ಕೋವಿಡ್ ಸಂಕಷ್ಟದಲ್ಲಿ ಜನರ ಕೈಹಿಡಿದ ಜನನಾಯಕರು

  • ಶಿವಕುಮಾರ್ ಎ

ಕರೋನಾ ಸೋಂಕು, ಲಾಕ್ಡೌನ್, ಕುಸಿಯುತ್ತಿರುವ ಆರ್ಥಿಕತೆ, ಹೆಚ್ಚುತ್ತಿರುವ ಅಗತ್ಯ ವಸ್ತುಗಳ ಬೆಲೆ ಜನಸಾಮಾನ್ಯರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿದೆ. ಹಲವು ಕುಟುಂಬಗಳು ಒಪ್ಪತ್ತಿನ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ನಾವು ಮತ ಕೊಟ್ಟು ಆರಿಸಿದಂತಹ ಜನ ಪ್ರತಿನಿಧಿಗಳ ಸಹಕಾರ ಹಾಗೂ ಔದಾರ್ಯತೆ ಅಲ್ಪ ಮಟ್ಟಿಗೆ ಜನರು ಉಸಿರಾಡುವಂತೆ ಮಾಡಿದೆ.

ರಾಜ್ಯದಲ್ಲಿ ಲಾಕ್’ಡೌನ್ ಘೋಷಣೆಯಾದ ನಂತರ, ಹಲವು ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಜಾತಿ, ಧರ್ಮ, ರಾಜಕೀಯ ಸಿದ್ದಾಂತಗಳನ್ನೆಲ್ಲಾ ಬದಿಗೊತ್ತಿ, ಸಂಕಷ್ಟದಲ್ಲಿರುವವರ ನೋವಿಗೆ ಸ್ಪಂದಿಸುವಂತಹ ಕೆಲಸ ನಡೆಯುತ್ತಿದೆ. ಅಂತಹ ಆಯ್ದ ಶಾಸಕರ ಕಾರ್ಯ ವೈಖರಿಯ ಕುರಿತಾದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

೧. ಕೆ ಜೆ ಜಾರ್ಜ್

ಬೆಂಗಳೂರಿನ ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಕೆ ಜೆ ಜಾರ್ಜ್ ಅವರು, ತಮ್ಮ ಕ್ಷೇತ್ರದಲ್ಲಿ ಕೋವಿಡ್ ಕೇರ್ ಸೆಂಟರ್’ಗಳ ನಿರ್ಮಾಣದಿಂದ ಹಿಡಿದು ಲಸಿಕಾ ಅಭಿಯಾನವನ್ನು ಯಶಸ್ವಿಗೊಳಿಸುವವರೆಗೆ ಎಲ್ಲಾ ರೀತಿಯಲ್ಲೂ ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ಕಳೆದ ಒಂದು ವಾರದಲ್ಲಿ ೧೮-೪೪ ವರ್ಷದೊಳಗಿನ ಅರ್ಹ ಫಲಾನುಭವಿಗಳಿಗೆ ಲಸಿಕೆಯನ್ನು ತಲುಪಿಸುವಂತಹ ಕೆಲಸವನ್ನು ಜಾರ್ಜ ಅವರು ಮಾಡಿದ್ದಾರೆ.

ಇದರೊಂದಿಗೆ, ಬಡವರಿಗೆ ಹಾಗೂ ಅಶಕ್ತರಿಗೆ ದಿನಸಿ ಕಿಟ್’ಗಳ ವಿತರಣೆ, ಆಹಾರ ವಿತರಣೆ ಸೇರಿದಂತೆ ತಮ್ಮ ಕ್ಷೇತ್ರದ ಜನರ ಕುಂದು ಕೊರತೆಗಳನ್ನು ನೀಗಿಸುವತ್ತ ತಮ್ಮ ದೃಷ್ಟಿ ನೆಟ್ಟಿದ್ದಾರೆ. ಈಗಾಗಲೇ ಸರ್ವಜ್ಞ ನಗರದ ಕಾಚರಕನಹಳ್ಳಿಯ ಕ್ಯಾಂಪಸ್ ಕ್ರುಸೇಡ್‌ನಲ್ಲಿ ಸ್ಥಾಪಿಸಲಾದ ಅತ್ಯಾಧುನಿಕ ಕೋವಿಡ್ ಆರೈಕೆ ಕೇಂದ್ರದಲ್ಲಿ ಕೋವಿಡ್ ಸೋಂಕಿತರು ಶೀಘ್ರವಾಗಿ ಗುಣಮುಖರಾಗಲು ಬೇಕಾಗುವ ವ್ಯವಸ್ಥೆಗಳನ್ನು ಮಾಡಿದ್ದಾರೆ.

೨. ರೇಣುಕಾಚಾರ್ಯ

ಹೊನ್ನಾಳಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳೂ ಆಗಿರುವ ರೇಣುಕಾಚಾರ್ಯ ಅವರ ಕೋವಿಡ್ ಪರಿಹಾರ ಕಾರ್ಯ ವೈಖರಿ ಹುಬ್ಬೇರಿಸುವಂತಿದೆ. ಕೋವಿಡ್ ಸೋಂಕಿತರ ಆರೈಕೆ ಕೇಂದ್ರಗಳಿಗೆ ಖುದ್ದು ಭೇಟಿ ನೀಡಿ ಅಲ್ಲಿನ ಕುಂದು ಕೊರತೆಗಳನ್ನು ಸೋಂಕಿತರಿಂದಲೇ ತಿಳಿದುಕೊಂಡು ಅವರಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡುವ ಕಾರ್ಯ ಹೊನ್ನಾಳಿಯಲ್ಲಿ ರೇಣುಕಾಚಾರ್ಯನವರು ಮಾಡುತ್ತಿದ್ದಾರೆ.

ಇತ್ತೀಚಿಗೆ ಸೋಂಕಿತರನ್ನು ಮನೋರಂಜನೆಗಾಗಿ ತಾವೇ ಕುಣಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದರೊಂದಿಗೆ, ಆಕ್ಸಿಜನ್ ಕೊರತೆ ಉಂಟಾದಾಗ ರಾತ್ರೋ ರಾತ್ರಿ ತಾಲ್ಲೂಕು ಆಸ್ಪತ್ರೆಗೆ ಆಕ್ಸಿಜನ್ ಸರಬರಾಜು ಮಾಡಲು ಮುತುವರ್ಜಿ ವಹಿಸಿದ ರೇಣುಕಾಚಾರ್ಯ ಅವರು ಕ್ಷೇತ್ರದ ಜನರ ಪಾಲಿಗೆ ಆಪತ್ಬಾಂದವರಾಗಿದ್ದಾರೆ.

ಈಗಾಗಲೇ ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕಿನಲ್ಲಿ ನಾಲ್ಕು ಕೋವಿಡ್ ಕೇರ್ ಕೇಂದ್ರಗಳಿದ್ದು ೫೦೦ ಹಾಸಿಗೆಗಳ ಐದನೇ ಕೋವಿಡ್ ಕೇರ್ ಕೇಂದ್ರದ ಕಾಮಗಾರಿ ಪ್ರಗತಿಯಲ್ಲಿದೆ

೩. ಕುಮಾರ್ ಬಂಗಾರಪ್ಪ

ಈ ಹಿಂದೆ ಸರ್ಕಾರಿ ಕಚೇರಿಗಳಲ್ಲಿನ ಅವ್ಯವಸ್ಥೆಯ ಕುರಿತು ಕಠಿಣವಾದ ಕ್ರಮಗಳನ್ನು ಕೈಗೊಂಡು ಕುಮಾರ್ ಬಂಗಾರಪ್ಪ ಅವರು ಮನೆಮಾತಾಗಿದ್ದರು. ಈಗ ಲಾಕ್’ಡೌನ್ ಸಂದರ್ಭದಲ್ಲಿಯೂ ತಮ್ಮ ಕ್ಷೇತ್ರದಲ್ಲಿ ಸಮರೋಪಾದಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಅನವಟ್ಟಿಯಲ್ಲಿ ಕೋವಿಡ್ ಕೇರ್ ಸೆಂಟರ್ ನಿರ್ಮಾಣ, ಇತರೆ ಕೋವಿಡ್ ಕೇರ್ ಸೆಂಟರ್’ನಲ್ಲಿರುವ ಸೋಂಕಿತರಿಗೆ ಪ್ರತಿನಿತ್ಯ ಊಟದ ವ್ಯವಸ್ಥೆಯನ್ನು ಮಾಡುವ ಮೂಲಕ ಸೋಂಕಿತರು ಶೀಘ್ರದಲ್ಲಿಯೇ ಗುಣಮುಖರಾಗಲು ಸ್ಪೂರ್ತಿ ತುಂಬುತ್ತಿದ್ದಾರೆ.

ಇದರೊಂದಿಗೆ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳ ಜತೆ ಸರಣಿ ಸಭೆ ನಡೆಸಿ ತಮ್ಮ ಕ್ಷೇತ್ರದಲ್ಲಿ ಕೈಗೊಳ್ಳಲಾದ ಕೋವಿಡ್ ಸುರಕ್ಷತಾ ಕ್ರಮಗಳ ಕುರಿತಾಗಿ ಮಾಹಿತಿಯನ್ನು ಪಡೆದು ಅಗತ್ಯ ಸೂಚನೆಗಳನ್ನು ನೀಡುವ ಕೆಲಸವೂ ನಡೆಯುತ್ತಿದೆ.

೪. ರಾಜು ಗೌಡ

ಸುರಪುರ ಕ್ಷೇತ್ರದ ಶಾಸಕರಾದ ನರಸಿಂಹ ನಾಯಕ್ (ರಾಜು ಗೌಡ) ಅರು ತಮ್ಮ ಕ್ಷೇತ್ರದಲ್ಲೊ ಒಂದು ಲಕ್ಷಕ್ಕು ಹೆಚ್ಚಿನ ಜನರಿಗೆ ಮಾಸ್ಕ್ ವಿತರಿಸುವ ಕೆಲಸಕ್ಕೆ ಚಾಲನೆ ನಿಡಿದ್ದಾರೆ. ಇದರೊಂದಿಗೆ ಬಡವರಿಗೆ ದಿನಸಿ ಕಿಟ್’ಗಳ ವಿತರಣೆ, ಕೋವಿಡ್ ಆರೈಕೆ ಕೇಂದ್ರಕ್ಕೆ ಅಗತ್ಯ ವಸ್ತುಗಳ ಪೂರೈಕೆ ಸೇರಿದಂತೆ ಇತರ ಕಾರ್ಯಗಳನ್ನು ಖುದ್ದಾಗಿ ನಿರ್ವಹಿಸುತ್ತಿದ್ದಾರೆ.

ಕೋವಿಡ್ ಕೇರ್ ಕೇಂದ್ರಗಳಿಗೆ ಆಕ್ಸಿಜನ್ ಪೂರೈಕೆಯಲ್ಲಿಯೂ ತಡವಾಗದಂತೆ ಶಾಸಕ ರಾಜು ಗೌಡ ಅವರು ನಿಗಾ ವಹಿಸಿದ್ದಾರೆ.

೫. ಸಂಜೀವ ಮಟಾಂದೂರು

ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಸಂಜೀವ ಮಟಾಂದೂರು ಅವರು ತಮ್ಮ ಕ್ಷೇತ್ರದಲ್ಲಿ ಆಕ್ಸಿಜನ್ ಉತ್ಪಾದನಾ ಘಟಕದ ನಿರ್ಮಾಣ ಕಾರ್ಯ ಸೇರಿದಂತೆ, ಕೋವಿಡ್ ಕೇರ್ ಸೆಂಟರ್’ಗಳ ಸ್ಥಾಪನೆಗೂ ಮುತುವರ್ಜಿ ವಹಿಸಿಕೊಂಡಿದ್ದಾರೆ.

ಪ್ರಮುಖವಾಗಿ ಲಾಕ್’ಡೌನ್ ನಿಂದ ಸಂಕಷ್ಟಕ್ಕೆ ಒಳಗಾದ ಭಿಕ್ಷುಕರು ಹಾಗೂ ಇತರ ನಿರ್ಗತಿಕರಿಗಾಗಿ ಸರ್ಕಾರಿ ಶಾಲೆಯಲ್ಲಿ ನಿರಾಶ್ರಿತರ ಶಿಬಿರ ಆರಂಭಿಸಿ ಅವರ ಆರೈಕೆಯನ್ನೂ ಮಾಡಲಾಗುತ್ತಿದೆ. ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ರೂ. ಒಂದು ಕೋಟಿ ಮೊತ್ತದ ಆಕ್ಸಿಜನ್ ಉತ್ಪಾದನಾ ಘಟಕವನ್ನು ಖಾಸಗಿ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಆರಂಭವಾಗುವಂತೆ ಮಾಡಿದ್ದಾರೆ.

ಇದರೊಂದಿಗೆ ಹಲವು ವರ್ಷಗಳ ಹಿಂದೆ ಮುಚ್ಚಲ್ಪಟ್ಟಿದ್ದ ಖಾಸಗಿ ಆಸ್ಪತ್ರೆಯೊಂದನ್ನು ಅತೀ ವೇಗದಲ್ಲಿ ನವೀಕರಿಸಿ ಸುಸಜ್ಜಿತ ಕೋವಿಡ್ ಕೇರ್ ಕೇಂದ್ರವನ್ನು ಆರಂಭಿಸುವ ಯೋಜನೆ ನಿಜಕ್ಕೂ ಶ್ಲಾಘನೀಯ

೬. ಶರತ್ ಕುಮಾರ್ ಬಚ್ಚೇಗೌಡ

ಹೊಸಕೋಟೆಯ ಪಕ್ಷೇತರ ಶಾಸಕರಾದ ಶರತ್ ಬಚ್ಚೇಗೌಡ ಅವರು ಕೋವಿಡ್ ಸಂದರ್ಭದಲ್ಲಿ ತಮ್ಮ ಕಾಲಿಗೆ ಚಕ್ರ ಕಟ್ಟಿಕೊಂಡು ಕ್ಷೇತ್ರದಾದ್ಯಂತ ಪ್ರವಾಸವನ್ನು ಕೈಗೊಂಡಿದ್ದಾರೆ. ಕೋವಿಡ್ ಹೊರತುಪಡಿಸಿ ಇತರ ರೋಗಿಗಳಿಗೆ ಅಗತ್ಯ ಚಿಕಿತ್ಸೆಗೆಂದು ಫೀವರ್ ಕ್ಲೀನಿಕ್ ಗಳ ಸ್ಥಾಪನೆ, ಕ್ಷೇತ್ರದಾದ್ಯಂತ ದಿನಸಿ, ಆಹಾರ ಕಿಟ್ ಗಳ ವಿತರಣೆಯನ್ನು ಶರತ್ ಅವರು ಮುತುವರ್ಜಿ ವಹಿಸಿದ್ದಾರೆ.

ಇನ್ನು ಕ್ಷೇತ್ರದ ಮೂಲೆ ಮೂಲೆಗೂ ಭೇಟಿ ನೀಡಿ ಆರೋಗ್ಯಾಧಿಕಾರಿಗಳ ಜತೆಯಲ್ಲಿ ಚರ್ಚೆ ನಡೆಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ. ಇದರೊಂದಿಗೆ ಕೋವಿಡ್ ಕೇರ್ ಕೇಂದ್ರಗಳಲ್ಲಿನ ಕುಂದು ಕೊರತೆಗಳನ್ನು ಬಗೆಹರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವತ್ತ ಗಮನಹರಿಸುತ್ತಿದ್ದಾರೆ.

ಇಂತಹ ಕಷ್ಟ ಕಾಲದಲ್ಲಿ ಸಾಕಷ್ಟು ಜನ ಜನ ಪ್ರತಿನಿಧಿಗಳು ತಮ್ಮ ಕ್ಷೇತ್ರದ ಜನರ ಸಹಾಯಕ್ಕೆ ಮುಂದಾಗಿದ್ದಾರೆ. ಇವರೆಲ್ಲರ ಕಾರ್ಯ ನಿಜಕ್ಕೂ ಶ್ಲಾಘನೀಯ. ಯಾವುದೇ ಕಟ್ಟುಪಾಡುಗಳನ್ನು ಹಾಕಿಕೊಳ್ಳದೇ ಸಮಾಜದ ಎಲ್ಲಾ ವರ್ಗದ ಜನರ ಕಷ್ಟಕ್ಕೆ ಸ್ಪಂದಿಸುವ ಇವರ ಕಾರ್ಯ ಹೀಗೇ ಮುಂದುವರೆಯಲಿ ಎಂದು ಆಶಿಸೋಣ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...