ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಇಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಧಾರವಾಡ, ರಾಯಚೂರು, ಚಿತ್ರದುರ್ಗ, ಕಲಬುರಗಿ, ತುಮಕೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿರುವ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ ಹಾಗೂ ಸಂಬಂಧಿಕರ ನಿವಾಸಗಳಲ್ಲಿ ಪರಿಶೀಲನೆ ನಡೆಯುತ್ತಿದೆ.

ಧಾರವಾಡ ಮತ್ತು ಶಿವಮೊಗ್ಗದಲ್ಲಿ ಅರಣ್ಯ ಇಲಾಖೆಯ ಎಸಿಎಫ್ ಕಿರಣ್ ಅಂಗಡಿ ಅವರಿಗೆ ಸೇರಿದ ಮನೆ, ಕಚೇರಿ, ಫಾರ್ಮ್‌ಹೌಸ್ ಹಾಗೂ ಇತರ ಸ್ಥಳಗಳಲ್ಲಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ರಾಯಚೂರಿನಲ್ಲಿ ಕೆಬಿಜೆಎನ್‌ಎಲ್ ಕಾರ್ಯನಿರ್ವಾಹಕ ಇಂಜಿನಿಯರ್ ಬಸನಗೌಡ ಅವರಿಗೆ ಸೇರಿದ ಮನೆ, ಪೆಟ್ರೋಲ್ ಬಂಕ್, ಬಾರ್ ಹಾಗೂ ಇತರ ಆಸ್ತಿಗಳ ಮೇಲೂ ಲೋಕಾಯುಕ್ತ ದಾಳಿ ನಡೆದಿದೆ.

ಚಿತ್ರದುರ್ಗದಲ್ಲಿ ವಲಯ ಅರಣ್ಯಾಧಿಕಾರಿ ದುಗ್ಗಪ್ಪ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯದ ಪ್ರೊಫೆಸರ್ ಶಂಕರ್ ಅವರ ಮನೆಗಳಲ್ಲಿ ಶೋಧ ಕಾರ್ಯ ನಡೆಯುತ್ತಿದೆ.
ಕಲಬುರಗಿಯಲ್ಲಿ ಜೆಸ್ಕಾಂ ಎಇಇ ಅಮೃತರಾವ್ ಯಲಾಲ್ ಅವರಿಗೆ ಸೇರಿದ ಮನೆ, ಫ್ಲ್ಯಾಟ್, ಕಚೇರಿ ಸೇರಿದಂತೆ ಹಲವು ಸ್ಥಳಗಳಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ತುಮಕೂರಿನಲ್ಲಿ ಸಣ್ಣ ನೀರಾವರಿ ಇಲಾಖೆಯ ಎಇಇ ಮಧುಸೂದನ್ ಅವರ ಮನೆಯ ಮೇಲೂ ಲೋಕಾಯುಕ್ತ ದಾಳಿ ನಡೆದಿದೆ.

ಸದ್ಯ ಎಲ್ಲಾ ಕಡೆಗಳಲ್ಲಿ ದಾಖಲೆಗಳ ಪರಿಶೀಲನೆ ಮುಂದುವರಿದಿದೆ. ಪರಿಶೀಲನೆ ಪೂರ್ಣಗೊಂಡ ಬಳಿಕ ಎಷ್ಟು ಪ್ರಮಾಣದ ಆಸ್ತಿ, ನಗದು ಅಥವಾ ಇತರೆ ದಾಖಲೆಗಳು ಪತ್ತೆಯಾಗಿವೆ ಎಂಬ ಮಾಹಿತಿ ಲೋಕಾಯುಕ್ತದಿಂದ ಅಧಿಕೃತವಾಗಿ ಪ್ರಕಟವಾಗಲಿದೆ.






