ಮಧ್ಯಪ್ರದೇಶ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಅಭ್ಯರ್ಥಿಗಳು ಮತದಾರರ ಸೆಳೆಯಲು ಇನ್ನಿಲ್ಲದ ಕಸರತ್ತು ಆರಂಭಿಸಿದ್ದಾರೆ. ಈ ನಡುವೆ ಬಿಜೆಪಿ ನಾಯಕ, ಗೃಹ ಸಚಿವ ನರೋತ್ತಮ್ ಮಿಶ್ರಾ ಸಂಸದೆ ಹೇಮಾ ಮಾಲಿನಿ ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದಾರೆ.
ನನ್ನ ಕ್ಷೇತ್ರದಲ್ಲಿ ಕೇವಲ ಅಭಿವೃದ್ಧಿ ಕೆಲಸ ಮಾತ್ರವಲ್ಲದೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಮಾತ್ರವಲ್ಲದೆ, ಹೇಮಾ ಮಾಲಿನಿಯವರನ್ನು ಕುಣಿಸುವ ತನಕ ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡಿದ್ದೀನೆಂದು ದಾತಿಯಾ ಕ್ಷೇತ್ರದ ಶಾಸಕರೂ ಆಗಿರುವ ಮಿಶ್ರಾ ಹೇಳಿಕೆ ನೀಡಿದ್ದಾರೆ.
ದಾತಿಯಾ ನರೋತ್ತಮ್ ಮಿಶ್ರಾ ಅವರ ಭದ್ರಕೋಟೆಯಾಗಿದ್ದು, 2023 ರಲ್ಲಿ ಗೆದ್ದರೆ ಮಿಶ್ರಾ ಅವರು ಈ ಕ್ಷೇತ್ರದಿಂದ 4 ನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಲಿದ್ದಾರೆ.
ವ್ಯಕ್ತಿತ್ವ ಮತ್ತು ನೋಟವನ್ನು ಟೀಕಿಸುವ ನಾಚಿಕೆಯಿಲ್ಲದ ಬಿಜೆಪಿ ಸದಸ್ಯರ ನೈಜತೆಯನ್ನು ನೋಡಿ. ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರದೇ ಪಕ್ಷದ ಸಂಸದೆ ಹೇಮಾ ಮಾಲಿನಿ ಬಗ್ಗೆಇಂತಹ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಯುವ ಆರ್ಜೆಡಿ ಟ್ವೀಟ್ ಮಾಡಿದೆ.
ಹೇಮಾ ಮಾಲಿನಿ ಬಿಜೆಪಿ ಸಂಸದೆಯಾದರೂ, ನರೋತ್ತಮ್ ಮಿಶ್ರಾ ಅವರು ತಮ್ಮ ಪಕ್ಷದ ಸಂಸದರನ್ನೂ ಬಿಡಲಿಲ್ಲ ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಟೀಕಿಸಿದ್ದಾರೆ.
“ಮಹಿಳೆಯರ ಬಗ್ಗೆ ಬಿಜೆಪಿಯ ಗೌರವಾನ್ವಿತ ಸಚಿವರ ನಿಜವಾದ ನೀಚತನವನ್ನು ಆಲಿಸಿ” ಎಂದು ದಿಗ್ವಿಜಯ ಸಿಂಗ್ ಅವರು ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಮಧ್ಯಪ್ರದೇಶ ವಿಧಾನಸಭೆಯು ನವೆಂಬರ್ 7 ರಂದು ಚುನಾವಣೆ ನಡೆಯಲಿದೆ.