ದಾಖಲೆ ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು 6 ವಿಕೆಟ್ ಗಳಿಂದ ಬಗ್ಗುಬಡಿದ ಮಧ್ಯಪ್ರದೇಶ ತಂಡ ಮೊದಲ ಬಾರಿ ರಣಜಿ ಟ್ರೋಫಿ ಚಾಂಪಿಯನ್ ಪಟ್ಟ ಅಲಂಕರಿಸಿ ಐತಿಹಾಸಿಕ ಸಾಧನೆ ಮಾಡಿದೆ.
ಬೆಂಗಳೂರಿನಲ್ಲಿ ನಡೆದ ಫೈನಲ್ ನಲ್ಲಿ 108 ರನ್ ಗಳ ಸುಲಭ ಗುರಿ ಬೆಂಬತ್ತಿದ ಮಧ್ಯಪ್ರದೇಶ ಪಂದ್ಯದ ಅಂತಿಮ ದಿನದಾಟವಾದ ಭಾನುವಾರ 4 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಸುಲಭ ಗುರಿ ಬೆನ್ನಟ್ಟಿದ ಮಧ್ಯಪ್ರದೇಶ ತಂಡ ಶಮ್ಸ್ ಮುಲಾನಿ (3 ವಿಕೆಟ್) ದಾಳಿಗೆ ತತ್ತರಿಸಿ ಆರಂಭಿಕ ಆಘಾತಕ್ಕೆ ಒಳಗಾಯಿತು. ಆದರೆ ಹಿಮಾಂಶು ಮಂತ್ರಿ (37) ಮತ್ತು ಶುಭಮನ್ ಶರ್ಮ (30) ಮತ್ತು ರಜತ್ ಪಟಿಡರ್ ( ಅಜೇಯ 30) ತಂಡಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟರು.
೨೩ ವರ್ಷಗಳ ಹಿಂದೆ ಕರ್ನಾಟಕ ವಿರುದ್ಧ ಫೈನಲ್ ನಲ್ಲಿ ಸೋಲುಂಡಿದ್ದ ಮಧ್ಯಪ್ರದೇಶ ಇದೇ ಮೊದಲ ಬಾರಿ ಫೈನಲ್ ಪ್ರವೇಶಿಸಿದ್ದೂ ಅಲ್ಲದೇ ಪ್ರಶಸ್ತಿ ಗೆದ್ದು ದಾಖಲೆ ಬರೆದಿದೆ.