ರಾಜ್ಯ ಕಾಂಗ್ರೆಸ್‌ನಲ್ಲಿ (Congress) ಭುಗಿಲೆದ್ದಿರುವ ಆಂತರಿಕ ಭಿನ್ನಮತಕ್ಕೆ ಮುಲಾಮು ಹಚ್ಚುವ ಕಾರ್ಯ ಸದ್ಯಕ್ಕೆ ನಿರಂತರವಾಗಿ ಮುಂದುವರೆದಿದೆ.ಕಾಂಗ್ರೆಸ್ ನ ಶಾಸಕರು, ಸಚಿವರ ಬಳಿಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ (Randeep singh surjewala) ಸಿಎಂ ಸಿದ್ದರಾಮಯ್ಯ (Cm Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (Dk Shivakumar) ಜೊತೆ ಸಮಾಲೋಚನೆ ನಡೆಸಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸುರ್ಜೇವಾಲಾ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆಶಿ ಜೊತೆ ಸುದೀರ್ಘ ಮಾತುಕತೆ ನಡೆಸಿದ್ದಾರೆ.ಈ ವೇಳೆ, ಸಚಿವರು, ಶಾಸಕರ ಜೊತೆಗಿನ ಮೀಟಿಂಗ್ ನಲ್ಲಿ ನಡೆದ ಚರ್ಚೆ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಭುಗಿಲೆದ್ದಿರುವ ನಾಯಕತ್ವ ಬದಲಾವಣೆಯ ಗೊಂದಲ ಬಗೆಹರಿಸುವಂತೆ ಸಚಿವರು ಸುರ್ಜೇವಾಲಾ ಬಳಿ ಒಕ್ಕೊರಲ ಮನವಿ ಮಾಡಿದ್ದು, ಈ ಬಗ್ಗೆ ಸಿಎಂ, ಡಿಸಿಎಂಗೆ ಹೈಕಮಾಂಡ್ ರಾಯಭಾರಿ ಪಕ್ಷ ಮತ್ತು ಸರ್ಕಾರಕ್ಕಾಗಿ ಜೋಡೆತ್ತಿನಂತೆ ಕೆಲಸ ಮಾಡಲು ಸಲಹೆ ಸೂಚನೆಗಳನ್ನು ನೀಡಿದ್ದಾರೆ ಎನ್ನಲಾಗಿದೆ.