ಲೋಕ ಜನಶಕ್ತಿ ಪಾರ್ಟಿಯ ಏಕೈಕ ಶಾಸಕ ಜೆಡಿಯುಗೆ ಪಕ್ಷಾಂತರವಾಗುವುದರೊಂದಿಗೆ ಬಿಹಾರ ವಿಧಾನಸಭೆಯಲ್ಲಿ ಚಿರಾಗ್ ಪಾಸ್ವಾನ್‌ರ ಪಕ್ಷಕ್ಕೆ ವಿಧಾನಸಭೆಯಲ್ಲಿ ಪ್ರತಿನಿಧಿಯೇ ಇಲ್ಲದಂತಾಗಿದೆ.
ಕಳೆದ ವಿಧಾನಸಭಾ ಸಂದರ್ಭದಲ್ಲಿ ಚಿರಾಗ್ ಅವರು ಸೈದ್ಧಾಂತಿಕ ಭಿನ್ನಮತದ ಕಾರಣ ನೀಡಿ ಎನ್‌ಡಿಎ ತೊರೆದು ಸ್ವತಂತ್ರವಾಗಿ ಸ್ಪರ್ಧಿಸಿದ್ದರು. ಎಲ್‌ಜೆಪಿಯು ಜೆಡಿಯು ಸ್ಪರ್ಧಿಸಿದ್ದ ಎಲ್ಲಾ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಯನ್ನೂ ಕಣಕ್ಕಿಳಿಸಿತ್ತು. ಆ ಮೂಲಕ 243 ವಿಧಾನ ಸಭಾ ಸದಸ್ಯರಿರುವ ಬಿಹಾರದಲ್ಲಿ ಕೇವಲ 43 ಜೆಡಿಯು ಶಾಸಕರು ಆಯ್ಕೆಯಾಗಲು ಕಾರಣವಾಗಿದ್ದರು.
ಆದರೆ ಮಂಗಳವಾರ, ಬೆಗುಸರೈನ ಮತಿಹಾನಿಯಿಂದ ಗೆದ್ದ ಎಲ್‌ಜೆಪಿಯ ಶಾಸಕ ರಾಜ್ ಕುಮಾರ್ ಸಿಂಗ್ ಅವರು ಜೆಡಿಯುಗೆ ಪಕ್ಷಾಂತರವಾಗುವುದರೊಂದಿಗೆ ರಾಜ್ಯದ ಶಾಸಕಾಂಗ ಪರಿಷತ್ತಿನಲ್ಲಿ ಅಥವಾ ವಿಧಾನಸಭೆಯಲ್ಲಿ ಎಲ್‌ಜೆಪಿಗೆ ಸದಸ್ಯರಿಲ್ಲದಂತಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಎನ್‌ಡಿಎ ತೊರೆಯುವ ಆದರೆ ಜೆಡಿಯು ಸ್ಪರ್ಧಿಸಿರುವೆಡೆ ಮಾತ್ರ ಸ್ಪರ್ಧಿಸುವ ಎಲ್‌ಜೆಪಿಯ ನಿರ್ಧಾರಕ್ಕೆ ಬಿಜೆಪಿಯ ಮೌನ ಅನುಮೋದನೆಯೂ ಇತ್ತೆಂದು ಊಹಿಸಲಾಗಿತ್ತು. ಇದಕ್ಕೆ ಪ್ರತಿಯಾಗಿ ಚಿರಾಗ್ ಅವರಿಗೆ ಕೇಂದ್ರದಲ್ಲಿ ಮಂತ್ರಿ ಸ್ಥಾನ ನೀಡಲಾಗುತ್ತದೆ ಎಂದೇ ನಂಬಲಾಗಿತ್ತು. ಅಲ್ಲದೆ ಅವರ ರಾಮ್ ವಿಲಾಸ್ ಪಾಸ್ವಾನ್ ಅವರು ನಿಧನರಾಗುವುದಕ್ಕಿಂತ ಮೊದಲು ಮೋದಿ ಸಂಪುಟದಲ್ಲಿ ಸಚಿವರಾಗಿಯೇ ಇದ್ದರು.
ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ನೀಡಿದ ಕಳಪೆ ಪ್ರದರ್ಶನಕ್ಕೆ ಪಾಸ್ವಾನ್ ಅವರ ನಿರ್ಧಾರವೇ ಕಾರಣ ಎಂದು ನಂಬಿರುವ ನಿತೀಶ್, ತಮ್ಮ ರಾಜಕೀಯ ಸ್ಥಾನಮಾನ ಭದ್ರವಾಗಿರಬೇಕೆಂದರೆ ಬಿಹಾರದಲ್ಲಿ ಎಲ್‌ಜೆಪಿ ಯಾವುದೇ ಪ್ರಭಾವ ಹೊಂದಿರಬಾರದು ಎಂಬ ಉದ್ದೇಶದಿಂದಲೇ ರಾಜ್‌ಕುಮಾರ್ ಸಿಂಗ್ ಅವರನ್ನು ಪಕ್ಷಕ್ಕೆ ಕರೆತಂದಿದ್ದಾರೆ ಎನ್ನಲಾಗುತ್ತಿದೆ.

ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿರುವಂತೆ ನಿತೀಶ್ “ರಾಜ್ಯ ರಾಜಕಾರಣದಲ್ಲಿ ತನ್ನ ಸ್ಥಾನವನ್ನು ಮತ್ತೆ ಭದ್ರಪಡಿಸಲು ಯಶಸ್ವಿಯಾದ ಕಾರಣ, ಕೇಂದ್ರದಲ್ಲಿ ಚಿರಾಗ್ ಪ್ರವೇಶವು ವಿಳಂಬವಾಗುತ್ತಿದೆ”. ಈ ಹಂತದಲ್ಲಿ ನಿತೀಶ್ ಕುಮಾರ್ ಅವರನ್ನು ಅಸಮಾಧಾನಗೊಳಿಸಲು ಬಿಜೆಪಿ ಇಚ್ಛಿಸುವುದಿಲ್ಲ. ಇದು ರಾಮ್ ವಿಲಾಸ್ ಪಾಸ್ವಾನ್ ಅವರ ಮರಣದ ನಂತರ ಖಾಲಿಯಾಗಿದ್ದ ರಾಜ್ಯಸಭಾ ಸ್ಥಾನ ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿಯವರಿಗೆ ನೀಡಿದ್ದರಲ್ಲೇ ಸ್ಪಷ್ಟವಾಗಿದೆ ಎಂದು ವರದಿ ಹೇಳುತ್ತದೆ.
ಆದರೆ ಎಲ್ಲವೂ ಸಾಧ್ಯವಾಗಿರುವ ಭಾರತದ ರಾಜಕಾರಣದಲ್ಲಿ ಮುಂದೇನಾಗುತ್ತದೆ ಎಂದು ಊಹಿಸಲಾಗುವುದಿಲ್ಲ. ಸುಪ್ರೀಂ ಪವರ್ ತಮ್ಮ ಬಳಿಯೇ ಇರಬೇಕೆಂದು ಬಯಸುವ ಬಿಜೆಪಿ ಯಾವ ಕ್ಷಣದಲ್ಲಿ ಜೆಡಿಯುಗೆ ಕೈ ಕೊಟ್ಟು ಪಾಸ್ವಾನ್‌ರಿಗೆ ಮಾನ್ಯತೆ ಕೊಡುತ್ತದೆ ಎಂದು ಹೇಳಲಾಗುವುದಿಲ್ಲ.