಾಣ್ ಹೇಳಿದರು.
ಸೌದಿ ಅರಾಮ್ಕೊ-ಬೆಂಬಲಿತ ಪೆಟ್ರೋಕೆಮಿಕಲ್ ರಿಫೈನರಿ ಯೋಜನೆಯನ್ನು ಬಾರ್ಸು-ಸೋಲ್ಗಾಂವ್ ಪ್ರದೇಶದಲ್ಲಿ ಯೋಜಿಸಲಾಗಿದೆ, ಈ ಯೋಜನೆಯ ವಿರುದ್ಧ ಸ್ಥಳೀಯರು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ, ಯೋಜನೆಯ ಘೋಷಣೆ ಮತ್ತು ಅದಕ್ಕಾಗಿ ಭೂಮಿ ಮಾರಾಟ ಪ್ರಾರಂಭವಾದಾಗಿನಿಂದ ಈ ಪ್ರದೇಶವು ಹಲವಾರು ಪ್ರತಿಭಟನೆಗಳನ್ನು ಕಂಡಿದೆ. ಯೋಜನೆಯಿಂದಾಗಿ ಕೊಂಕಣ ಕರಾವಳಿ ಪ್ರದೇಶದ ಪರಿಸರ ನಾಶದ ಜೊತೆಗೆ ತಮ್ಮ ಸಾಂಪ್ರದಾಯಿಕ ಜೀವನೋಪಾಯವನ್ನು ಕಳೆದುಕೊಳ್ಳುವ ಆತಂಕವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.

ಆದಾಗ್ಯೂ, ಸರ್ಕಾರಗಳು ಜನರ ಅಭಿಪ್ರಾಯಗಳನ್ನು ಲೆಕ್ಕಿಸದೆ ಕೊಂಕಣ ಪ್ರದೇಶದಲ್ಲಿಯೇ ಯೋಜನೆಯನ್ನು ತರಲು ಹಠ ಹಿಡಿದಿದೆ. ಈ ಹಿಂದೆ ಇದೇ ಜಿಲ್ಲೆಯ ನಾನಾರ್ ಪ್ರದೇಶದಲ್ಲಿ ಈ ಯೋಜನೆಯನ್ನು ಪ್ರಸ್ತಾಪಿಸಲಾಗಿತ್ತು, ಅದರ ವಿರುದ್ಧ ದೊಡ್ಡ ಪ್ರಮಾಣದ ಜನಾಂದೋಲನದ ನಂತರ ಅದನ್ನು ಅಲ್ಲಿಂದ ಸ್ಥಳಾಂತರಿಸಲಾಯಿತು.
ರಿಫೈನರಿ ಯೋಜನೆಗೆ ಸಂಬಂಧಿಸಿದ ಹೊಸದನ್ನು ಮತ್ತು ಅದು ಎದುರಿಸಿದ ಜನರ ವಿರೋಧವನ್ನು ಸಕ್ರಿಯವಾಗಿ ವರದಿ ಮಾಡುತ್ತಿದ್ದ ವರಿಶೆ ಅವರು ಇದರ ವಿರುದ್ಧ ಕಾರ್ಯನಿರ್ವಹಿಸುತ್ತಿರುವ ಏಕೈಕ ಪತ್ರಕರ್ತ ಎಂದು ತಿಳಿದುಬಂದಿದೆ.
“ಅವರು ಪ್ರಾಮಾಣಿಕ ಪತ್ರಕರ್ತರಾಗಿದ್ದರು. ಅವರು ತಮ್ಮ ವರದಿಗಳ ಮೂಲಕ ಜನರ ಬೇಡಿಕೆಗಳಿಗೆ ಧ್ವನಿ ನೀಡಿದರು. ಅವರು ಮಾಡಿದಂತೆ ಯಾವುದೇ ಸ್ಥಳೀಯ ಮುದ್ರಣ ಪತ್ರಕರ್ತರು ಸಮಸ್ಯೆಯನ್ನು ವರದಿ ಮಾಡುತ್ತಿರಲಿಲ್ಲ. ಅದಕ್ಕಾಗಿಯೇ ಅವರು ಗುರಿಯಾಗಿದ್ದರು. ”ಎಂದು ಚವಾಣ್ ಹೇಳಿದ್ದಾರೆ.
ರಾಜಾಪುರ ಮತ್ತು ಸುತ್ತಮುತ್ತಲಿನ ಸ್ಥಳೀಯರು ಬೆಳಿಗ್ಗೆಯಿಂದಲೇ ರಾಜಾಪುರ ಪೊಲೀಸ್ ಠಾಣೆಯ ಸುತ್ತಲೂ ಜಮಾಯಿಸಿ, ಅಂಬರಕರ್ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302 ರ ಅಡಿಯಲ್ಲಿ ಕೊಲೆಗೆ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದ್ದಾರೆ. ಅಂಬರ್ಕರ್ ವಿರುದ್ಧ ಈಗಾಗಲೇ ಎಫ್‌ಐಆರ್ ದಾಖಲಾಗಿದ್ದು, ಅವರನ್ನು ಬಂಧಿಸಿ, ಅಪರಾಧಿ ನರಹತ್ಯೆಯ ಯತ್ನದ ಸೆಕ್ಷನ್ 308 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬಾರ್ಸು-ಸೋಲ್ಗಾಂವ್ ರಿಫೈನರಿ ಯೋಜನೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರು ಮತ್ತು ಪ್ರತಿಭಟನೆಗೆ ಸಂಬಂಧಿಸಿದವರು ಸರ್ಕಾರದಿಂದ ಬೆದರಿಕೆಯನ್ನು ಎದುರಿಸುತ್ತಿರುವುದು ಇದೇ ಮೊದಲಲ್ಲ.
ವರಿಶೆ ವರದಿ ಮಾಡಿದಂತೆ, ಅಂಬರ್ಕರ್ ಅವರು ಈ ಹಿಂದೆ ರಿಫೈನರಿಯನ್ನು ವಿರೋಧಿಸಿದ ಗ್ರಾಮಸ್ಥರು, ಅಧಿಕಾರಿಗಳು, ಕಾರ್ಯಕರ್ತರನ್ನು ಬೆದರಿಸಿ ಹಲ್ಲೆ ನಡೆಸಿದ್ದರು. ಈ ಸಂಬಂಧ ಕೆಲವು ಘಟನೆಗಳಿಗೆ ಸಂಬಂಧಿಸಿದಂತೆ ಅವರ ವಿರುದ್ಧ ಎಫ್‌ಐಆರ್‌ಗಳು ಕೂಡಾ ದಾಖಲಾಗಿವೆ.
ಕೆಲವು ತಿಂಗಳ ಹಿಂದೆ, ನವೆಂಬರ್ 2022 ರಲ್ಲಿ, ರಾಜಾಪುರ ಮತ್ತು ಸಂಸ್ಕರಣಾಗಾರವನ್ನು ಯೋಜಿಸಿರುವ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಪರೇಡ್ ನಡೆಸಲು ಸರ್ಕಾರವು ಕ್ಷಿಪ್ರ ಕಾರ್ಯಾಚರಣೆ ಪಡೆ (RAF) ಮತ್ತು ಗಲಭೆ ನಿಯಂತ್ರಣ ಪೊಲೀಸರ ಸಶಸ್ತ್ರ ಪೊಲೀಸ್ ಸಿಬ್ಬಂದಿಯನ್ನು ಕಳುಹಿಸಿತ್ತು. ರಾಜಾಪುರ ಪೊಲೀಸರೊಂದಿಗೆ, 60 ಆರ್‌ಎಎಫ್ ಪೋರ್ಸನಲ್ ಮತ್ತು 29 ಗಲಭೆ ನಿಯಂತ್ರಣ ಸಿಬ್ಬಂದಿ ಈ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಪ್ರತಿಭಟನೆಯನ್ನು ವಿರೋಧಿಸುವ ಸ್ಥಳೀಯರ ಮನಸ್ಸಿನಲ್ಲಿ ಭಯ ಮೂಡಿಸುವ ಸರ್ಕಾರದ ಪ್ರಯತ್ನ ಇದಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದರು. ಈ ಘಟನೆಗೂ ಮುನ್ನ ಕೆಲವು ಬಾರಿ ರಿಫೈನರಿಗಾಗಿ ಸಮೀಕ್ಷೆ ನಡೆಸುವ ಸರ್ಕಾರದ ಪ್ರಯತ್ನವನ್ನು ಸ್ಥಳೀಯರು ವಿಫಲಗೊಳಿಸಿದ್ದರು.
ಇದಲ್ಲದೆ, ಸಂಸ್ಕರಣಾಗಾರದ ವಿರುದ್ಧದ ಪ್ರತಿಭಟನೆಯಲ್ಲಿ ತೊಡಗಿರುವ ಆರು ಕಾರ್ಯಕರ್ತರನ್ನು ರತ್ನಗಿರಿ ಮತ್ತು ಎರಡು ನೆರೆಯ ಜಿಲ್ಲೆಗಳಾದ ಸಿಂಧುದುರ್ಗ ಮತ್ತು ರಾಯಗಡದಿಂದ ಗಡಿಪಾರು ಕೂಡಾ ಮಾಡಲಾಗಿದೆ. “ಇದರ ವಿಚಾರಣೆಗಳು ನಡೆಯುತ್ತಿವೆ. ನೋಟಿಸ್ ವಿರುದ್ಧ ಹೋರಾಡಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ” ಎಂದು ಚವಾಣ್ ಹೇಳಿದರು.