ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಅನೇಕರು ದಿನಕ್ಕೆ 4–5 ಗಂಟೆ ಅಥವಾ ಅದಕ್ಕಿಂತಲೂ ಕಡಿಮೆ ಸಮಯ ನಿದ್ರೆ ಮಾಡುವ ಅಭ್ಯಾಸಕ್ಕೆ ಒಳಗಾಗುತ್ತಿದ್ದಾರೆ. ತಡರಾತ್ರಿವರೆಗೆ ಮೊಬೈಲ್ ಫೋನ್ ಬಳಕೆ, ಹೆಚ್ಚುವರಿ ಕೆಲಸದ ಒತ್ತಡ ಹಾಗೂ ಅನಿಯಮಿತ ದಿನಚರಿ ಇದಕ್ಕೆ ಪ್ರಮುಖ ಕಾರಣಗಳಾಗಿವೆ.

ಆದರೆ ತಜ್ಞರ ಪ್ರಕಾರ, ಇಂತಹ ನಿದ್ರೆಯ ಕೊರತೆ ಮುಂದಿನ ದಿನಗಳಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ವಿಶೇಷವಾಗಿ, ದಿನಕ್ಕೆ 6 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವವರಲ್ಲಿ ಬೊಜ್ಜು ಹಾಗೂ ಹೃದಯ ಸಂಬಂಧಿತ ಕಾಯಿಲೆಗಳ ಅಪಾಯ ಹೆಚ್ಚಿರುತ್ತದೆ ಎಂದು ಹಲವು ಅಧ್ಯಯನಗಳು ತಿಳಿಸಿವೆ.

ಸರಿಯಾದ ನಿದ್ರೆ ಇಲ್ಲದಿದ್ದರೆ ದೇಹದಲ್ಲಿ ಆಯಾಸ ಉಂಟಾಗುವುದಷ್ಟೇ ಅಲ್ಲದೆ, ಹೊಟ್ಟೆಯ ಸುತ್ತಲೂ ಕೊಬ್ಬು ಜಮಾಗುವ ಸಾಧ್ಯತೆ ಹೆಚ್ಚಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ದಿನಕ್ಕೆ 7 ರಿಂದ 8 ಗಂಟೆಗಳಷ್ಟು ಉತ್ತಮ ಗುಣಮಟ್ಟದ ನಿದ್ರೆ ಮಾಡುವವರು ದೇಹದ ಕೊಬ್ಬನ್ನು, ವಿಶೇಷವಾಗಿ ಹೊಟ್ಟೆಯ ಕೊಬ್ಬನ್ನು ಉತ್ತಮವಾಗಿ ನಿಯಂತ್ರಿಸಬಹುದು ಎಂದು ಸಂಶೋಧನೆಗಳು ತಿಳಿಸಿವೆ.

ನಿದ್ರೆಯ ಕೊರತೆ ಆಹಾರ ಪದ್ಧತಿ, ಚಯಾಪಚಯ ಕ್ರಿಯೆ ಹಾಗೂ ಹಾರ್ಮೋನುಗಳ ಸಮತೋಲನದ ಮೇಲೆ ಪರಿಣಾಮ ಬೀರುತ್ತದೆ. ನಿದ್ರೆ ಕಡಿಮೆ ಇರುವವರು ಹೆಚ್ಚಾಗಿ ತಿಂಡಿ ತಿನ್ನುವ ಅಭ್ಯಾಸ ಹೊಂದಿರುತ್ತಾರೆ. ಇದರಿಂದ ಹೆಚ್ಚಿನ ಕ್ಯಾಲೋರಿ ಸೇವನೆ ಆಗಿ ತೂಕ ಹೆಚ್ಚಾಗುತ್ತದೆ.

ಸಾಕಷ್ಟು ನಿದ್ರೆ ಇಲ್ಲದಿದ್ದಾಗ ದೇಹವು ಶಕ್ತಿಯನ್ನು ಉಳಿಸುವ ಸ್ಥಿತಿಗೆ ಹೋಗುತ್ತದೆ. ಈ ಸಂದರ್ಭ ದೇಹವು ಸೇವಿಸಿದ ಆಹಾರವನ್ನು ಶಕ್ತಿಯಾಗಿ ಬಳಸುವ ಬದಲು ಕೊಬ್ಬಾಗಿ ಪರಿವರ್ತಿಸಿ, ವಿಶೇಷವಾಗಿ ಹೊಟ್ಟೆಯ ಸುತ್ತ ಸಂಗ್ರಹಿಸುತ್ತದೆ.
ಇದನ್ನೂ ಓದಿ: Kumaraswamy:ಹೆಚ್‌ಡಿಕೆ ಎಂಬ ಗೊಂದಲದ ಗೂಡು: ಅವಸಾನದ ಅಂಚಿನಲ್ಲಿ ಜೆಡಿಎಸ್ ಹೆಮ್ಮರ!
ಹಲವರು ಕಟ್ಟುನಿಟ್ಟಿನ ಆಹಾರ ಕ್ರಮ ಹಾಗೂ ವ್ಯಾಯಾಮ ಅನುಸರಿಸಿದರೂ ಹೊಟ್ಟೆಯ ಕೊಬ್ಬು ಕಡಿಮೆಯಾಗದಿರುವುದಕ್ಕೆ ನಿದ್ರೆಯ ಕೊರತೆಯೇ ಪ್ರಮುಖ ಕಾರಣವಾಗಿರಬಹುದು ಎಂದು ತಜ್ಞರು ತಿಳಿಸಿದ್ದಾರೆ. ಆರು ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವವರಿಗೆ ತೂಕ ಇಳಿಸಿಕೊಳ್ಳುವುದು ಹೆಚ್ಚು ಕಷ್ಟಕರವಾಗುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ.

ತಜ್ಞರ ಅಭಿಪ್ರಾಯದಂತೆ, ಉತ್ತಮ ಮತ್ತು ಆಳವಾದ ನಿದ್ರೆ ದೇಹದ ಚಯಾಪಚಯ ಕ್ರಿಯೆಯನ್ನು ಚುರುಕುಗೊಳಿಸಿ, ಕೊಬ್ಬನ್ನು ಶಕ್ತಿಯಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ. ಆದರೆ ಆಗಾಗ ನಿದ್ರೆಗೆ ಅಡ್ಡಿಯಾಗುವುದು ಅಥವಾ ತಡರಾತ್ರಿ ಎಚ್ಚರವಾಗಿರುವುದು ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸಿ ಹೊಟ್ಟೆಯ ಕೊಬ್ಬಿನ ಹೆಚ್ಚಳಕ್ಕೆ ಕಾರಣವಾಗುತ್ತದೆ. ಹೀಗಾಗಿ ದಿನಕ್ಕೆ ಎಂಟು ಗಂಟೆ ಸಂಪೂರ್ಣ ನಿದ್ದೆ ಮಾಡಿ ಆರೋಗ್ಯವಾಗಿರಿ












