ಲಿಂಗಾಯತವು ಒಂದು ಸ್ವತಂತ್ರ ಧರ್ಮ ಎನ್ನುವ ಕೂಗು ಕೇಳಿಸಿಕೊಂಡಾಗಲೆಲ್ಲ ಸನಾತನಿಗಳು ಕಂಗಾಲಾಗೂತ್ತಾರೆ. ಈ ಧ್ವನಿಯಿಂದ ಅವರ ಜಂಘಾ ಬಲವೆ ಉಡುಗಿಹೋಗಿ ನಖಶಿಖಾಂತ ಉಳಿ ಏಳುತ್ತದೆ. ಈ ಉರಿ ಇಂದು ನಿನ್ನೆಯದಲ್ಲ ˌ ಇದಕ್ಕೆ ೯೦೦ ವರ್ಷಗಳ ಸುದೀರ್ಘ ಇತಿಹಾಸವಿದೆ. ೨೦೧೭ ರಲ್ಲಿ ಸಂವಿಧಾನ ಮಾನ್ಯತೆಯ ಹಕ್ಕೊತ್ತಾಯದ ಕೂಗು ಮುಗಿಸು ಮುಟ್ಟಿದಾಗ ದಿವಂಗತ ಪೇಜಾವರ ಸ್ವಾಮಿಗಳು ವಿಚಲಿತರಾಗಿ ಬಡಬಡಿಸುತ್ತಿದ್ದರು. ಸೂ. ರಾಮಣ್ಣ ಎನ್ನುವ ಸಂಘಿ ಅನಾಗರಿಕನೊಬ್ಬ ವಿಕೃತವಾಗಿ ಹಲುಬಿದ್ದ. ಹನ್ನೆರಡನೇ ಶತಮಾನದಲ್ಲಿ ನಾರಾಯಣಕ್ರಮಿತˌ ಕೃಷ್ಣ ಪೆದ್ದಿ ˌ ಮುರಾರಿ ಭಟ್ಟˌ ಮುಕುಂದ ಭಟ್ಟ ˌ ಕೇಶವ ಭಟ್ಟ ˌ ಮುಂತಾದ ಸನಾತನಿಗಳು ಕಂಗೆಟ್ಟು ಶರಣರ ವಿರುದ್ಧ ಪ್ರತಿಕ್ರಾಂತಿ ಮಾಡಿದ್ದರು. ಆ ಸನಾತನಿಗಳ ಗಿಂಡಿ ಮಾಣಿ ಸಂತತಿ ಇಂದಿಗೂ ಅದನ್ನೆ ಮಾಡುತ್ತಿದೆ. ಸುದೀರ್ಘ ಒಂಬತ್ತು ಶತಮಾನಗಳಿಂದ ಶರಣ ಸಂಸ್ಕೃತಿ ನಾಶಕ್ಕೆ ಸನಾತನಿಗಳು ಪ್ರಯತ್ನಿಸಿದಷ್ಟು ಅದು ಚಿಗುರೊಡೆದು ವಿಸ್ತಾರವಾಗಿ ಹಬ್ಬುತ್ತಿದೆ.
ಲಿಂಗಾಯತವು ಒಂದು ಅವೈದಿಕ ಸ್ವತಂತ್ರ ಧರ್ಮ ಎನ್ನಲು ಅನೇಕ ದಾಖಲೆಗಳು ಜೀವಂತವಾಗಿವೆ. ಅವುಗಳಲ್ಲಿ ಕೆಲವನ್ನು ಮಾತ್ರ ನಾನು ಇಲ್ಲಿ ಉಲ್ಲೇಖಿಸಿದ್ದೇನೆ:
೧. ೧೮೨೧ ರಲ್ಲಿ ಪ್ರಕಟವಾದ “ಹಿಂದೂ ನಡತೆ, ಸಂಪ್ರದಾಯಗಳು ಮತ್ತು ಸಮಾರಂಭಗಳು” ಎಂಬ ಶ್ರೀ ಅಬ್ಬೆ ಜೆ. ಎ. ದುಬೋಯಿಸ್ ಬರೆದ ಪುಸ್ತಕದಲ್ಲಿ “ಲಿಂಗಾಯತ ತತ್ವಶಾಸ್ತ್ರವು ಹಿಂದೂಗಳಿಗಿಂತ ಭಿನ್ನವಾಗಿದೆ” ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.
೨. ೧೮೭೧ ರ ಮೈಸೂರು ಜನಗಣತಿಯ ಸಾರಗಳ ಪ್ರಕಾರ ಲಿಂಗಾಯತವನ್ನು ಬ್ರಿಟಿಷ್ ಅವಧಿಯಲ್ಲಿ ಪ್ರತ್ಯೇಕ ಧರ್ಮವೆಂದು ಪರಿಗಣಿಸಲಾಗಿದೆ ಮತ್ತು ವಿಶೇಷವಾಗಿ ವೀರಶೈವವನ್ನು ಲಿಂಗಾಯತ ಧರ್ಮದ ಒಂದು ಉಪ ಪಂಗಡವೆಂದು ಪರಿಗಣಿಸಲಾಗಿದೆ.
೩. ಮುಂಬೈ ಉಚ್ಛ ನ್ಯಾಯಾಲಯದ ಪ್ರಕರಣ ಸಂಖ್ಯೆ ೪೫ ಹೇಳುವಂತೆˌ ಲಿಂಗಾಯತ ಸಿದ್ಧಾಂತಗಳು ಒಟ್ಟಾರೆಯಾಗಿ ಹಿಂದು ಸನಾತನ ವೈದಿಕ ಸಿದ್ಧಾಂತಗಳಿಗಿಂತ ಭಿನ್ನ ಮತ್ತು ಸ್ವತಂತ್ರವಾಗಿವೆ. ಲಿಂಗಾಯತ ಧರ್ಮವು ವೇದ ಮತ್ತು ವರ್ಣಾಶ್ರಮ ವ್ಯವಸ್ಥೆಯನ್ನು ಒಪ್ಪುವುದಿಲ್ಲ. ಅಲ್ಲದೆˌ ಜಾತಿ ವ್ಯವಸ್ಥೆಯನ್ನು ನಿರಾಕರಿಸುತ್ತದೆ. ಹಾಗಾಗಿˌ ಲಿಂಗಾಯತವು ಒಂದು ಅವೈದಿಕ ಸ್ವತಂತ್ರ ಧರ್ಮವಾಗಿದೆ.
೪. ಎನ್ಸೈಕ್ಲೋಪೆಡಿಯಾ ಆಫ್ ರಿಲಿಜಿಯನ್ ಆಫ್ ಎಥಿಕ್ಸ್ ˌ ಲೇಖಕರು: ಆರ್ ವಿ ಎಥೋವನ್ˌ ೧೯೫೧ ಪುಸ್ತಕವು ಸ್ಪಷ್ಟವಾಗಿ ಲಿಂಗಾಯತರು ಹಿಂದುಗಳಲ್ಲವೆಂದು ಹೇಳುತ್ತದೆ.
೫. ಹಿಂದೂ ಕಾನೂನು ೧೯೫೫ˌ ಆಕ್ಟ್ ಸಂಖ್ಯೆ ೨೫, ಭಾರತೀಯ ಸಂಸತ್ತು ಗುರುತಿಸಿದಂತೆ ಲಿಂಗಾಯತ ಧರ್ಮಿಯರು ಹಿಂದೂಗಳಿಗಿಂತ ಭಿನ್ನ ನಂಬಿಕೆಗಳನ್ನು ಹೊಂದಿದ್ದಾರೆ ಎನ್ನುತ್ತದೆ.

೬. ಹಿಂದೂ ಕಾನೂನು ಕೇವಲ ಹಿಂದೂಗಳಿಗೆ ಮಾತ್ರ ಅನ್ವಯಿಸದೆ ಅದು ಸಿಖ್ˌ ಜೈನˌ ಬುದ್ದ ಧರ್ಮಿಯರಿಗೂ ಅನ್ವಯವಾಗುತ್ತದೆ. ಈ ಕಾನೂನು ಜಾತಿ ವ್ಯವಸ್ಥೆಯನ್ನು ನಿರಾಕರಿಸತ್ತಾ ಅದರ ಸಿಂಧುತ್ವವನ್ನು ಪ್ರಶ್ನಿಸುವ ಲಿಂಗಾಯತ ಭಿನ್ನಮತಿಯರಿಗೂ ಅನ್ವಯವಾಗುತ್ತದೆ. ಹಿಂದೂ ಲಾˌ ರಾಘವಾಚಾರ್ಯ. ಪ್ರೊ. ವೆಂಕಟರಾಮನ್ ಅವರಿಂದ ಪರಿಸ್ಕರಿಸಲಾಗಿದೆ
ಲಿಂಗಾಯತವು ಒಂದು ಅವೈದಿಕ ಧರ್ಮವೆನ್ನಲು ಶರಣರ ವಚನಗಳಲ್ಲಿ ಸಾಕಷ್ಟು ಪುರಾವೆಗಳು ಸಿಗುತ್ತವೆ.
ಒಟ್ಟಾರೆ:
🔸 ಲಿಂಗಾಯತ ಧರ್ಮವನ್ನು ಬಸವಣ್ಣನವರು ಸ್ಥಾಪಿಸಿದ್ದಾರೆ.
🔹ಲಿಂಗಾಯತರು ಹಿಂದೂಗಳಲ್ಲ.
🔸ಲಿಂಗಾಯತರು ವೀರಶೈವರಲ್ಲ.
🔹ಅಂಗದ ಮೇಲೆ ಇಷ್ಟಲಿಂಗವನ್ನು ಧರಿಸುವ, ಶರಣರ ವಚನಗಳನ್ನು ಅನುಸರಿಸುವ ಮತ್ತು ಬಸವಣ್ಣನವರನ್ನು ಧರ್ಮಗುರುವಾಗಿ ಸ್ವೀಕರಿಸುವವರೆಲ್ಲರೂ ಲಿಂಗಾಯತರು.
🔸ಲಿಂಗಾಯತರು ಸ್ವತಂತ್ರ ಧರ್ಮದ ಸ್ಥಾನಮಾನವನ್ನು ಪಡೆಯುವುದು ಕೇವಲ ಮೀಸಲಾತಿ ಪ್ರಯೋಜನಗಳಿಗಾಗಿ ಅಲ್ಲ. ಆದರೆ ಇದು ಲಿಂಗಾಯತರ ಗುರುತಿಸುವಿಕೆ ಮತ್ತು ಅಸ್ಮಿತೆಯ ಹೆಚ್ಚುಗಾರಿಕೆಯಾಗಿದೆ.
ಎಡ್ಗರ್ ಥರ್ಸ್ಟನ್ (ದಕ್ಷಿಣ ಭಾರತದ ಜಾತಿ ಮತ್ತು ಬುಡಕಟ್ಟು ಜನಾಂಗ, 1909) ಹೇಳುವಂತೆ, ಲಿಂಗಾಯತ ಧರ್ಮವು ಹಿಂದೂ ಧರ್ಮದ ಮಿತಿಯಿಲ್ಲದ ಸಮುದ್ರದೊಳಗೆ ಎಸೆಯಲ್ಪಟ್ಟ ದ್ವೀಪವಾಗಿದೆ. ಹಿಂದೂ ಎನ್ನುವ ಮೌಢ್ಯಯುಕ್ತ ಉಪ್ಪು ನೀರು ಅದರ ಭದ್ರವಾದ ಅಡಿಪಾಯವನ್ನು ಹಾಳುಮಾಡಲು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದೆ
~ ಡಾ. ಜೆ ಎಸ್ ಪಾಟೀಲ.











