ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ಅಕ್ಟೋಬರ್ 3ರಂದು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಶಾಂತಯುತವಾಗಿ ಪ್ರತಿಭಟಿಸುತ್ತಿದ್ದ ರೈತರ ಮೇಲೆ ಕೇಂದ್ರ ಸಚಿವನ ಪುತ್ರ ಪ್ರತಿಭಟನಾ ನಿರತ ರೈತರ ಮೇಲೆ ಕಾರು ಹತ್ತಿಸಿ ನಾಲ್ವರು ರೈತರ ಸಾವಿಗೆ ಕಾರಣವಾಗಿದ್ದ. ಈ ಘಟನೆಯ ನಂತರ ಮಂತ್ರಿ ಮಗನನ್ನು ಬಂಧನವಾಗದಿರುವುದನ್ನು ಖಂಡಿಸಿ ದೇಶಾದ್ಯಂತ ತೀವ್ರ ಪ್ರತಿಭಟನೆಗಳು ನಡೆದಿದ್ದವು.
ಉತ್ತರ ಪ್ರದೇಶ ಸರ್ಕಾರ ಮೃತ ರೈತ ಕುಟುಂಬಗಳಿಗೆ ತಲಾ 45 ಲಕ್ಷ ರೂಪಾಯಿಗಳ ಪರಿಹಾರವನ್ನ ಘೋಷಿಸಿತ್ತು. ಘಟನೆ ಸಂಬಂಧ ಉ.ಪ್ರ.ಸರ್ಕಾರವು ನ್ಯಾಯಾಂಗ ತನಿಖೆಗೆ ಆದೇಶಿಸಿತ್ತು. ಮುಖ್ಯ ಆರೋಪಿ ಆಶಿಶ್ ಮಿಶ್ರಾನನ್ನು ಪೊಲೀಸರು ವಿಚಾರಣೆಗೆ ಹಾಜರಾದ ಸಮಯದಲ್ಲಿ ಆರೋಪಿಯನ್ನು ಬಂಧಿಸಿದರು.
ಲಖೀಂಪುರ್ ಖೇರಿ ಹಿಂಸಾಚಾರವನ್ನು ಖಂಡಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದ ʻರೈಲ್ ರೋಕೋʼ ಚಳುವಳಿಯನ್ನು ಪಂಜಾಬ್‌ನಲ್ಲಿ ರೈಲುಗಳನ್ನು ತಡೆದು ಹಳಿಗಳ ಮೇಲೆ ಕುಳಿತು ಪ್ರತಿಭಟನೆಯನ್ನು ನಡೆಸಲಾಯಿತು.
ಲಖೀಂಪುರ್ ಖೇರಿ ಹಿಂಸಾಚಾರದ ಮುಖ್ಯ ಆರೋಪಿ ಆಶಿಶ್ ಮಿಶ್ರಾನ ತಂದೆ ಅಜಯ್ ಮಿಶ್ರಾನನ್ನು ಈ ಕೂಡಲೇ ಸಚಿವ ಸಂಪುಟದಿಂದ ವಜಾಗೊಳಿಸಬೇಕು ಮತ್ತು ಈ ಕೂಡಲೇ ಪೊಲೀಸರು ಅಜಯ್ ಮಿಶ್ರಾ ವಿರುದ್ದ ಸ್ವಯಂಪ್ರೇರಿತರಾಗಿ ದೂರು ದಾಖಲಿಸಿಕೊಂಡು ಬಂಧಿಸಬೇಕೆಂದು ಪ್ರತಿಭಟನಾ ನಿರತ ರೈತರು ಆಗ್ರಹಿಸಿದ್ದಾರೆ.
ರೈತರು ರೈಲ್ ರೋಕೋ ಪ್ರತಿಭಟನೆ ನಡೆಸಿದ ಕಾರಣ ನಾಲ್ಕು ಘಂಟೆಗು ಹೆಚ್ಚು ಕಾಲ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ ಫಿರೋಜ್‌ಪುರ-ಫಜಿಲ್ಕಾ, ಫಿರೋಜ್‌ಪುರ-ಲುಧಿಯಾನ ವಿಭಾಗದಲ್ಲಿ ಪ್ರತಿಭಟನೆ ನಡೆಸಿದ ಕಾರಣ ರೈಲಿನ ಸಂಚಾರಕ್ಕೆ ತೊಂದರೆಯಾಯಿತು ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಕೂಡಲೇ ಕೇಂದ್ರ ಸಚಿವ ಅಜಯ್ ಮಿಶ್ರಾನನ್ನು ಬಂಧಿಸುವಂತೆ ಆಗ್ರಹಿಸಿ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ವತಿಯಿಂದ ಪಂಜಾಬ್ ರಾಜ್ಯದ 11 ಜಿಲ್ಲೆಗಳ 20 ಸ್ಥಳಗಳಲ್ಲಿ ಸಮಿತಿಯ ಸದಸ್ಯರು ಪ್ರತಿಭಟಿಸುತ್ತಿದ್ದಾರೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಸರ್ವಾನ್ ಸಿಂಗ್ ಪಂಧರ್ ಹೇಳಿದ್ದಾರೆ.
ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ದ ರೈತ ಚಳುವಳಿಯ ಮುಂದಾಳತ್ವ ವಹಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ ʻಲಖೀಂಪುರ್ ಖೇರಿ ಪ್ರಕರಣದಲ್ಲಿ ಸಂಪೂರ್ಣವಾಗಿ ನ್ಯಾಯ ಸಿಗುವವರೆಗು ಪ್ರತಿಭಟನೆಗಳನ್ನು ತೀವ್ರಗೊಳಿಸಲಾಗುವುದುʼ ಮತ್ತು ಸೋಮವಾರ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಎಲ್ಲಾ ರೈಲು ಸಂಚಾರವನ್ನು ನಿಲ್ಲಿಸಲಾಗುವುದು ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಲಖೀಂಪುರ್ ಖೇರಿ ಹತ್ಯಾಕಾಂಡದಲ್ಲಿ ನ್ಯಾಯ ಕೊಡಿಸುವ ಸಲುವಾಗಿ ಈ ಪ್ರತಿಭಟನೆಯನ್ನು ನಡೆಸಲಾಗುತ್ತಿದೆ. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾನನ್ನು ಸಂಪುಟದಿಂದ ವಜಾಗೊಳಿಸಿ ಮತ್ತು ಬಂಧಿಸುವಂತೆ ಆಗ್ರಹಿಸಿ ದೇಶಾದ್ಯಂತ ರೈಲ್ ರೋಕೋ ಚಳುವಳಿಗೆ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದೆ.
ಪ್ರತಿಭಟನೆಯ ವೇಳೆ ರೈಲುಗಳಿಗೆ ಮತ್ತು ಸರ್ಕಾರದ ಆಸಿಗೆ ಯಾವುದೇ ರೀತಿ ಹಾನಿ ಮಾಡದೆ ಶಾಂತ ರೀತಿಯಲ್ಲಿ ಪ್ರತಿಭಟನೆ ನಡೆಸುವಂತೆ ಎಸ್‌ಕೆಎಂ ಕರೆ ನೀಡಿದೆ.