ವಿವಾದಾಸ್ಪದ ಹೇಳಿಕೆಗಳಿಂದಲೇ ಸಾಕಷ್ಟು ಸುದ್ದಿಯಾಗುವ ಕೇರಳದ ಪೂಂಜಾರ್ ಕ್ಷೇತ್ರದ ಶಾಸಕ ಪಿ ಸಿ ಜಾರ್ಜ್, ಈಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದಾರೆ.
ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಘೋಷಿಸಬೇಕು ಎಂದು ಹೇಳಿಕೆ ನೀಡಿದ ಪಿಸಿ ಜಾರ್ಜ್, ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಪರಿವರ್ತಿಸಲು ಕೇರಳದ ಎರಡು ಪ್ರಮುಖ ಪ್ರತಿಸ್ಪರ್ಧಿ ಮೈತ್ರಿಗಳಾದ ಎಡ ಮತ್ತು ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟಗಳು ಭಯೋತ್ಪಾದಕರೊಂದಿಗೆ ಕೈಜೋಡಿಸಿವೆ ಎಂದು ಹೇಳಿದ್ದಾರೆ. ಈ ಎರಡೂ ಮೈತ್ರಿಕೂಟಗಳು ಭಯೋತ್ಪಾದಕರ ಪಟ್ಟಭದ್ರ ಹಿತಾಸಕ್ತಿಯನ್ನು ಕಾಪಾಡುತ್ತಿವೆ ಎಂದು ಆರೋಪಿಸಿದ್ದಾರೆ.
HRDS (Human Resource Development Society) ಎಂಬ ಎನ್‌ಜಿಒ ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪಿಸಿ ಜಾರ್ಜ್, ನರೇಂದ್ರ ಮೋದಿ ಅವರು 2016 ರಲ್ಲಿ ನೋಟು ನಿಷೇಧಗೊಳಿಸಿದ್ದರಿಂದ ಭಯೋತ್ಪಾದಕ ಸಂಘಟನೆಗಳ ಕಾರ್ಯಾಚರಣೆ ಭಾರತದಲ್ಲಿ ಸ್ವಲ್ಪ ಕಡಿಮೆಯಾಗಿದೆ. ಹಾಗಾಗಿ, 2030 ಕ್ಕೆ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವಾಗಿಸಬೇಕೆಂಬ ಷಡ್ಯಂತ್ರ ಇನ್ನೂ ಮುಂದಕ್ಕೆ ಹೋಗಿದೆ. ಅದಕ್ಕಾಗಿ ನರೇಂದ್ರ ಮೋದಿಯವರನ್ನು ಶ್ಲಾಘಿಸಬೇಕು ಎಂದಿದ್ದಾರೆ.
ಸುಪ್ರಿಂ ಕೋರ್ಟ್ ಲವ್ ಜಿಹಾದ್ ಇಲ್ಲ ಎಂದಿದೆ, ಆದರೆ ನನಗೆ ಗೊತ್ತು. ಲವ್ ಜಿಹಾದ್ ಇದೆ ಎಂದು. ಸುಪ್ರೀಂ ಕೋರ್ಟ್ ಹೇಳಿರುವುದು ತಪ್ಪು ಎಂದು ಹೇಳಿದ್ದೇನೆ. ಕೋರ್‌ಟ್ ಏನು ಮಾಡುತ್ತೆ? ಎಂದು ಪ್ರಶ್ನಿಸಿದ ಜಾರ್ಜ್, ಈ ನಡೆಗೆ ಅಂತ್ಯ ನೀಡಬೇಕಾದರೆ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕು. ಭಾರತವನ್ನು ಹಿಂದೂರಾಷ್ಟ್ರ ಮಾಡಬೇಕು ಎಂದು ಹೇಳಿರುವುದು ವಿವಾದವಾಗುತ್ತದೆ. ಆದರೆ, ಅದನ್ನು ನಾನು ಎದುರಿಸುತ್ತೇನೆ ಎಂದು ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ನಮ್ಮದು ಜಾತ್ಯಾತೀತ, ಸಮಾಜವಾದದ ಆಡಳಿತ ವ್ಯವಸ್ಥೆ. ಹಾಗಾಗಿ, ಅಲ್ಲಿ ಲವ್ ಜಿಹಾದ್‌ನಂತಹ ಕೃತ್ಯಗಳಿಗೆ ಅವಕಾಶವಿದೆ. ಇದಕ್ಕೆ ತಡೆ ನೀಡಬೇಕಿದ್ದರೆ, ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಲೇ ಬೇಕು ಎಂದಿದ್ದಾರೆ.
ಏಳನೇ ಬಾರಿ ಶಾಸಕರಾಗಿರುವ ಪಿಸಿ ಜಾರ್ಜ್, ಈ ಹಿಂದೆ ಹಲವು ಬಾರಿ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದರು. ಚರ್ಚ್ ಪಾದ್ರಿಯಿಂದ ಅತ್ಯಾಚಾರಕ್ಕೊಳಗಾಗಿದ್ದ ಕ್ರೈಸ್ತ ಸನ್ಯಾಸಿನಿಯನ್ನು ಅವಮಾನಗೊಳಿಸಿ ಸಾಕಷ್ಟು ವಿರೋಧ ಕಟ್ಟಿಕೊಂಡಿದ್ದರು. 12 ಬಾರಿ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿ, 13 ನೇ ಬಾರಿ ಅತ್ಯಾಚಾರವೆಂದು ದೂರು ದಾಖಲಿಸಿದ್ದಾರೆ. ಆಕೆಯೊಬ್ಬ ವೇಶ್ಯೆ ಎಂದು ಸಂತ್ರಸ್ತೆಯನ್ನು ಅಪಮಾನಿಸಿದ್ದರು. ಅದಾದ ಬಳಿಕ ಮಹಿಳಾ ಆಯೋಗಕ್ಕೆ ಬೆದರಿಕೆ ಹಾಕಿಯೂ ಉದ್ಧಟತನ ತೋರಿಸಿದ್ದರು. ಶಾಸಕರ ಹಾಸ್ಟೆಲ್‌ನ ಉದ್ಯೋಗಿಯೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದ ಅವರು, ಮಹಿಳಾ ನಿಂದಕ ಹೇಳಿಕೆ ನೀಡಿ ಸಾಕಷ್ಟು ಬಾರಿ ಚರ್ಚೆಗೆ ಗ್ರಾಸವಾಗಿದ್ದಾರೆ.