ಸಂಕಷ್ಟ ಕಾಲದಲ್ಲೂ ಹೊಣೆಗೇಡಿತನವೇ ?

ನಾ ದಿವಾಕರ

ಕೊರೋನಾ ಎರಡನೆ ಅಲೆಯಲ್ಲಿ ಮೈಸೂರು ಜಿಲ್ಲೆ ಅತಿ ಹೆಚ್ಚು ಸಾವು ನೋವುಗಳನ್ನು ಕಂಡಿದೆ. ರಾಜ್ಯಮಟ್ಟದಲ್ಲಿ ಸೋಂಕಿತರ ಪ್ರಮಾಣ ಸತತ ಇಳಿಕೆ ಕಂಡುಬರುತ್ತಿದ್ದರೂ ಮೈಸೂರು ಜಿಲ್ಲೆಯಲ್ಲಿ ಸೋಂಕು ಕ್ಷೀಣಿಸುವ ಲಕ್ಷಣಗಳು ಕಾಣುತ್ತಿಲ್ಲ. ಪ್ರತಿನಿತ್ಯ ಕೋವಿದ್‍ನಿಂದ ಸಾಯುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ನೆರೆ ಜಿಲ್ಲೆಗಳಲ್ಲಿ ಸೋಂಕಿತರ ಪ್ರಮಾಣ ಕ್ಷೀಣಿಸುತ್ತಿದ್ದರೂ ಮೈಸೂರು ಜಿಲ್ಲೆಯಲ್ಲಿ ಮತ್ತು ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಸೋಂಕು ಕಾಣಿಸಿಕೊಳ್ಳುತ್ತಿದೆ. ಮೈಸೂರಿಗೆ ಹೊಂದಿಕೊಂಡಂತಿರುವ ಚಾಮರಾಜನಗರ ಜಿಲ್ಲೆಯಲ್ಲಿ ಒಂದೇ ಕುಟುಂಬದ ನಾಲ್ವರು ಬಡತನದ ಬೇಗೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ತಿಂಗಳು ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ 24 ಕೋವಿದ್ ಸೋಂಕಿತರು ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪಿದ್ದಾರೆ. ಈ 24 ಸಾವುಗಳಿಗೆ ಯಾರು ಕಾರಣರು ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿರುವುದೇ ಹೊರತು, ಈ ಸಾವುಗಳಿಗೆ ಏನು ಕಾರಣ ಎಂದು ಯೋಚಿಸುವ ವ್ಯವಧಾನವನ್ನು ನಮ್ಮ ನಾಗರಿಕ ಸಮಾಜ ಕಳೆದುಕೊಂಡಿದೆ. ಇತ್ತೀಚೆಗೆ ಸಂಭವಿಸಿದ ಆತ್ಮಹತ್ಯೆ ಪ್ರಕರಣಕ್ಕೂ ನಾನಾ ಕಾರಣಗಳನ್ನು ನೀಡಲಾಗುತ್ತಿದೆ.

ಈ ಸಂಕಷ್ಟದ ಸಂದರ್ಭದಲ್ಲಿ ಆಡಳಿತ ವ್ಯವಸ್ಥೆಯನ್ನು ನಿರ್ವಹಿಸುವರಲ್ಲಿ ಸ್ವಲ್ಪ ಮಟ್ಟಿಗಾದರೂ ಜವಾಬ್ದಾರಿ ಇರಬೇಕಾದುದು ಅತ್ಯವಶ್ಯ. ಆದರೆ ಮೈಸೂರಿನಲ್ಲಿ ವ್ಯಕ್ತಿ ಪ್ರತಿಷ್ಠೆಯೇ ಮೇಲುಗೈ ಸಾಧಿಸುತ್ತಿದ್ದು ಜಿಲ್ಲಾಧಿಕಾರಿ, ಸಂಸದರು, ನಗರ ಪಾಲಿಕೆ ಆಯುಕ್ತರ ನಡುವಿನ ಜಟಾಪಟಿಯಲ್ಲಿ ಜಿಲ್ಲೆಯ ಜನತೆ ಎದುರಿಸುತ್ತಿರುವ ಸಮಸ್ಯೆಗಳು ನಿರ್ಲಕ್ಷ್ಯಕ್ಕೊಳಗಾಗುತ್ತಿವೆ. ಇಂತಹ ಸನ್ನಿವೇಶದಲ್ಲಿ ಜನಪ್ರತಿನಿಧಿಗಳು, ಆಡಳಿತಾಧಿಕಾರಿಗಳು ಮತ್ತು ಹಿರಿಯ ರಾಜಕೀಯ ನಾಯಕರು ಸಮನ್ವಯ ಸಾಧಿಸುವ ಮೂಲಕ ಜನತೆಯಲ್ಲಿ ವಿಶ್ವಾಸ ಮೂಡಿಸಬೇಕಲ್ಲವೇ ? ಮೈಸೂರಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಹೇಗಾದರೂ ಕೆಳಗಿಳಿಸಲು ಮಾನ್ಯ ಸಂಸದರು ಶತಾಯಗತಾಯ ಪ್ರಯತ್ನಿಸುತ್ತಿರುವಂತಿದೆ. ಇತ್ತ ಮೈಸೂರು ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕೋವಿದ್ ನಿರ್ವಹಣೆಯ ವೈಫಲ್ಯಗಳಿಗೆ ಆಯುಕ್ತರಾದ ಶಿಲ್ಪಾ ನಾಗ್ ಅವರನ್ನೇ ದೂಷಿಸಲಾಗುತ್ತಿದ್ದು, ಅವರ ಪದಚ್ಯುತಿಗೂ ತರೆಮರೆಯ ಪ್ರಯತ್ನಗಳು ನಡೆದಿವೆ. ಈಗ ಶಿಲ್ಪಾ ನಾಗ್ ರಾಜೀನಾಮೆ ಸಲ್ಲಿಸಿದ್ದಾರೆ.

ಒಂದು ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಯಲ್ಲಿ, ಕೋವಿದ್ ನಂತಹ ಸಂಕಷ್ಟದ ಸಮಯ ಎದುರಾದಾಗ ಹೇಗೆ ಕಾರ್ಯನಿರ್ವಹಿಸಬೇಕು ಎನ್ನುವುದನ್ನು ಈ ಅಧಿಕಾರಿ ವರ್ಗಗಳು ಅರಿತಿರಬೇಕಲ್ಲವೇ ? 24 ಜನರ ಸಾವಿಗೆ ಕಾರಣವಾದ ಒಂದು ಘಟನೆಯ ಜವಾಬ್ದಾರಿ ಹೊರಲು ಚಾಮರಾಜನಗರ ಜಿಲ್ಲಾಧಿಕಾರಿಗಳು ಸಿದ್ಧರಾಗಿಲ್ಲ. ಅಥವಾ ಅವರ ವರ್ಗಾವಣೆಯನ್ನು ರದ್ದುಪಡಿಸಲು ಅಲ್ಲಿನ ಸಂಸದರ ಪ್ರತಿಷ್ಠೆ ಬಳಕೆಯಾಗುತ್ತದೆ. ಇತ್ತ ಮೈಸೂರಿನ ಜಿಲ್ಲಾಧಿಕಾರಿಗಳ ಎಲ್ಲ ಕ್ರಮಗಳನ್ನೂ ಖಂಡಿಸಲು ಒಂದು ರಾಜಕೀಯ ಪಡೆಯನ್ನೇ ಸಿದ್ಧಪಡಿಸಲಾಗಿದೆ. ಸಂಸದರ, ಶಾಸಕರ ಅಥವಾ ಇತರ ರಾಜಕೀಯ ನಾಯಕರ ವ್ಯಕ್ತಿಗತ ಪ್ರತಿಷ್ಠೆಗೆ ಅಧಿಕಾರಿಗಳು ಬಲಿಯಾಗುವುದಕ್ಕೆ ಮೈಸೂರು ಒಂದು ಪ್ರಾತ್ಯಕ್ಷಿಕೆಯಾಗಿ ಕಾಣುತ್ತಿದೆ. ಈಗ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಶಿಲ್ಪಾ ನಾಗ್ ಅವರನ್ನೂ ಬಳಸಿಕೊಳ್ಳಲಾಗುತ್ತಿದೆ.

ಇದು ಹೊಣೆಗೇಡಿತನದ ಪರಾಕಾಷ್ಠೆ ಎಂದಷ್ಟೇ ಹೇಳಬಹುದು. ಕೋರೋನಾ ಸೋಂಕು ನಿಯಂತ್ರಣ ತಪ್ಪಿ ಹೋಗುತ್ತಿರುವ ಸಂದರ್ಭದಲ್ಲಿ ಮೈಸೂರಿನ ಪ್ರತಿಯೊಬ್ಬ ಸಂಸದರು, ಶಾಸಕರು, ಮಾಜಿ ಮತ್ತು ಹಾಲಿ ನಾಯಕರುಗಳು ತಮ್ಮ ಸಾಂವಿಧಾನಿಕ ಹೊಣೆಯನ್ನು ಅರಿತು ಕೆಲಸ ಮಾಡಬೇಕಾಗುತ್ತದೆ. ಅಧಿಕಾರ ರಾಜಕಾರಣದಲ್ಲಿ ಹಿರಿತನ ಎನ್ನುವುದು ಕೇವಲ ವಯೋಮಾನದಿಂದ ನಿರ್ಧಾರವಾಗುವುದಿಲ್ಲ. ಸಮಸ್ಯೆಗಳನ್ನು ಪರಿಹರಿಸುವ ರೀತಿಯಲ್ಲಿ ವ್ಯಕ್ತವಾಗುತ್ತದೆ. ಮೈಸೂರು, ಚಾಮರಾಜನಗರ ವ್ಯಾಪ್ತಿಯ ಹಿರಿಯ ನಾಯಕರು ತಮ್ಮ ಈ ಹೊಣೆಯನ್ನು ಅರಿತು ಮುಂಚೂಣಿಗೆ ಬರಬೇಕಿದೆ. ಜಿಲ್ಲಾಧಿಕಾರಿ ಮತ್ತು ಪಾಲಿಕೆ ಆಯುಕ್ತರ ನಡುವೆ ಇರುವ ಭಿನ್ನಾಭಿಪ್ರಾಯಗಳು ಆಡಳಿತ ನಿರ್ವಹಣೆಗೆ ಸಂಬಂಧಿಸಿದ್ದೇ ಹೊರತು ವೈಯಕ್ತಿಕವಲ್ಲ. ಹಾಗೆಂದ ಮೇಲೆ ಇಲ್ಲಿನ ಸಂಸದರಿಗೆ ಇಬ್ಬರ ನಡುವೆ ಸಮನ್ವಯ ಸಾಧಿಸಿ ಹಾದಿ ಸುಗಮಗೊಳಿಸುವ ವ್ಯವಧಾನ ಇರಬೇಕಲ್ಲವೇ ?

ಅಧಿಕಾರ ಪೀಠವನ್ನು ಅಲಂಕರಿಸಿದ ಮಾತ್ರಕ್ಕೆ ತಮ್ಮ ಮಾತುಗಳೇ ಅಂತಿಮ ಎನ್ನುವ ಅಹಮಿಕೆ ನಮ್ಮ ಪ್ರತಿನಿಧಿಗಳನ್ನು ಕಾಡುತ್ತಿರುವಂತಿದೆ. ಇತ್ತೀಚೆಗೆ ಉಸ್ತುವಾರಿ ಸಚಿವ ಸೋಮಶೇಖರ್ ಅಧಿಕಾರಿಯೋರ್ವರ ಬಗ್ಗೆ ಜಾತಿ ಸೂಚಕ ನಿಂದನೆ ಮಾಡಿರುವುದು ಇದನ್ನೇ ಸೂಚಿಸುತ್ತದೆ. ಕ್ಷಮೆ ಕೋರುವ ತಿಪ್ಪೆ ಸಾರಿಸುವ ಕೆಲಸ ಮಾಡುವುದಕ್ಕಿಂತಲೂ ತಾವು ಅಲಂಕರಿಸಿದ ಪೀಠಕ್ಕೆ ಇರುವ ಘನತೆ, ಗೌರವ ಮತ್ತು ಸಾಂವಿಧಾನಿಕ ಮಾನ್ಯತೆಯನ್ನು ಅರಿತು ಕೆಲಸ ಮಾಡಿದರೆ ನಾಗರಿಕ ಜೀವನವೂ ಸುಗಮವಾಗಿರುತ್ತದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಇಬ್ಬರು ಐಎಎಸ್ ಅಧಿಕಾರಿಗಳು ತಮ್ಮ ಸಾರ್ವಜನಿಕ ಜವಾಬ್ದಾರಿಯನ್ನೂ ಮರೆತು ಬೀದಿ ಜಗಳದಲ್ಲಿ ನಿರತರಾಗುವುವುದು ಅಕ್ಷಮ್ಯ. ಇದನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ರೀತಿಯಲ್ಲಿ ಮೌನ ವಹಿಸುವ ಅಥವಾ ಪಕ್ಷಪಾತ ತೋರುವ ಸಂಸದರ, ಶಾಸಕರು ವರ್ತನೆ ಮಹಾಪರಾಧ.

ಆಡಳಿತ ನಿರ್ವಹಣೆಯ ಬೇಜವಾಬ್ದಾರಿತನದಿಂದ 24 ಅಮಾಯಕರ ಸಾವುಗಳು ಸಂಭವಿಸಿದ ಒಂದು ಜಿಲ್ಲೆಯ ಜಿಲ್ಲಾಧಿಕಾರಿ ಕನಿಷ್ಟ ಮಟ್ಟದ ಶಿಕ್ಷೆಗೂ ಒಳಗಾಗುವುದಿಲ್ಲ ಎಂದರೆ ನಮ್ಮ ರಾಜಕೀಯ ವ್ಯವಸ್ಥೆ ಹೇಗೆ ಪಟ್ಟಭದ್ರ ಹಿತಾಸಕ್ತಿಗಳ ಭದ್ರಕೋಟೆಯಾಗಿದೆ ಎಂದು ಅರಿವಾಗುತ್ತದೆ. ಮೈಸೂರಿನ ಸಂದರ್ಭದಲ್ಲೂ ಇದೇ ಹಿತಾಸಕ್ತಿಗಳೇ ಇಬ್ಬರು ಐಎಎಸ್ ಅಧಿಕಾರಿಗಳ ಬೀದಿ ಜಗಳದ ಲಾಭ ಪಡೆಯಲು ಪ್ರಯತ್ನಿಸುತ್ತಿವೆ. ತಮಗೆ ಬೇಕಾದ ಅಧಿಕಾರಿಗಳನ್ನು ರಕ್ಷಿಸುವ, ಬೇಡವಾದವರನ್ನು ವರ್ಗಾಯಿಸುವ ಜನಪ್ರತಿನಿಧಿಗಳ ಈ ವರ್ತನೆಯೇ ಭಾರತದ ಪ್ರಜಾತಂತ್ರ ವ್ಯವಸ್ಥೆಯ ಬೇರುಗಳನ್ನು ಅಲುಗಾಡಿಸುತ್ತಿದೆ. ಈ ಹತಾಶೆಯಿಂದಲೇ ಉಸ್ತುವಾರಿ ಸಚಿವರು ‘ ತಮಗರಿವಿಲ್ಲದೆಯೇ ?’ ಜಾತಿ ನಿಂದನೆಯಲ್ಲಿ ತೊಡಗುತ್ತಾರೆ. ದುರಂತ ಎಂದರೆ ನುರಿತ ಹಿರಿಯ ರಾಜಕೀಯ ನಾಯಕರೂ ಸಹ ಈ ಸೂಕ್ಷ್ಮಗಳನ್ನು ಮರೆತು ಅಧಿಕಾರ ರಾಜಕಾರಣದ ಅಹಮಿಕೆಯಲ್ಲಿ ಬೆರೆತುಹೋಗಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ನಡೆಯುತ್ತಿರುವ ಅಧಿಕಾರಿಗಳ ಬೀದಿ ಜಗಳ ನಗೆಪಾಟಲಿಗೀಡಾಗುವ ಮುನ್ನ ಇಲ್ಲಿನ ಎಲ್ಲ ಜನಪ್ರತಿನಿಧಿಗಳೂ ತಮ್ಮ ಸ್ವಬುದ್ಧಿ, ಸ್ವಪ್ರಜ್ಞೆಯನ್ನು ಉಪಯೋಗಿಸಿಕೊಂಡು ತಮ್ಮ ಸಾಂವಿಧಾನಿಕ ಕರ್ತವ್ಯವನ್ನು ನಿಭಾಯಿಸಲು ಮುಂದಾಗಬೇಕಿದೆ. ಒಬ್ಬ ಅಧಿಕಾರಿಯ ಹೆಗಲ ಮೇಲೆ ಬಂದೂಕು ಇಟ್ಟು ಮತ್ತೊಬ್ಬ ಅಧಿಕಾರಿಯತ್ತ ಗುರಿಯಿಡುವ ವಿಕೃತ ಪರಂಪರೆ ಸಾಕುಮಾಡಿ ನಾಯಕರೇ. ನಿಮ್ಮ ಪ್ರಾತಿನಿಧ್ಯವೂ ಶಾಶ್ವತವಲ್ಲ, ಅಧಿಕಾರಿಗಳ ಸ್ಥಾನಮಾನಗಳೂ ಶಾಶ್ವತವಲ್ಲ. ಇಲ್ಲಿ ಶಾಶ್ವತವಾಗಿ ಉಳಿಯುವುದು ನಾಗರಿಕರ ಸೌಖ್ಯ ಮತ್ತು ಸಾಮಾಜಿಕ ಸೌಹಾರ್ದತೆ. ಈ ಸೂಕ್ಷ್ಮವನ್ನೂ ಅರಿಯುವಷ್ಟು ವಿವೇಕ ಮತ್ತು ವಿವೇಚನೆ ನಮ್ಮ ಜನಪ್ರತಿನಿಧಿಗಳಿಗೆ ಮತ್ತು ಇತರ ರಾಜಕೀಯ ನಾಯಕರಿಗೆ ಇರಬೇಕಾಗುತ್ತದೆ.

ರೋಹಿಣಿ ಸಿಂಧೂರಿ ಮತ್ತು ಶಿಲ್ಪಾ ನಾಗ್, ಈ ಇಬ್ಬರು ಐಎಎಸ್ ಅಧಿಕಾರಿಗಳನ್ನು ರಾಜಕೀಯ ಮೇಲಾಟದ ಪಗಡೆ ಕಾಯಿಗಳಂತೆ ಬಳಸಿಕೊಳ್ಳುವ ಬದಲು, ಅವರ ಮೂಲಕ ನಡೆಯಬೇಕಾದ ಕೆಲಸ ಕಾರ್ಯಗಳತ್ತ ಗಮನಹರಿಸಲು ಇಲ್ಲಿನ ಜನಪ್ರತಿನಿಧಿಗಳು ಕೂಡಲೇ ಮುಂದಾಗಬೇಕಿದೆ. ಪಕ್ಷಾತೀತವಾಗಿ ಎಲ್ಲ ಜನಪ್ರತಿನಿಧಿಗಳ ಸಮನ್ವಯ ಸಭೆ ನಡೆಸುವ ಮೂಲಕ ತಲೆದೋರಿರುವ ಸಮಸ್ಯೆಯನ್ನು ನಿವಾರಿಸುವ ಪ್ರಮಾಣಿಕ ಪ್ರಯತ್ನಗಳೂ ಬೇಕಾಗಿವೆ. ಸಂಕಷ್ಟದ ಸಮಯದಲ್ಲೂ ಹೊಣೆಗೇಡಿಗಳಂತೆ ವರ್ತಿಸುವುದು ನಾಗರಿಕತೆಯ ಲಕ್ಷಣವಲ್ಲ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...