ಜಾರ್ಖಂಡ್ ಹೈಕೋರ್ಟ್ ಬಿಹಾರ ಮೇವು ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಜೈಲಿನಲ್ಲಿರುವ ರಾಷ್ಟ್ರೀಯ ಜನತಾದಳದ ನಾಯಕ ಲಾಲು ಯಾದವ್ ಅವರಿಗೆ ಜಾಮೀನು ನೀಡಿದೆ.
ಪ್ರಸ್ತುತ ಚಿಕಿತ್ಸೆಗಾಗಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿರುವ ಯಾದವ್, ಈ ಹಿಂದೆ ಜಾನುವಾರು ಮೇವು ವಂಚನೆಗೆ ಸಂಬಂಧಿಸಿದ ನಾಲ್ಕು ಪ್ರಕರಣಗಳಲ್ಲಿ ಮೂರರಲ್ಲಿ ಜಾಮೀನು ಪಡೆದಿದ್ದರು. ಡುಮ್ಕಾ ಪ್ರಕರಣದಲ್ಲಿ ಜಾಮೀನು ದೊರೆತಿರಲಿಲ್ಲ. ಈಗ ಆ ಪ್ರಕರಣದಲ್ಲೂ ಜಾಮೀನು ದೊರೆತಿರುವ ಹಿನ್ನೆಲೆಯಲ್ಲಿ ಯಾದವ್ ಗೆ ಮನೆಗೆ ಮರಳಬಹುದು.
ಜಾಮೀನು ಅವಧಿಯಲ್ಲಿ ಲಾಲೂ ಪ್ರಸಾದ್ ಯಾದವ್ ಅವರು ವಿದೇಶಿ ಪ್ರಯಾಣ ಬೆಳೆಸಬಾರದು. ಹಾಗೂ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಬದಲಾಯಿಸಬಾರದು ಎಂದು ನ್ಯಾಯಮೂರ್ತಿ ಅಪರೆಶ್ ಕುಮಾರ್ ಸಿಂಗ್ ಹೇಳಿದ್ದಾರೆ.
ಕಳೆದ ಅಕ್ಟೋಬರ್ನಲ್ಲಿ, ಮೇವು ಹಗರಣಕ್ಕೆ ಸಂಬಂಧಿಸಿದ ಚೈಬಾಸ ಖಜಾನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾದವ್ ಅವರಿಗೆ ಜಾಮೀನು ನೀಡಲಾಯಿತು.
ಕಳೆದ ವರ್ಷ ಬಿಹಾರ ಚುನಾವಣೆ ಫಲಿತಾಂಶದ ವೇಳೆ, ಲಾಲೂ ಪ್ರಸಾದ್ ಯಾದವ್ ಅವರಿಗೆ ಜಾಮೀನು ದೊರೆಯುತ್ತದೆಯೆಂದು ಹೇಳಲಾಗಿತ್ತು. ಆದರೆ, ಆ ವೇಳೆ ಜಾಮೀನು ಲಭಿಸದೆ, ವಿಚಾರಣೆ ಮುಂದೂಡಲಾಗಿತ್ತು.
2017 ರ ಡಿಸೆಂಬರ್ನಿಂದ ಜೈಲಿನಲ್ಲಿರುವ 72 ವರ್ಷದ ಯಾದವ್ ಜಾರ್ಖಂಡ್ನ ರಾಜೇಂದ್ರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಸ್ಪತ್ರೆಯಲ್ಲಿ ಹೆಚ್ಚಿನ ಜೈಲು ಶಿಕ್ಷೆಯನ್ನು ಅನುಭವಿಸಿದ್ದಾರೆ. ಅವರ ಆರೋಗ್ಯವು ತೀವ್ರ ಹದಗೆಟ್ಟ ನಂತರ ಅವರನ್ನು ಜನವರಿಯಲ್ಲಿ ದೆಹಲಿಯಲ್ಲಿರುವ ಏಮ್ಸ್ಗೆ ಕರೆತರಲಾಯಿತು.
ಅವರ ಅನುಪಸ್ಥಿತಿಯಲ್ಲಿ, ಅವರ ಮಗ ತೇಜಶ್ವಿ ಯಾದವ್ ರಾಷ್ಟ್ರೀಯ ಜನತಾದಳ (ಆರ್ಜೆಡಿ) ಯನ್ನು ಮುನ್ನಡೆಸುತ್ತಿದ್ದಾರೆ.