ವರ್ಗಾವಣೆ ತಡೆಗೆ ವಿಫಲ ಯತ್ನ ನಡೆಸಿ ನಿರಾಶರಾದ ರೋಹಿಣಿ ಸಿಂಧೂರಿ

ಸಾಂಸ್ಕೃತಿಕ ನಗರಿಯಲ್ಲಿ ಇಬ್ಬರು ಐಏಎಸ್‌ ಅಧಿಕಾರಿಗಳ ನಡುವೆ ನಡೆದಿದ್ದ ತಿಕ್ಕಾಟವು ಇಬ್ಬರ ವರ್ಗಾವಣೆಯಲ್ಲಿ ಕೊನೆಗೊಂಡಿದೆ. ಪರಸ್ಪರ ಕೆಸರೆರಚಾಟದ ಮೂಲಕ ರಾಜ್ಯದ ಗಮನ ಸೆಳೆದ ಇಬ್ಬರೂ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡಿದ್ದು, ಆ ಮೂಲಕ ಇಬ್ಬರ ನಡುವಿನ ಸಂಘರ್ಷವನ್ನು ಶಮನಗೊಳಿಸುವ ಪ್ರಯತ್ನ ಮಾಡಿದೆ.

ಕಳೆದ ಕೆಲವು ದಿನಗಳಿಂದ ಸಂಘರ್ಷದಲ್ಲಿದ್ದ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ರೋಹಿಣಿ ಸಿಂಧೂರಿ ಅವರನ್ನು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಾಗಿ ಹಾಗೂ ಶಿಲ್ಪಾ ನಾಗ್ ಅವರನ್ನು ಆರ್ಡಿಪಿಆರ್ ನಿರ್ದೇಶಕರಾಗಿ ವರ್ಗಾವಣೆ ಮಾಡುವ ಮೂಲಕ ಸರ್ಕಾರ ಒಟ್ಟು ಆರು ಐಎಎಸ್ ಅಧಿಕಾರಿಗಳನ್ನು ಟ್ರಾನ್ಸ್ಫರ್ ಮಾಡಿದೆ. ಮೈಸೂರಿನ ನೂತನ ಜಿಲ್ಲಾಧಿಕಾರಿಯಾಗಿ ಡಾ. ಬಗಾದಿ ಗೌತಮ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾಗಿ ಲಕ್ಷ್ಮೀಕಾಂತ್ ರೆಡ್ಡಿ ವರ್ಗಾವಣೆಗೊಂಡಿದ್ದಾರೆ. ಡಾ. ಬಗಾದಿ ಗೌತಮ್ ಇದಕ್ಕೂ ಮೊದಲು ವಾಣಿಜ್ಯ ತೆರಿಗೆ ಹೆಚ್ಚುವರಿ ಆಯುಕ್ತರಾಗಿ ಹಾಗೂ ಲಕ್ಷ್ಮೀಕಾಂತ್ ರೆಡ್ಡಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.

ಆದರೆ ಭಾನುವಾರವಾದ ಇಂದು ಕೂಡ ಡಿಸಿ ರೋಹಿಣಿ ಅವರು ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರನ್ನು ಅವರ ಕಾವೇರಿ ನಿವಾಸದಲ್ಲೇ ಭೇಟಿ ಮಾಡಿ ಅರ್ಧ ಘಂಟೆಗಳ ಕಾಲ ಚರ್ಚೆ ನಡೆಸಿದರು. ಮೂಲಗಳ ಪ್ರಕಾರ ರೋಹಿಣಿ ಅವರು ವರ್ಗಾವಣೆ ಆದೇಶ ತಡೆ ಕೋರಿ ಸಿಎಂ ಬಳಿ ಮನವಿ ಮಾಡಿರುವ ಬಗ್ಗೆ ತಿಳಿದುಬಂದಿದೆ. ಮೈಸೂರಿನಲ್ಲಿ ತಮ್ಮ ವಿರುದ್ಧ ಷಡ್ಯಂತ್ರ ನಡೆದಿದೆ ಎಂಬ ಬಗ್ಗೆ ಸಿಎಂ ಬಳಿ ಸಿಂಧೂರಿ ಹೇಳಿಕೊಂಡಿದ್ದಾರೆಂದು ಮೂಲಗಳಿಂದ ತಿಳಿದುಬಂದಿದ್ದು, ವರ್ಗಾವಣೆ ಆದೇಶ ಪುನರ್ ಪರಿಶೀಲಿಸುವಂತೆ ಮನವಿ ಮಾಡಿದ್ದಾರೆನ್ನಲಾಗಿದೆ.

ರೋಹಿಣಿ ಸಿಂಧೂರಿ ಅವರು ಮೈಸೂರು ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಆದಾಗಿನಿಂದ ಜಿಲ್ಲೆಯ ಜನಪ್ರತಿನಿಧಿಗಳು ನಿರಂತರವಾಗಿ ಅವರ ವಿರುದ್ಧ ಕಿಡಿಕಾರುತ್ತಲೇ ಬಂದಿದ್ದರು. ಎಲ್ಲ ಪಕ್ಷದ ನಾಯಕರುಗಳು ಪಕ್ಷಾತೀತವಾಗಿ ಸಿಂಧೂರಿ ಅವರನ್ನು ಟೀಕಿಸಿದ್ದರು. ಇದರ ನಡುವೆ ಭೂಮಾಪಿಯಗೆ ಸಂಬಂಧಿಸಿದ ಕಡತಗಳನ್ನು ಸಿಂಧೂರಿ ಕೈಗೆತ್ತಿಕೊಂಡಾಗ ಅವರ ವಿರುದ್ಧ ರಾಜಕೀಯ ನಾಯಕರ ದಾಳಿ ಇನ್ನಷ್ಟು ತೀವ್ರವಾಯಿತು ಎಂದು ಹೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಇದನ್ನು ಕೇಳಿಸಿಕೊಂಡ ಯಡಿಯೂರಪ್ಪ ಅವರು ವರ್ಗಾವಣೆ ತಡೆಗೆ ಸ್ಪಷ್ಟವಾಗೇ ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ.

ತಮ್ಮ ವಿರುದ್ದ ಮನೆಯಲ್ಲಿಯೇ ಈಜುಗೊಳ ನಿರ್ಮಿಸುತ್ತಿರುವ ಕುರಿತು ರಾಜಕೀಯ ನಾಯಕರ ತೀವ್ರ ವಾಗ್ದಾಳಿಗೂ ಕಾರಣವಾಗಿದ್ದ ವಿಚಾರದ ಕುರಿತು ರೋಹಿಣಿ ಅವರು ಇಂದು ತನಿಖಾಧಿಕಾರಿ ಮೈಸೂರಿನ ವಿಭಾಗೀಯ ಕಮಿಷನರ್‌ ಅವರಿಗೆ ಲಿಖಿತ ಉತ್ತರ ನೀಡಿದ್ದು ಈ ಈಜುಗೊಳ ನಿರ್ಮಾಣವು 5 ವರ್ಷ ಹಳೆಯ ಯೋಜನೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಈಜುಗೊಳ ನಿರ್ಮಾಣಕ್ಕಾಗಿ ತಾವು ಹಣ ವೆಚ್ಚ ಮಾಡಿಲ್ಲವೆಂದೂ ಅದನ್ನು ನಿರ್ಮಿತಿ ಕೇಂದ್ರವೇ ಕಡಿಮೆ ವೆಚ್ಚದ ನಿರ್ಮಾಣದ ಪ್ರಾಯೋಗಿಕವಾಗಿ ನಿರ್ಮಾಣ ಮಾಡಿದೆ ಎಂದೂ ಇದಕ್ಕೆ 28.72 ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ ಎಂದೂ ತಿಳಿಸಿದ್ದಾರೆ. ಈ ರೀತಿಯ ಕಡಿಮೆ ವೆಚ್ಚದ ಈಜುಗೊಳಗಳನ್ನು ಇತರ ತಾಲ್ಲೂಕು ಮತ್ತು ಜಿಲ್ಲೆಯಲ್ಲಿಯೂ ನಿರ್ಮಿಸಲು ನಿರ್ಮಿತಿ ಕೇಂದ್ರವು ನಿರ್ಮಿಸಲು ಮುಂದಾಗಿದೆ ಎಂದೂ , ಅದಕ್ಕೆ ಪೂರ್ವ ಭಾವಿಯಾಗಿ ಈ ಕೊಳ ನಿರ್ಮಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ. ಇನ್ನು ಪಾರಂಪರಿಕ ಕಟ್ಟಡಕ್ಕೆ ಧಕ್ಕೆ ಆಗಿರುವ ಕುರಿತು ಸ್ಪಷ್ಟನೆ ನೀಡಿರುವ ಅವರು ನಿವಾಸವು 5.15 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿದ್ದು ಒಂದು ಭಾಗದಲ್ಲಿ ಈಜುಗೊಳ ನಿರ್ಮಿಸಲಾಗಿದ್ದು ಇದರಿಂದ ಪಾರಂಪರಿಕ ಕಟ್ಟಡಕ್ಕೆ ಯಾವುದೇ ರೀತಿಯ ಧಕ್ಕೆ ಆಗಿಲ್ಲ ಎಂದೂ ಸಸ್ಪಷ್ಟ ಪಡಿಸಿದ್ದಾರೆ.

ಶನಿವಾರ ಕೆ ಆರ್‌ ನಗರ ಕ್ಷೇತ್ರದ ಶಾಸಕ ಸಾರಾ ಮಹೇಶ್ ಅವರ ಕುರಿತು ಆಡಿಯೋ-ವಿಡಿಯೋ ಬಿಡುಗಡೆ ಮಾಡಲಾಗಿದ್ದು, ಗಂಭೀರ ಆರೋಪಗಳನ್ನು ಮಾಡಲಾಗಿದೆ. ಆರ್ಟಿಐ ಕಾರ್ಯಕರ್ತರೊಬ್ಬರು ಶಾಸಕರ ಕುರಿತ ಈ ಆಡಿಯೋ-ವಿಡಿಯೋವನ್ನು ಸುದ್ದಿಗೋಷ್ಠಿ ಕರೆದು ಬಿಡುಗಡೆ ಮಾಡಿದ್ದಾರೆ. ಶಾಸಕ ಸಾ.ರಾ. ಮಹೇಶ್ ಅವರ ವಿರುದ್ಧ ಗಂಭೀರ ಆರೋಪವಿರುವ ಆಡಿಯೋ-ವಿಡಿಯೋ ಇದಾಗಿದ್ದು, ಆರ್ಟಿಐ ಕಾರ್ಯಕರ್ತ ಗಂಗರಾಜು ಎಂಬವರು ಇವುಗಳನ್ನು ಬಿಡುಗಡೆ ಮಾಡಿ ಆರೋಪ ಹೊರಿಸಿದ್ದಾರೆ. ಈ ಮೂಲಕ ಶಾಸಕರ ವಿರುದ್ಧ ಭೂಕಬಳಿಕೆ ಹಾಗೂ ಧಮ್ಕಿ ಆರೋಪ ಕೇಳಿಬಂದಿದೆ. ಸಾ.ರಾ.ಮಹೇಶ್ ಭೂಮಿ ಮಾಲೀಕರು ಎಂದು ಹೇಳಲಾದ ವ್ಯಕ್ತಿಯೊಂದಿಗೆ ಮಾತನಾಡಿರುವ ಆಡಿಯೋ, ಅಲ್ಲದೆ ಜಮೀನಿಗೆ ಕರೆಸಿಕೊಂಡು ಧಮ್ಕಿ ಹಾಕಿರುವ ಸಂಬಂಧ ವಿಡಿಯೋವನ್ನು ಗಂಗರಾಜು ಬಿಡುಗಡೆ ಮಾಡಿದ್ದಾರೆ. ಮೈಸೂರು ತಾಲೂಕು ಕೇರಗಳ್ಳಿ ಸರ್ವೇ ನಂ. 115ರ ಜಾಗ ಈ ಮೂಲಕ ವಿವಾದಕ್ಕೀಡಾಗಿದೆ.

ಸದರಿ ಜಾಗವನ್ನು ಶಾಸಕರು ತಮ್ಮದು ಎಂದು ಹೇಳಿಕೊಂಡಿದ್ದಾರೆ. ಅಲ್ಲಿರುವ 129 ಎಕರೆ ಜಾಗಕ್ಕೆ ಹೆಚ್ಚುವರಿ ಜಾಗವನ್ನು ಸೇರಿಸಿ ಒಟ್ಟು 191 ಎಕರೆಗೆ ಆರ್ಟಿಸಿ ಮಾಡಿಕೊಡಲಾಗಿದೆ. ಅಲ್ಲದೆ 500 ಎಕರೆ ಜಾಗದಲ್ಲಿ ಲೇಔಟ್ ಮಾಡಿದ್ದೇನೆ ಎಂಬುದಾಗಿ ಶಾಸಕರು ಹೇಳಿಕೊಂಡಿರುವುದಾಗಿ ಈ ಆಡಿಯೋ-ವಿಡಿಯೋ ಮೂಲಕ ಆರೋಪಿಸಲಾಗಿದೆ. ಆದರೆ ಅಷ್ಟು ಪ್ರಮಾಣದ ಆಸ್ತಿಯನ್ನು ಶಾಸಕರು ತಮ್ಮ ನಾಮಪತ್ರದ ಅಫಿಡವಿಟ್ನಲ್ಲಿ ತೋರಿಸಿಲ್ಲ. ಪ್ರಶ್ನಿಸಿದರೆ ನೀವು ದಾಖಲೆ ತೆಗೆದುಕೊಂಡು ಬನ್ನಿ ಅಂತ ಧಮ್ಕಿ ಹಾಕಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಬಗ್ಗೆ 5 ತಿಂಗಳ ಹಿಂದೆಯೇ ಪೊಲೀಸರಿಗೆ ದೂರು ನೀಡಿದ್ದೇವೆ ಎಂಬುದಾಗಿ ಗಂಗರಾಜು ಆರೋಪ ಮಾಡಿದ್ದಾರೆ. ಕೇರಗಳ್ಳಿಯ ಭೂಮಿ ಮಾಲೀಕರು ಎನ್ನಲಾದ ಗಣಪತಿ ರೆಡ್ಡಿ ಅವರು ಶಾಸಕ ಸಾ.ರಾ.ಮಹೇಶ್ ತಮಗೆ ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ನಾನೊಬ್ಬ ಸಾಮಾನ್ಯ ಮನುಷ್ಯ, ಆದರೆ ಶಾಸಕರು ಜನ ಬೆಂಬಲ, ಪ್ರಭಾವ, ಅಧಿಕಾರ ದುರುಪಯೋಗ ಮಾಡಿಕೊಂಡು ದಬ್ಬಾಳಿಕೆ ಮಾಡಿದ್ದಾರೆ. ಆ ಬಗ್ಗೆ ನಾನು ಪೊಲೀಸ್ ಠಾಣೆಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಜಾಗ ನನ್ನದು ಅಂತ ಕೋರ್ಟ್ ಕೂಡ ಆದೇಶ ಮಾಡಿದೆ. ಅದಾಗ್ಯೂ ಶಾಸಕರು ಸಿನಿಮೀಯ ರೀತಿಯಲ್ಲಿ ನಮ್ಮನ್ನು ಖಾಲಿ ಮಾಡಿಸಿದ್ದಾರೆ. ಸುಮಾರು 30 ಜನರು ಬಂದು ನಮ್ಮ ಸೆಕ್ಯುರಿಟಿ ಗಾರ್ಡ್ಗಳನ್ನು ಹೆದರಿಸಿ ಹೊರಗೆ ಕಳುಹಿಸಿದ್ದಾರೆ. ನಮ್ಮ ಜಾಗಕ್ಕೆ ಅದೇ ದಿನ ಬೇಲಿ ಹಾಕಿಕೊಂಡಿದ್ದಾರೆ. ಪ್ರಬಲರ ವಿರುದ್ಧ ಹೋರಾಟ ಮಾಡಲು ಸಾಧ್ಯವಾಗದೆ ಮಾಧ್ಯಮಗಳ ಮುಂದೆ ಬಂದಿದ್ದೇನೆ. ದಯವಿಟ್ಟು ನನ್ನ ಜಾಗ ನನಗೆ ಬಿಡಿಸಿಕೊಡಿ ಅಂತ ನಾನು ಮನವಿ ಮಾಡುತ್ತಿದ್ದೇನೆ ಎಂಬುದಾಗಿ ಗಣಪತಿ ರೆಡ್ಡಿ ಮನವಿ ಮಾಡಿಕೊಂಡಿದ್ದಾರೆ.

ಸಾರಾ ಮಹೇಶ್‌ ಅವರು ಮೊತ್ತ ಮೊದಲು ರೋಹಿಣಿ ಸಿಂಧೂರಿ ಅವರ ವಿರುದ್ದ ಈಜುಗೊಳದ ಆರೋಪ ಮಾಡಿದ್ದರಲ್ಲದೆ ಪದೇ ಪದೇ ತೀವ್ರ ಆರೋಪಗಳ ಮೂಲಕ ವಾಗ್ದಾಳಿ ನಡೆಸಿದ್ದರು. ಆದರೆ ರೋಹಿಣಿ ಅವರು ಯಾವುದಕ್ಕೂ ಪ್ರತಿಕ್ರಿಯೆ ನೀಡಿರಲಿಲ್ಲ. ಶನಿವಾರ ಮಾಜಿ ಸಚಿವ ಹೆಚ್‌ ವಿಶ್ವನಾಥ್‌ ಅವರೂ ಕೂಡ ಡಿಸಿ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಲು ಭೂಮಾಫಿಯಾ ಪ್ರಯತ್ನ ಪಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಶನಿವಾರ ಮೈಸೂರು, ಚಾಮರಾಜನಗರ, ಮಂಡ್ಯದಲ್ಲಿ ಜಗಳವಾಗುತ್ತದೆ ಎನ್ನುವ ಕಾರಣಕ್ಕಾಗಿ ನಾನು ಚಾಮರಾಜನಗರದಲ್ಲಿ ನಡೆದ ಆಕ್ಸಿಜನ್ ದುರಂತದದ ಸಂದರ್ಭದಲ್ಲಿ ರೋಹಿಣಿ ಸಿಂಧೂರಿ ಅವರನ್ನು ಸಮರ್ಥನೆ ಮಾಡಿಕೊಂಡಿದ್ದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳುವ ಮೂಲಕ ಪ್ರಕರಣಕ್ಕೆ ಟ್ವಿಸ್ಟ್ ನೀಡಿದ್ದಾರೆ.

ಒಟ್ಟಿನಲ್ಲಿ ರೋಹಿಣಿ ವಿರುದ್ದ ಆರೋಪ ಮಾಡಿದ ರಾಜಕಾರಣಿಗಳೆಲ್ಲ ರಿಯಲ್‌ ಎಸ್ಟೇಟ್‌ ನೊಂದಿಗೆ ಪ್ರತ್ಯಕ್ಷ ಪರೋಕ್ಷ ಸಂಬಂಧ ಹೊಂದಿರುವುದು , ಭೂಗಳ್ಳರ ವಿರುದ್ದ ಕಠಿಣ ಕ್ರಮಕ್ಕೆ ಮುಂದಾಗಿದ್ದ ಸಿಂಧೂರಿ ಅವರ ನಿಲುವು ಎಲ್ಲವೂ ಒಂದಕ್ಕೊಂದು ನಂಟಿರುವಂತೆ ಕಂಡು ಬರುತ್ತಿದೆ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...