ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಕಡ್ಡಾಯವಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.
ಈ ಸಂಬಂಧ ಮಾಧ್ಯಮ ಪ್ರಕಟಣೆ ಹೊರಡಿಸಿದ ಚುನಾವಣೆ ಆಯೋಗ, ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯ ದತ್ತಾಂಶದೊಂದಿಗೆ ಆಧಾರ್ ಸಂಖ್ಯೆ ಜೋಡಣೆ ಕಡ್ಡಾಯವಲ್ಲ, ಮತದಾರರು ಸ್ವಯಂ ಪ್ರೇರಿತರಾಗಿ ಮತದಾರರ ಪಟ್ಟಿಯ ದತ್ತಾಂಶದೊಂದಿಗೆ ಆಧಾರ್ ಸಂಖ್ಯೆಯನ್ನು ಬಳಸಿ ಅಥವಾ ಇತರ ನಿಗದಿತ ದಾಖಲೆಗಳ ಮೂಲಕವೂ ಸಹ ಗುರುತಿಸಿ, ದೃಢೀಕರಿಸಿ ಜೋಡಣೆ ಮಾಡಬಹುದು ಎಂದು ಹೇಳಿದೆ.
ಆದರೆ ಆಯೋಗವು ಆಧಾರ್ ಅನ್ನು ವೋಟರ್ ಐಡಿಗೆ ಲಿಂಕ್ ಮಾಡುವುದು ಸ್ವಯಂಪ್ರೇರಿತವಾಗಿದೆ ಎಂಬುದನ್ನು ಗಮನಿಸಬಹುದು. ಆಧಾರ್ ಸಲ್ಲಿಸದ ಕಾರಣ ಮತದಾರರ ಪಟ್ಟಿಯಲ್ಲಿನ ಯಾವುದೇ ನಮೂದನ್ನು ಅಳಿಸಲಾಗುವುದಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ.
ಆಗಸ್ಟ್ 9 ರಂದು ರಾಜ್ಯದ ಎಲ್ಲ ಮತದಾರರು ತಮ್ಮ ಮತದಾನ ಗುರುತಿನ ಚೀಟಿ ಸಂಖ್ಯೆಗೆ ಕೂಡಲೇ ಆಧಾರ್ ನಂಬರ್ನ್ನು ಲಿಂಕ್ ಮಾಡಿಕೊಳ್ಳಬೇಕೆಂದು ಚುನಾವಣಾ ಆಯೋಗ ಸೂಚಿಸಿದೆ ಎಂದು ಕಂದಾಯ ಇಲಾಖೆ ಸುತ್ತೋಲೆ ಹೊರಡಿಸಿತ್ತು. ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಈಗ ಚುನಾವಣೆ ಆಯೋಗ ಮತದಾರರು ವೋಟರ್ ಐಡಿಗೆ ಆಧಾರ್ ನಂಬರ್ ಲಿಂಕ್ ಮಾಡಿಸುವುದು ಕಡ್ಡಾಯವಲ್ಲ ಎಂದು ಹೇಳಿದೆ.