ಮೋದಿ – ದೀದಿ ಬಿಕ್ಕಟ್ಟು: ಬಂಗಾಳದ ಮುಖ್ಯ ಕಾರ್ಯದರ್ಶಿಯನ್ನು ವಾಪಸ್‌ ಕರೆಸಿಕೊಂಡ ಕೇಂದ್ರ ಸರ್ಕಾರ

ಪ್ರಧಾನಿ ನರೇಂದ್ರ ಮೋದಿ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವಿನ ಸಭೆ ಬಳಿಕ ಉಂಟಾದ ಬಿಕ್ಕಟ್ಟಿನ ಬೆನ್ನಲ್ಲೇ ಕೇಂದ್ರ ಸರ್ಕಾರ ಬಂಗಾಳದ ಮುಖ್ಯ ಕಾರ್ಯದರ್ಶಿ ಅಲಪನ್‌ ಬಂಡೋಪಾಧ್ಯಾಯ ಅವರನ್ನು ಕೇಂದ್ರ ಸರ್ಕಾರ ವಾಪಸ್‌ ಕರೆಸಿಕೊಂಡಿದೆ.


ಅಲಪನ್‌ ಬಂಡೋಪಾಧ್ಯಾಯ ಅವರ ಅಧಿಕಾರವಧಿ ಕಳೆದ ಮೇ 24ಕ್ಕೆ ಕೊನೆಗೊಂಡಿತ್ತು. ಕೋರಿಕೆಯ ಮೇರೆಗೆ ಅವರ ಸೇವಾವಧಿಯನ್ನು ಮೂರು ತಿಂಗಳವರೆಗೆ ವಿಸ್ತರಣೆ ಮಾಡಲಾಗಿತ್ತು. ಇದಾಗಿ ನಾಲ್ಕೇ ದಿನಕ್ಕೆ ಕೇಂದ್ರ ಸರ್ಕಾರ ಅವರನ್ನು ವಾಪಸ್‌ ಕರೆಸಿಕೊಂಡಿದೆ. ಆದರೆ, ಏಕಾಏಕಿ ಅವರನ್ನು ವಾಪಾಸ್ ಕರೆಸಿಕೊಳ್ಳಲು ಮೋದಿ-ದೀದಿ ಬಿಕ್ಕಟ್ಟೇ ಕಾರಣ ಎನ್ನಲಾಗಿದೆ.

ಪಶ್ಚಿಮ ಬಂಗಾಳದಿಂದ ವಾಪಸ್‌ ಕರೆಸಿಕೊಂಡಿರುವ ಅವರನ್ನು ಸಾರ್ವಜನಿಕ ಕುಂದುಕೊರತೆ ಹಾಗೂ ಪಿಂಚಣಿ ಸಚಿವಾಲಯಕ್ಕೆ ನೇಮಕ ಮಾಡಲಾಗಿದ್ದು, ದೆಹಲಿಯಲ್ಲಿ ಕಚೇರಿಗೆ ಮೇ 31 ರಂದು ಅಧಿಕಾರ ಸ್ವೀಕರಿಸುವಂತೆ ಆದೇಶಿಸಲಾಗಿದೆ ಎಂದು ವರದಿಯಾಗಿದೆ.
ಯಾಸ್‌ ಚಂಡಮಾರುತದ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಮತಾ ಬ್ಯಾನರ್ಜಿ ನಡುವೆ ನಡೆದ ಸಭೆಯಲ್ಲಿ ಪ್ರಧಾನಿ ಮೋದಿಗೆ ಮಮತಾ ಬ್ಯಾನರ್ಜಿ ಅಗೌರವ ತೋರಿ ಧಾರ್ಷ್ಟ್ಯ ಪ್ರದರ್ಶಿಸಿದ್ದಾರೆ ಎಂದು ಕೇಂದ್ರ ಆರೋಪಿಸಿದ ಬೆನ್ನಿಗೆ ಈ ಬೆಳವಣಿಗೆಗಳು ನಡೆದಿರುವುದು, ಮುಖ್ಯಮಂತ್ರಿ Vs ಪ್ರಧಾನಮಂತ್ರಿ ಬಿಕ್ಕಟ್ಟಿನ ಮುಂದುವರಿದ ಭಾಗವಾಗಿದೆ ಎನ್ನಲಾಗಿದೆ.

ಯಾಸ್ ಚಂಡಮಾರುತದಿಂದ ಉಂಟಾಗಿರುವ ಹಾನಿಯನ್ನು ಪರಿಶೀಲಿಸಲು ಶುಕ್ರವಾರ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯಪಾಲ ಜಗದೀಪ ಧಾಂಕರ್ ಅವರನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು 30 ನಿಮಿಷಗಳ ಕಾಲ ಕಾಯಿಸಿದ್ದರು ಎಂದು ಕೇಂದ್ರ ಸರಕಾರವು ಆರೋಪಿಸಿದೆ.
ಕೇಂದ್ರ ಸರ್ಕಾರದ ಮೂಲಗಳು ಹಂಚಿಕೊಂಡಿರುವ ಚಿತ್ರವು ಪರಿಶೀಲನಾ ಸಭೆಯ ಆರಂಭಕ್ಕೆ ಮುನ್ನ ಮೋದಿ ಅವರು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಮತ್ತು ಇತರ ಅಧಿಕಾರಿಗಳೊಂದಿಗೆ ಕುಳಿತಿದ್ದರೆ, ಅವರ ಬಲಭಾಗದಲ್ಲಿಯ ಖುರ್ಚಿಗಳು ಖಾಲಿ ಇರುವುದನ್ನು ತೋರಿಸಿದೆ. ಪ್ರಕೃತಿ ವಿಕೋಪದ ಸಂದರ್ಭದಲ್ಲಿಯೂ ಬ್ಯಾನರ್ಜಿಯವರ ಇಂತಹ ವರ್ತನೆಯು ವಿಷಾದನೀಯವಾಗಿದೆ ಮತ್ತು ಕೆಳದರ್ಜೆಯ ರಾಜಕಾರಣ ಎಂದು ಬಣ್ಣಿಸಲಾಗಿದೆ.


ಮೋದಿಯವರು ಪರಿಶೀಲನಾ ಸಭೆಗೆ ಆಗಮಿಸಿದಾಗ ಪಶ್ಚಿಮ ಬಂಗಾಳ ಸರಕಾರದ ಯಾರೂ ಅಲ್ಲಿರಲಿಲ್ಲ. ಬ್ಯಾನರ್ಜಿ ಮತ್ತು ಮುಖ್ಯ ಕಾರ್ಯದರ್ಶಿ ಅದೇ ಆವರಣದಲ್ಲಿದ್ದರೂ ಕೂಡಾ ಪ್ರಧಾನಿಯನ್ನು ಬರಮಾಡಿಕೊಳ್ಳಲು ಅವರು ಬಂದಿರಲಿಲ್ಲ ಎಂದಿರುವ ಕೇಂದ್ರ ಸರಕಾರದ ಮೂಲಗಳು ಹೇಳಿವೆ. ಮಮತಾ ಬ್ಯಾನರ್ಜಿಗೆ ಹಾಗೂ ರಾಜ್ಯದ ಉನ್ನತಾಧಿಕಾರಿಗಳಿಗೆ ರಾಜ್ಯಪಾಲರು ಹಾಗೂ ಪ್ರಧಾನಮಂತ್ರಿ ಅರ್ಧ ಗಂಟೆಗೂ ಹೆಚ್ಚು ಕಾಲ ಕಾದಿದ್ದರು ಎಂದು ವರದಿಯಾಗಿದೆ. ಅದಾಗ್ಯೂ, ದಿಢೀರನೆ ಸಭಾಂಗಣವನ್ನು ಪ್ರವೇಶಿಸಿದ ಬ್ಯಾನರ್ಜಿ ಚಂಡಮಾರುತದಿಂದ ಉಂಟಾದ ಹಾನಿಯ ಕುರಿತು ಕೆಲವು ದಾಖಲೆಗಳನ್ನು ಪ್ರಧಾನಿಯವರಿಗೆ ನೀಡಿ, ತನಗೆ ಇತರ ಕಾರ್ಯಕ್ರಮಗಳೂ ಇವೆ ಎಂದು ತಿಳಿಸಿ ಅಲ್ಲಿಂದ ನಿರ್ಗಮಿಸಿದ್ದಾರೆ.

ಭಾರತೀಯ ಗಣರಾಜ್ಯದ ಇತಿಹಾಸದಲ್ಲಿಯೇ ರಾಜ್ಯವೊಂದರ ಮುಖ್ಯಮಂತ್ರಿಗಳು ಪ್ರಧಾನಿ ಮತ್ತು ರಾಜ್ಯಪಾಲರಂತಹ ಉನ್ನತ ಸಾಂವಿಧಾನಿಕ ಹುದ್ದೆಗಳಲ್ಲಿರುವವರ ಜೊತೆಗೆ ಇಷ್ಟೊಂದು ಕೆಟ್ಟದ್ದಾಗಿ, ಅಗೌರವಯುತವಾಗಿ ಮತ್ತು ದುರಹಂಕಾರದಿಂದ ನಡೆದುಕೊಂಡಿರಲಿಲ್ಲ ಎಂದಿವೆ.


ಆದರೆ, ಮುಖ್ಯ ಕಾರ್ಯದರ್ಶಿಯನ್ನ ಏಕಾಏಕಿ ವಾಪಾಸ್‌ ಕರೆಸಿಕೊಂಡಿರುವ ಕೇಂದ್ರ ಸರ್ಕಾರದ ನಡೆಯ ವಿರುದ್ಧ ತೃಣಮೂಲ ಕಾಂಗ್ರೆಸ್‌ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಸ್ವಾತಂತ್ರೋತ್ತರ ಭಾರತದಲ್ಲಿ ಈ ರೀತಿಯ ಘಟನೆ ಎಂದಾದರೂ ನಡೆದಿದೆಯೇ? ಕೇಂದ್ರ ಸರ್ಕಾರ ಒತ್ತಾಯಪೂರ್ವಕವಾಗಿ ರಾಜ್ಯದ ಮುಖ್ಯ ಕಾರ್ಯದರ್ಶಿಯನ್ನು ವಾಪಾಸ್‌ ಕರೆಸಿಕೊಂಡಿದೆ. ಮೋದಿ ಮತ್ತು ಶಾ ರಾಜಕೀಯ ಹಗೆ ಸಾಧಿಸಲು ಎಷ್ಟು ಕೀಳು ಮಟ್ಟಕ್ಕಾದರೂ ಹೋಗುತ್ತಾರೆಂಬುದಕ್ಕೆ ಇದು ಸಾಕ್ಷಿ. ಬಂಗಾಳದ ಜನರು ಮೋದಿ-ಶಾ ರನ್ನು ತಿರಸ್ಕರಿಸಿದ ಅವಮಾನದಿಂದ ಕೇಂದ್ರ ಸರ್ಕಾರ ಬಂಗಾಳದ ಜನರನ್ನು ಈ ರೀತಿ ಅಪಮಾನಗೊಳಿಸಲಾಗುತ್ತಿದೆ ಎಂದು ತೃಣಮೂಲ ಕಾಂಗ್ರೆಸ್‌ ಸಂಸದ ಸುಖೆಂದು ಸೇಖರ್ ರೇ ಹೇಳಿದ್ದಾರೆ
ಕೇಂದ್ರ ಸರ್ಕಾರ ಉನ್ನತಾಧಿಕಾರಿಗಳನ್ನು ಹೀಗೆ ವಾಪಾಸ್‌ ಕರೆಸಿಕೊಳ್ಳುವುದು ಇದೇ ಮೊದಲಲ್ಲ. ಬಂಗಾಳ ವಿಧಾನಸಭಾ ಚುನಾವಣೆಯ ಸಂಧರ್ಭದಲ್ಲಿ ಉನ್ನತ ಹುದ್ದೆಯಲ್ಲಿದ್ದ ಮೂವರು ಐಪಿಎಸ್‌ ಅಧಿಕಾರಿಗಳನ್ನು ಹಿಂದಕ್ಕೆ ಕರೆಸಿಕೊಂಡಿತ್ತು.

Related posts

Latest posts

ಬಡವರಿಗೆ ನೆರವಾಗುವುದನ್ನು ತಡೆಯುವ ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿ ಬ್ಯಾಡ್ಜ್, ಬಾವುಟ ಕೊಡಿ; ಸರಕಾರದ ವಿರುದ್ಧ ಡಿಕೆಶಿ ಗರಂ

'ಬಿಜೆಪಿ ನಾಯಕರು ಜನರ ತೆರಿಗೆ ಹಣದಲ್ಲಿ ನೀಡುವ ಸರ್ಕಾರಿ ಆಹಾರ ಕಿಟ್, ಔಷಧಿ ಮೇಲೆ ತಮ್ಮ ಹಾಗೂ ಪ್ರಧಾನಿ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದರೆ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮ ಶ್ರಮಪಟ್ಟು ದುಡಿದ...

ಸುರಕ್ಷಿತವಾಗಿ ಲಾಕ್‌ಡೌನ್ ತೆರವುಗೊಳಿಸಲು ಸರ್ಕಾರಕ್ಕೆ 10 ಶಿಫಾರಸು ನೀಡಿದ ತಜ್ಞರ ತಂಡ SAGE

ಕರ್ನಾಟಕದಲ್ಲಿ ಕರೋನಾ ನಿಯಂತ್ರಿಸಲು ಹೇರಿರುವ ಲಾಕ್‌ಡೌನ್ ಅನ್ನು ಹೇಗೆ ಸುರಕ್ಷಿತವಾಗಿ ಹಾಗೂ ಸೂಕ್ತವಾಗಿ ತೆರವುಗೊಳಿಸಬಹುದೆಂದು ತಜ್ಞರ ತಂಡವು ಸರ್ಕಾರಕ್ಕೆ ಹತ್ತು ಶಿಫಾರಸುಗಳನ್ನು ನೀಡಿದೆ. ಕೋವಿಡ್ ವಿಪತ್ತಿನ ವಿರುದ್ಧದ ಹೋರಾಟಕ್ಕೆ ರೂಪುಗೊಂಡ SAGE (ಸಮಾಜಮುಖಿ ಕಾರ್ಯಪ್ರವೃತ್ತ...

ಬೆಲೆ ಏರಿಕೆ ಮಾಡಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ- ಡಿ.ಕೆ ಶಿವಕುಮಾರ್

 ಇಂಧನ ಬೆಲೆ ಏರಿಕೆ ಹಿನ್ನೆಲೆ,  ರಾಜ್ಯಾದ್ಯಂತ ಜೂನ್‌ 11 ರಿಂದ 15 ರವರೆಗೆ '100 ನಾಟ್ ಔಟ್' ಹೆಸರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಂದೋಲನ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಇಂದು 900ಕ್ಕೂ ಹೆಚ್ಚು ಜಿ.ಪಂ, ಹೋಬಳಿ...