ಕನ್ನಡ ಚಿತ್ರರಂಗವನ್ನು ಎಲ್ಲರೂ ತಿರುಗಿ ನೋಡುವಂತೆ ಮಾಡಿದ, ಸಾವಿರಾರು ಕೋಟಿ ಗಳಿಸಿದ ಪ್ಯಾನ್ ಇಂಡಿಯಾ ಚಿತ್ರ ಕೆಜಿಎಫ್ ಗೆ ಕಳಂಕವೊಂದು ಮೆತ್ತಿಕೊಂಡಿದೆ. ಕಲ್ಲು ಮತ್ತು ಸುತ್ತಿಗೆಗಳಿಂದ ಸೆಕ್ಯುರಿಟಿ ಗಾರ್ಡ್ ಗಳ ಸರಣಿ ಕೊಲೆ ಮಾಡಿದ ಸೈಕೋ ಕಿಲ್ಲರ್ ಆರೋಪಿಗೆ ಕೆಜಿಎಫ್ ಚಿತ್ರ ಸ್ಪೂರ್ತಿ ಎಂದು ಮಧ್ಯಪ್ರದೇಶ ಪೊಲೀಸರು ಹೇಳಿದ್ದಾರೆ.
ಮಧ್ಯಪ್ರದೇಶ ಪೊಲೀಸರು ಶುಕ್ರವಾರ ಶಂಕಿತ ಸರಣಿ ಹಂತಕನನ್ನು ಬಂಧಿಸಿದ್ದು, ಬಂಧಿತ ವ್ಯಕ್ತಿ ಮೇ ತಿಂಗಳಿನಿಂದ ಕನಿಷ್ಠ ಆರು ಭದ್ರತಾ ಸಿಬ್ಬಂದಿಗಳನ್ನು ಕೊಂದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಗುರುವಾರ ತಡರಾತ್ರಿ ರಾಜ್ಯ ರಾಜಧಾನಿ ಭೋಪಾಲ್ ನಲ್ಲಿ ಆತನ ಕೊನೆಯ ಬಾರಿ ದಾಳಿ ಮಾಡಿದ್ದು, ನಂತರ ಪೊಲೀಸರ ಬಲೆಗೆ ಬಿದ್ದಿದ್ದ.
ಒಂದು ವಾರದ ಅವಧಿಯಲ್ಲಿಯೇ ಆತ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಾಲ್ವರು ಭದ್ರತಾ ಸಿಬ್ಬಂದಿಗಳ ಮೇಲೆ ದಾಳಿ ನಡೆಸಿದ್ದ, ಅದರಲ್ಲಿ ಒಬ್ಬರು ಮಾತ್ರ ಬದುಕುಳಿದಿದ್ದು, ಭೋಪಾಲ್ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ ಎಂದು ವರದಿಯಾಗಿದೆ.
ಶಂಕಿತ ಆರೋಪಿ ಶಿವ ಗೊಂಡನನ್ನು ಗುರುವಾರ ತಡರಾತ್ರಿ ಭೋಪಾಲ್‌ನಿಂದ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಗುರುವಾರ ತಡರಾತ್ರಿ ಬೈರಾಗರ್ ಪ್ರದೇಶದಲ್ಲಿ ಸೋನು ವರ್ಮಾ ಎಂಬ 23 ವರ್ಷದ ಸೆಕ್ಯುರಿಟಿ ಗಾರ್ಡ್ ನನ್ನು ಹತ್ಯೆ ಮಾಡಿದ ನಂತರ ಬಂಧನ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಸ್ಥಳದ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ, ನಾವು ಆರೋಪಿಯನ್ನು ಭೋಪಾಲ್‌ನಿಂದ ಮುಂಜಾನೆ ವಶಕ್ಕೆ ಪಡೆದಿದ್ದೇವೆ. ಪ್ರಾಥಮಿಕ ತನಿಖೆಯ ವೇಳೆ ಪುಣೆಯಲ್ಲಿ ಓರ್ವ ಸೆಕ್ಯುರಿಟಿ ಗಾರ್ಡ್ ನನ್ನು ಸೇರಿದಂತೆ ಒಟ್ಟು ಆರು ಮಂದಿ ಸೆಕ್ಯುರಿಟಿ ಗಾರ್ಡ್ ಗಳನ್ನು ಕೊಂದಿದ್ದಾನೆ ಎಂದು ಆತ ಒಪ್ಪಿಕೊಂಡಿದ್ದಾನೆ. ಹೆಚ್ಚಿನ ವಿಚಾರಣೆ ನಡೆಯುತ್ತಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
19 ವರ್ಷದ ಆರೋಪಿ ಸಾಗರ್ ಜಿಲ್ಲೆಯ ಕೆಸ್ಲಿ ಪ್ರದೇಶದ ನಿವಾಸಿಯಾಗಿದ್ದು, ಕೆಜಿಎಫ್ ಸಿನಿಮಾದಿಂದ ಆತ ಸ್ಫೂರ್ತಿ ಪಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕರ್ತವ್ಯದ ವೇಳೆ ನಿದ್ರಿಸುತ್ತಿದ್ದ ಭದ್ರತಾ ಸಿಬ್ಬಂದಿಯನ್ನೇ ಟಾರ್ಗೆಟ್ ಮಾಡುತ್ತಿದ್ದ ಆತ ಸುತ್ತಿಗೆ, ಕಲ್ಲುಗಳು ಮತ್ತು ಗುದ್ದಲಿಯಿಂದ ಹೊಡೆದು ಸಾಯಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಬಂಧಿತ ಆರೋಪಿ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುವವನಾಗಿದ್ದು, ಈ ಮೊದಲು ಗೋವಾದ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕೇವಲ ಒಂದು ವಾರದೊಳಗೆ ಮೂರು ಸೆಕ್ಯುರಿಟಿಗಳ ಹತ್ಯೆ ನಡೆದಿರುವುದು ಸಾಗರ ಜಿಲ್ಲೆಯಾದ್ಯಂತ ಭದ್ರತಾ ಸಿಬ್ಬಂದಿಗಳಲ್ಲಿ ಭೀತಿಯನ್ನು ಸೃಷ್ಟಿಸಿತ್ತು.
ಮಧ್ಯಪ್ರದೇಶದ ಪೊಲೀಸ್ ಮಹಾನಿರ್ದೇಶಕ (ಡಿಐಜಿ) ಸುಧೀರ್ ಸಕ್ಸೇನಾ ಪ್ರಕರಣವನ್ನು ಸ್ವತಃ ಮೇಲ್ವಿಚಾರಣೆ ಮಾಡುತ್ತಿದ್ದು, ಪ್ರಕರಣವನ್ನು ಬೇಧಿಸಲು 250 ಪೊಲೀಸರನ್ನು ಹೊಂದಿರುವ ಹಲವಾರು ತಂಡಗಳನ್ನು ರಚಿಸಲಾಗಿತ್ತು. ಶಂಕಿತ ಸರಣಿ ಹಂತಕ ನಡೆಸಿದ ದಾಳಿಗಳು ಒಂದೇ ಮಾದರಿಯದ್ದಾಗಿದ್ದು, ಸುತ್ತಿಗೆ, ಕಲ್ಲುಗಳು ಮತ್ತು ಗುದ್ದಲಿಯಿಂದ ಭದ್ರತಾ ಸಿಬ್ಬಂದಿಗಳ ತಲೆಗಳನ್ನು ಒಡೆದುಹಾಕುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮೊದಲ ಪ್ರಕರಣವು ಮೇ ತಿಂಗಳಲ್ಲಿ ವರದಿಯಾಗಿದ್ದರೆ, ಎರಡನೆಯದು ಸೋಮವಾರ ಮತ್ತು ಮೂರನೇ ಮತ್ತು ನಾಲ್ಕನೆಯ ಪ್ರಕರಣ ಮಂಗಳವಾರ ಸಾಗರ್ ಜಿಲ್ಲೆಯಲ್ಲಿ ಮತ್ತು ಐದನೇ ಪ್ರಕರಣ ಗುರುವಾರ ಭೋಪಾಲ್‌ನಲ್ಲಿ ವರದಿಯಾಗಿತ್ತು.