ಅಂಗವೈಕಲ್ಯ ಹೊಂದಿರುವ ನೂರಾರು ಮಕ್ಕಳು ಹಾಗೂ ದೊಡ್ಡವರಿಗೆ ಆಶ್ರಯತಾಣವಾಗಿರುವ ಡೆಹ್ರಾಡೂನ್‌ನಲ್ಲಿರುವ ಲತಿಕಾ ರಾಯ್ ಫೌಂಡೇಶನ್ (ಎಲ್‌ಆರ್‌ಎಫ್) ಕೇಂದ್ರಗಳಲ್ಲಿ ಯಾವುದಾದರೂ ಒಂದು ಕೇಂದ್ರದೊಳಗೆ ಕಾಲಿಟ್ಟರೆ ಹೊಸ ಲೋಕವನ್ನು ಪ್ರವೇಶಿಸಿದಂತಾಗುತ್ತದೆ. ವಿವಿಧ ಚಟುವಟಿಕೆಯಲ್ಲಿ ತೊಡಗಿರುವ ಮಕ್ಕಳು ಮತ್ತು ದೊಡ್ಡವರ ಹಿಂದೆ ಅಡಗಿರುವ ಅಲ್ಲಿನ ಸಿಬ್ಬಂದಿಗಳ ಪರಿಶ್ರಮ ಎದ್ದು ಕಾಣುತ್ತದೆ. ಅಲ್ಲಿನ ಮಕ್ಕಳ ಅಭಿವೃದ್ಧಿ ಕೇಂದ್ರದಲ್ಲಿ ಪ್ರತಿಯೊಂದು ಮಗುವಿನ ವೈಯಕ್ತಿಕ ಅಗತ್ಯಗಳಿಗೆ ಅನುಗುಣವಾಗಿ ಫಿಸಿಯೋಥೆರಪಿ ನೀಡಲಾಗುತ್ತದೆ. ಅಲ್ಲದೆ ಏಳರಿಂದ ಹದಿನಾಲ್ಕು ವರ್ಷದೊಳಗಿನ ಮಕ್ಕಳಿಗಾಗಿ ಶಾಲೆ ಮತ್ತು ಅದಕ್ಕಿಂತ ದೊಡ್ಡ ಮಕ್ಕಳಿಗಾಗಿ ವೃತ್ತಿಪರ ತರಬೇತಿ ಕೇಂದ್ರಗಳೂ ಇವೆ. ಇವು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ನೆರವಾಗುತ್ತಿವೆ.
ವಿಶೇಷವೆಂದರೆ ಇಲ್ಲಿ ಮಕ್ಕಳದೊಂದಿಗೆ ಅವರ ಪೋಷಕರೂ ವಿವಿಧ ಚಟುವಟಿಕೆಯಲ್ಲಿ ತೊಡಗುತ್ತಾರೆ. ಲಾಕ್‌ಡೌನ್ ಸಂದರ್ಭದಲ್ಲೂ ಇಲ್ಲಿನ ಸಿಬ್ಬಂದಿ ವಿರಾಮವಿಲ್ಲದೆ ಕೆಲಸ ಮಾಡಿದ್ದು ವಿಡಿಯೋ ಚಾಟ್ ಮತ್ತು ಮನೆ ಮನೆಗೆ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಅಲ್ಲದೆ ರಾಜ್ಯದ ಚುನಾವಣಾ ಆಯೋಗ ಮತ್ತು ಸೈನ್ಯದೊಡಗೂಡಿ ವಿಶೇಷ ಚೇತನರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಾಗಾರಗಳನ್ನೂ ನಡೆಸಿತ್ತು ಮತ್ತು ಇದಕ್ಕಾಗಿ ರಾಜ್ಯದ ಅತ್ಯುತ್ತಮ ಎನ‌್‌ಜಿಒ ಪ್ರಶಸ್ತಿಯನ್ನೂ ಇದು ಪಡೆದಿದೆ.
ಆದರೆ ವಿಚಿತ್ರ ಮತ್ತು ವಿಷಾದನೀಯ ಸಂಗತಿಯೆಂದರೆ ಇಂತಹ ಸೇವೆಯನ್ನೇ ಗುರಿಯಾಗಿಸಿಕೊಂಡಿರುವ ಎನ್‌ಜಿಒ ಮೇಲೂ ಕೆಟ್ಟ ರಾಜಕೀಯ ದಾಳಿಗಳಾಗಿವೆ. ಮೊದಮೊದಲು ಬಿಜೆಪಿ ಮತ್ತು ಅದರ ಐಟಿ ವಿಂಗ್‌ನ ಟ್ರೋಲಿಂಗ್ ಗೆ ಮಾತ್ರ ಈ ಎನ್‌ಜಿಒ ಗುರಿಯಾಗಿತ್ತು. ಆದರೆ ಲತಿಕಾ ರಾಯ್ ಫೌಂಡೇಶನ್‌ನ ಸ್ಥಾಪಕಿ ಜೋ ಚೋಪ್ರಾ ಅವರು ‘ಭಾರತದ ಜಾತ್ಯಾತೀತ ಸ್ವಭಾವವನ್ನು ಯಾವ ಹಿಂದುತ್ವದಿಂದಲೂ ಎಂದಿಗೂ ನಾಶ ಮಾಡಲು ಸಾಧ್ಯವಿಲ್ಲ’ ಎಂದು ಟ್ವೀಟ್ ಮಾಡಿದ ನಂತರ ಈ ಟ್ರೋಲಿಂಗ್ ಅಸಹ್ಯಕರ ತಿರುವು ಪಡೆದುಕೊಂಡಿತ್ತು. ಈ ಸಂಬಂಧ ಪೊಲೀಸರೂ ಅವರ ಎನ್‌ಜಿಒಗೆ ಭೇಟಿ ನೀಡಬೇಕಾಗಿ ಬಂತು. ಆದರೆ ಪೊಲೀಸರು ಯಾವುದೇ ಪುರಾವೆಗಳು ದೊರೆಯದೆ ಹಿಂದಿರುಗಿದರು. ಮುಂದೆ ಅಂಗವಿಕಲ ಮಕ್ಕಳನ್ನು ಅಪಾಯಕಾರಿ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತದೆ ಎಂದು ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗಕ್ಕೆ ದೂರು ಸಲ್ಲಿಸಲಾಯಿತು. ಈ ಬಗ್ಗೆ ಡೆಹ್ರಾಡೂನ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಯಿಂದ ವಿಚಾರಣೆ ನಡೆಸಲಾಗಿದ್ದು, ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ.
ಈ ಬಗ್ಗೆ ಮಾತನಾಡಿರುವ ಡೆಹ್ರಾಡೂನಿನ ಅತ್ಯಂತ ಗೌರವಾನ್ವಿತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ, ಕಳೆದ ಅನೇಕ ವರ್ಷಗಳಿಂದ ಎಲ್ಆರ್‌ಎಫ್‌ನೊಂದಿಗೆ ಸಂಪರ್ಕದಲ್ಲಿರುವ ವಿಭಾ ಪುರಿಯವರು ” ಇಡೀ ಉತ್ತರ ಭಾರತದಲ್ಲಿ ಎಲ್‌ಆರ್‌ಎಫ್‌ನಂತಹ ಬೇರೆ ಫೌಂಡೇಶನ್ ಇಲ್ಲ, ಅಂಥದ್ದರಲ್ಲಿ ನಿರ್ಲಕ್ಷಿತ ಜನರಿಗಾಗಿ ಕೆಲಸ ಮಾಡುವ ಜೋ ಚೋಪ್ರಾ ಮತ್ರು ಎಲ್ಆರ್‌ಎಫ್‌ಗೆ ನಾವು ಕೃತಜ್ಞರಾಗಿರಬೇಕು” ಎನ್ನುತ್ತಾರೆ.
“ಅಂಗವಿಕಲರೊಂದಿಗೆ ಕೆಲಸ ಮಾಡುವಾಗ, ನಮ್ಮೆಲ್ಲರ ದೌರ್ಬಲ್ಯಗಳು ನಮಗೆ ಅರ್ಥವಾಗುತ್ತವೆ. ತಮ್ಮಿಂದ ಭಿನ್ನವಾಗಿರುವ ಜನರನ್ನು ಸ್ವೀಕರಿಸಲು ಸಾಧ್ಯವಿಲ್ಲದ ಅಂಗವೈಕಲ್ಯವನ್ನು ಹೊಂದಿರುವವರು Twitter ನಲ್ಲಿ ನನ್ನನ್ನು ಬೆದರಿಸುತ್ತಿದ್ದಾರೆ. ಈ ಸಮಸ್ಯೆಯು ಅವರಲ್ಲಿ ಪ್ರತೀಕಾರದ ಭಾವನೆಯನ್ನು ಉಂಟು ಮಾಡುತ್ತದೆ. ಯಾವುದೇ ಸ್ವಸ್ಥ ವ್ಯಕ್ತಿಯು ಇತರರನ್ನು ನೋಯಿಸಿ ಸಂತಸವಾಗಿರಲು ಸಾಧ್ಯವಿಲ್ಲ” ಎನ್ನುತಾರೆ ಚೋಪ್ರಾ.
“ಎಲ್‌ಆರ್‌ಎಫ್ ವಿಶೇಷ ಅಗತ್ಯವಿರುವ ಮಕ್ಕಳ ಹಕ್ಕುಗಳ ಬಗ್ಗೆ ಬೇರೆಯವರು ತಲೆಕೆಡಿಸಿಕೊಳ್ಳುವುದಕ್ಕಿಂತ ಮುಂಚೆಯೇ ಮಾತನಾಡುತ್ತಿತ್ತು ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಜೋ ಮತ್ತು ಎಲ್‌ಆರ್‌ಎಫ್ ಡೆಹ್ರಾಡೂನ್ ಮತ್ತು ಭಾರತದಾದ್ಯಂತ ವಿದ್ಯಾರ್ಥಿಗಳಿಗೆ ಈ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಿದ ರೀತಿಯೇ ಅದ್ಭುತ. ವೆಲ್‌ಹ್ಯಾಮ್ ಗರ್ಲ್ಸ್‌ನಲ್ಲಿನ ವಿದ್ಯಾರ್ಥಿಗಳ ಗುಂಪು ಇವರಿಂದ ಎಷ್ಟು ಪ್ರೇರಿತವಾಗಿದೆ ಎಂದರೆ ಅವರು LRF ನ ಬಗ್ಗೆ ಸಾಕ್ಷ್ಯ ವಿತ್ರ ನಿರ್ಮಿಸಿದ್ದಾರೆ” ಎನ್ನುತ್ತಾರೆ ವೆಲ್‌ಹ್ಯಾಮ್ ಗರ್ಲ್ಸ್‌ನ ಮಾಜಿ ಪ್ರಿನ್ಸಿಪಾಲರಾದ ಜ್ಯೋತ್ಸ್ನಾ ಬ್ರಾರ್.
ಲತಿಕಾ ರಾಯ್ ಫೌಂಡೇಶನ್ ಡೆಹ್ರಾಡೂನ್ ಮತ್ತು ಭಾರತದ ಅಮೂಲ್ಯ ಆಸ್ತಿಗಳಲ್ಲಿ ಒಂದಾಗಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ದೈಹಿಕವಾಗಿ ಸಶಕ್ತರಾಗಿರುವವರಿಂದ ನಿರ್ಲಕ್ಷಿತರಾಗುವ ಮಂದಿಗೆ ಇದು ಭರವಸೆ ಮತ್ತು ಪ್ರಾಯೋಗಿಕ ಸಹಾಯವನ್ನು ನೀಡುತ್ತದೆ. ಜೋ ಚೋಪ್ರಾರವರಂತವರನ್ನು ನಮ್ಮಿಂದ ಪ್ರೋತ್ಸಾಹಿಸಲಾಗದಿದ್ದರೂ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಬಿಡಲಾಗುತ್ತಿರುವ ಸುಳ್ಳು ಮತ್ತು ನಿಂದನೆಯ ಆರೋಪಗಳನ್ನು ತಕ್ಷಣವೇ ನಿಲ್ಲಿಸುವಂತೆ ತನ್ನ ಐಟಿ ವಿಂಗ್‌ಗೆ ನಿರ್ದೇಶನ ನೀಡುವ ಕನಿಷ್ಠ ಜವಾಬ್ದಾರಿಯನ್ನಾದರೂ ಸರ್ಕಾರ ಪ್ರದರ್ಶಿಸಲಿ.
ಮೂಲ: ರಂಜೋನಾ ಬ್ಯಾನರ್ಜಿ, ದಿ ವೈರ್
(ರಂಜೋನಾ ಒಬ್ಬ ಪತ್ರಕರ್ತೆ. ಲತಿಕಾ ರಾಯ್ ಫೌಂಡೇಶನ್‌ನ ಮಂಡಳಿ ಸದಸ್ಯರಾಗಿದ್ದಾರೆ)