ಅಮ್ಮ ಮತ್ತು ವಾಸ್ತವದೊಂದಿನ ಮುಖಾಮುಖಿ
ಆದರ್ಶಗಳು ಹೊಟ್ಟೆ ತುಂಬಿಸುವುದಿಲ್ಲ ಅನ್ನುತ್ತಿದ್ದರು ಅಮ್ಮ. ‘ಲಂಕೇಶ್ ಪತ್ರಿಕೆ ವ್ಯಾಪಕವಾಗಿ ಕರ್ನಾಟಕದಲ್ಲಿ ಓದಲ್ಪಡುವವರೆಗೂ ನಮ್ಮ ಆರ್ಥಿಕಸ್ಥಿತಿ ಉತ್ತಮವಾಗಿರಲಿಲ್ಲ. ಒಮ್ಮೆ ಕಿರಾಣಿ ಅಂಗಡಿಯಲ್ಲಿ ಎರಡು ತಿಂಗಳ ಬಿಲ್ಗಳನ್ನು ಪಾವತಿಸದೇ ಇದ್ದುದಕ್ಕೆ ಅಮ್ಮ ಮನೆಯಲ್ಲಿ ಅಡುಗೆ ಮಾಡಲು ನಿರಾಕರಿಸಿದ್ದರು. ಆ ದಿನ ಅಪ್ಪ ತಮ್ಮ ಕೈಯಲ್ಲಿದ್ದ ಉಂಗುರವನ್ನು ಮಾರಿ ಬಿಲ್ ಪಾವತಿಸಿದ್ದರು. ನಾನು ಮತ್ತು ಗೌರಿ ಇಂತಹ ದಿನಗಳನ್ನು ಹೆಚ್ಚು ನೆನಪಿಟ್ಟುಕೊಂಡಿದ್ದೆವು. ಆದರೆ ಇಂದ್ರಜಿತ್ ಆಗ ಬಹಳ ಸಣ್ಣವನಾಗಿದ್ದರಿಂದ ಆ ದಿನಗಳು ನೆನಪಿಲ್ಲ.
ಆದರೆ ಎಲ್ಲವೂ ಅಪ್ಪನ ಸೈದ್ಧಾಂತಿಕ ಬದ್ಧತೆಯ ಮಧ್ಯೆ ಮುಸುಕಾಗುತ್ತಿತ್ತು. ಅವರು ತಮ್ಮ ಚಿತ್ರ ‘ಪಲ್ಲವಿ’ಗೆ ಹಣ ಹೂಡುವುದಕ್ಕಾಗಿ ಶಿವಮೊಗ್ಗದಲ್ಲಿದ್ದ ತನ್ನ ತಂದೆಯ ಮನೆಯನ್ನು ಸಹ ಮಾರಿದ್ದರು ಮತ್ತು ನನ್ನ ತಾಯಿ ಪ್ರತಿದಿನ 25 ಕ್ರೂ ಸದಸ್ಯರಿಗೆ ಅನ್ನ ಬೇಯಿಸಬೇಕಿತ್ತು. ಬೆಂಗಳೂರಿನ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿದ್ದ ಅವರು ತಮ್ಮಉದ್ಯೋಗ ತೊರೆದಾಗ ಅಮ್ಮ ನಮ್ಮ ಶಾಲೆಯ ಶುಲ್ಕವನ್ನು ಪಾವತಿಸಲು ಮತ್ತು ನಮ್ಮ ಹೊಟ್ಟೆ ತುಂಬಿಸಲು ಅಲ್ಮೇರಾದಲ್ಲಿದ್ದ ಅವರ ಸೀರೆಗಳನ್ನೂ ಮಾರಾಟ ಮಾಡಿದ್ದರು. ಆನಂತರ ಉದ್ಯಮವು ಬೆಳೆಯಿತು ಮತ್ತು ಅಮ್ಮ ಗಾಂಧಿ ಬಜಾರ್ನಲ್ಲಿ ‘ಮಯೂರಾ ಸಿಲ್ಕ್ ಮತ್ತು ಸೀರೆಗಳು’ ಅಂಗಡಿಯನ್ನು ತೆರೆದರು.
ಆ ನಂತರ ಅಪ್ಪ ‘ಲಂಕೇಶ್ ಪತ್ರಿಕೆ’ಯನ್ನು ಪ್ರಾರಂಭಿಸಲು ತಮ್ಮ ಸ್ನೇಹಿತರಿಂದ ಹಣ ಎರವಲು ಪಡೆದರು. ಅವರು ತಮ್ಮ ಬರಹಗಾರರಿಗೆ ಅತಿ ಹೆಚ್ಚು ಹಣ ಪಾವತಿಸುತ್ತಿದ್ದರು. ಮತ್ತು ಪತ್ರಕರ್ತರನ್ನು ಯಾವುದೇ ಪದವಿ ಅಥವಾ ಮುಂಚಿನ ಅನುಭವವಿಲ್ಲದೆಯೇ ನೇಮಕ ಮಾಡುತ್ತಿದ್ದ ಕೆಲವೇ ಕೆಲವು ಸಂಪಾದಕರಲ್ಲಿ ಅವರೂ ಒಬ್ಬರಾಗಿದ್ದರು.
ನನ್ನ ತಂದೆ ಮತ್ತು ಗೌರಿ ಇಬ್ಬರೂ ಆರ್ಥಿಕ ವಿಷಯಗಳಲ್ಲಿ ಜಾಣರಲ್ಲ. ನಾನು ನನ್ನ ತಾಯಿಯಂತೆ ಹೆಚ್ಚು ಪ್ರಾಕ್ಟಿಕಲ್. ಅಮ್ಮ ನಾವು ಆರ್ಥಿಕವಾಗಿ ಸ್ವತಂತ್ರರಾಗುವುದನ್ನು ಕಲಿಸಿದರು. ನಾವು ಶೈಕ್ಷಣಿಕವಾಗಿ ಉತ್ತಮ ವಿದ್ಯಾರ್ಥಿಗಳಾಗಿರಲಿಲ್ಲ.ಅದಕ್ಕೆ ಅವರು ನಮನ್ನು ಟೈಪಿಂಗ್ ಕಲಿಯಲು ಕಳುಹಿಸಿದರು. ಯಾಕೆಂದರೆ ಟೈಪಿಂಗ್ ಗೊತ್ತಿದ್ದರೆ ಅದು ನಮಗೆ ಯಾವುದಾದರೂ ಕೆಲಸವನ್ನು ದೊರಕಿಸಿ ಕೊಡಬಹುದು ಮತ್ತು ದುಡ್ಡಿಗಾಗಿ ಎಂದಿಗೂ ಗಂಡಸರ ಮೇಲೆ ಅವಲಂಬಿತರಾಗಬೇಕಾದ ಪರಿಸ್ಥಿತಿ ಬಾರದು ಎಂದು ಅವರು ಬಲವಾಗಿ ನಂಬಿಕೊಂಡಿದ್ದರು.
ಗೌರಿ ನನ್ನ ಅತ್ಯುತ್ತಮ ಗೆಳತಿ
ಗೌರಿ ಇಲ್ಲದ ನನ್ನ ಬದುಕಿನಲ್ಲಿ ಈಗ ಒಂಟಿತನ ಮಾತ್ರ ಇದೆ. ನಮ್ಮಿಬ್ಬರ ನಡುವೆ ಸುಮಾರು ಭಿನ್ನತೆಗಳಿದ್ದವು ಅವಳು ರಾತ್ರಿ ತಡವಾಗಿ ಮಲಗುತ್ತಿದ್ದರೆ ನಾನು ಬೆಳಗ್ಗೆ ಬೇಗ ಹಾಸಿಗೆ ಬಿಟ್ಟು ಎದ್ದೇಳುತ್ತಿದ್ದೆ. ನನಗೆ ಅಡುಗೆ ಮಾಡುವುದೆಂದರೆ ಇಷ್ಟ, ಅವಳು ಒಂದು ದಿನವೂ ಬೇಯಿಸಿದವಳಲ್ಲ.
ಎಷ್ಟೇ ಭಿನ್ನರಾಗಿದ್ದರೂ ನಮ್ಮಿಬ್ಬರ ಮಧ್ಯೆ ಸಾಮ್ಯತೆ ಗಳೂ ಇದ್ದವು. ಗೌರಿಗೂ ನನಗೂ ಮೂರು ವರ್ಷಗಳ ವ್ಯತ್ಯಾಸವಿದ್ದರೂ ಜನ ನಮ್ಮಿಬ್ಬರ ಬಗ್ಗೆ ಗೊಂದಲಕ್ಕೀಡಾಗುತ್ತಿದ್ದರು.ಇತ್ತೀಚೆಗೆ ಟ್ರಾನ್ಸ್ಜೆಂಡರ್ ಮಹಿಳೆಯರ ಗುಂಪೊಂದು, ತಮಗೆ ಕಿರುಕಳವಾಗುತ್ತಿದೆ ಎಂದು ಗೊತ್ತಾದಾಗ ಮಧ್ಯರಾತ್ರಿಯೇ ಆಗಿದ್ದರೂ ಗೌರಿ ಪೊಲೀಸ್ ಠಾಣೆಗೆ ತೆರಳಿ ತಮ್ಮ ಸಹಾಯಕ್ಕೆ ನಿಲ್ಲುತ್ತಿದ್ದರು ಎಂದು ವಿವರಿಸಿದ್ದರು. ನೀವೂ ಗೌರಿ ಅಮ್ಮನಂತೆಯೇ ಕಾಣಿಸುತ್ತೀರಿ ಎಂದು ಅವರಂದಾಗ ನಾನು ಕುಸಿದು ಬಿಟ್ಟೆ.
ನನ್ನ ತಂದೆಯಂತೆ, ಗೌರಿಯು ಯಾವಾಗಲೂ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಪರ ನಿಲ್ಲುತ್ತಿದ್ದಳು. ಒಂದು ದಿನ ಮನೆಯ ಕೆಲಸಗಾರ ನಮ್ಮ ಅಮ್ಮನ ಕೈಯಿಂದ ವಿನೀತ ಭಾವದಿಂದ ಸಂಬಳವನ್ನು ಪಡೆದಾಗ ಅದನ್ನು ಆಕ್ಷೇಪಿಸಿದ ಗೌರಿ ” ನಾವು ನಿಮಗೆ ಭಿಕ್ಷೇಯನ್ನು ನೀಡುತ್ತಿಲ್ಲ. ಈ ಹಣಕ್ಕಾಗಿ ನೀವು ಕಷ್ಟಪಟ್ಟು ಕೆಲಸ ಮಾಡಿದ್ದೀರಿ. ಅದನ್ನು ಹೆಮ್ಮೆಯಿಂದ ತೆಗೆದುಕೊಳ್ಳಿ” ಎಂದಿದ್ದಳು.
ಗೌರಿ ನಮ್ಮ ತಂದೆಯೊಂದಿಗೆ ಜಗಳವಾಡಿದ್ದು ಅಪರೂಪ. ಅವರು ಅವಳನ್ನು ಗಾಢವಾಗಿ ಆವರಿಸಿಕೊಂಡಿದ್ದರು. ಆದರೆ ಒಂದು ದಿನ, ಅವರು ನಮ್ಮ ತಾಯಿಯೊಂದಿಗೆ ಜಗಳವಾದಾಗ ಮಾತ್ರ ಗೌರಿಯು ಮನೆಯಿಂದ ಹೊರಹೋಗುವಂತೆ ಅವರಲ್ಲಿ ಕೇಳಿಕೊಂಡಿದ್ದಳು. ಸ್ವಲ್ಪ ಕಾಲ ಅವರಿಬ್ಬರೂ ಮಾತನಾಡಿರಲಿಲ್ಲ. ನಮ್ಮದು ಲಿಬರಲ್ ಕುಟುಂಬವಾಗಿರುವುದರಿಂದ, ನಮ್ಮ ಮನಸ್ಸನ್ನಲ್ಲಿ ಏನಿರುತ್ತದೋ ಅದರಂತೆ ಮಾತನಾಡಲು ನಾವು ಕಲಿತಿದ್ದೆವು. ನಮ್ಮೊಳಗಿನ ಭಿನ್ನತೆಯನ್ನು ಗೌರವಿಸಲು ಕಲಿತಿದ್ದೆವು.
ಗೌರಿ ಮತ್ತು ನನ್ನ ಮಗಳು ಇಶಾ ‘ನವಿಲು ಗರಿಗಳು’ ಎಂಬ ಕುಟುಂಬದ ವಾಟ್ಸಾಪ್ ಗ್ರೂಪ್ ರಚಿಸಿದ್ದರು. ಗೌರಿ ರಾಜಕೀಯ ಪೋಸ್ಟ್ಗಳನ್ನು ಹಾಕಲು ಪ್ರಾರಂಭಿಸುತ್ತಿದ್ದಂತೆ ಆಕ್ಷೇಪವೆತ್ತಿದ ನಾವು ಮಕ್ಕಳು ಅದರಲ್ಲೆಲ್ಲಾ ಭಾಗಿಯಾಗಬೇಕೆಂದಿಲ್ಲ ಎಂದಿದ್ದೆವು. ಕೊನೆಗೆ ಆ ಗ್ರೂಪಿನಲ್ಲಿ ಗೌರಿ ಮತ್ತು ಇಶಾ ಮಾತ್ರ ಉಳಿದಿದ್ದರು. ಆದರೆ ಮಕ್ಕಳು ಜಾತ್ಯಾತೀತರಾಗಿ ಆಲೋಚನೆ ಮಾಡಬೇಕೆಂದರೆ ರಾಜಕೀಯದ ಬಗ್ಗೆ ತಿಳಿದಿರಬೇಕು ಎಂದು ಈಗ ನನಗನಿಸುತ್ತದೆ. ಕಾಲ್ಪನಿಕ ಕಥೆಗಳನ್ನು ಹೇಳುವ ಸಂದರ್ಭದಲ್ಲಿ ಸಹ ಗೌರಿ ಸಿಂಡ್ರೆಲ್ಲಾಳನ್ನು ಒಬ್ಬ ಸ್ವತಂತ್ರ ವ್ಯಕ್ತಿತ್ವ ಇರುವ ಹುಡುಗಿಯಾಗಿಯೇ ಚಿತ್ರಿಸುತ್ತಿದ್ದಳು.
ನಾನು 2000ನೇ ಇಸವಿಯನ್ನು ಗೌರಿಯ ಪುನರ್ಜನ್ಮದ ವರ್ಷವೆಂದೇ ಎಂದು ಭಾವಿಸುತ್ತೇನೆ. ದೆಹಲಿಯನ್ನು ತೊರೆದು ಬೆಂಗಳೂರಿಗೆ ಮರಳಿದ ಗೌರಿ ‘ಲಂಕೇಶ್ ಪತ್ರಿಕೆ:ಯನ್ನು ಕೈಗೆತ್ತಿಕೊಂಡಳು. ಕೆಲವೇ ವರ್ಷಗಳಲ್ಲಿ ‘ಗೌರಿ ಲಂಕೇಶ್ ಪತ್ರಿಕೆ’ ಎಂಬ ಹೊಸ ಟ್ಯಾಬ್ಲಾಯಿಡನ್ನೂ ಅವಳು ಹುಟ್ಟು ಹಾಕಿದಳು.
ಕೇವಲ ಐದು ಅಡಿ ಎತ್ತರವಿದ್ದ ಗೌರಿ ಅಸಾಧ್ಯ ಇಚ್ಛಾಶಕ್ತಿ ಇದ್ದ ಮಹಿಳೆ. ಪೊಲೀಸರ ಕಣ್ಣು ತಪ್ಪಿಸಿ ಲಾರಿ ಏರಿ ಹೊರಟ ಅವರು ಚಿಕ್ಕಮಗಳೂರಿನ ಬಾಬಾ ಬುಡನ್ ಗುರಿಯ ವಿಚಾರದಲ್ಲಿ ಪ್ರತಿಭಟನೆ ನಡೆಸುವುದರೊಂದಿಗೆ ಅವರ ಹೋರಾಟದ ಬದುಕು ಪ್ರಾರಂಭವಾಗಿತ್ತು.
ಗೌರಿ ತೀರಿಕೊಂಡಾಗ ಪೊಲೀಸರ ಅವರ ಅಂತಿಮ ಕ್ರಿಯೆಗಾಗ ನಿಕಟ ಕುಟುಂಬವನ್ನು ಕರೆಯಲು ನನ್ನನ್ನು ಕೇಳಿದಾಗ, ನಾನು ಹಿಂದೆ ನಿಂತಿದ್ದ ಅಗಾಧ ಅಭಿಮಾನಿಗಳನ್ನು ನೋಡಿ ಯಾರನ್ನು ಆಯ್ಕೆ ಮಾಡಬೇಕೆಂದು ತಿಳಿಯದೆ ಕಂಗಾಲಾಗಿದ್ದೆ.
ಸಹಿಷ್ಣುತೆ: ಅಂದು ಮತ್ತು ಇಂದು
ನಮ್ಮ ಕುಟುಂಬದಲ್ಲಿ ನಮಗನ್ನಿಸಿದ್ದನ್ನು ಮಾತಾಡುವ ಹಕ್ಕಿತ್ತು. ಆದರೆ ಹೊರ ಜಗತ್ತಿನಲ್ಲಿ ಯಾವಾಗ ಮಾತಾಡಬೇಕು ಮತ್ತು ಯಾವಾಗ ಮಾತಾಡಬಾರದು ಎಂದು ನಮಗೆ ತಿಳಿದಿತ್ತು. ‘ನೀವು ಸ್ವತಂತ್ರ ಅಭಿಪ್ರಾಯ ಹೊಂದುವ ಹಕ್ಕನ್ನು ಹೊಂದಿದ್ದೀರಿ. ಆದರೆ ಆ ಅಭಿಪ್ರಾಯ ನಿಮ್ಮದು ಮಾತ್ರ, ನನ್ನದಲ್ಲ’ ಎಂದು ಅಪ್ಪ ಆಗಾಗ ಹೇಳುತ್ತಿದ್ದರು. ಅವರು ಬದುಕಿದ್ದಾಗ ನಮ್ಮ ಜೀವಕ್ಕೆ ಅಪಾಯವಿದೆ ಎಂದು ಎಂದೂ ನಮಗನಿಸಿರಲಿಲ್ಲ ಅಥವಾ ಎಂದೂ ಪತ್ರಿಕೋದ್ಯಮದಿಂದ ಹಿಂದೆಗೆಯುವಂತೆ ನಾವು ಅವರನ್ನು ಕೇಳಿಕೊಂಡಿರಲಿಲ್ಲ. ನಮ್ಮ ರಾಜಕೀಯ ಸಿದ್ಧಾಂತಗಳು ಜಾತಿ ಅಥವಾ ಧರ್ಮದ ಮೇಲೆ ನಿಂತಿರಲಿಲ್ಲ. ಆದರೆ ಗೌರಿ ಕೊಲೆ ನಂತರ ಒಂದಿಡೀ ವರ್ಷ ನನಗೆ ಟ್ವೀಟ್ ಮಾಡಲು ಸಾಧ್ಯವಾಗಲಿಲ್ಲ. ನಾಯಿ ಬೊಗಳಿದರೆ ಅಥವಾ ಬೈಕುಗಳ ಶಬ್ದಗಳು ಕೇಳಿದರೆ ಸಾಕು ಗೌರಿಯ ಕ್ರೂರ ಹತ್ಯೆಯೇ ನೆನಪಾಗಿಬಿಡುತ್ತಿತ್ತು.
ಗೌರಿಯ ಹತ್ಯೆ ಒಂದು ಮಾನಸಿಕ ಒತ್ತಡವನ್ನು ಸೃಷ್ಟಿಸಿದೆ. ಆದರೆ ಗೌರಿ, ಇಶಾ ಮತ್ತವಳ ಪೀಳಿಗೆಯ ಮೇಲೆ ತನ್ನ ಆಶಯಗಳನ್ನು ಬೀರಿದ್ದಾಳೆ. ನಾನು ಇಶಾಳಲ್ಲಿ ಗೌರಿಯ ಸಿದ್ಧಾಂತವನ್ನು ಕಾಣುತ್ತಿದ್ದೇನೆ. ಅವಳು ಈಗಾಗಲೇ ಮ್ಯಾನುವಲ್ ಸ್ಕ್ಯಾವೆಂಜರ್ಸ್, ಟ್ರಾನ್ಸ್ಜೆಂಡರ್ಸ್ ಮತ್ತು ಗೌರಿಯ ಬಗ್ಗೆ ಅನೇಕ ಲೇಖನಗಳನ್ನು ಬರೆದಿದ್ದಾಳೆ. ಲಂಕೇಶ್ ಪರಂಪರೆ ಅನ್ನುವುದು ಇತರ ನಾಗರಿಕರಂತೆ ಅವಳ ಮೇಲೂ ಪ್ರಭಾವ ಬೀರಿದೆ.
ಅಂತಿಮವಾಗಿ ನಾನು, ಕೆಲವು ಕೋಲಾಹಲಗಳು ಮೌನಕ್ಕಿಂತ ಉತ್ತಮ ಎಂದೇ ನಂಬುತ್ತೇನೆ. ಗೌರಿಯ ಸಮಾಧಿಯಲ್ಲಿ ನಾವು ‘ಗೌರಿಯನ್ನು ಇಲ್ಲಿ ಬಿತ್ತಿದ್ದೇವೆ, ಸಮಾಧಿ ಮಾಡಿಲ್ಲ’ ಎಂದು ಕೆತ್ತಿದ್ದೇವೆ. ಅದು ನಮಗೆ ಸದಾ ಭರವಸೆ ಮತ್ತು ಸ್ಫೂರ್ತಿ ನೀಡುವ ಒಂದು ಚಿಂತನೆಯಾಗಿದೆ.
ಮೂಲ: ಕವಿತಾ ಲಂಕೇಶ್, ಡೆಕ್ಕನ್ ಹೆರಾಲ್ಡ್