ಖಾಸಗಿ ಆಸ್ಪತ್ರೆಗಳ ದೋಚುವಿಕೆ ತಡೆಯಲು ಕೋವಿಡ್ ಲಸಿಕೆಗೆ ಏಕರೂಪ ದರ ನಿಗದಿ ಮಾಡುವಂತೆ ಸಿದ್ದರಾಮಯ್ಯ ಆಗ್ರಹ

ಕೋವಿಡ್ ಲಸಿಕೆ ಹೆಸರಲ್ಲಿ ಖಾಸಗಿ ಆಸ್ಪತ್ರೆಗಳು ಜನರಿಂದ ಹಣ ದೋಚುತ್ತಿರುವುದರಿಂದ ತಪ್ಪಿಸಲು ಏಕರೂಪದ ದರ ನಿಗದಿ ಮಾಡುವಂತೆ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಲಸಿಕೆ ನೀಡುವ ನೆಪದಲ್ಲಿ ಖಾಸಗಿ ಆಸ್ಪತ್ರೆಗಳು ನಡೆಸುತ್ತಿರುವ ದಂಧೆಯಲ್ಲಿ ಬಿಜೆಪಿ ಶಾಸಕರೂ ಶಾಮೀಲಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ಖಾಸಗಿ ಆಸ್ಪತ್ರೆಗಳಿಗೆ ಬಸವನಗುಡಿ ಶಾಸಕ ರವಿ ಸುಬ್ರಮಣ್ಯ ಅವರ ಕಡೆಯಿಂದಲೇ ಲಸಿಕೆ ವಿತರಣೆಯಾಗುತ್ತಿದೆ ಹಾಗೂ, ಅವರ ಕಛೇರಿಯಿಂದ ವ್ಯಾಕ್ಸಿನೇಷನ್‌ ಬುಕಿಂಗ್‌ ನಡೆಯುತ್ತಿದೆ ಎಂಬ ಆರೋಪಗಳು ಕೇಳಿ ಬಂದ ಬೆನ್ನಲ್ಲೇ ಸಿದ್ದರಾಮಯ್ಯ ಅವರ ಈ ಹೇಳಿಕೆ ಬಂದಿದೆ.

ಕೋವಿಡ್ ಮೂರನೇ ಅಲೆ ಮುನ್ಸೂಚನೆ ಹಿನ್ನೆಲೆಯಲ್ಲಿ ಮಕ್ಕಳಿಗೆ ವಿತರಿಸಲು ಪ್ರದೇಶ ಮಹಿಳಾ ಕಾಂಗ್ರೆಸ್ ಸಿದ್ಧಪಡಿಸಿರುವ ಪೌಷ್ಠಿಕಾಂಶವುಳ್ಳ ಆಹಾರ ಪದಾರ್ಥ ಹಾಗೂ ಔಷಧ ಮಾತ್ರೆಗಳನ್ನು ಒಳಗೊಂಡ ಕಿಟ್‍ಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚಾಲನೆ ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ, ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಗೆ 900ರಿಂದ 1,250 ರೂ.ಗಳ ವರೆಗೆ ದರ ನಿಗದಿ ಮಾಡಲಾಗಿದೆ. ಸಚಿವರು, ಸಂಸದರು, ಶಾಸಕರೇ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಲಸಿಕೆ ಹಾಕಿಸಿಕೊಳ್ಳಿ ಎಂದು ಪ್ರಚಾರ ಮಾಡುತ್ತಿದ್ದಾರೆ. ಹಾಗಾದರೆ ಬಡವರ ಪರಿಸ್ಥಿತಿ ಏನು? ದುಬಾರಿ ಹಣ ಕೊಟ್ಟು ಲಸಿಕೆ ಪಡೆಯಲು ಅವರಿಂದ ಸಾಧ್ಯವೇ ? ಇದೊಂದು ಕೆಟ್ಟ ಸರ್ಕಾರ. ಕೆಟ್ಟ ಮುಖ್ಯಮಂತ್ರಿ ಎಂದು ಕಿಡಿ ಕಾರಿದ್ದಾರೆ.

ಲಸಿಕೆ ಮೂಲಕ ಕೊರೊನಾ ಸೋಂಕನ್ನು ಶೇ.80ರಷ್ಟು ತಡೆಯಬಹುದು ಎಂದು ತಜ್ಞರು ಹೇಳಿದ್ದಾರೆ. ಹೀಗಾಗಿ ಎಲ್ಲರಿಗೂ ಲಸಿಕೆ ಸಿಗುವಂತೆ ಸರ್ಕಾರ ಗಮನ ಹರಿಸಬೇಕು. ಸರ್ಕಾರಕ್ಕೆ ಸಲಹೆ ನೀಡಿದರೂ ಸಿದ್ದರಾಮಯ್ಯ ರಾಜಕೀಯಕ್ಕೆ ಮಾತನಾಡುತ್ತಾರೆ ಎಂದು ಬಿಜೆಪಿಯವರು ಕಿಡಿ ಕಾರುತ್ತಾರೆ. ದೇಶದ ಜನಸಂಖ್ಯೆ 130 ಕೋಟಿ. 20 ಕೋಟಿ ಮಂದಿಗೆ ಲಸಿಕೆ ಹಾಕಿದ್ದೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಷಿ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಾರೆ. ಕೊರೊನಾ ಮೂರನೇ ಅಲೆ ಮಕ್ಕಳನ್ನು ಬಾಧಿಸುತ್ತದೆ ಎಂದು ತಜ್ಞರು ಹೇಳುತ್ತಿದ್ದರೂ ರಾಜ್ಯ ಸರ್ಕಾರ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ. ಎರಡನೇ ಅಲೆ ನಿಯಂತ್ರಣಕ್ಕೂ ಯಾವುದೇ ತಯಾರಿ ಮಾಡಿಕೊಂಡಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಸರ್ಕಾರಿ ಆಸ್ಪತ್ರೆಗಳಿಗೆ ಸಿಗದ ಲಸಿಕೆ ಖಾಸಗಿಯವರಿಗೆ ಹೇಗೆ ಸಿಗುತ್ತಿದೆ. ಈ ಮಧ್ಯೆ ಬ್ಲಾಕ್ ಫಂಗಸ್ ಕಾಯಿಲೆಗೂ ಚುಚ್ಚುಮದ್ದು ಸಿಗುತ್ತಿಲ್ಲ. ಸೋಂಕಿನ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇರಲಿಲ್ಲವೇ ? ಇದ್ದಿದ್ದರೆ ತಯಾರಿ ಮಾಡಿಕೊಂಡಿಲ್ಲವೇಕೆ ? ಇಂಜೆಕ್ಷನ್ ಸಿಗುತ್ತಿಲ್ಲ ಎಂಬುದು ಸತ್ಯ. ಈ ಸತ್ಯವನ್ನು ಹೇಳಿದರೆ ಅದಕ್ಕೂ ಬಿಜೆಪಿಯವರು ತಕರಾರು ತೆಗೆಯುತ್ತಾರೆ. ಜನರ ಪ್ರಾಣ ರಕ್ಷಣೆ ಸರ್ಕಾರದ ಜವಾಬ್ದಾರಿ ಎಂದು ಸಂವಿಧಾನ ಹೇಳುತ್ತದೆ. ಅಪೊಲೋ ಆಸ್ಪತ್ರೆಯಲ್ಲಿ ಸ್ಫುಟ್ನಿಕ್ ವ್ಯಾಕ್ಸಿನ್ ಲಭ್ಯವಿದೆ ಎಂದು ಆರೋಗ್ಯ ಸಚಿವರೇ ಹೇಳುತ್ತಾರೆ. ಹಣ ನೀಡಿ ಲಸಿಕೆ ಹಾಕಿಸಿಕೊಳ್ಳಿ ಎಂದು ಸಚಿವರೇ ಹೇಳುವುದಾದರೆ ಸರ್ಕಾರ ಏನು ಮಾಡುತ್ತಿದೆ. ರಾಜ್ಯ, ಹೊರ ರಾಜ್ಯ, ದೇಶ, ವಿದೇಶಗಳ ಲ್ಯಾಬ್‍ಗಳು ತಯಾರಿಸುವ ಲಸಿಕೆಯನ್ನು ಸರ್ಕಾರವೇ ಪೂರ್ಣ ಪ್ರಮಾಣದಲ್ಲಿ ಖರೀದಿ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Related posts

Latest posts

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಇನ್ನಿಲ್ಲ

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಕೊರೊನಾ ಸೋಂಕಿನಿಂದ ಉಂಟಾದ ಹಲವಾರು ಸಮಸ್ಯೆಗಳಿಂದ ಕೊನೆಯುಸಿರೆಳೆದಿದ್ದಾರೆ. ಚಂಡೀಗಡದ ಪಿಜಿಐ ಆಸ್ಪತ್ರೆಯಲ್ಲಿ ತಮ್ಮ 91 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕಳೆದ ತಿಂಗಳು ಮಿಲ್ಖಾ ಸಿಂಗ್ ಅವರಿಗೆ...

ಒಂದೇ ದಿನದಲ್ಲಿ ಎರಡು ವಿವಿಧ ಕೋವಿಡ್-19 ಲಸಿಕೆಗಳನ್ನು ಪಡೆದ ಬಿಹಾರದ ಮಹಿಳೆ

ಬಿಹಾರದ 63 ವರ್ಷದ ಮಹಿಳೆಗೆ ಒಂದೇ ದಿನದಲ್ಲಿ ಎರಡು ವಿಭಿನ್ನ ಕಂಪನಿಯ ಕರೋನ ಲಸಿಕೆ ನೀಡಲಾಗಿದೆ. ಅವರು ಈಗ ವೈದ್ಯರ ನಿಗದಲ್ಲಿದ್ದು ಆರೋಗ್ಯವಾಗಿದ್ದಾರೆ ಎನ್ನಲಾಗಿದೆ. ಬಿಹಾರದ ಮಹಿಳೆ ಸುನಿಲಾ ದೇವಿ ಎಂಬುವವರಿಗೆ ಜೂನ್ 16...

ಮಸೀದಿಗೆ ಜಾಗ ದಾನ ನೀಡಿದ ಸಿಖ್ ವ್ಯಕ್ತಿ: ಮಸೀದಿಯಲ್ಲಿ ಕಾರ್ಯಕ್ರಮ ಆಯೋಜಿಸಿದ ಗುರುದ್ವಾರ

ಕೋಮು‌‌ ಸಂಘರ್ಷಗಳು, ಪ್ರಚೋದನೆಗಳು ಮತ್ತು ವಿಭಿನ್ನ ಕೋಮಿನ ಜನರ ಮೇಲೆ ವಿನಾಕಾರಣ ಹಲ್ಲೆ, ಕೊಲೆ ನಡೆಯುವ ವಿದ್ಯಮಾನಗಳ ನಡುವೆ ಪಂಜಾಬಿನ‌ ಎರಡು ಜಿಲ್ಲೆಗಳು ಕೋಮುಸಾಮರಸ್ಯವನ್ನು ಉತ್ತೇಜಿಸುವಂತಹ ಘಟನೆಗೆ ಸಾಕ್ಷಿಯಾಗಿವೆ. ಸ್ವಾಭಿಮಾನಕ್ಕೆ, ಕೆಚ್ಚೆದೆಗೆ ಹಠಕ್ಕೆ...