ಬಹುಭಾಷಿಕ ದೇಶದಲ್ಲಿ ಭಾಷಾ ಸ್ವಾಯತ್ತತೆಯೊಂದೇ ಸಮನ್ವಯ ಸಾಧಿಸಬಲ್ಲದು

(ದ್ವಿಭಾಷಾ-ತ್ರಿಭಾಷಾ ನೀತಿಯನ್ನು ಕುರಿತಂತೆ ಕೀರಂ ಪ್ರಕಾಶನದಿಂದ ಪ್ರಕಟಿಸಿರುವ ಕೃತಿಗೆ ಬರೆದ ಲೇಖನ)
ಭಾಗ 1
ಭಾರತ ಒಂದು ಬಹುಸಾಂಸ್ಕೃತಿಕ ದೇಶ ಎನ್ನುವುದು ಹೇಗೆ ಚಾರಿತ್ರಿಕವಾಗಿ ಸತ್ಯವೋ ಹಾಗೆಯೇ ಬಹುಭಾಷಿಕ ದೇಶ ಎನ್ನುವುದೂ ಅಷ್ಟೇ ಸತ್ಯ. ಸಾವಿರಾರು ಭಾಷೆ, ಉಪಭಾಷೆಗಳನ್ನೊಳಗೊಂಡ ಭಾರತೀಯ ಉಪಖಂಡದಲ್ಲಿ ಭಾಷೆ ಎನ್ನುವುದು ಕೇವಲ ಸಂವಹನ ಸಾಧನವಾಗಿ ಮಾತ್ರವೇ ಇಲ್ಲದೆ, ಪ್ರಾದೇಶಿಕ ನೆಲೆಗಳಲ್ಲಿ ಸ್ಥಾಪಿತವಾಗಿರುವ ಬಹುಆಯಾಮಗಳ ಸಾಂಸ್ಕೃತಿಕ ಜಗತ್ತಿನಲ್ಲಿ, ಒಂದು ನಿರ್ಣಾಯಕ ಅಸ್ಮಿತೆಯ ಪ್ರಶ್ನೆಯಾಗಿ ರೂಪುಗೊಂಡಿದೆ. 2001ರ ಜನಗಣತಿಯ ಪ್ರಕಾರ ಭಾರತದಲ್ಲಿ 122 ಪ್ರಮುಖ ಭಾಷೆಗಳು, 1599 ಉಪಭಾಷೆಗಳಿವೆ. ಭಾರತದಲ್ಲಿ ಸ್ಥಳೀಯ ಆಡುಭಾಷೆಗಳನ್ನೂ (Colloquial) ಪರಿಗಣಿಸಿದರೆ 19,500 ತಾಯ್ನುಡಿಗಳಿವೆ. ಸ್ವಾತಂತ್ರ್ಯಾನಂತರ ದೇಶದ ಏಕತೆ ಮತ್ತು ಅಖಂಡತೆಯನ್ನು ಕಾಪಾಡುವ ದೃಷ್ಟಿಯಿಂದ ಸಂವಿಧಾನವು ಷೆಡ್ಯೂಲ್ 8ರಲ್ಲಿ 22 ಭಾಷೆಗಳನ್ನು, ಪ್ರಾದೇಶಿಕ-ಜನಸಂಖ್ಯೆಯ ನೆಲೆಯಲ್ಲಿ ಅಧಿಕೃತ ಎಂದು ಗುರುತಿಸುತ್ತದೆ.
ಈ ವೈವಿಧ್ಯತೆಯನ್ನು ಗೌರವಿಸುತ್ತಲೇ ಸ್ವತಂತ್ರ ಭಾರತದ ಆರಂಭಿಕ ಸರ್ಕಾರವು ಯಾವುದೇ ಭಾಷೆಯನ್ನು ರಾಷ್ಟ್ರೀಯ ಭಾಷೆ ಎಂದು ಗುರುತಿಸಲಿಲ್ಲ. ವ್ಯಾವಹಾರಿಕ ಭಾಷೆಯಾಗಿ ಹಿಂದಿ (ದೇವನಾಗರಿ ಲಿಪಿ) ಮತ್ತು ಆಂಗ್ಲ ಭಾಷೆಯನ್ನು ಒಪ್ಪಿಕೊಂಡು ಬರಲಾಗಿದೆ. ಭಾರತದ ಭಾಷಾ ವೈವಿಧ್ಯತೆ ಎಷ್ಟು ವಿಶಾಲವೂ, ಆಳವೂ ಆಗಿದೆ ಎಂದರೆ, ಯಾವುದೇ ರಾಜ್ಯದಲ್ಲಾದರೂ, ಪ್ರತಿ 50-100 ಕಿಲೋಮೀಟರ್ ವಿಸ್ತಾರದಲ್ಲಿ ಆಡುಭಾ಼ಷೆ, ನುಡಿಗಟ್ಟುಗಳು ಮತ್ತು ಬಳಕೆಯ ಭಾಷೆಗಳು ವ್ಯತ್ಯಾಸವಾಗುತ್ತವೆ. ಆದಾಗ್ಯೂ ಪ್ರಧಾನವಾಗಿ ಹೆಚ್ಚಿನ ಜನಸಂಖ್ಯೆ ಮಾತನಾಡುವ ಭಾಷೆಗಳನ್ನು ಆಧರಿಸಿ ಭಾಷಾವಾರು ರಾಜ್ಯಗಳನ್ನು ಸ್ಥಾಪಿಸಲಾಗಿತ್ತು. ಇಂದಿಗೂ ಸಹ ತಳಸ್ತರದ ಸಾಮಾಜಿಕ ನೆಲೆಯಲ್ಲಿ ಯಾವುದೇ ರಾಜ್ಯವನ್ನೂ ʼ ಏಕಭಾಷೆ ʼಯ ರಾಜ್ಯವನ್ನಾಗಿ ನೋಡಲು ಸಾಧ್ಯವಿಲ್ಲ. ಹಾಗಾಗಿಯೇ ಭಾರತದ ಸಂವಿಧಾನವು ಭಾಷೆಯನ್ನು ರಾಜ್ಯಗಳ ಪಟ್ಟಿಯಲ್ಲಿ ಅಳವಡಿಸಿದ್ದು, ಭಾಷಾ ಸ್ವಾಯತ್ತತೆಯನ್ನು ಕಾಪಾಡಲು ನೆರವಾಗಿದೆ.
ಭಾಷೆ ಸಮಾಜ ಮತ್ತು ಜನಜೀವನ

ಚಾರಿತ್ರಿಕವಾಗಿ ಮಾನವ ಅಭ್ಯುದಯದ ಹಾದಿಯನ್ನು ಅವಲೋಕಿಸುವಾಗ ಸ್ಪಷ್ಟವಾಗುವ ಒಂದು ಅಂಶ ಎಂದರೆ ಭಾಷೆ ಎನ್ನುವುದು ಆಯಾ ಪ್ರದೇಶದ ಜನಜೀವನದ ಒಂದು ಮೌಖಿಕ ವಾತಾವರಣ, ಬೌದ್ಧಿಕ ಪರಿಸರ ಮತ್ತು ಜೀವನೋಪಾಯದ ಸ್ಥಿತಿಗತಿಗಳನ್ನು ನಿರ್ಧರಿಸುವ ಒಂದು ಸಂವಹನದ ಸಾಧನವಾಗಿ ಕಾಣುತ್ತದೆ. ಒಂದು ಅಂದಾಜಿನ ಪ್ರಕಾರ ಭಾರತದ ಯಾವ ರಾಜ್ಯದಲ್ಲಾದರೂ, 200 ಕಿಲೋಮೀಟರ್ ದಾಟಿದರೆ ಅಲ್ಲಿ ಭಿನ್ನವಾದ ಬಳಕೆಯ ಭಾಷಾ ಶೈಲಿ, ನುಡಿಗಟ್ಟುಗಳು ಹಾಗೂ ನಿತ್ಯಬದುಕಿನ ಸಂವಹನದ ಪರಿಭಾಷೆಯನ್ನು ಗುರುತಿಸಬಹುದು. ಇದು ಭಾರತದ ವೈಶಿಷ್ಟ್ಯವಷ್ಟೇ ಅಲ್ಲ, ಹೆಮ್ಮೆಯ ವಿಚಾರವೂ ಹೌದು. ಸಾಂಸ್ಕೃತಿಕ ವೈವಿಧ್ಯತೆಯಂತೆಯೇ ಈ ಭಾಷಾ ವೈವಿಧ್ಯತೆಯೇ ಭಾರತದ ತಳಸಮಾಜದಲ್ಲಿ ಸೌಹಾರ್ದತೆ, ಸಮನ್ವಯತೆ ಮತ್ತು ಸಹಬಾಳ್ವೆಯ ನೆಲೆಗಳನ್ನು ಇಂದಿಗೂ ಸುರಕ್ಷಿತವಾಗಿರಿಸಿದೆ.

ಈ ಚಾರಿತ್ರಿಕ ಹಿನ್ನೋಟ ಮತ್ತು ಸಾಂಸ್ಕೃತಿಕ ಅರಿವಿನೊಂದಿಗೇ ಪ್ರಸ್ತುತ ಭಾರತದಲ್ಲಿ ಮತ್ತೊಮ್ಮೆ ಸಾರ್ವಜನಿಕ ಚರ್ಚೆಗೊಳಗಾಗಿರುವ ಭಾಷಾ ನೀತಿಯ ಸಂಕಥನಗಳನ್ನು ಪರಾಮರ್ಶಿಸಬೇಕಿದೆ. ಭಾರತದ ಸಂವಿಧಾನದ ಅನುಸಾರ ಶಿಕ್ಷಣವೂ ರಾಜ್ಯದ ಪಟ್ಟಿಯಲ್ಲಿರುವುದರಿಂದ, ಶಾಲಾ ಬೋಧನೆಯ ಭಾಷೆಯಾಗಿ ಆಯಾ ರಾಜ್ಯಗಳು ತಮ್ಮ ಮಾತೃಭಾಷೆಯನ್ನೇ ಅಳವಡಿಸುವ ಸಂಪ್ರದಾಯವೂ ಅನುಸರಿಸಲ್ಪಟ್ಟಿದೆ. ಆದರೆ ಒಕ್ಕೂಟ ಸರ್ಕಾರವು ಸಾಂವಿಧಾನಿಕವಾಗಿ ನಿರ್ಧರಿಸುವ ಅಧಿಕೃತ ಭಾಷೆಯನ್ನು ಆಡಳಿತದಲ್ಲಿ ಬಳಸುವುದು ಅನಿವಾರ್ಯವಾಗಿರುತ್ತದೆ. ಸಂವಿಧಾನದ ಪರಿಚ್ಛೇದ 343ರಲ್ಲಿ ದೇವನಾಗರಿ ಲಿಪಿಯ ಹಿಂದಿ ಒಕ್ಕೂಟದ ಅಧಿಕೃತ ಭಾಷೆ ಎಂದು ಘೋಷಿಸುತ್ತದೆ. ಸಂವಿಧಾನ ರಚಕ ಮಂಡಲಿಯಲ್ಲಿ ಅಧಿಕೃತ ಭಾ಼ಷೆಯ ಬಗ್ಗೆ ಗಂಭೀರವಾದ ಚರ್ಚೆಗಳು ನಡೆದಿರುವುದು ತಿಳಿದೇ ಇದೆ.
ಸಂವಿಧಾನದಲ್ಲಿರುವ ಅಧಿಕೃತ ಭಾಷೆಯ ಅಧ್ಯಾಯವು ವೈವಿಧ್ಯಮಯ ಅಭಿಪ್ರಾಯಗಳ ಪ್ರತಿಪಾದಕರು ಮಂಡಿಸಿದ ವಾದಗಳ ನಡುವೆ ಮೂಡಿದ ರಾಜಿ ಸೂತ್ರದ ಹಿನ್ನೆಲೆಯಲ್ಲಿ ರಚಿಸಲ್ಪಟ್ಟಿದೆ. ಅಂತಿಮವಾಗಿ ಹಿಂದಿಯನ್ನು ಒಕ್ಕೂಟದ ಅಧಿಕೃತ ಭಾಷೆ ಎಂದು ಘೋಷಿಸಲಾಗಿತ್ತು. ಸಂವಿಧಾನಕ್ಕೆ ಚಾಲನೆ ದೊರೆತ ದಿನದಿಂದ 15 ವರ್ಷಗಳ ಅವಧಿಗೆ ಆಂಗ್ಲ ಸಹ ಅಧಿಕೃತ ಭಾಷೆಯಾಗಿರಲಿದೆ ಎಂದೂ ಹೇಳಲಾಗಿತ್ತು. ಅಗತ್ಯವಾದಲ್ಲಿ ಸಂಸತ್ತು ಸೂಕ್ತ ಶಾಸನದ ಮೂಲಕ 15 ವರ್ಷಗಳ ನಂತರವೂ ಆಂಗ್ಲ ಭಾಷೆಯನ್ನು ಅಧಿಕೃತ ಭಾಷೆಯಾಗಿ ಮುಂದುವರೆಸಬಹುದು ಎಂದು ಹೇಳಲಾಗಿತ್ತು. ಇದರಂತೆಯೇ ಸಂಸತ್ತು 1963ರಲ್ಲಿ ಅಧಿಕೃತ ಭಾಷಾ ಕಾಯ್ದೆಯನ್ನು ಜಾರಿಗೊಳಿಸಲಾಯಿತು. ಈ ಕಾಯ್ದೆಯನ್ವಯ, ಒಕ್ಕೂಟದ ಅವಶ್ಯಕತೆಗಳಿಗೆ ಮತ್ತು ಸಂಸದೀಯ ವ್ಯವಹಾರಗಳಿಗೆ ಹಿಂದಿಯೊಡನೆ ಆಂಗ್ಲ ಭಾಷೆಯನ್ನೂ ಅನಿರ್ದಿಷ್ಟ ಕಾಲ ಅಧಿಕೃತವಾಗಿ ಬಳಸಬಹುದು ಎಂದು ಘೋಷಿಸಲಾಗಿತ್ತು.

ಹಿಂದಿಯೇತರ ರಾಜ್ಯಗಳಲ್ಲಿ ಪರಿಣಾಮ
1968ರಲ್ಲಿ ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರವು ಸ್ವತಂತ್ರ ಭಾರತದ ಮೊಟ್ಟಮೊದಲ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯನ್ನು ರೂಪಿಸಿತ್ತು. ಇದರನ್ವಯ ತ್ರಿಭಾಷಾ ಸೂತ್ರವನ್ನು ದೇಶಾದ್ಯಂತ ಜಾರಿಗೊಳಿಸಲು ತೀರ್ಮಾನಿಸಲಾಯಿತು. ಶಾಲಾ ಪಠ್ಯಕ್ರಮಗಳಲ್ಲಿ ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿ-ಇಂಗ್ಲಿಷ್ ಹೊರತಾಗಿ ಪ್ರಾದೇಶಿಕ ಭಾಷೆಯನ್ನು ಹಾಗೂ ಹಿಂದಿ ರಾಜ್ಯಗಳಲ್ಲಿ ದಕ್ಷಿಣ ಭಾರತದ ಭಾಷೆಯೊಂದನ್ನೂ ಬೋಧಿಸಲು ನೀತಿ ನಿರೂಪಣೆ ಮಾಡಲಾಗಿತ್ತು. ಈ ನೀತಿಯನ್ನು ತಮಿಳುನಾಡು ಆರಂಭದಿಂದಲೂ ವಿರೋಧಿಸುತ್ತಲೇ ಬಂದಿದೆ. 1960ರ ದಶಕದ ಒಕ್ಕೂಟ ಸರ್ಕಾರದ ಈ ನೀತಿಯು ಆಂಗ್ಲ ಭಾಷೆಯನ್ನು ಕೈಬಿಟ್ಟು ಹಿಂದಿ ಭಾಷೆಯನ್ನು ಅಳವಡಿಸಲು ಪ್ರಯತ್ನಿಸಿದಾಗ ಭಾವನಾತ್ಮಕ ಪ್ರತಿರೋಧ ವ್ಯಕ್ತವಾಗಿದ್ದೇ ಅಲ್ಲದೆ ಹಿಂಸಾತ್ಮಕ ಪ್ರತಿಭಟನೆಗಳು, ಆತ್ಮಾಹುತಿಯ ಘಟನೆಗಳೂ ದಕ್ಷಿಣ ರಾಜ್ಯಗಳಲ್ಲಿ ನಡೆದಿದ್ದವು. ಹಾಗಾಗಿ ಸಂಸತ್ತು ಆಂಗ್ಲ ಭಾಷೆಯನ್ನೇ ಮುಂದುವರೆಸಲು ನಿರ್ಧರಿಸುವ ಮೂಲಕ ದಕ್ಷಿಣದ ರಾಜ್ಯಗಳಲ್ಲಿ ಧಕ್ಕೆಗೊಳಗಾದ ಭಾವನೆಗಳನ್ನು ಶಮನಗೊಳಿಸಬೇಕಾಯಿತು. ಆಂಗ್ಲ ಭಾಷೆಯನ್ನು ಅನಿರ್ದಿಷ್ಟ ಕಾಲ ಮುಂದುವರೆಸಬಹುದು ಎಂಬ ನಿಯಮವೇ ಆಕ್ರೋಶವನ್ನು ಶಮನಗೊಳಿಸಲು ನೆರವಾಗಿತ್ತು.
ಸೆಪ್ಟಂಬರ್ 9 2022ರಂದು ಭಾರತದ ರಾಷ್ಟ್ರಪತಿಗಳಿಗೆ ಸಲ್ಲಿಸಲಾದ ಅಧಿಕೃತ ಭಾಷಾ ಸಮಿತಿಯ 11 ನೆಯ ಸಂಪುಟದ ಶಿಫಾರಸುಗಳು ಮಾಧ್ಯಮಗಳಲ್ಲಿ ಹೆಚ್ಚಾಗಿ ಚರ್ಚೆಗೊಳಗಾಗಿಲ್ಲ. ತಮಿಳುನಾಡು ಮತ್ತು ಕೇರಳ ರಾಜ್ಯಗಳ ಮುಖ್ಯಮಂತ್ರಿಗಳ ಹೊರತಾಗಿ ಮತ್ತಾವುದೇ ರಾಜಕೀಯ ನಾಯಕರು ಈ ಶಿಫಾರಸುಗಳಿಗೆ ಪ್ತತಿಕ್ರಿಯೆಯನ್ನು ನೀಡಿಲ್ಲ. ಮುದ್ರಣ ಮಾಧ್ಯಮದಲ್ಲಿ ವರದಿಯಾಗಿರುವಂತೆ, ಸಮಿತಿಯ ಪ್ರಮುಖ ಶಿಫಾರಸುಗಳೆಂದರೆ, ಕೇಂದ್ರ ಸರ್ಕಾರದ ನೇಮಕಾತಿ ಪ್ರಕ್ರಿಯೆಯಲ್ಲಿ ಆಂಗ್ಲ ಬದಲು ಹಿಂದಿ ಭಾಷೆಯನ್ನು ಅಳವಡಿಸಬೇಕು, ಕೇಂದ್ರೀಯ ವಿದ್ಯಾಲಯಗಳಲ್ಲಿ, ಐಐಟಿಗಳಲ್ಲಿ, ಐಐಎಮ್‌ಗಳಲ್ಲಿ ಬೋಧನಾ ಮಾಧ್ಯಮವಾಗಿ ಹಿಂದಿ ಭಾಷೆಯೊಂದೇ ಇರಬೇಕು, ರಾಜ್ಯ ಸರ್ಕಾರಗಳು ಹಿಂದಿ ಭಾಷೆಯನ್ನು ಪ್ರಸಾರ ಮಾಡುವುದು ಸಾಂವಿಧಾನಿಕ ಹೊಣೆಯಾಗಿರಬೇಕು ಇತ್ಯಾದಿ.
ಅಧಿಕೃತ ಭಾಷಾ ಸಮಿತಿಯು ಒಂದು ಶಾಸನವಿಹಿತ ಸಮಿತಿಯಾಗಿದ್ದು ಇದನ್ನು 1963ರ ಅಧಿಕೃತ ಭಾಷಾ ಕಾಯ್ದೆಯ ಅಡಿ ಸ್ಥಾಪಿಸಲಾಗಿತ್ತು. ಕೇಂದ್ರ ಸರ್ಕಾರದ ಆಡಳಿತ ನಿರ್ವಹಣೆಯಲ್ಲಿ ಹಿಂದಿ ಭಾಷಾ ಬಳಕೆಯ ಪ್ರಗತಿಯನ್ನು ಪರಿಶೀಲಿಸಿ ರಾಷ್ಟ್ರಪತಿಗಳಿಗೆ ವರದಿ ಸಲ್ಲಿಸುವುದು ಈ ಸಮಿತಿಯ ಕರ್ತವ್ಯ. ಈ ಕಾಯ್ದೆಯ ಅನುಸಾರ ʼಈ ವರದಿಯ ಶಿಫಾರಸುಗಳಿಗೆ ಅನುಗುಣವಾಗಿ ಇಡಿಯಾಗಿ ಅಥವಾ ಭಾಗಶಃ ಅನುಸರಿಸುವಂತೆʼ ನಿರ್ದೇಶನ ನೀಡುವುದು ರಾಷ್ಟ್ರಪತಿಗಳ ಕರ್ತವ್ಯವಾಗಿರುತ್ತದೆ. (ಸೆಕ್ಷನ್ 4(4)) ಹಾಗಾಗಿ ಈ ಸಮಿತಿಯ ಶಿಫಾರಸುಗಳ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿರುವುದು ಸ್ಪಷ್ಟವಾಗಿ ಕಾಣುತ್ತದೆ. ಒಕ್ಕೂಟಕ್ಕೆ ಒಂದೇ ಅಧಿಕೃತ ಭಾಷೆ ಇರಬೇಕು ಎನ್ನುವ ಆಲೋಚನೆ ಸ್ವಾತಂತ್ರ್ಯ ಸಂಗ್ರಾಮದ ಉತ್ಪನ್ನವಾಗಿದ್ದು ಆಗ ಹಿಂದಿ ಮತ್ತು ಉರ್ದು ಮಿಶ್ರಿತ ಹಿಂದುಸ್ತಾನಿ ಭಾಷೆಯನ್ನು ಪ್ರೋತ್ಸಾಹಿಸಲಾಯಿತು. ತದನಂತರ, ಸಂವಿಧಾವನ್ನು ರಚಿಸಿದಾಗ, ಹಿಂದುಸ್ತಾನಿಯ ಆಲೋಚನೆಯನ್ನು ಕೈಬಿಡಲಾಯಿತು ಬದಲಾಗಿ ದೇವನಾಗರಿ ಲಿಪಿಯ ಹಿಂದಿ ಭಾಷೆಯನ್ನು ಏಕೈಕ ಅಧಿಕೃತ ಭಾಷೆಯಾಗಿ ಅಂಗೀಕರಿಸಲಾಯಿತು.
ಎರಡು ಪ್ರಧಾನ ಭಾಷಾ ಗುಂಪುಗಳಿರುವ ಒಂದು ದೇಶದಲ್ಲಿ ಒಂದೇ ಅಧಿಕೃತ ಭಾಷೆಯ ಆಲೋಚನೆಯು ಜನತೆಯ ಐಕ್ಯತೆಯನ್ನು ಸಾಧಿಸಲು ನೆರವಾಗುವುದಿಲ್ಲ. ಕಾಲಾನುಕ್ರಮದಲ್ಲಿ ಇದು ತೀವ್ರತೆರನಾದ ಅಸಮತೋಲನಗಳಿಗೆ ಎಡೆಮಾಡಿಕೊಡಲಿದ್ದು ಅಖಿಲ ಭಾರತ ಸೇವೆಗಳಲ್ಲಿ ಪ್ರಾದೇಶಿಕ ಪ್ರಾತಿನಿಧ್ಯಕ್ಕೂ ಧಕ್ಕೆ ಉಂಟುಮಾಡುವ ಸಾಧ್ಯತೆಗಳಿರುತ್ತವೆ. ಅಷ್ಟೇ ಅಲ್ಲದೆ ಒಕ್ಕೂಟ ಸರ್ಕಾರದ ಸಿಬ್ಬಂದಿಯ ರಚನೆಯಲ್ಲೂ ವ್ಯತ್ಯಯಗಳನ್ನುಂಟುಮಾಡುತ್ತದೆ. ವಿಶೇಷಷವಾಗಿ ದ್ರಾವಿಡ ರಾಜ್ಯಗಳೆಂದೇ ಕರೆಯಲ್ಪಡುವ ದಕ್ಷಿಣದ ರಾಜ್ಯಗಳಲ್ಲಿ ಭಾಷೆ ಭಾವನಾತ್ಮಕವಷ್ಟೇ ಅಲ್ಲದೆ ರಾಜಕೀಯ ಸ್ವರೂಪವನ್ನೂ ಪಡೆದುಕೊಳ್ಳುತ್ತದೆ. ಸ್ವಾತಂತ್ರ್ಯಪೂರ್ವದ ಜಸ್ಟಿಸ್ ಪಾರ್ಟಿಯ ದಿನಗಳಿಂದಲೇ ತಮಿಳುನಾಡು ಶಾಲಾ ಕಾಲೇಜುಗಳಲ್ಲಿ ಭಾಷಾ ಬೋಧನೆಯನ್ನು ಆತ್ಮ ಗೌರವ, ಸಾಮಾಜಿಕ ನ್ಯಾಯ ಮತ್ತು ಸಮಾನ ಅವಕಾಶಗಳ ತಾತ್ವಿಕ ನೆಲೆಯಲ್ಲಿ ನಿರ್ವಚಿಸುತ್ತಾ ಬಂದಿದೆ.

ಭಾಷೆ ಬಳಕೆ ಮತ್ತು ಕಲಿಕೆಯ ಆಯಾಮಗಳು
ಈ ನೀತಿಯ ಫಲವಾಗಿಯೇ ತಮಿಳುನಾಡು ಸರ್ಕಾರಗಳು, ಪಕ್ಷಾತೀತವಾಗಿ ಶಿಕ್ಷಣದಲ್ಲಿ ದ್ವಿಭಾಷಾ ಸೂತ್ರವನ್ನು ಅನುಸರಿಸುತ್ತಾ ಬಂದಿವೆ. ತಮ್ಮ ಮಾತೃಭಾಷೆಯಾದ ತಮಿಳು, ಜಾಗತಿಕ ಸಂಪರ್ಕ ಭಾಷೆಯಾದ ಇಂಗ್ಲಿಷ್ ಈ ಎರಡೇ ಭಾಷೆಗಳನ್ನು ಅಧಿಕೃತವಾಗಿ ಅಳವಡಿಸಿಕೊಂಡು ಬರಲಾಗಿದೆ. ಈ ನೀತಿಯ ಸಕಾರಾತ್ಮಕ ಪರಿಣಾಮಗಳನ್ನೂ ಗುರುತಿಸಬೇಕಿದೆ. ತಮಿಳುನಾಡಿನಲ್ಲಿ ಶಾಲಾ ದಾಖಲಾತಿಯ ಪ್ರಮಾಣ ಶೇಕಡಾ 47ರಷ್ಟಿದ್ದು, ರಾಷ್ಟ್ರೀಯ ಸರಾಸರಿ (ಶೇಕಡಾ 28.4)ಗಿಂತಲೂ ಹೆಚ್ಚಾಗಿದೆ. ದೇಶದಲ್ಲೇ ಮೊದಲ ಸ್ಥಾನವನ್ನೂ ಪಡೆದಿದೆ. ಆದರೆ ತಮಿಳುನಾಡು ಸರ್ಕಾರದ ಈ ಭಾಷಾ ನೀತಿ ಕೇವಲ ರಾಜ್ಯ ಸರ್ಕಾರ ರೂಪಿಸುವ ಶಾಲಾ ಪಠ್ಯಕ್ರಮಕ್ಕೆ ಸೀಮಿತವಾಗಿದ್ದು, ಉಳಿದಂತೆ ಶೈಕ್ಷಣಿಕ ವಲಯದಲ್ಲಿ ಭಾಷಾ ಕಲಿಕೆಯನ್ನು ಐಚ್ಛಿಕ ವಿಷಯವನ್ನಾಗಿ ಪರಿಗಣಿಸಲಾಗುತ್ತದೆ. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಸಂಸ್ಥೆಯ ಮುಖ್ಯ ಕಚೇರಿಯೂ ಚೆನ್ನೈನಲ್ಲಿರುವುದು ವಿಶೇಷ.
ಆದರೆ ತಮಿಳುನಾಡು ಸರ್ಕಾರ ತನ್ನ ಶಾಲಾ ಪಠ್ಯಕ್ರಮದಲ್ಲಿ ದ್ವಿಭಾಷಾ ನೀತಿಯನ್ನು ಕಡ್ಡಾಯವಾಗಿ ಅನುಸರಿಸುತ್ತಿದೆ. ಈ ಹಿನ್ನೆಲೆಯಲ್ಲೇ ಕೇಂದ್ರ ಬಿಜೆಪಿ ಸರ್ಕಾರ 2020ರಲ್ಲಿ ಜಾರಿಗೊಳಿಸಿದ ಹೊಸ ಶಿಕ್ಷಣ ನೀತಿ (ಎನ್‌ಇಪಿ)ಯನ್ನು ಎಲ್ಲ ರಾಜ್ಯಗಳಲ್ಲೂ ಅಳವಡಿಸುವ ಮೂಲಕ, ಪರೋಕ್ಷವಾಗಿ ಹಿಂದಿ ಹೇರಿಕೆ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ. ಎನ್‌ಇಪಿ ಅನುಸಾರ ರಾಜ್ಯಗಳು ಕಡ್ಡಾಯವಾಗಿ ಹೊಸ ನೀತಿಯನ್ನು ಅಳವಡಿಸುವ ಮೂಲಕ ತ್ರಿಭಾಷಾ ಸೂತ್ರವನ್ನು ಕಟ್ಟುನಿಟ್ಟಾಗಿ ಅಳವಡಿಸುವಂತೆ ಕೇಂದ್ರ ಸರ್ಕಾರ ಒತ್ತಾಯಿಸುತ್ತಿದೆ. ತಮಿಳುನಾಡು ಸರ್ಕಾರ ತನ್ನ ಭಾಷಾ ನೀತಿಯನ್ನು ತಿದ್ದುಪಡಿ ಮಾಡಲು ನಿರಾಕರಿಸಿರುವ ಕಾರಣ, ರಾಜ್ಯಕ್ಕೆ ಸಮಗ್ರ ಶಿಕ್ಷಾ ಅಭಿಯಾನದ 2,152 ಕೋಟಿ ರೂಗಳ ಅನುದಾನವನ್ನು ತಡೆಹಿಡಿದಿದೆ. ಕೇಂದ್ರ ಸರ್ಕಾರದ ಈ ಅಸಾಂವಿಧಾನಿಕ ನೀತಿಯನ್ನು ತಮಿಳುನಾಡು ಮತ್ತು ದಕ್ಷಿಣದ ಎಲ್ಲ ರಾಜ್ಯಗಳೂ ವಿರೋಧಿಸಿವೆ.

1968ರ ಮತ್ತು 2020ರ ಹೊಸ ಶಿಕ್ಷಣ ನೀತಿಗಳ ಮೂಲ ಉದ್ದೇಶ ದೇಶಾದ್ಯಂತ ಬಹುಭಾಷಿಕ ಶಿಕ್ಷಣವನ್ನು ಉತ್ತೇಜಿಸುವುದೇ ಆಗಿದೆ. ಆದರೆ 2011ರ ಜನಗಣತಿಯ ಪ್ರಕಾರ ( ತದನಂತರ ಜನಗಣತಿ ನಡೆದಿಲ್ಲ) ಭಾರತದ ಭಾಷಾ ವೈವಿಧ್ಯತೆಯ ಹೊರತಾಗಿಯೂ ಕೇವಲ ಎಂಟು ರಾಜ್ಯಗಲ್ಲಿ ಶೇಕಡಾ 50ಕ್ಕಿಂತಲೂ ಹೆಚ್ಚು ಜನರು ಎರಡೇ ಭಾಷೆಗಳನ್ನು ಮಾತನಾಡುತ್ತಾರೆ. ರಾಷ್ಟ್ರಮಟ್ಟದಲ್ಲಿ ಶೇಕಡಾ 26.02ರಷ್ಟು ಜನರು ದ್ವಿಭಾಷಿಕರು, ಶೇಕಡಾ 7.1ರಷ್ಟು ತ್ರಿಭಾಷಿಕರೂ ಆಗಿದ್ದಾರೆ. 2001ರ ಜನಗಣತಿಗೆ ಹೋಲಿಸಿದರೆ ದ್ವಿಭಾಷಿಕರ ಸಂಖ್ಯೆ ಶೇಕಡಾ 1.23ರಷ್ಟು ಹೆಚ್ಚಾಗಿದ್ದರೆ, ತ್ರಿಭಾಷಾ ಬಳಕೆ ಶೇಕಡಾ 8.51ರಷ್ಟು ಕುಸಿದಿದೆ. 2011ರ ಮಾಹಿತಿಯ ಅನುಸಾರ, 10 ರಲ್ಲಿ 8 ಭಾಷಾ ಸಂಯೋಜನೆಗಳು ( Language Combinations) ಹಿಂದಿ ಭಾಷೆಯನ್ನು ಒಳಗೊಂಡಿವೆ.
ದ್ವಿಭಾಷಾ ಸಂಯೋಜನೆಯನ್ನು ಅಳವಡಿಸಿರುವ ರಾಜ್ಯಗಳ ಪೈಕಿ ಮರಾಠಿ-ಹಿಂದಿ ಮಾತನಾಡುವವರು 3.47 ಕೋಟಿ, ಹಿಂದಿ-ಇಂಗ್ಲಿಷ್ 3.2 ಕೋಟಿ, ಗುಜರಾತಿ-ಹಿಂದಿ 2.17, ಉರ್ದು-ಹಿಂದಿ 1.86, ಪಂಜಾಬಿ-ಹಿಂದಿ 1.55 ಕೋಟಿ ದ್ವಿಭಾಷಿಕ ಜನರನ್ನು ದಾಖಲಿಸಲಾಗಿದೆ. 2011ರ ಮಾಹಿತಿಯ ಅನುಸಾರವೇ ತ್ರಿಭಾಷಾ ಬಳಕೆಯ ಪ್ರಮಾಣ ನೋಡಿದಾಗ ಮರಾಠಿ-ಹಿಂದಿ-ಇಂಗ್ಲಿಷ್ 1.01 ಕೋಟಿ, ಪಂಜಾಬಿ-ಹಿಂದಿ-ಇಂಗ್ಲಿಷ್ 77.99 ಲಕ್ಷ, ಗುಜರಾತಿ-ಹಿಂದಿ-ಇಂಗ್ಲಿಷ್ 66.32 ಜನರನ್ನು ದಾಖಲಿಸಲಾಗಿದೆ. 2011ರ ಜನಗಣತಿಯಲ್ಲಿ ದಾಖಲಿಸಿರುವಂತೆ ಶೇಕಡಾ 43.63ರಷ್ಟು ಭಾರತೀಯರು ಹಿಂದಿ ಭಾಷೆಯನ್ನು ಮಾತೃಭಾಷೆ ಎಂದು ಪರಿಗಣಿಸುತ್ತಾರೆ. ಆದರೆ ತಮಿಳುನಾಡು, ಕೇರಳ ಮತ್ತು ಐದು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಪ್ರಮಾಣ ಶೇಕಡಾ 5ಕ್ಕಿಂತಲೂ ಕಡಿಮೆ ಇದೆ.

,,,,,, ಮುಂದವರೆಯುತ್ತದೆ,,,,,