ಆಧ್ಯಾತ್ಮಿಕ ಗುರು ಜಗ್ಗಿ ವಾಸುದೇವ್ ಅವರ ಈಶ ಪ್ರತಿಷ್ಠಾನ ವಿರುದ್ಧ ದಾಖಲಾಗಿರುವ ಎಲ್ಲಾ ಕ್ರಿಮಿನಲ್ ಪ್ರಕರಣಗಳ ವಿವರ ಸಲ್ಲಿಸುವಂತೆ ಮದ್ರಾಸ್ ಹೈಕೋರ್ಟ್ ಸೋಮವಾರ ತಮಿಳುನಾಡು ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಪ್ರತಿಷ್ಠಾನ ವಿರುದ್ಧ ಅನೇಕ ಕ್ರಿಮಿನಲ್ ದೂರುಗಳಿರುವುದರಿಂದ ಈ ವಿಚಾರ ಹೆಚ್ಚಿನ ಚರ್ಚೆಗೆ ಅರ್ಹವಾಗಿದೆ ಎಂದು ನ್ಯಾಯಮೂರ್ತಿಗಳಾದ ಎಸ್‌ಎಂ ಸುಬ್ರಮಣ್ಯಂ ಮತ್ತು ವಿ ಶಿವಜ್ಞಾನಂ ಅವರಿದ್ದ ಪೀಠ ತಿಳಿಸಿತು.
“ಅರ್ಜಿದಾರರ ಪರ ವಕೀಲರು ಅರ್ಜಿದಾರರ ವಿರುದ್ಧ ಇರುವ ಉಳಿದ ಕ್ರಿಮಿನಲ್ ಪ್ರಕರಣಗಳ ವಿವರವನ್ನು ಸಲ್ಲಿಸಬೇಕು. ಸಂಸ್ಥೆಯ ವಿರುದ್ಧದ ಆರೋಪಗಳ ಗಂಭೀರ ಸ್ವರೂಪ ಹಾಗೂ ಸಂಸ್ಥೆಯ ವಶದಲ್ಲಿರುವವರು ನಮ್ಮೆದುರು ಮಾತನಾಡಿರುವ ರೀತಿಯಿಂದಾಗಿ ಆರೋಪಗಳ ಹಿಂದಿನ ಸತ್ಯಾಸತ್ಯತೆ ಅರ್ಥ ಮಾಡಿಕೊಳ್ಳಲು ಇನ್ನಷ್ಟು ಚರ್ಚೆ ನಡೆಸುವ ಅಗತ್ಯವಿದೆ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ. ಆದ್ದರಿಂದ ಅರ್ಜಿದಾರರು ಸಂಸ್ಥೆಯ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆಗಳ ವಿವರ ನೀಡಬೇಕು. ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಅವರು ಈ ಎಲ್ಲಾ ಪ್ರಕರಣಗಳ ವಿವರ ಕಲೆ ಹಾಕಿ ನ್ಯಾಯಾಲಯಕ್ಕೆ ನೀಡಬೇಕು” ಎಂದು ಪೀಠ ವಿವರಿಸಿತು.
ಮದ್ರಾಸ್ ಹೈಕೋರ್ಟ್ಆರೋಪಗಳ ಹಿಂದಿನ ಸತ್ಯಾಸತ್ಯತೆ ಅರ್ಥ ಮಾಡಿಕೊಳ್ಳಲು ಇನ್ನಷ್ಟು ಚರ್ಚೆ ನಡೆಸುವ ಅಗತ್ಯವಿದೆ.ತಮ್ಮ ಮಗಳಿಗೆ ಮದುವೆ ಮಾಡಿ ಅವರು ಜೀವನದಲ್ಲಿ ಸುವ್ಯವಸ್ಥಿತವಾಗಿ ನೆಲೆಸುವಂತೆ ಮಾಡಿರುವ ಜಗ್ಗಿ ವಾಸುದೇವ್ ಬೇರೆ ಮಹಿಳೆಯರು ಐಹಿಕ ಜೀವನ ತ್ಯಜಿಸುವಂತೆ ಏಕೆ ಪ್ರೋತ್ಸಾಹಿಸಿದರು ಎಂಬ ಕುರಿತು ನ್ಯಾಯಾಲಯ ಗಂಭೀರ ಅನುಮಾನ ವ್ಯಕ್ತಪಡಿಸಿತು.
“ತನ್ನ ಮಗಳನ್ನು ಮದುವೆ ಮಾಡಿಸಿ ಜೀವನದಲ್ಲಿ ಚೆನ್ನಾಗಿ ನೆಲೆಸುವಂತೆ ಮಾಡಿದ ವ್ಯಕ್ತಿ ಬೇರೆಯವರ ಹೆಣ್ಣುಮಕ್ಕಳು ತಲೆ ಬೋಳಿಸಿಕೊಂಡು ಸನ್ಯಾಸ ಜೀವನ ನಡೆಸುವಂತೆ ಏಕೆ ಪ್ರೋತ್ಸಾಹಿಸುತ್ತಿದ್ದಾರೆ ಎಂಬುದನ್ನು ನಾವು ತಿಳಿದುಕೊಳ್ಳಲು ಬಯಸುತ್ತೇವೆ. ಅದು ಅನುಮಾನಸ್ಪದ ” ಎಂದು ಪೀಠ ಮೌಖಿಕವಾಗಿ ಟೀಕಿಸಿತು.
ತಮ್ಮ 42 ಮತ್ತು 39 ವರ್ಷ ವಯಸ್ಸಿನ ಇಬ್ಬರು “ಸುಶಿಕ್ಷಿತ ಹೆಣ್ಣುಮಕ್ಕಳು” ಕೊಯಮತ್ತೂರಿನ ಈಶ ಯೋಗ ಕೇಂದ್ರದಲ್ಲಿ ವಾಸಿಸುವಂತೆ ತಲೆ ಕೆಡಿಸಲಾಗಿದೆ ಎಂದು ದೂರಿ ಕೊಯಮತ್ತೂರಿನ ನಿವೃತ್ತ ಪ್ರಾಧ್ಯಾಪಕ ಎಸ್ ಕಾಮರಾಜ್ ಎಂಬುವರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.
ತಮ್ಮಮಕ್ಕಳು ಕುಟುಂಬದೊಂದಿಗೆ ನಂಟು ಇರಿಸಿಕೊಳ್ಳಲು ಪ್ರತಿಷ್ಠಾನದ ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ ಎಂದಿರುವ ಅರ್ಜಿದಾರರು ಪ್ರತಿಷ್ಠಾನದ ವಿರುದ್ಧದ ಲೈಂಗಿಕ ಕಿರುಕುಳ ಸೇರಿದಂತೆ ವಿವಿಧ ಕ್ರಿಮಿನಲ್ ಪ್ರಕರಣಗಳನ್ನು ನ್ಯಾಯಾಲಯಕ್ಕೆ ತಿಳಿಸಿದರು.
ಈ ಹಿಂದಿನ ಆದೇಶದಂತೆ ನ್ಯಾಯಾಲಯದಲ್ಲಿ ಹಾಜರಿದ್ದ ಕಾಮರಾಜ್ ಅವರ ಇಬ್ಬರು ಪುತ್ರಿಯರು ಸ್ವಇಚ್ಛೆಯಿಂದ ಪ್ರತಿಷ್ಠಾನದಲ್ಲಿದ್ದೇವೆ ಅಲ್ಲಿರಲು ನಮ್ಮನ್ನು ಯಾರೂ ಒತ್ತಾಯಿಸಿಲ್ಲ ಎಂದು ಹೇಳಿದರು.ಆದರೆ ಆ ಬಳಿಕ ಅವರನ್ನು ಕೋಣೆಗೆ ಕರೆಸಿ ಗೌಪ್ಯವಾಗಿ ಮಾತುಕತೆ ನಡೆಸಿದ ನ್ಯಾಯಾಲಯ ತನ್ನ ಅನುಮಾನಗಳು ಹೆಚ್ಚಿವೆ ಎಂದಿತು.
ಜೊತೆಗೆ ಪ್ರತಿಷ್ಠಾನದ ಪರ ವಕೀಲರನ್ನು ಉದ್ದೇಶಿಸಿ ತಮ್ಮ ಸ್ವಂತ ಮಗಳು ಉತ್ತಮ ರೀತಿಯಲ್ಲಿ ನೆಲೆಸುವಂತೆ ಮಾಡಿರುವ ಜಗ್ಗಿ ವಾಸುದೇವ್ ಉಳಿದ ಮಹಿಳೆಯರು ಪ್ರಾಪಂಚಿಕ ಜೀವನ ತ್ಯಜಿಸುವಂತೆ ಏಕೆ ಪ್ರೋತ್ಸಾಹಿಸುತ್ತಿದ್ದಾರೆ?” ಎಂದಿತು. ಅಕ್ಟೋಬರ್ 4ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಸಲಿದೆ.