ಲೋಕಾಯುಕ್ತ ಕಾಯ್ದೆಯನ್ನು ಬಲಪಡಿಸಿ ಭ್ರಷ್ಟಾಚಾರ ನಿಗ್ರಹ ದಳವನ್ನು ರದ್ದುಪಡಿಸುವುದಾಗಿ ನಾಡಿನ ಜನರಿಗೆ ಆಶ್ವಾಸನೆ ಕೊಟ್ಟ ವಯೋವೃದ್ಧ ಮುಖ್ಯಮಂತ್ರಿಯೊಬ್ಬರು ಆಡಳಿತ ನಡೆಸಿ ಈಗ ಹೊರನಡೆದಿದ್ದಾರೆ. ಆದರೆ ಅವರು ಕೊಟ್ಟ ಮಾತು ವಚನ ಜನಮಾನಸದಲ್ಲಿ ಹಾಗೆಯೇ ಉಳಿಯಿತೇ ಹೊರತು ಕಾರ್ಯರೂಪಕ್ಕೆ ಬರಲಿಲ್ಲ. ಆದರೆ ಆಡಳಿತದಿಂದ ಹೊರನಡೆದ ನಂತರ ಒಂದು ಕೋಟಿ ರೂಪಾಯಿ ಬೆಲೆಬಾಳುವ ಕಾರನ್ನು ಖರೀದಿಸಿ ರಾಜ್ಯ ಪ್ರವಾಸಕ್ಕೆ ಹೊರಡುತ್ತೇನೆ ಎಂದು ಹೇಳುತ್ತಿರುವುದು ವಿಪರ್ಯಾಸ ದುರಾದೃಷ್ಟಕರ.
ಹಾಗೆ ಬೆಂಗಳೂರು ನಗರವನ್ನು ಸಿಂಗಪೂರ್ ಮಾಡುತ್ತೇನೆ, ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ಕೊಡುತ್ತೇನೆ ಎಂದು ಹೇಳಿದ ಮುಖ್ಯಮಂತ್ರಿಯೊಬ್ಬರು ವ್ಯವಸ್ಥೆಯಲ್ಲಿನ ಎಲ್ಲಾ ಸೌಲಭ್ಯಗಳನ್ನು ಪಡೆದು ಐಷಾರಾಮಿ ಜೀವನವನ್ನು ನಡೆಸಿ ಈಗ ವಯೋವೃದ್ಧ ರಾದರೂ ಸಹಿತ ಅರೇನಿವೃತ್ತಿಯೊಂದಿಗೆ ವೈಭೋಗದ ಜೀವನವನ್ನು ನಡೆಸುತ್ತಿದ್ದಾರೆ.
ಹಾಗೆ ರೈತರ ಧ್ವನಿಯಾಗಿ ಮುಖ್ಯ ಮಂತ್ರಿಯಾಗಿ ಆಡಳಿತ ನಡೆಸುತ್ತಿರುವಾಗಲೇ ದೇಶದ ಉನ್ನತ ಸ್ಥಾನಕ್ಕೆ ರಿ ದೇಶ ಸೇವೆ ಸಲ್ಲಿಸಿದ ಇವರು ಲೋಕಾಯುಕ್ತಕ್ಕೆ ಸಂಪೂರ್ಣ ಅಧಿಕಾರ ಕೊಟ್ಟು ಬಲ ಪಡಿಸುತ್ತೇನೆ ಎಂಬ ಮಾತು ಅವರಿಂದ ಬರಲಿಲ್ಲ, ಬರುತ್ತಿಲ್ಲ ಸಂವಿಧಾನಾತ್ಮಕವಾಗಿ ಸಿಗುವ ಎಲ್ಲಾ ಸೇವಾ ಸೌಲಭ್ಯಗಳನ್ನು ಪಡೆದು ವಯೋವೃದ್ಧರಾದರೂ ಸಹಿತ ಇನ್ನೂ ಕೂಡ ರಾಜಕೀಯ ರಂಗದಲ್ಲಿ ಮಿನುಗುತ್ತಿದ್ದಾರೆ.
ಈ ಮಧ್ಯೆ ಬಂದ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳ ಮುಖ್ಯಮಂತ್ರಿಗಳು ಲೋಕಾಯುಕ್ತವನ್ನು ಬಲಪಡಿಸುತ್ತವೆ ಎಂದು ಪೊಳ್ಳು ಭರವಸೆಗಳನ್ನು, ಸುಳ್ಳುಗಳ ಸರಮಾಲೆಗಳನ್ನು ನಾಗರಿಕರಿಗೆ ನೀಡಿ ವೈಭೋಗದ ಜೀವನದೊಂದಿಗೆ ತಮ್ಮ ಅಧಿಕಾರ ದಾಹವನ್ನು ನೀಗಿಸಿ ಕೊಂಡಿದ್ದಾರೆ, ನೀಗಿಸಿಕೊಳ್ಳುತ್ತಿದ್ದಾರೆ.
ಇವರೆಲ್ಲರಿಗೂ ಸೇವಾ ಸೌಲಭ್ಯಗಳು ದೊರೆಯುತ್ತಿರುವುದು ಸಾರ್ವಜನಿಕರ ತೆರಿಗೆ ಹಣದಿಂದ ಎಂಬುದು ಸಾರ್ವಜನಿಕರು ಅರ್ಥಮಾಡಿಕೊಳ್ಳಬೇಕಾಗಿದೆ.
ಪ್ರತಿ ವರ್ಷ ಜೂನ್ ತಿಂಗಳ 30 ನೇ ತಾರೀಖಿನ ಒಳಗೆ ಜನಪ್ರತಿನಿಧಿಗಳು ತಮ್ಮ ಚರ ಸ್ಥಿರ ಆಸ್ತಿಯನ್ನು ಲೋಕಾಯುಕ್ತ ಮುಂದೆ ಘೋಷಣೆ ಮಾಡಬೇಕಾಗಿದ್ದು ವಿಧಾನಸಭಾ ಸದಸ್ಯರು ವಿಧಾನ ಪರಿಷತ್ ಸದಸ್ಯರು ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೌನ್ಸಿಲರ್ ಗಳು ತಮ್ಮ ಚರ ಸ್ಥಿರ ಆಸ್ತಿಯನ್ನು ಘೋಷಣೆ ಮಾಡದೇ ಇರುವುದರಿಂದ ಲೋಕಾಯುಕ್ತ ಕಾಯಿದೆಯ ಅನುಸಾರ ರಾಜ್ಯದ ಮೂರು ದಿನ ಪತ್ರಿಕೆಗಳಲ್ಲಿ ಅವರುಗಳ ಹೆಸರುಗಳನ್ನು ಸಾರ್ವಜನಿಕವಾಗಿ ಪ್ರಕಟಿಸಿ ಲೋಕಾಯುಕ್ತರು ಈಗ ಕೈಮುಗಿದು ಕುಳಿತುಕೊಂಡು ಬಿಟ್ಟಿದ್ದಾರೆ. ಅಸಲಿಗೆ ಲೋಕಾಯುಕ್ತ ಮತ್ತು ಉಪ ಲೋಕಾಯುಕ್ತರು ತಮ್ಮ ಚರ ಸ್ಥಿರ ಆಸ್ತಿಗಳನ್ನು ಘೋಷಣೆ ಮಾಡದಿರುವುದು ಲೋಕಾಯುಕ್ತ ಕಾಯ್ದೆಯ ಲೋಪಗಳಲ್ಲಿ ಒಂದಾಗಿರುತ್ತದೆ. ಆ ಕಾರಣಕ್ಕಾಗಿ ಚರ ಸ್ಥಿರ ಆಸ್ತಿಯನ್ನು ಘೋಷಣೆ ಮಾಡುವುದಕ್ಕೆ ಸಾಧ್ಯವಿಲ್ಲ ಎಂಬುದನ್ನೇ ಪ್ರತಿಪಾದಿಸುತ್ತಿದ್ದಾರೆ.
ಇವರೆಲ್ಲರಿಗೂ ಪಾರದರ್ಶಕತೆ ಮತ್ತು ನೈತಿಕತೆಯ ಅರ್ಥವೇ ಗೊತ್ತಿಲ್ಲವೆಂದು ಕಾಣುತ್ತದೆ. ಈ ಕಾರಣಕ್ಕಾಗಿಯೇ ವಿಧಾನಸಭಾ ಸದಸ್ಯರು ಮತ್ತು ವಿಧಾನಪರಿಷತ್ ಸದಸ್ಯರು ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸದಸ್ಯರುಗಳು ಸಾರ್ವಜನಿಕರ ತೆರಿಗೆ ಹಣದಿಂದ ಅಭಿವೃದ್ಧಿಯ ಹೆಸರಿನಲ್ಲಿ ಲೂಟಿಮಾಡಿ ಚರ ಸ್ಥಿರ ಆಸ್ತಿಗಳನ್ನು ಗಳಿಸಿರುವ ಕಾರಣಕ್ಕಾಗಿಯೇ ಅವರು ಚರ ಸ್ಥಿರಾಸ್ತಿಗಳನ್ನು ಘೋಷಣೆ ಮಾಡುತ್ತಿಲ್ಲ ಎಂಬ ಮಾತುಗಳು ಸಾರ್ವಜನಿಕರ ಬಾಯಿಗೆ ಆಹಾರವಾಗಿದೆ.
ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಯಾರಿಗೂ ತಿಳಿಯುವುದಿಲ್ಲ ವೆಂಬಂತೆ ನಮ್ಮ ರಾಜಕಾರಣಿಗಳು ನಡೆದುಕೊಳ್ಳುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ. ಇದಕ್ಕೆ ಪೂರಕವಾಗಿರುವ ಅಂಶಗಳನ್ನು ನಾವು ಅವಲೋಕಿಸಿದರೆ ಇವರೆಲ್ಲರೂ ರಾಜಕೀಯ ರಂಗಕ್ಕೆ ಬರುವ ಮೊದಲು ಇವರೆಲ್ಲರ ಚರ ಸ್ಥಿರಾಸ್ತಿಗಳು ಎಷ್ಟು? ಈಗ ಅವರ ಅವರ ಕುಟುಂಬ ವರ್ಗದ ಚರ ಸ್ಥಿರ ಆಸ್ತಿಗಳು ಎಷ್ಟು?ಎಂಬುದನ್ನು ತನಿಖೆಗೊಳಪಡಿಸಿದಾಗಲೆ ಸತ್ಯಾಂಶವು ಹೊರಬರುತ್ತದೆ.
ಜನಸಾಮಾನ್ಯರು ತಪ್ಪು ಮಾಡಿದಾಗ ಅವರನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಿ ನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಶಿಕ್ಷೆಗೆ ಒಳಪಡಿಸಲಾಗುತ್ತದೆ. ಆದರೆ ಜನಪ್ರತಿನಿಧಿಗಳು ತಪ್ಪು ಮಾಡಿದಾಗ ಕಾನೂನುಗಳನ್ನು ಉಲ್ಲಂಘನೆ ಮಾಡಿದಾಗ ಅವರಿಗೆ ಯಾವ ರೀತಿ ಶಿಕ್ಷೆ ಇದೆ ಎಂಬುದು ಲೋಕಾಯುಕ್ತ ಕಾಯ್ದೆಯಲ್ಲಿ ಸ್ಪಷ್ಟವಾಗಿ ತಿಳಿಸಿ ಇಲ್ಲದಿರುವುದೇ ಇದಕ್ಕೆಲ್ಲ ಕಾರಣವಾಗಿದೆ.
ವಿಧಾನಸಭಾ ಸದಸ್ಯರು ವಿಧಾನ ಪರಿಷತ್ ಸದಸ್ಯರು ಲೋಕಾಯುಕ್ತ ಕಾಯ್ದೆ ಯನ್ನು ಬಲಪಡಿಸಿ ಅದಕ್ಕೆ ತಿದ್ದುಪಡಿಯನ್ನು ತಂದು ಪಾರದರ್ಶಕ ಆಡಳಿತ ನಡೆಸುವಲ್ಲಿ ಕಾರ್ಯಪ್ರವೃತ್ತರಾಗಬೇಕಾದ ವರೇ ಅದರ ತಂಟೆಗೆ ಹೋಗುತ್ತಿಲ್ಲ,
ಈವರೆಗೂ ಚರ ಸ್ಥಿರ ಆಸ್ತಿ ಘೋಷಣೆಯನ್ನು ಮಾಡದಿರುವ ವಿಧಾನಸಭಾ ಸದಸ್ಯರು ಮತ್ತು ವಿಧಾನಪರಿಷತ್ ಸದಸ್ಯರ ಜೊತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೌನ್ಸಿಲರ್ ಗಳು 2019-20 ರ ಸಾಲಿನ ಆಸ್ತಿಯನ್ನು ಘೋಷಣೆ ಮಾಡದಿರುವುದರಿಂದ ಮುಂದಿನ ಸಾರ್ವತ್ರಿಕ ಚುನಾವಣೆ ಅಥವಾ ಯಾವುದೇ ಸಂಘ ಸಂಸ್ಥೆಗಳ ಚುನಾವಣೆಯಲ್ಲಿ ಅವರು ಸ್ಪರ್ಧಿಸದಂತೆ ತಡೆಯೊಡ್ಡುವ ಕೆಲಸ ಆಗಬೇಕಾಗಿದೆ.
ಈ ನಿಟ್ಟಿನಲ್ಲಿ ನಾವು ನ್ಯಾಯಾಂಗದ ಅಂಗಳಕ್ಕೆ ಹೋಗಿ ಇದನ್ನು ಪ್ರಶ್ನಿಸುವಂತಹ ಕೆಲಸ ಮಾಡಬೇಕಾಗಿದೆ ಎಂದು ಸಾಮಾಜಿಕ ಹೋರಾಟಗಾರರ ವೇದಿಕೆಯ ಹೆಚ್. ಎಂ. ವೆಂಕಟೇಶ ಹೇಳಿದ್ದಾರೆ.


