- ಬಿ ಕೆ ಇಮ್ತಿಯಾಜ್
ಇಡೀ ಜಗತ್ತಿನ ದುಗುಡ ದುಮ್ಮಾನಗಳನ್ನು ನಿವಾರಿಸುವ ಲಕ್ಷದ್ವೀಪದಲ್ಲಿ ಈಗ ಆತಂಕ ಮಡುಗಟ್ಟಿದೆ. ನೂತನ ಆಡಳಿತಾಧಿಕಾರಿ ಹೇರಿರುವ ಹೊಸ ಕಾನೂನುಗಳು ಲಕ್ಷದ್ವೀಪದ ಜನರನ್ನು ಆತಂಕಕ್ಕೆ ಈಡು ಮಾಡಿದೆ. ಇಲ್ಲಿಯವರೆಗೆ ಹನಿಮೂನ್, ಪಿಕ್ ನಿಕ್ ಗಳಿಗೆ ಮಾತ್ರ ಹೆಸರುವಾಸಿಯಾಗಿದ್ದ ಜಗತ್ತಿನ ಖ್ಯಾತ ಪ್ರವಾಸಿ ತಾಣ ಈಗ ಪ್ರತಿರೋಧದ ಕೇಂದ್ರವಾಗಿ ಗಮನ ಸೆಳೆಯುತ್ತಿದೆ. ಈ ಹಿನ್ನಲೆಯಲ್ಲಿ ಲಕ್ಷದ್ವೀಪ ಹೇಗಿದೆ ಎನ್ನುವುದನ್ನು ನೋಡೋಣಾ…
ಲಕ್ಷದ್ವೀಪ ಶಾಂತಿ, ಸೌಹಾರ್ದತೆ ಮತ್ತು ಅನ್ಯೋನ್ಯತೆಯ ಪ್ರತೀಕ. ನೀವು ನಂಬಲೇಬೇಕಾದ ಇಲ್ಲಿನ ವಿಶೇಷವೆಂದರೆ ಇಲ್ಲಿ ಯಾವ ಮನೆಗೂ ಪ್ರತ್ಯೇಕ ಕಾಪೌಂಡ್ ಗಳೇ ಇಲ್ಲ. ಇಡೀ ದ್ವೀಪವಾಸಿಗಳೆಲ್ಲರೂ ಪರಸ್ಪರ ಪರಿಚಯಸ್ತರು. ಹಾಗಂತ ಕಂಪೌಂಡೇ ಇಲ್ಲದ ಮನೆಗಳನ್ನು ನೋಡಿ ಕೃಷ್ಣದೇವರಾಯನ ಹಳೇ ಕತೆಗಳು ನೆನಪಿಗೆ ಬಾರದೇ ಇರದು.
ಇಲ್ಲಿನ ಸಂಸ್ಕೃತಿಯು ಪರಿಚಯ ಆಗುವುದೇ ಕೂಡಿ ಬಾಳುವ ಜೀವನ ಶೈಲಿಯಿಂದ. ನಯವಾದ ಮಾತು, ಸತ್ಕಾರ, ಉಡುಗೆ ತೊಡುಗೆಗಳು, ಆಹಾರ,ಸಾಂಸ್ಕೃತಿಕ ವೈವಿಧ್ಯತೆಗಳು ಗಮನ ಸೆಳೆಯುತ್ತದೆ. ಇವೆಲ್ಲದರ ಜೊತೆಗೆ ಧಾರ್ಮಿಕತೆ ಹಾಗೂ ಸಾಮರಸ್ಯದ ಮನಸ್ಸುಗಳಿಂದ ಲಕ್ಷದ್ವೀಪ ಶ್ರೀಮಂತಗೊಂಡಿದೆ.
1956ರಲ್ಲಿ ಲಕ್ಷದ್ವೀಪ ಸಂಪೂರ್ಣವಾಗಿ ಭಾರತ ಸರಕಾರದ ಅಧೀನಕ್ಕೆ ಒಳಪಡುವ ಮೊದಲು ಕಣ್ಣನೂರಿನ ಅರಕ್ಕಲ್ ರಾಜರ ಪ್ರಭುತ್ವದ ಅಡಿಯಲ್ಲಿತ್ತು. 1545ರಿಂದ 1816ವರೆಗೆ ಅರಕ್ಕಲ್ ರಾಜರ ಪ್ರಭುತ್ವ ಲಕ್ಷದ್ವೀಪವನ್ನು ಆಳಿತ್ತು.
ಅರಕ್ಕಲ್ ಪೋರ್ಚಿಗೀಸರು, ಡಚ್ಚರು, ಫ್ರೆಂಚ್ ಮತ್ತು ಇಂಗ್ಲೀಷರ ಮಧ್ಯೆ ವ್ಯವಹಾರಿಕ ಸಂಭಂದ ಇತ್ತು. ಮಿನಿಕೋಯಿ ದ್ವೀಪದ ಸಮುದ್ರದಲ್ಲಿ ಮಧ್ಯ ಪ್ರಾಚ್ಯ ಮತ್ತು ದಕ್ಷಿಣ ಪ್ರಾಚ್ಯ ದೇಶಗಳ ಸಂಪರ್ಕ ಮಾಡುವ ಅಂತರ್ರಾಷ್ಟ್ರೀಯ ಹಡಗು ಮಾರ್ಗವೂ ಇದೆ ಇದಕ್ಕೆ 9ಡಿಗ್ರಿ ವಾಟರ್ ವೇ ಅಂಥ ಕರೆಯುತ್ತಾರೆ. ಹಾಗಾಗಿ ಅರಕ್ಕಲ್ ರಾಜರು ಲಕ್ಷದ್ವೀಪವನ್ನು ವ್ಯಾಪಾರ ದೃಷ್ಟಿಯಿಂದ ಕಾಪಾಡಿಕೊಂಡು ಬರುತ್ತಿದ್ದರು.
ಅರಕ್ಕಲ್ ರಾಜ ಪ್ರಭುತ್ವದಲ್ಲಿ ಮಹಿಳಾ ಸುಲ್ತಾನ್ ಗಳು ಇದ್ದರು ಆ ಕಾರಣಕ್ಕಾಗಿಯೂ ಲಕ್ಷ ದ್ವೀಪ ಮಹಿಳಾ ಪ್ರಧಾನ ಆಗಿರಲೂ ಬಹುದು. ಅರಕ್ಕಲ್ ಆಲಿ ರಾಜ ಸುಲ್ತಾನ್ ಬೀಬಿ ಆಯಿಷಾ ಪೋರ್ಚಿಗೀಸರೊಂದಿಗೆ ಯುದ್ಧ ಮಾಡಿ ಗೆದ್ದ ಇತಿಹಾಸವೂ ಇದೆ.
ದ್ವೀಪದಲ್ಲಿ ಮದುವೆಯಾದ ಹುಡುಗಿ ತಾಯಿ ಮನೆಯಲ್ಲೇ ಇರುತ್ತಾಳೆ. ಇಲ್ಲಿ ವರದಕ್ಷಿಣೆ ಕೊಟ್ಟು ಮದುವೆ ಮಾಡುವ ಸಂಪ್ರದಾಯವೇ ಇಲ್ಲ. ಬದಲಾಗಿ ವಧು ದಕ್ಷಿಣೆ ಕೊಡುವ ಪದ್ಧತಿ ಇದೆ. ಗಂಡ ಪ್ರತಿ ದಿನ ಹೆಂಡತಿ ಮನೆಗೆ ಹೋಗಬೇಕು. ಗಂಡ ಬೆಳಿಗ್ಗೆ ಮನೆಯಿಂದ ಹೋದ ನಂತರ ಹೆಂಡತಿ ಗಂಡನ ಮನೆಗೆ ಹೋಗಿ ಗಂಡನ ತಾಯಿ ಸೇವೆ ಮಾಡಿ ವಾಪಸ್ ಮನೆಗೆ ಬರುವುದು ದ್ವೀಪದ ಸಾಂಸಾರಿಕ ಪದ್ಧತಿ. ರಸ್ತೆಗಳು ರಾತ್ರಿ 8ಗಂಟೆಯಿಂದ ಸೈಕಲುಗಳಲ್ಲಿ ಹೆಂಡತಿ ಮನೆಗೆ ಹೋಗುವ ಗಂಡಂದಿರ ಭರಾಟೆಯಿಂದ ತುಂಬಿರುತ್ತದೆ. ಈ ಹೊತ್ತಲ್ಲಿ ಪೊಲೀಸರು ಡೈನಾಮು (ಲೈಟ್) ಇಲ್ಲದೆ ಓಡುವ ಸೈಕಲುಗಳಿಗೆ ದಂಡ ಹಾಕುತ್ತಾರೆ.
ಮಲಯಾಳಂ ಪ್ರಧಾನ ಭಾಷೆ ಆದರೂ ಜಸರಿ ಮತ್ತು ಮಹಲ್ ಭಾಷೆಗಳು ಇಲ್ಲಿನ ಜನರ ಆಡು ಭಾಷೆ. ಜಸರಿ ಭಾಷೆ ಮಲಯಾಳಂ ಮತ್ತು ಕರಾವಳಿಯ ಬ್ಯಾರಿ ಭಾಷೆಯೊಂದಿಗೆ ಸಮ್ಮಿಳಿತಗೊಂಡಿದೆ. ಬ್ಯಾರಿ ಭಾಷೆಯ ಅನೇಕ ಶಬ್ದಗಳು ಜಸರಿ ಭಾಷೆಯಲ್ಲಿ ಸಿಗುತ್ತವೆ. ಮಂಗಳೂರಿನ ಬ್ಯಾರಿಯಲ್ಲಿ ಬರುವ ಪಿಡಿಲ್ಲೆ(ಗೊತ್ತಿಲ್ಲ) ಸಾರಲ್ಲೇ ((ಪರವಾಗಿಲ್ಲ) ಇಂತಹ ಪದಗಳನ್ನು ದ್ವೀಪದಲ್ಲಿ ಪುಡಿಇಲ್ಲೆ, ಸಾರ ಇಲ್ಲೆ ಎಂದು ಗುರುತಿಸಬಹುದಾಗಿದೆ.ಇನ್ನು ಮಹಲ್ ಭಾಷೆಯನ್ನು ಮಿನಿಕೋಯಿ ದ್ವೀಪದಲ್ಲಿ ಮಾತಾಡುತ್ತಾರೆ. ಈ ಭಾಷೆ ಸರಿಯಾಗಿ ಇತರ ದ್ವೀಪದ ಜನರಿಗೇ ಆರ್ಥ ಆಗುವುದಿಲ್ಲ.
ಮಹಲ್ ಭಾಷೆಯಲ್ಲಿ ನಂಕೆ ಕೇತೆ ಅಂದ್ರೆ ಹೆಸರೇನು?
ಮಾಗಿನ ಇಮ್ತಿಯಾಜ್ (ಇಮ್ತಿಯಾಝ್ ನನ್ನ ಹೆಸರು ಎಂದು). ಮಿನಿಕೋಯಿ ದ್ವೀಪ ಲಕ್ಷದ್ವೀಪದಲ್ಲಿ ಕೊನೆಯ ದ್ವೀಪ. ಮಾಲ್ದೀವ್ ಗೆ ಹತ್ತಿರವಾಗಿವೆ. ಹಾಗಾಗಿ ಮಿನಿಕೋಯಿ ದ್ವೀಪದ ಸಾಂಸ್ಕೃತಿಕತೆ ಇನ್ನೂ ಮನೋಹರವಾಗಿದೆ.
ಒಂದು ದ್ವೀಪಕ್ಕೆ ಮತ್ತೊಂದು ದ್ವೀಪ ಕಾಣುವುದಿಲ್ಲ.
ಅಮಿನಿ ಮತ್ತು ಕಡಮತ್ ದ್ವೀಪಗಳನ್ನು ದೂರದಿಂದ ಕಾಣಬಹುದು ಬೇರೆ ಯಾವುದೇ ದ್ವೀಪ ಕಾಣುವುದಿಲ್ಲ. ಒಂದು ದ್ವೀಪದಿಂದ ಮತ್ತೊಂದು ದ್ವೀಪಕ್ಕೆ ಹೋಗಲು ಕನಿಷ್ಠ ಐದಾರು ಗಂಟೆ ಜಲ ಸಂಚಾರ ಮಾಡಬೇಕು. ಹಾಗಾಗಿ ಭಾಷೆಗಳು ದ್ವೀಪದಿಂದ ದ್ವೀಪಕ್ಕೆ ವ್ಯತ್ಯಾಸಗಳನ್ನು ಹೊಂದಿದೆ.
ದ್ವೀಪದ ಜನಸಂಖ್ಯೆಯಲ್ಲಿ 99% ಮುಸ್ಲಿಮರು ಹಾಗಾಗಿ ಇಸ್ಲಾಂ ಧರ್ಮದ ಆಚರಣೆಗಳು ಮಾತ್ರ ಕಾಣ ಸಿಗುತ್ತದೆ. ಇಲ್ಲಿ ಬಹುತೇಕರು ಸುನ್ನಿ ಆಶಯಗಳನ್ನು ಪಾಲಿಸುವವರು. ದ್ವೀಪ ತುಂಬಾ ಸಣ್ಣ ಸಣ್ಣ ಮಸೀದಿಗಳಿದ್ದರೂ ಹೆಚ್ಚಿನ ದ್ವೀಪಗಳಲ್ಲಿ ಜುಮ್ಮಾ ಮಸೀದಿಗಳು ಒಂದೇ ಇರುತ್ತವೆ.
ಮುಸ್ಲಿಂ ನೂತನವಾದಕ್ಕೆ ಇಲ್ಲಿ ಕಾಲೂರಲು ಸಾಧ್ಯವೇ ಆಗಿಲ್ಲ. ತೀವ್ರವಾದದ ಆಲೋಚನೆಗಳೇ ಇಲ್ಲ.
ಉಬೈದುಲ್ಲಾ ತಂಗಳ್, ಹಾಮಿದತ್ ಬೀಬಿ ಪೂಜ್ಯನೀಯರು.
ಶುಭಕಾರ್ಯಗಳಿಗೆ ಮೌಲೂದ್ ಮತ್ತು ರಾತೀಬ್ ಓದುವುದು ಸರ್ವೇ ಸಾಮಾನ್ಯ. ಅರಬಿ ಕ್ಯಾಲೆಂಡರ್ ನ ರಬಿ-ಉಲ್-ಅವ್ವಲ್ ತಿಂಗಳು (ಪ್ರವಾದಿ ಪೈಗಂಬರ್ ಹುಟ್ಟಿದ ಮತ್ತು ಮರಣ ಹೊಂದಿದ ತಿಂಗಳು)ದ್ವೀಪದಲ್ಲಿ ಇಡೀ ತಿಂಗಳು ಸಂಭ್ರಮವೋ ಸಂಭ್ರಮ ದ್ವೀಪವಿಡೀ ಹಸಿರಾಗಿ ಸಿಂಗಾರಗೊಳ್ಳುತ್ತದೆ. ಅಲ್ಲಲ್ಲಿ ಹುಡುಗರ ಗುಂಪುಗಳು ಧಾರ್ಮಿಕ ಪ್ರವಚನ, ಕಥಾ ಪ್ರಸಂಗ, ಕುರಾನ್ ಕಂಠಪಾಠ, ಭಾಷಣ, ಹಾಡು ಕ್ವಿಜ್ ಸ್ಪರ್ಧೆಗಳು ಸಂಜೆ ಹೊತ್ತು ಅಲ್ಲಲ್ಲಿ ನಡೆಯುತ್ತಿರುತ್ತವೆ.
ಹಾಗೆಯೇ ರಾತಿಬ್ ಮತ್ತು ಬುರ್ದಾ ಮಜ್ಲಿಸ್ ಕೂಡಾ ನಡೆಯುತ್ತಿರುತ್ತವೆ.
ದಫ್, ದಾಯಿರದ ಜೊತೆಗೆ ಕೇರಳದ ಒಪ್ಪನ, ಕೋಲಾಟಂ ಇಲ್ಲೂ ಸಾಮಾನ್ಯ. ಪಲಿಜ ಕಲಿ ಮತ್ತು ಬಂಡಿಯಾ ನೃತ್ಯ,ಇಲ್ಲಿನ ಸಾಂಸ್ಕೃತಿಕ ಐಟಂಗಳು. ಪಲಿಜ ಕಲಿ ಕತ್ತಿ ಹಿಡಿದು ಸ್ವತಃ ಹಾಡು ಹೇಳಿ ಕುಣಿಯುವಂತದ್ದು. ಬಂಡಿಯಾ ನೃತ್ಯ ಹೆಣ್ಣು ಮಕ್ಕಳು ಕೊಡಪಾನ ಹಿಡಿದು ಮಹಲ್ ಭಾಷೆಯ ಹಾಡಿಗೆ ಕುಣಿಯುವ ನೃತ್ಯ ಇದು ಮಿನಿಕೋಯಿ ದ್ವೀಪದಲ್ಲಿ ಮಾತ್ರ ಇದೆ.
ಮುಸ್ಲಿಂ ಬಾಹುಲ್ಯದ ಪ್ರದೇಶವಾಗಿದ್ದರೂ ಹೆಚ್ಚಿನ ಮಹಿಳೆಯರು ಬುರ್ಖಾ ಧರಿಸುವುದಿಲ್ಲ. ಕಂಚಿ ಮತ್ತು ರವೇರಿ ಇಲ್ಲಿನ ಮಹಿಳೆಯರ ವಸ್ತ್ರ ತಲೆ ಮೇಲೆ ಬಣ್ಣಬಣ್ಣದ ಸ್ಕಾರ್ಫ್ ಧರಿಸುತ್ತಾರೆ. ಕುಡುಕಮ್, ವಾಲ, ಅಲ್ಲಿಕ್ಕಾತ್ (ಕಿವಿಯೋಲೆ) ಕೂಡ್(ನೆಕ್ಲೆಸ್) ಇವು ಮಹಿಳೆಯರು ಧರಿಸುವ ಚಿನ್ನಾಭರಣಗಳು. ಪುರುಷರು ಬಹುತೇಕ ಬಿಳಿ ಬಣ್ಣದ ಲುಂಗಿ ತೊಡುತ್ತಾರೆ.
ಯುವಕರಿಗೆ ಫುಟ್ಬಾಲ್ ಅಚ್ಚುಮೆಚ್ಚಿನ ಕ್ರೀಡೆ ಆದರೂ ಇಲ್ಲಿಯೇ ಅನೇಕ ಆಟಗಳಿವೆ.
ಪ್ರತಿಯೊಂದು ಮನೆಯ ಒಳಗೂ ಹೊರಗೂ ಉಯ್ಯಾಲೆಗಳಿವೆ.
ಜಲಕ್ರೀಡೆಗಳು ಬೇಕಾದಷ್ಟಿವೆ ದೋಣಿ ಸ್ಪರ್ಧೆ, ಈಜು ಸ್ಪರ್ಧೆಗಳು ಇತ್ತೀಚಿನ ಕಾಲದಲ್ಲಿ ಡೈವಿಂಗ್ ಸ್ಪರ್ಧೆಗಳು ಸಾಮಾನ್ಯವಾಗಿದೆ.
ವೆಲ್ಲಮ್ ಕಲಿ ಬಹಳ ಜನಪ್ರಿಯವಾದುದು ಇದು ಯಂತ್ರಗಳಿಲ್ಲದ ಹಳೆ ಕಾಲದ ಸಂಚಾರ ದೋಣಿ ಗಳು ಇದರಲ್ಲಿ ಮೂರು ರೀತಿಯ ದೋಣಿ ಒಂದು ಕುಡುಡೋಣಿ 9 ಜನ , ಮತ್ತೊಂದು ಬುಡು ದೋಣಿ ಇದರಲ್ಲಿ 15 ಜನ ಇನ್ನೊಂದು ಜವಾ ದೋಣಿ ಇದು 43 ಜನರು ಭಾಗಾವಹಿಸುವ ನೂರು ಮೀಟರ್ ಉದ್ದದ ಸ್ಲಿಮ್ ಆಗಿರುವ ದೋಣಿ. 1985ರಲ್ಲಿ ರಾಜೀವ್ ಗಾಂಧಿ ಪ್ರಧಾನಿ ಆಗಿದ್ದಾಗ ದ್ವೀಪಕ್ಕೆ ಬಂದಿದ್ದರು ಆಗ ಅವರನ್ನು ಜವಾ ದೋಣಿಯಲ್ಲೇ ದ್ವೀಪ ಸುತ್ತಾಡಿದ್ದರು ಕೈಯಲ್ಲೇ ಓಡಿಸುವ ದೋಣಿಯ ವೇಗ ನೋಡಿ ದೋಣಿ ಸ್ಪರ್ಧೆ ಯಾಕೆ ಮಾಡಬಾರದು ಎಂದು ಕೇಳಿದ್ದರಂತೆ ಆ ನಂತರ ಕೆಲವು ದ್ವೀಪಗಳಲ್ಲಿ ಪ್ರಧಾನಮಂತ್ರಿ ವಾಟರ್ ಸ್ಪೋರ್ಟ್ಸ್ ಎಂಬ ಹೆಸರಲ್ಲಿ ಈಗಲೂ ಸ್ಪರ್ಧೆ ನಡೆಯುತ್ತದೆ. ಜವಾ ದೋಣಿ ಸ್ಪರ್ಧೆಯಲ್ಲಿ ಗೆದ್ದವರಿಗೆ ಜಲ ರಾಜಾಕನ್ಮಾರ್ (ಜಲರಾಜರು) ಬಿರುದು ನೀಡಲಾಗುತ್ತದೆ. ಅಲ್ಲದೆ ತಾಲೀಂ ನಂತಹ ಸಾಹಸ ಕ್ರೀಡೆಗಳೂ ಇಲ್ಲಿವೆ. ಮಹಿಳೆಯರೂ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾರೆ.
ಲಕ್ಷದ್ವೀಪದ ಮಹಿಳಾ ಪ್ರಾಧಾನ್ಯತೆ ಮದುವೆಯಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ನಿಖಾಹ್ ಒಂದು ಧಾರ್ಮಿಕ ಪ್ರಕ್ರಿಯೆ.
ನಮ್ಮಲ್ಲಿ ಹುಡುಗನ ಮನೆಯಲ್ಲಿ ನಿಖಾಹ್ ಆಗ್ತಾರೆ ದ್ವೀಪದಲ್ಲಿ ನಿಖಾಹ್ ಆಗುವುದು ಹುಡುಗಿ ಮನೆಯಲ್ಲಿ ಮದುಮಗನನ್ನು ಹಾಡಿನ ಮೂಲಕ ಮೆರವಣಿಗೆಯಲ್ಲಿ ಮದುಮಗಳ ಮನೆಗೆ ಕರೆ ತರಲಾಗುತ್ತದೆ. ನಿಖಾಹ್ ಆದ ಕೂಡಲೇ ಮದುಮಗಳಿಗೆ ಹಾರ ಹಾಕಿ ಮದುಮಗಳನ್ನು ಹುಡುಗನ ಮನೆಗೆ ಮಹಿಳೆಯರು ಮೆರವಣಿಗೆಯಲ್ಲಿ ಹಾಡಿಕೊಂಡು ಕರೆದುಕೊಂಡು ಹೋಗುತ್ತಾರೆ.
ಮದುಮಗ ಭೂರಿ ಭೋಜನದ ಸತ್ಕಾರ ಸ್ವೀಕರಿಸಿ ಸಿಂಗಾರಗೊಂಡ ಕೋಣೆಯಲ್ಲಿ ರಾತ್ರಿ ವಿಶ್ರಾಂತಿ.
ಮದುಮಗಳು ಹುಡುಗಿ ಮನೆಯಲ್ಲಿ ವಿಶ್ರಾಂತಿ ಪಡೆಯುವುದು ವಾಡಿಕೆ. ಹುಡುಗನ ಮನೆಯವರು ವಧು ದಕ್ಷಿಣೆ ಕೊಡುವವರೆಗೆ ಫಸ್ಟ್ ನೈಟ್ ಆಗುವುದಿಲ್ಲ. ಪರಸ್ಪರ ನೋಡುವ ಅವಕಾಶವೂ ಇಲ್ಲ. ಕದ್ದು ಮುಚ್ಚಿ ನೋಡಬೇಕಷ್ಟೆ. ವಧು ದಕ್ಷಿಣೆ ಕೊಡುವವರೆಗೆ ಹುಡುಗ ಹುಡುಗಿ ಮನೆಯಲ್ಲಿ ಹುಡುಗಿ ಮನೆಯಲ್ಲೆ ಇರಬೇಕು.
ವಧುದಕ್ಷಿಣೆಯಾಗಿ ಸಾಧಾರಣ ಕುಟುಂಬ ಆದರೆ ಒಂದರಿಂದ ಎರಡು ಲಕ್ಷ, ಸ್ವಲ್ಪ ಅನುಕೂಲಸ್ಥರಾದರೆ ಐದು ಲಕ್ಷದವರೆಗೆ ಹಣ. ಮಂಚ, ಬೆಡ್ಡು,ಕಪಾಟು, ಟಿವಿ, ಮೊಬೈಲ್, ಹುಡುಗಿ ಮತ್ತು ಆಕೆಯ ತಾಯಿಗೆ ಬೇಕಾಗುವಷ್ಟು ಬಟ್ಟೆ ಕೊಡಬೇಕು. ಸಾಧಾರಣ ನಿಖಾಹ್ ಆಗಿ ಕನಿಷ್ಠ 3ದಿನಗಳೊಳಗೆ ಹುಡುಗಿ ಜೊತೆ ವಧುದಕ್ಷಿಣೆ ಮತ್ತು ವಸ್ತುಗಳನ್ನು ಕಳುಹಿಸಿ ಕೊಡಲಾಗುತ್ತದೆ. ಆ ನಂತರದ ಸಂಸಾರ ಹುಡುಗಿ ಮನೆಯಲ್ಲೇ ನಡೆಯುತ್ತದೆ. ಹುಡುಗ ಪ್ರತಿದಿನ ಹುಡುಗಿ ಮನೆಗೆ ಬರಲೇಬೇಕು ಇದು ಇವತ್ತಿಗೂ ಎಲ್ಲಾ ದ್ವೀಪದಲ್ಲಿ ಪದ್ಧತಿ.
ದ್ವೀಪದಲ್ಲಿ ಇತ್ತೀಚಿನ ಕಾಲದಲ್ಲಿ ವಧುದಕ್ಷಿಣೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಕಾಲ ಕಾಲಕ್ಕೆ ವಧುದಕ್ಷಿಣೆ ಮತ್ತು ವಸ್ತುಗಳ ಬೇಡಿಕೆ ಏರುತ್ತಿದೆ. ಇದರ ಪರಿಣಾಮವಾಗಿ ಸಹೋದರ ಸಹೋದರಿಯರ ಮಕ್ಕಳು ರಕ್ತ ಸಂಬಂಧಿಗಳಾದರೂ ಮದುವೆ ಏರ್ಪಡುತ್ತಿದೆ.
ಕರಾವಳಿ ಕರ್ನಾಟಕ ಮತ್ತು ಕೇರಳದಲ್ಲಿ ಉಪಯೋಗಿಸುವ ಕುಚ್ಚಲು ಅಕ್ಕಿ, ಮೀನು ಮಾಂಸ ಇವರ ಖಾದ್ಯ. ತೆಂಗಿನಕಾಯಿ ಮತ್ತು ಎಳನೀರಿನ ತಿಂಡಿ ತಿನಿಸುಗಳು ಇವರ ಪ್ರಧಾನ ಆಹಾರ.
ಪುಟ್ಟು,ಅರಿ ಪತ್ತ್ರ್, ಇಡ್ಲಿ,ದೋಸಾ, ಮಲಬಾರ್ ಪರೋಟ ಬೆಳಗ್ಗಿನ ಉಪಹಾರಗಳು.
ಚೂರ ಮೀನು (ಕೇದಾರ್ ಅಥವಾ ಮಾಸ್) ದ್ವೀಪದ ಜನರ ಪಂಚ ಪ್ರಾಣ. ಚೂರ ಇಲ್ಲದ ಭೋಜನ ಇಲ್ಲವೇ ಇಲ್ಲ.
ಚೂರ ಮೀನಿನ ಉಪ್ಪಿನಕಾಯಿ ಇಲ್ಲದೆ ಊಟ ಸೇರುವುದಿಲ್ಲ.
ರವೇರಿ(ಪುಲಿ ಮುಂಚಿ), ಸನತ್ (ತೆಂಗಿನಕಾಯಿ ಅರೆದು ಮಾಡುವ ಮೀನು ಸಾರು) ಮಾಸ್ ಪೊಡಿಚ್ಚದ್(ಚಟ್ನಿ) ಪಕೋರ (ಮಸಾಲಾ), ಕತ್ತಿಊರ (ಎಲೆಯಲ್ಲಿ ಮೀನು ಫ್ರೈ) ಇವು ಮೀನಿನ ಫೇಮಸ್ ಖಾದ್ಯಗಳು. ಇನ್ನೂ ಬೀಫ್, ಮಟನ್, ಚಿಕನ್ ಖಾದ್ಯಗಳು ನಮ್ಮಲ್ಲಿ ಸಿಗುವ ರೀತಿಯದ್ದೆ ಆಗಿದೆ.
ಮದುವೆ ಮತ್ತು ಶುಭ ಸಮಾರಂಭಗಳಿಗೆ ಕುಚ್ಚಲು ಸಾದಾ ಅಕ್ಕಿ ಬೀಫ್ ಬಿರಿಯಾನಿ ಇಲ್ಲಿನ ಇನ್ನೊಂದು ವಿಶೇಷ. ಬೆಂಡಿ, ಕಿಲಾನ್ಜಿ, ಪಾಳುಮ್ ಪಲಾ, ಕಡಲಕ್ಕ,ಕಾಯಿಪಲ, ಗಬುಲಿ(ಎಲೆ ಅಪ್ಪ), ಮಟ್ಲಿ, ಬಟಲ ಅಪ್ಪಮ್ (ಇಡ್ಲಿ ತರಹದ ) ಸ್ವೀಟ್ ಸಮೂಸ, ಪಪ್ಸ್ ಇವು ಇಲ್ಲಿನ ಕೆಲವು ಸಿಹಿ ತಿಂಡಿಗಳು. ಇನ್ನು ಕರುಕುರು ಎಣ್ಣೆ ತಿಂಡಿಗಳು ಬೇಕಾದಷ್ಟಿವೆ ವಿವರಿಸಲು ಹೋಗೋದಿಲ್ಲ.
ದ್ವೀಪವಾಸಿಗಳ ಅತಿಥಿ ಉಪಚಾರ ಅದ್ಬುತವಾದದ್ದು.
ಮನೆಗೆ ಬಂದವರು ಉಪಹಾರ ಸ್ವೀಕರಿಸದೆ ಹೋಗುವಂತಿಲ್ಲ. ಅವಸರದಲ್ಲಿ ಬಂದು ಹೋಗುವ ಅತಿಥಿಗಳಿಗಾಗಿಯೇ ಮನೆಗಳಲ್ಲಿ ಕೆಲವು ಬಗ್ಗೆ ಕಡಿಗಳು (ತಿಂಡಿಗಳು) ತಯಾರು ಮಾಡಿ ಇಟ್ಟಿರುತ್ತಾರೆ.
ಮದುವೆ ಇತರ ಸಾಮೂಹಿಕ ಭೋಜನಗಳಲ್ಲಿ ನೆಲದಲ್ಲೇ ತಾರ್ಪಲ್ ಮತ್ತು ಚಾಪೆ ಹಾಕಿ ದೊಡ್ಡ ಪ್ಲೇಟುಗಳಲ್ಲಿ ನಾಲ್ಕೈದು ಜನ ಸಾಮೂಹಿಕವಾಗಿ ಊಟ ಮಾಡ್ತಾರೆ ಸಹ ಭೋಜನ ವ್ಯವಸ್ಥೆ ದ್ವೀಪದ ಜನರ ಸಾಮರಸ್ಯಕ್ಕೆ ಪ್ರತೀಕವಾದುದು.
ಒಟ್ಟಿನಲ್ಲಿ ಲಕ್ಷದ್ವೀಪದ ಸಾಂಸ್ಕೃತಿಕ ಪರಂಪರೆ, ಬದುಕು ಶ್ರೀಮಂತವಾದುದು. ಇಂತಹ ಲಕ್ಷದ್ವೀಪದ ಮೇಲೆ ಪ್ರಭುತ್ವದ ಕಣ್ಣು ಬಿದ್ದಿದೆ. ಲಕ್ಷದ್ವೀಪ ಉಳಿಯಬೇಕೆಂಬುದು ದ್ವೀಪವಾಸಿಗಳ ಒತ್ತಾಯ ಅಲ್ಲ, ಅದು ಇಡೀ ಜಗತ್ತಿನ ಆಶಯವಾಗಬೇಕು. ಯಾಕೆಂದರೆ ಇಡೀ ಜಗತ್ತು ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಲಕ್ಷದ್ವೀಪವನ್ನು ಅನುಭವಿಸಿದೆ.
(ಲೇಖಕರು ಮಂಗಳೂರು ಬಂದರು ಕಾರ್ಮಿಕರ ಸಂಘಟನೆಯ ಅಧ್ಯಕ್ಷರು. ಕಾರ್ಮಿಕ ಸಂಘಟನೆಯ ದೃಷ್ಟಿಯಿಂದ ಲಕ್ಷದ್ವೀಪದಲ್ಲಿ ಹಲವು ತಿಂಗಳುಗಳ ಕಾಲ ವಾಸವಿದ್ದು ಜನ ಸಮುದಾಯದ ಅಧ್ಯಯನ ಮಾಡಿದವರು)