
ಬೆಂಗಳೂರು,;ಬಹು ನಿರೀಕ್ಷಿತ ‘ಮನದ ಕಡಲು’ ಚಿತ್ರದ ಚಿತ್ರೀಕರಣ ವೇಳೆ 30 ಅಡಿ ಎತ್ತರದ ಏಣಿಯಿಂದ ಬಿದ್ದು, ಲೈಟ್ ಬಾಯ್ ಶಿವರಾಜ್ (30) ಮೃತಪಟ್ಟ ಘಟನೆ ಗುರುವಾರ ಬೆಳಕಿಗೆ ಬಂದಿದೆ. ಶಿವರಾಜ್, ತುಮಕೂರು ಜಿಲ್ಲೆಯ ಕೊರಟಗೆರೆ ನಿವಾಸಿಯಾಗಿದ್ದು, ಬೆಂಗಳೂರಿನ ಮಾದನಾಯಕನಹಳ್ಳಿಯ ವಿಆರ್‌ಎಲ್ ಅರೇನಾ ಬಳಿ ಚಿತ್ರೀಕರಣ ನಡೆಯುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಚಿತ್ರೀಕರಣದ ವೇಳೆ ಲೈಟ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಶಿವರಾಜ್ 30 ಅಡಿ ಎತ್ತರದಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾನೆ. ಕೂಡಲೇ ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದರೂ, ಗಾಯಗಳ ತೀವ್ರತೆಯಿಂದ ಶಿವರಾಜ್ ಅಸುನೀಗಿದ್ದಾನೆ.

ಅವಘಡದ ಹೊಣೆಗಾರಿಕೆಗೆ ಸಂಬಂಧಿಸಿದಂತೆ, ಚಿತ್ರೀಕರಣ ತಂಡವು ಲೈಟ್‌ಬಾಯ್‌ಗಳ ಸುರಕ್ಷತೆ ಕುರಿತು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದನ್ನು ತೀವ್ರವಾಗಿ ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ, ‘ಮನದ ಕಡಲು’ ಚಿತ್ರದ ನಿರ್ದೇಶಕ ಯೋಗರಾಜ್ ಭಟ್ (ಮೂರನೇ ಆರೋಪಿ) ಮತ್ತು ವ್ಯವಸ್ಥಾಪಕ ಸುರೇಶ್ (ಮೊದಲ ಆರೋಪಿ) ವಿರುದ್ಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.