ಭಾರತ ರಾಜಕೀಯ ಇತಿಹಾಸದಲ್ಲಿ ದೀರ್ಘಕಾಲದ ವಿವಾದಾಸ್ಪದ ವಿಷಯವಾಗಿದ್ದ ಅಯೋಧ್ಯೆ ರಾಮಮಂದಿರ ನಿರ್ಮಾಣ, ನ್ಯಾಯಾಲಯದಲ್ಲಿ ತನ್ನ ಪರವಾಗಿ ತೀರ್ಪು ಬಂದ ಬಳಿಕವೂ ವಿವಾದಗಳಿಂದ ಹೊರತಾಗಿಲ್ಲ. ಬಿಜೆಪಿಯ ರಾಜಕೀಯ ಮಹತ್ವಾಕಾಂಕ್ಷೆಗೆ ನೆರವಾದ ಅಯೋಧ್ಯೆಯಲ್ಲೀಗ ಲ್ಯಾಂಡ್ ಮಾಫಿಯಾದ ನೆರಳು ನಿಚ್ಚಳವಾಗಿ ಕಂಡು ಬರುತ್ತಿದೆ. 2 ಕೋಟಿ ರುಪಾಯಿಗಳಿಗೆ ಖರೀದಿಸಲಾದ ಜಮೀನನ್ನು ಕೇವಲ ನಿಮಿಷಗಳೊಳಗೆ 18.5 ಕೋಟಿ ರುಪಾಯಿಗಳಿಗೆ ರಾಮಮಂದಿರ ನಿರ್ಮಾಣ ಟ್ರಸ್ಟ್ ಖರೀದಿಸಿದೆ ಎಂಬ ಆರೋಪ ಟ್ರಸ್ಟ್ ವಿರುದ್ಧ ಕೇಳಿ ಬಂದಿದೆ.
ಈ ವರ್ಷದ ಮಾರ್ಚ್‌ನಲ್ಲಿ ಈ ವ್ಯವಹಾರ ನಡೆದಿದೆ ಎಂದು ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಆಮ್ ಆದ್ಮಿ ಪಕ್ಷ (ಎಎಪಿ) ಹೇಳಿಕೊಂಡಿದೆ. ಇದರಲ್ಲಿ ಇಬ್ಬರು ರಿಯಲ್ ಎಸ್ಟೇಟ್ ವಿತರಕರು ಒಬ್ಬ ವ್ಯಕ್ತಿಯಿಂದ ₹ 2 ಕೋಟಿಗೆ ಆಸ್ತಿಯನ್ನು ಖರೀದಿಸಿ ಅದನ್ನು ಕೆಲವೇ ನಿಮಿಷಗಳ ಅಂತರದಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ಗೆ ₹ 18.5 ಕೋಟಿಗೆ ಮಾರಾಟ ಮಾಡಿದ್ದಾರೆ ಎಂದು ಆಮ್ ಆದ್ಮಿ(AAP) ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ ಸಿಂಗ್ ಮತ್ತು ಸಮಾಜವಾದಿ ಪಕ್ಷ(SP)ದ ಮಾಜಿ ಶಾಸಕ ಪವನ್ ಪಾಂಡೆ ಪ್ರತ್ಯೇಕ ಪತ್ರಿಕಾಗೋಷ್ಠಿಗಳಲ್ಲಿ ಆರೋಪಿಸಿದ್ದಾರೆ.
ಮುಂದಿನ ವರ್ಷ ಉತ್ತರಪ್ರದೇಶ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಹಗರಣದ ವಿವಾದವು ಸಾಕಷ್ಟು ಮಹತ್ವದ್ದಾಗಿ ಮಾರ್ಪಡಲಿದೆ ಎನ್ನಲಾಗಿದೆ.
ಸುಪ್ರೀಂ ಕೋರ್ಟ್ ತೀರ್ಪಿನ ಆಧಾರದ ಮೇಲೆ ದೇವಾಲಯದ ನಿರ್ಮಾಣದ ಮೇಲ್ವಿಚಾರಣೆ ಮತ್ತು ನಿರ್ವಹಣೆಗೆ 2020 ರ ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಅನ್ನು ಸ್ಥಾಪಿಸಿತ್ತು. ಟ್ರಸ್ಟ್‌ನ 15 ಮಂದಿ ಸದಸ್ಯರಲ್ಲಿ 12 ಮಂದಿಯನ್ನು ಕೇಂದ್ರ ಸರ್ಕಾರವೇ ಶಿಫಾರಸು ಮಾಡಿತ್ತು. ಈ ಟ್ರಸ್ಟ್‌ನ ವಿರುದ್ಧವೇ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಪ್ರತಿಪಕ್ಷಗಳು ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದೆ.
ಸ್ಥಳೀಯ ಬಿಜೆಪಿ ಮುಖಂಡರು ಮತ್ತು ಕೆಲವು ಟ್ರಸ್ಟ್ ಸದಸ್ಯರ ಸಹಕಾರದೊಂದಿಗೆ ಈ ವಂಚನೆಯ ಭೂ ವ್ಯವಹಾರ ನಡೆದಿದೆ ಎಂದು ಸಮಾಜವಾದಿ ಪಕ್ಷದ ಮಾಜಿ ಶಾಸಕ ಮತ್ತು ಮಾಜಿ ಸಚಿವ ಪವನ್ ಪಾಂಡೆ ಭಾನುವಾರ ಅಯೋಧ್ಯೆಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ರಾಮ್ ಜನಮಭೂಮಿ ಜಮೀನಿನ ಪಕ್ಕದಲ್ಲಿರುವ ಆಸ್ತಿಯನ್ನು ಬಹು-ಪಟ್ಟು ಮೊತ್ತ ಕೊಟ್ಟು ವ್ಯಾಪಾರ ಮಾಡಲಾಗಿದೆ ಎಂದು ಸಾಬೀತುಪಡಿಸುವ ಕೆಲವು ದಾಖಲೆಗಳನ್ನು ಅವರು ಬಹಿರಂಗಪಡಿಸಿದ್ದಾರೆ.
ಸಂಜಯ್ ಸಿಂಗ್ ಹಾಗೂ ಪವನ್ ಪಾಂಡೆ ಪ್ರತ್ಯೇಕ ಪತ್ರಿಕಾಗೋಷ್ಟಿಯಲ್ಲಿ ಬಹಿರಂಗಪಡಿಸಿದ ದಾಖಲೆಗಳಲ್ಲಿ ಟ್ರಸ್ಟ್‌ನ ಮುಖ್ಯಸ್ಥ ಚಂಪತ್ ರಾಯ್ ನೇತೃತ್ವದಲ್ಲಿ ಈ ವ್ಯವಹಾರ ಕುದುರಿದೆ ಎನ್ನುವುದು ಸ್ಪಷ್ಟವಾಗಿದೆ. ಟ್ರಸ್ಟ್‌ನ ಸದಸ್ಯ ಅನಿಲ್ ಕುಮಾರ್ ಮಿಶ್ರಾ ಮತ್ತು ಅಯೋಧ್ಯೆಯ ಮೇಯರ್ ರಿಷಿಕೇಶ್ ಉಪಾಧ್ಯಾಯ ಎರಡೂ ಒಪ್ಪಂದಗಳಲ್ಲಿ ಸಾಮಾನ್ಯ ಸಾಕ್ಷಿಯಾಗಿದ್ದಾರೆ.

ಒಂದೇ ದಿನ, ಒಂದೇ ಜಮೀನು – ಎರಡು ಬಾರಿ ಮಾರಾಟ
ಮಾರ್ಚ್ 18, 2021 ರ ಸಂಜೆ 7 ಗಂಟೆ 10 ನಿಮಿಷ ಎಂದು ಅಧಿಕೃತವಾಗಿ ದಾಖಲಿಸಲಾದ ಸ್ಟಾಂಪ್ ಪೇಪರ್‌ನ ಪ್ರಕಾರ, ಅಯೋಧ್ಯೆಯ ಕುಸುಮ್ ಪಾಠಕ್ ಮತ್ತು ಹರೀಶ್ ಪಾಠಕ್ ಎನ್ನುವವರಿಂದ ರವಿ ಮೋಹನ್ ತಿವಾರಿ ಮತ್ತು ಸುಲ್ತಾನ್ ಅನ್ಸಾರಿ ಎಂಬಿಬ್ಬರು 1.20 ಹೆಕ್ಟೇರ್ ಪ್ರದೇಶದಲ್ಲಿ ಹರಡಿರುವ ಈ ಆಸ್ತಿಯನ್ನು ಖರೀದಿ ಮಾಡುತ್ತಾರೆ. ಈ ಆಸ್ತಿಯ ಮೌಲ್ಯವನ್ನು ಸರ್ಕಾರ ನಿಗದಿಪಡಿಸಿದ ಪ್ರತಿ ಯೂನಿಟ್ ಪ್ರದೇಶದ ದರಕ್ಕೆ ಅನುಗುಣವಾಗಿ 5.79 ಕೋಟಿ ರೂ ಎಂದು ಪಟ್ಟಿ ಮಾಡಲಾಗಿದೆ. ಆದರೆ ಅಂತಿಮವಾಗಿ ಆಸ್ತಿಯ ಮಾರಾಟದ ಬೆಲೆ ಕೇವಲ 2 ಕೋಟಿ ರೂ. ಈ ಮಾರಾಟಕ್ಕಾಗಿ ಪಾವತಿಸಿದ ಸ್ಟಾಂಪ್ ಡ್ಯೂಟಿ ಇದನ್ನು ಪುಷ್ಟೀಕರಿಸುತ್ತದೆ.
ಅದೇ ದಿನ, ಅಂದರೆ ಮಾರ್ಚ್ 18 ರ ಸಂಜೆ 7:15 ಕ್ಕೆ ಎರಡನೇ ವ್ಯವಹಾರ ನಡೆದಿದ್ದು, ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಇದೇ ಆಸ್ತಿಯನ್ನು ಸುಲ್ತಾನ್ ಅನ್ಸಾರಿ ಮತ್ತು ರವಿಮೋಹನ್ ತಿವಾರಿಯಿಂದಖರೀದಿಸಿದೆ. ಸುಲ್ತಾನ್ ಅನ್ಸಾರಿ ಮತ್ತು ರವಿಮೋಹನ್ ತಿವಾರಿಗೆ ಮಾರಾಟವಾದ ಐದೇ ನಿಮಿಷದಲ್ಲಿ ಈ ಖರೀದಿ ನಡೆದಿದೆ. ಖರೀದಿಗೆ ಪಾವತಿಸಿದ ಸ್ಟಾಂಪ್ ಡ್ಯೂಟಿ 1.29 ಕೋಟಿ ರೂ. ಭೂಮಿಯನ್ನು 18.50 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ.

ಕೆಲವೇ ನಿಮಿಷಗಳ ಅಂತರದಲ್ಲಿ 9 ಪಟ್ಟು ಹೆಚ್ಚಿದ ಆಸ್ತಿಮೌಲ್ಯ!
“ಒಂದು ಆಸ್ತಿಯ ಮೌಲ್ಯವನ್ನು ಐದು ನಿಮಿಷಗಳಲ್ಲಿ 2 ಕೋಟಿಯಿಂದ 18 ಕೋಟಿ ರೂ.ಗೆ ಏರಿದ್ದನ್ನು ಹಗರಣ ಎನ್ನದೇ ಇರಲಾಗುತ್ತಾ? ಪ್ರತಿ ಸೆಕೆಂಡ್‍ಗೆ 5 ಲಕ್ಷ ರೂ ದರದಂತೆ ಆಸ್ಯಿಯ ಮೌಲ್ಯ ಹೆಚ್ಚಾಗಿದ್ದು ಭಾರತದ ಇತಿಹಾಸದಲ್ಲೇ ಮೊದಲು. ಜಾರಿ ನಿರ್ದೇಶನಾಲಯ ಮತ್ತು ಕೇಂದ್ರ ತನಿಖಾ ದಳ ಇದನ್ನು ಪರಿಶೀಲಿಸಬೇಕು. ಟ್ರಸ್ಟ್ ಹಿಂದೂ ಭಕ್ತರ ಹಣವನ್ನು ತಿಂದು ಹಾಕುತ್ತಿದೆ” ಎಂದು ಸಂಜಯ್‍ಸಿಂಗ್ ಆರೋಪಿಸಿದ್ದಾರೆ.
“ಟ್ರಸ್ಟ್ ಮತ್ತು ಮೇಯರ್ ಈ ವಂಚನೆಯ ಬಗ್ಗೆ ಸಂಪೂರ್ಣವಾಗಿ ತಿಳಿದಿದ್ದರು. ಕೋಟ್ಯಂತರ ಹಿಂದೂಗಳುಮಂದಿರಕ್ಕಾಗಿ ಬೆವರಿನ ಶ್ರಮದ ದುಡ್ಡು ನೀಡಿದ್ದಾರೆ. ಆದರೆ ಬಿಜೆಪಿ ಬೆಂಬಲಿತ ಕೆಲವು ವ್ಯಕ್ತಿಗಳು ಮತ್ತು ಟ್ಟಸ್ಟ್ ಸದಸ್ಯರು ಲೂಟಿ ನಡೆಸುತ್ತಿದ್ದಾರೆ, ಆ ಮೂಲಕ ಸಮಸ್ತ ಭಾರತೀಯರ ನಂಬಿಕೆಗಳಿಗೆ ಘಾಸಿ ಮಾಡುತ್ತಿದ್ದಾರೆ” ಎಂದು ಆರೋಪ ಮಾಡಿದ್ದಾರೆ.

ಆರೋಪ ನಿರಾಕರಿಸಿದ ಚಂಪತ್ ರೈ
ವಿಹೆಚ್‌ಪಿ ಮುಖಂಡರೂ ಆಗಿರುವ ಟ್ರಸ್ಟ್ ಕಾರ್ಯದರ್ಶಿಯೂ ಚಂಪತ್ ರೈ ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪಗಳನ್ನು ನಿರಾಕರಿಸಿದ್ದಾರೆ. ಆ ಸಮಯದಲ್ಲಿ ಅನ್ವಯವಾಗುವ ಬೆಲೆಗೆ ಆಸ್ತಿಯ ಮೂಲ ಖರೀದಿದಾರರು ವರ್ಷಗಳ ಹಿಂದೆ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಕಳೆದ ಮಾರ್ಚ್‌ನಲ್ಲಿ ಅದನ್ನು ಔಪಚಾರಿಕಗೊಳಿಸಿದ್ದಾರೆ. ಮತ್ತು ನಂತರ ಆಸ್ತಿಯನ್ನು ಪ್ರಸ್ತುತ ಮಾರುಕಟ್ಟೆ ಬೆಲೆಗೆ ದೇವಾಲಯದ ಟ್ರಸ್ಟ್‌ಗೆ ಮಾರಾಟ ಮಾಡಿದ್ದಾರೆ ಎಂದಿದ್ದಾರೆ.
ನಮ್ಮ ವಿರುದ್ಧ ಶತಮಾನಗಳಿಂದಲೂ ಇಂತಹ ಆರೋಪಗಳನ್ನು ಮಾಡಲಾಗುತ್ತಿದೆ. ಮಹಾತ್ಮಾ ಗಾಂಧಿಜಿಯವರ ಹತ್ಯೆಯಲ್ಲೂ ನಮ್ಮ ವಿರುದ್ಧ ಆರೋಪಗಳನ್ನು ನಡೆಸಲಾಯಿತು. ನಾವು ಇಂತಹ ಆರೋಪಗಳಿಗೆ ಬಗ್ಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಅದಾಗ್ಯೂ, 9 ಪಟ್ಟು ಹೆಚ್ಚಳವಾದ ಆಸ್ತಿಮೌಲ್ಯದ ಕುರಿತು ಸಮಂಜಸವಾದ ಸಮಜಾಯಿಷಿಯನ್ನು ಚಂಪತ್ ರೈ ನೀಡಿಲ್ಲ.