• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಜೀವನದ ಶೈಲಿ

ವರ್ಗಪ್ರಜ್ಞೆಯ ಕೊರತೆಯೂ ಶ್ರಮಿಕರ ಐಕ್ಯತೆಯೂ

ನಾ ದಿವಾಕರ by ನಾ ದಿವಾಕರ
April 30, 2024
in ಜೀವನದ ಶೈಲಿ, ದೇಶ, ವಿದೇಶ
0
ಕರಾಳ ವಾಸ್ತವವೂ ಪರ್ಯಾಯದ ಅನಿವಾರ್ಯತೆಯೂ
Share on WhatsAppShare on FacebookShare on Telegram

ADVERTISEMENT

ನಾ ದಿವಾಕರ

ಮೇ 1ರ ಸಾರ್ವತ್ರಿಕ ಸಂದೇಶವನ್ನು ಗ್ರಹಿಸುವುದರಲ್ಲಿ ಕಾರ್ಮಿಕ ಚಳುವಳಿ ಮರುವಿಮರ್ಶೆಗೆ ಮುಂದಾಗಬೇಕಿದೆ

ಜಗತ್ತು ಕಳೆದ  150 ವರ್ಷಗಳಲ್ಲಿ ಆರ್ಥಿಕವಾಗಿ ಅಭಿವೃದ್ಧಿಯ ಶಿಖರ ತಲುಪಿದೆ, ಪ್ರಗತಿಯ ಮಾನದಂಡವಾಗಿ ಎಲ್ಲ ದೇಶಗಳಲ್ಲೂ ನಗರೀಕರಣ ಮತ್ತು ನಗರವಾಸಿಗಳ ಮೂಲ ಸೌಕರ್ಯಗಳನ್ನು ಪ್ರಧಾನವಾಗಿ ಪರಿಗಣಿಸಲಾಗುತ್ತಿದೆ. ಇದರೊಂದಿಗೆ ಮನುಕುಲ ಸಾಮಾಜಿಕವಾಗಿ ಆಧುನಿಕತೆಯನ್ನು ಮೈಗೂಡಿಸಿಕೊಂಡಿದೆ, ಮಾನವ ಸಮಾಜ ಸಾಂಸ್ಕೃತಿಕವಾಗಿ ಇಡೀ ಜಗತ್ತನ್ನು ಒಂದಾಗಿಸಿದೆ, ಆಧುನಿಕ ತಂತ್ರಜ್ಞಾನದ ಡಿಜಿಟಲ್‌ ಯುಗದಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಕ್ಷಣಮಾತ್ರದಲ್ಲಿ ಸಂಪರ್ಕಿಸುವ ಸಾಧನಗಳು ಲಭ್ಯವಾಗಿವೆ. ಸಂವಹನ ಕ್ರಾಂತಿಯ ದೆಸೆಯಿಂದ ಮನುಷ್ಯರ ನಡುವಿನ ಸಂವಾದ ಅತ್ಯಂತ ಸುಲಭವಾಗಿದ್ದು, ತಳಮಟ್ಟದ ಸಮಾಜದಲ್ಲಿ ಹುಟ್ಟುವ ಕ್ಷೀಣ ಧ್ವನಿ ಕೆಲವೇ ಸೆಕಂಡುಗಳಲ್ಲಿ ಹಿಮಾಲಯದೆತ್ತರಕ್ಕೆ ತಲುಪಲು ಸಾಧ್ಯವಾಗಿದೆ. ಸಾಮಾಜಿಕ ಅಂತಸ್ತು, ಬೌದ್ಧಿಕ ವಿದ್ವತ್ತುಗಳ ಎಲ್ಲೆಗಳನ್ನು ಮೀರಿ ಡಿಜಿಟಲ್‌ ಸಂವಹನ ಸೇತುಗಳು ಸಮಾಜದ ಎಲ್ಲ ವರ್ಗಗಳ ನಡುವೆ ಭಾವನಾತ್ಮಕ ಸಂಬಂಧಗಳನ್ನು ಬೆಸೆಯಲು ನೆರವಾಗುತ್ತಿವೆ.

ಈ ಕ್ರಾಂತಿಕಾರಿ ಬೆಳವಣಿಗೆಯ ಮತ್ತೊಂದು ಬದಿಯಲ್ಲಿ ನಿಂತು ನೋಡಿದಾಗ, 1886ರ ಹೇ ಮಾರ್ಕೆಟ್‌ ಚೌಕದಲ್ಲಿ ಮೊಳಗಿದ ವಿಶ್ವ ಕಾರ್ಮಿಕರ ಕ್ರಾಂತಿಯ ಕಹಳೆ, ಬಂಡವಾಳಶಾಹಿಯ ತೀವ್ರ ದಬ್ಬಾಳಿಕೆ, ಶೋಷಣೆಗಳ ಹೊರತಾಗಿಯೂ ಇಂದಿಗೂ ಸಹ ವಿಶ್ವದ ಮೂಲೆ ಮೂಲೆಗಳಲ್ಲಿ ಕ್ಷೀಣ ಧ್ವನಿಯಲ್ಲಾದರೂ ಕೇಳಿಬರುತ್ತಿರುವುದು ಗಮನಾರ್ಹ. ಆದರೆ ಈ ಕೂಗು ಸಮಾಜದ ಒಂದು ವರ್ಗಕ್ಕೆ , ಅಂದರೆ ಆಳುವ ವರ್ಗಗಳಿಗೆ, ಮೇಲ್ಪದರದ ಸಮಾಜಕ್ಕೆ ಕೇಳಿಸದೆ ಇರುವುದು ಏನನ್ನು ಸೂಚಿಸುತ್ತದೆ ? ಮೇ 1 ಎಂದರೆ ಕಾರ್ಮಿಕರ ಪಾಲಿಗೆ ಬಂಡವಾಳಶಾಹಿಯ ಕ್ರೌರ್ಯ ಮತ್ತು ದಬ್ಬಾಳಿಕೆಯನ್ನು ಮತ್ತೆ ಮತ್ತೆ ನೆನಪಿಸುವ ಒಂದು ಕರಾಳ ನೆನಪು. ಹೇ ಮಾರ್ಕೆಟ್‌ ಚೌಕದಲ್ಲಿ ಹುತಾತ್ಮರಾದ ಕಾರ್ಮಿಕ ಬಂಧುಗಳ ತ್ಯಾಗ ಬಲಿದಾನಗಳನ್ನು ನೆನೆಯುವ ಒಂದು ದಿನ. ಇದನ್ನೂ ಮೀರಿ, ನವ ಉದಾರವಾದದ ಹೊಸ ರೂಪದಲ್ಲಿ ಬಂಡವಾಳಶಾಹಿಯು ಮೆರೆಯುತ್ತಿರುವ ಕ್ರೌರ್ಯ ಮತ್ತು ಅಮಾನುಷತೆಯನ್ನು ಕಟ್ಟಕಡೆಯ ಶ್ರಮಿಕನಿಗೂ ಮನದಟ್ಟು ಮಾಡುವ ಒಂದು ದಿನ.

ನವ ಭಾರತದಲ್ಲಿ ಶ್ರಮಿಕರ ಕ್ಷೀಣ ಧ್ವನಿ

ನವ ಭಾರತ ಅಮೃತ ಕಾಲದತ್ತ ಧಾವಿಸುತ್ತಿರುವ ಹೊತ್ತಿನಲ್ಲಿ ಭಾರತವೂ ಇದೇ ಕ್ರೂರ ದಬ್ಬಾಳಿಕೆಗೆ ಸಾಕ್ಷಿಯಾಗುತ್ತಾ, ಶ್ರಮಜೀವಿಗಳನ್ನು ದಿನದಿಂದ ದಿನಕ್ಕೆ ನಿಕೃಷ್ಟತೆಯೆಗೆ ತಳ್ಳುತ್ತಿದೆ. ಈ ವಿಷಮ ಸನ್ನಿವೇಶದಲ್ಲೇ ದೇಶದ ಪ್ರಜಾಪ್ರಭುತ್ವವು ಮತ್ತೊಂದು ಅಗ್ನಿಪರೀಕ್ಷೆಯನ್ನು ಎದುರಿಸುತ್ತಿದ್ದು, ಸಂವಿಧಾನದತ್ತ ಪ್ರಜಾಪ್ರಭುತ್ವ ಹಾಗೂ ಬಲಪಂಥೀಯ ಸರ್ವಾಧಿಕಾರದ ನಡುವೆ ಒಂದನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿದೆ. 2024ರ ಮಹಾಚುನಾವಣೆಗಳಲ್ಲಿ ಅತ್ಯಂತ ನಿರ್ಲಕ್ಷಿತವಾಗಿ ಕಾಣಬಹುದಾದ ಒಂದು ವರ್ಗ ಎಂದರೆ ಅದು ಕಾರ್ಮಿಕರೇ ಆಗಿದ್ದಾರೆ. ಕಾಂಗ್ರೆಸ್‌ ಮತ್ತು ಬಿಜೆಪಿ ತಮ್ಮ ಪ್ರಣಾಳಿಕೆಗಳಲ್ಲಿ ವಲಸೆ ಕಾರ್ಮಿಕರಿಗಾಗಿ ಕೆಲವು ಸಕಾರಾತ್ಮಕ ಯೋಜನೆಗಳನ್ನು ಪ್ರಸ್ತಾಪಿಸಿದ್ದರೂ, ಇಡೀ ಚುನಾವಣಾ ಪ್ರಚಾರದಲ್ಲಿ, ಎಡಪಕ್ಷಗಳನ್ನು ಹೊರತುಪಡಿಸಿ,  ಎಲ್ಲಿಯೂ ಸಹ ಈ ದೇಶದ ಕಾರ್ಮಿಕ ವರ್ಗ ಎದುರಿಸುತ್ತಿರುವ ಅನಿಶ್ಚಿತತೆ, ಅಭದ್ರತೆ ಮತ್ತು ಆತಂಕಗಳ ಸುಳಿವೂ ಕಾಣುತ್ತಿಲ್ಲ.  ಅಥವಾ ನವ ಉದಾರವಾದದ ಅಪಾಯಗಳ ಕುರಿತು ವ್ಯಾಖ್ಯಾನಗಳೂ ಕಾಣುತ್ತಿಲ್ಲ.

ಅಮೃತ ಕಾಲದ ನವ ಭಾರತದಲ್ಲಿ ನವಉದಾರವಾದ ಮತ್ತು ಕಾರ್ಪೋರೇಟ್‌ ಮಾರುಕಟ್ಟೆ ಆರ್ಥಿಕತೆ ತನ್ನ ಉಚ್ಛ್ರಾಯ ಹಂತದಲ್ಲಿರುವಂತೆಯೇ ಶ್ರಮಜೀವಿಗಳನ್ನು ಸಾಂಸ್ಕೃತಿಕವಾಗಿ ಅಡ್ಡಡ್ಡಲಾಗಿ ಸೀಳುವ ಬಹುಸಂಖ್ಯಾವಾದಿ ರಾಷ್ಟ್ರೀಯತೆ ಮತ್ತು ಮತಿಯವಾದಿ ರಾಜಕಾರಣವು ಸಹ ತನ್ನ ಅಧಿಕಾರ ವ್ಯಾಪ್ತಿಯನ್ನು ಮತ್ತಷ್ಟು ಹಿಗ್ಗಿಸಿಕೊಂಡು, ದೇಶದ ಸಂವಿಧಾನದ ಮೇಲೆ ಹಿಡಿತ ಸಾಧಿಸಲು ಶತಪ್ರಯತ್ನ ಮಾಡುತ್ತಿದೆ. ಡಾ. ಬಿ.ಆರ್.‌ ಅಂಬೇಡ್ಕರ್‌ ಗುರುತಿಸಿದಂತೆ ಭಾರತದಲ್ಲಿ ಶ್ರಮವಿಭಜನೆಯೊಂದಿಗೆ ಶ್ರಮಿಕರ ವಿಭಜನೆಯೂ ಸಹ ಅಷ್ಟೇ ತೀವ್ರಗತಿಯಲ್ಲಿ ನಡೆಯುತ್ತದೆ. ಸಾಮಾಜಿಕ ಪಿರಮಿಡ್ಡಿನ ತಳಪಾಯದಲ್ಲಿರುವ ಅತ್ಯಂತ ನಿಕೃಷ್ಟ ಬದುಕಿನ ಸಾಮಾನ್ಯರ ನಡುವೆಯೂ ಜಾತಿ, ಧರ್ಮ ಮತ್ತು ಆಚರಣೆಗಳ ಮೂಲಕ ಬಿರುಕುಗಳನ್ನು ಮೂಡಿಸುತ್ತಿರುವ ಮತೀಯರಾಜಕಾರಣವು, ಇಲ್ಲಿ ಅತ್ಯವಶ್ಯವಾಗಿ ಮೂಡಲೇಬೇಕಾದ ವರ್ಗಪ್ರಜ್ಞೆಗೆ ಅತಿ ದೊಡ್ಡ ತೊಡಕಾಗಿ ಪರಿಣಮಿಸುತ್ತಿದೆ.

ಎಲ್ಲ ಸಾಮಾಜಿಕ-ಆರ್ಥಿಕ ಸ್ತರಗಳನ್ನೂ ಮೀರಿದ ಸಾಂಸ್ಕೃತಿಕ ಪ್ರಜ್ಞೆಯನ್ನು ರೂಢಿಸಿಕೊಳ್ಳಬೇಕಾದ ಶ್ರಮಿಕ ವರ್ಗ ಇಂದು ಜಾತಿ ವ್ಯವಸ್ಥೆಯ ಶ್ರೇಣೀಕರಣದಿಂದ ವಿಘಟಿತವಾಗಿದ್ದು, ವರ್ಗಪ್ರಜ್ಞೆಯೂ ಸಹ ತನ್ನ ಸಾರ್ವತ್ರಿಕತೆಯನ್ನು ಕಳೆದುಕೊಂಡಿದೆ. ಶ್ರಮಿಕ ಸಮಾಜವು ವರ್ಗದ ನೆಲೆಯಲ್ಲಿ ನಿಂತು ತನ್ನೊಳಗಿನ ಜಾತಿ-ಮತದ ಗೋಡೆಗಳನ್ನು ಕೆಡವುವ ಮೂಲಕ, ಕಾಯಕ ಜೀವಿಗಳ ನಡುವೆ ಸಂವೇದನಾಶೀಲ ಸಂಬಂಧಗಳನ್ನು ರೂಪಿಸಲು ಬಯಸುತ್ತದೆ. ಆದರೆ ಭಾರತದ ಸಂದರ್ಭದಲ್ಲಿ ಈ ಸಮಾಜದಲ್ಲೂ ಸಹ ಜಾತಿಯ ಒಳಬಿರುಕುಗಳು ಸಮುದಾಯಗಳನ್ನು ಸಮತಲವಾಗಿ ಬೇರ್ಪಡಿಸುತ್ತಾ ಪ್ರಾಚೀನ ಸಮಾಜದ ಮೇಲರಿಮೆ-ಕೀಳರಿಮೆಗಳನ್ನು ವ್ಯವಸ್ಥಿತವಾಗಿ ಪೋಷಿಸಲಾಗುತ್ತಿದೆ.  ಸಮಾಜದ ಮೇಲೆ ಸಾಂಸ್ಕೃತಿಕವಾಗಿ ಹಿಡಿತ ಸಾಧಿಸಿರುವ ಮೇಲ್ಜಾತಿ ಮತ್ತು ಮೇಲ್ಪಪದರದ ಸಮುದಾಯಗಳು ತಮ್ಮ ಕಾರ್ಯಸಾಧನೆಗಾಗಿ ಬಂಡವಾಳ ಮತ್ತು ಮಾರುಕಟ್ಟೆಯ ಮೇಲೂ ಆಧಿಪತ್ಯ ಸಾಧಿಸುವ ಮೂಲಕ, ತನ್ನದೇ ಆದ narrativesಗಳನ್ನು  ಸೃಷ್ಟಿಸುತ್ತಿವೆ.

ಶ್ರಮಿಕ ವರ್ಗದ ಮೇಲಿನ ದಾಳಿ

ಭಾರತದ ಸಮಸ್ತ ಶ್ರಮಿಕ ವರ್ಗವು ಇಂದು ಎರಡು ದಿಕ್ಕುಗಳಿಂದ ದಾಳಿ ಎದುರಿಸುತ್ತಿದೆ. ಮೊದಲನೆಯದು ಕಳೆದ ಹತ್ತು ವರ್ಷಗಳಲ್ಲಿ ಸಂಘಟಿತ ಕಾರ್ಮಿಕರ ಸುಭದ್ರ ಬುನಾದಿಯನ್ನೂ ಅಲುಗಾಡಿಸುವಂತಹ ಆರ್ಥಿಕ ನೀತಿಗಳು. ಏಳು ದಶಕಗಳಲ್ಲಿ ಭಾರತದ ಲಕ್ಷಾಂತರ ಶ್ರಮಜೀವಿಗಳು ಕಟ್ಟಿಬೆಳೆಸಿದ ಔದ್ಯೋಗಿಕ-ಔದ್ಯಮಿಕ ಸೌಧಗಳನ್ನು Monetisation (ನಗದೀಕರಣ) ಮೂಲಕ ಖಾಸಗಿ-ಕಾರ್ಪೋರೇಟ್‌ ಉದ್ಯಮಿಗಳಿಗೆ ಒಪ್ಪಿಸಲಾಗುತ್ತಿದೆ. ಸಂವಿಧಾನವು ಖಾತರಿಪಡಿಸುವ ಮೀಸಲಾತಿ ಸೌಲಭ್ಯವೂ ಸಹ ಅಪ್ರಸ್ತುತವಾಗುವ ರೀತಿಯಲ್ಲಿ ಸರ್ಕಾರಿ ಉದ್ಯೋಗಾವಕಾಶಗಳು ಪಾತಾಳ ತಲುಪಿವೆ. ಆಡಳಿತ ವ್ಯವಸ್ಥೆಯಲ್ಲಿ, ಕೈಗಾರಿಕೆ ಹಾಗೂ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಲ್ಲಿ ಉದ್ಯೋಗಾವಕಾಶಗಳಿಲ್ಲದೆ ವಿದ್ಯಾವಂತ ಯುವ ಸಮೂಹವೂ ಸಹ ಡಿಜಿಟಲ್‌ ಯುಗದ ಗಿಗ್‌ ಕಾರ್ಮಿಕರಾಗಿ ( ಸ್ವಿಗಿ, ಜಮೋಟೋ, ಓಲಾ, ಊಬರ್‌ ಇತ್ಯಾದಿ ವಲಯಗಳು) ದುಡಿಯುವಂತಾಗಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ತಮ್ಮ ಪ್ರಣಾಳಿಕೆಗಳಲ್ಲಿ ಈ ಕಾರ್ಮಿಕರ ಬಗ್ಗೆ ಯಾವುದೇ ಯೋಜನೆಗಳನ್ನು ಘೋಷಿಸಿಲ್ಲ. ಸ್ಥಿರ ನೌಕರಿ, ಸುಭದ್ರ ಭವಿಷ್ಯ ಹಾಗೂ ಸುಗಮ ಜೀವನೋಪಾಯದ ಮಾರ್ಗಗಳೇ ಇಲ್ಲದ ಯುವ ಪಡೆ ನಾಳೆಗಳನ್ನು ಎಣಿಸುತ್ತಲೇ ಬಲಪಂಥೀಯ-ಮತೀಯ ರಾಜಕಾರಣದ ಕಾಲಾಳುಗಳಾಗಿ ಬಳಕೆಯಾಗುತ್ತಿದ್ದಾರೆ.

ಕಳೆದ ಹತ್ತು ವರ್ಷಗಳಲ್ಲಿ ಕಾರ್ಮಿಕ ಚಳುವಳಿಗಳು ಅಸಂಘಟಿತ ವಲಯದ ಶ್ರಮಜೀವಿಗಳನ್ನು ಸಂಘಟಿತರನ್ನಾಗಿ ಮಾಡುವಲ್ಲಿ ಸಾಕಷ್ಟು ಪರಿಶ್ರಮಮ ವಹಿಸಿದ್ದರೂ ಸಹ, 2021-22ರ ಆರ್ಥಿಕ ಸಮೀಕ್ಷೆಯು 2019ರ ಅಂಕಿಅಂಶಗಳ ಅನುಸಾರ 43.99 ಕೋಟಿ ಅಂಘಟಿತ ಕಾರ್ಮಿಕರನ್ನು ಗುರುತಿಸಿದೆ. ಅತಿಹೆಚ್ಚು ವಲಸೆ ಕಾರ್ಮಿಕರನ್ನು ಹೊಂದಿರುವ ದೇಶವಾಗಿ ಭಾರತ ಹೊರಹೊಮ್ಮಿದ್ದರೂ, ವಲಸಿಗರಿಗಾಗಿ ಸರ್ಕಾರಗಳು ಹಲವು ಯೋಜನೆಗಳನ್ನು ರೂಪಿಸಿದ್ದರೂ, ಯಾವುದೇ ಸ್ತರದಲ್ಲೂ ಸರ್ಕಾರಗಳು “ವಲಸೆ ಕಾರ್ಮಿಕ ನೀತಿ ”ಯೊಂದನ್ನು ಈವರೆಗೂ ಸಿದ್ಧಪಡಿಸಿಲ್ಲ. ನಗರೀಕರಣ ಪ್ರಕ್ರಿಯೆ ತೀವ್ರಗೊಂಡಂತೆಲ್ಲಾ ಗ್ರಾಮೀಣ ಪ್ರದೇಶಗಳಿಂದ ಉದ್ಯೋಗ ಅರಸಿ ನಗರಕ್ಕೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಶ್ರಮಜೀವಿಗಳ ಜೀವನ ಮತ್ತು ಜೀವನೋಪಾಯವನ್ನು ಮಾರುಕಟ್ಟೆ ಆರ್ಥಿಕತೆಯೇ ನಿರ್ಧರಿಸುವಂತಾಗಿದೆ. ತೀವ್ರವಾಗುತ್ತಿರುವ ಕೃಷಿ ಬಿಕ್ಕಟ್ಟಿನ ಪರಿಣಾಮ ಹಳ್ಳಿಗಳಿಂದ ಗುಳೆ ಹೋಗುವ ಯುವ ಸಮೂಹ ನಗರಗಳಲ್ಲಿ ಅಲ್ಪ ಆದಾಯದಿಂದಲೇ ತಮ್ಮ ಕುಟುಂಬಗಳನ್ನು ನಿರ್ವಹಿಸುವಂತಾಗಿದೆ.

ಸುರಕ್ಷಿತ ಬದುಕು ಮತ್ತು ಸುಭದ್ರ ಭವಿಷ್ಯವಿಲ್ಲದ ಶ್ರಮಜೀವಿಗಳ ಒಂದು ವರ್ಗ ಬಂಡವಾಳಿಗ ರಾಜಕೀಯ ಪಕ್ಷಗಳ ಬೆನ್ನೆಲುಬಾಗಿದ್ದರೆ ಮತ್ತೊಂದು ವರ್ಗವು ಬಲಪಂಥೀಯ ರಾಜಕಾರಣ, ಕೋಮುವಾದ-ಮತೀಯವಾದ-ಮತಾಂಧತೆಯ ಕಾವಲುಪಡೆಗಳಾಗಿ ಬಳಕೆಯಾಗುತ್ತಿದೆ. ಮತ್ತೊಂದೆಡೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಸತತವಾಗಿ ಶಿಥಿಲವಾಗುತ್ತಿರುವುದರಿಂದ, ಸಂಘಟಿತ ಕಾರ್ಮಿಕರನ್ನು ಪ್ರತಿನಿಧಿಸುವ ಕಾರ್ಮಿಕ ಸಂಘಟನೆಗಳು ತಮ್ಮ ರಾಜಕೀಯ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಶ್ರಮಿಸುವಂತಾಗಿದೆ. ಸುಭದ್ರ ನೌಕರಿ ಇರುವ ಸಂಘಟಿತ ವಲಯದ ಕಾರ್ಮಿಕರ ನಡುವೆ ರಾಜಕೀಯ ಪ್ರಜ್ಞೆ ಬೆಳೆಸಲು ವಿಫಲವಾಗಿರುವ ಭಾರತದ ಕಾರ್ಮಿಕ ಚಳುವಳಿಯು ಇಂದು ಆರ್ಥಿಕತೆಯ ಸೀಮಿತ ಚೌಕಟ್ಟಿನೊಳಗೆ ಸಿಲುಕಿರುವುದು ಒಪ್ಪಲೇಬೇಕಾದ ಸತ್ಯ. ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ನಡೆಯುವ ವಾರ್ಷಿಕ ಮುಷ್ಕರಗಳು ಭಾರತದ ಶ್ರಮಿಕ ವರ್ಗದ ಸಂಘಟಿತ ಧ್ವನಿಯಾಗಿ ಕಂಡುಬಂದರೂ, ಈ ಕರಾಳ ನೀತಿಗಳನ್ನು ಕೈಬಿಡಲು ಅಗತ್ಯವಾದ ರಾಜಕೀಯ ಶಕ್ತಿ ತಳಮಟ್ಟದಲ್ಲೂ ಇಲ್ಲದಿರುವುದು, ಸಂಘಟಿತ ವಲಯದ ಚಾರಿತ್ರಿಕ ದೌರ್ಬಲ್ಯದ ಫಲ ಎಂದಷ್ಟೇ ಹೇಳಬಹುದು.

ಕಾರ್ಮಿಕರ ಐಕ್ಯತೆ ಮತ್ತು ವರ್ಗಪ್ರಜ್ಞೆಯ ಧ್ವನಿ

ಮೇ  1ರಂದು ಕೆಂಬಾವುಟದ ಮುಂದೆ ನಿಂತು “ ವಿಶ್ವ ಕಾರ್ಮಿಕರೇ ಒಂದಾಗಿ-ಕಾರ್ಮಿಕ ಐಕ್ಯತೆ ಚಿರಾಯುವಾಗಲಿ ” ಎಂಬ ಘೋಷಣೆ ಕೂಗುವ ಮುನ್ನ ಈ ರಾಜಕೀಯ ಪ್ರಜ್ಞೆಯ ಕೊರತೆ ನಮ್ಮನ್ನು ಕಾಡಬೇಕಿದೆ. “ ಒಂದೇ ಗುರಿ-ಒಂದೇ ದಾರಿ-ಹಲವು ದಿಕ್ಕುಗಳು ” ಭಾರತದ ಕಾರ್ಮಿಕ ಚಳುವಳಿಯನ್ನು ನಿರ್ದೇಶಿಸುತ್ತಿರುವ ಸೂತ್ರವಾಗಿದ್ದು, ನವ ಉದಾರವಾದದ ಫಲಾನುಭವಿಗಳಾದ ಹಿತವಲಯದ ಕಾರ್ಮಿಕ ವರ್ಗ ತನ್ನ ಸಾಮಾಜಿಕ ಜವಾಬ್ದಾರಿಯನ್ನೂ ಮರೆತು ಆಳುವ ವರ್ಗಗಳ ಬೆಂಗಾವಲಿಗೆ ನಿಂತಿರುವುದು ನಮ್ಮ ಸಂಘಟನಾತ್ಮಕ ಪ್ರಜ್ಞೆಯನ್ನು ಬಡಿದೆಬ್ಬಿಸಬೇಕಿದೆ. ತಮ್ಮ ಸೈದ್ಧಾಂತಿಕ-ತಾತ್ವಿಕ ನಂಬಿಕೆ ಮತ್ತು ಅಸ್ತಿತ್ವಗಳಿಗೆ ಕಟಿಬದ್ಧವಾಗಿರುವ ಸಂಘಟಿತ ಹಿತವಲಯದ ಕಾರ್ಮಿಕರಲ್ಲಿ ಆಳವಾಗಿ ಬೇರೂರಿರುವ ಶ್ರೇಷ್ಠತೆಯ ಧೋರಣೆ (Labour aristocracy) ಯನ್ನು ಹೋಗಲಾಡಿಸುವ ಸವಾಲು ಸದಾ ನಮ್ಮೆದುರಿದೆ. ಮತ್ತೊಂದೆಡೆ ಸಂಘಟನಾತ್ಮಕವಾಗಿ ನಾಯಕತ್ವವನ್ನು ಆವರಿಸಿರುವ ಭದ್ರಕೋಟೆಯ ಯಜಮಾನಿಕೆಯ ಧೋರಣೆ (Labour fiefdom) ಯಿಂದ ಹೊರಬಂದು ಸಮಸ್ತ ಶ್ರಮಜೀವಿಗಳ ಐಕ್ಯತೆಯತ್ತ ಯೋಚಿಸುವುದು ಕಾರ್ಮಿಕ ಸಂಘಟನೆಗಳ ಆದ್ಯತೆಯಾಗಬೇಕಿದೆ.

ಕಾರ್ಮಿಕರಲ್ಲಿ ವರ್ಗ ಪ್ರಜ್ಞೆಯನ್ನು ಬೆಳೆಸುವುದೆಂದರೆ ದೇಶದ ಸಮಾಜ-ಸಂಸ್ಕೃತಿ ಮತ್ತು ಜನಜೀವನವನ್ನು ನಿರ್ದೇಶಿಸಿ ನಿಯಂತ್ರಿಸುವ ಪ್ರಧಾನವಾಹಿನಿಯ ರಾಜಕೀಯ ಚಿಂತನಾವಾಹಿನಿಗಳ ಬಗ್ಗೆ ಜಾಗ್ರತೆ ಮೂಡಿಸುವುದೇ ಆಗಿರುತ್ತದೆ. ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ವರ್ಗ ಪ್ರಜ್ಞೆಯೂ ಸಹ ಲಂಬಾನುಕ್ರಮದಲ್ಲಿ ನಿರಂತರ ವಿಘಟನೆಗೊಳಗಾಗುವುದರಿಂದ, ತಳಸಮುದಾಯದ ಶ್ರಮಿಕ ವರ್ಗಗಳಲ್ಲಿ ವರ್ಗ ಪ್ರಜ್ಞೆ ಎನ್ನುವುದು ವಿಶಾಲಾರ್ಥವನ್ನು ಪಡೆದುಕೊಳ್ಳುತ್ತದೆ. ಸಂಘಟಿತ ಕಾರ್ಮಿಕ ವಲಯದಲ್ಲಿ ಇರುವ ತಳಸಮುದಾಯಗಳ ಪ್ರಾತಿನಿಧಿತ್ವ ಮತ್ತು ನಾಯಕತ್ವದ ನೆಲೆಯಲ್ಲಿ ಇರಬೇಕಾದ ಅಸ್ಮಿತೆಯೂ ಸಹ ವರ್ಗಪ್ರಜ್ಞೆಯ ವಿಸ್ತರಣೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಈ ಸೂಕ್ಷ್ಮವನ್ನು ಕಾರ್ಮಿಕ ಸಂಘಟನೆಗಳು ಗಂಭೀರವಾಗಿ ಪರಿಗಣಿಸಬೇಕಿದೆ. ಇದಕ್ಕೂ ಮಿಗಿಲಾಗಿ ಹಿತವಲಯದ ಕಾರ್ಮಿಕ ವರ್ಗದಲ್ಲಿ ಕೆಳಸ್ತರದ ಅಸಂಘಟಿತ ಶ್ರಮಜೀವಿಗಳ ಬಗ್ಗೆ ಸಹಾನುಭೂತಿ ಇರುವಂತಹ ವಾತಾವರಣವನ್ನು ಸೃಷ್ಟಿಸುವುದು ಸಂಘಟಿತ ವಲಯದ ಆದ್ಯತೆಯಾಗಬೇಕಿದೆ.

ಕಾರ್ಮಿಕರ ಐಕ್ಯತೆಯ ಪ್ರಶ್ನೆ ಎದುರಾದಾಗ ನಮ್ಮ ಕಣ್ಣಿಗೆ ರಾಚುವಂತೆ ಕಾಣಬೇಕಾದುದು ಯಾವುದೇ ಪ್ರಾತಿನಿಧ್ಯವಿಲ್ಲದ, ನಿರ್ದಿಷ್ಟ ಅಸ್ಮಿತೆಯಿಲ್ಲದ ಹಾಗೂ ಸಾಂಘಿಕ ಅಸ್ತಿತ್ವವಿಲ್ಲದ ಕೋಟ್ಯಂತರ ಶ್ರಮಜೀವಿಗಳು ಹಾಗೂ ವಿಶೇಷವಾಗಿ ಮಹಿಳಾ ಶ್ರಮಿಕರು.  ಶ್ರಮಿಕ ವರ್ಗಗಳನ್ನು ಸಮ ಸಮಾಜದ ಕ್ರಾಂತಿಯೆಡೆಗೆ ಕೊಂಡೊಯ್ಯುವ ಮುಂಚೂಣಿ ಶಕ್ತಿಯಾಗಿ ಸುಶಿಕ್ಷಿತ-ಆಧುನಿಕ-ಸಂಘಟಿತ-ಹಿತವಲಯದ ಕಾರ್ಮಿಕ ವರ್ಗವು ಅಸ್ತಿತ್ವವೇ ಇಲ್ಲದ ಕೋಟ್ಯಂತರ ಶ್ರಮಜೀವಿಗಳನ್ನು ತಮ್ಮ ಹೋರಾಟದ ಒಂದು ಭಾಗವಾಗಿ ಭಾವಿಸದೆ ಹೋದರೆ, ʼ ಕಾರ್ಮಿಕ ಐಕ್ಯತೆ ʼ ಎಂಬ ಘೋಷಣೆ ಕ್ಲೀಷೆಯಾಗಿಬಿಡುತ್ತದೆ. ಇಲ್ಲಿ ಅಡ್ಡಿಯಾಗಬಹುದಾದ ಜಾತಿ ಶ್ರೇಣೀಕರಣದ ಮೇಲರಿಮೆಗಳನ್ನು ಹೋಗಲಾಡಿಸುವ ಸೈದ್ಧಾಂತಿಕ ಜವಾಬ್ದಾರಿ ಕೆಂಬಾವುಟ ಹಿಡಿವ ಸಂಘಟಿತ ಕಾರ್ಮಿಕ ವರ್ಗದ ಮೇಲಿದೆ. ರಾಜಕೀಯ ಪ್ರಜ್ಞೆಯ ಕೊರತೆಯನ್ನು ಇಲ್ಲಿ ಗುರುತಿಸುವುದು ವರ್ತಮಾನದ ತುರ್ತು.

ನವ ಉದಾರವಾದ ಮತ್ತು ಕಾರ್ಪೋರೇಟ್‌ ಮಾರುಕಟ್ಟೆ ಆರ್ಥಿಕತೆಯಿಂದ ಸಂಘಟಿತರಾಗಿರುವ ಕಾರ್ಮಿಕರು ಅಭದ್ರತೆ ಎದುರಿಸುತ್ತಿದ್ದರೆ, ಸಂಘಟಿತರಾಗುವ ಅವಕಾಶವೇ ಇಲ್ಲದ ಕೋಟ್ಯಂತರ ಶ್ರಮಜೀವಿಗಳು ಶಾಶ್ವತ ಅನಿಶ್ಚಿತತೆಯನ್ನು ಎದುರಿಸುತ್ತಿದ್ದಾರೆ. ಈ ಬೃಹತ್‌ ವರ್ಗವು ಮೆಟ್ರೋಪಾಲಿಟನ್‌ ನಗರಗಳ ಐಷಾರಾಮಿ ಬದುಕಿನ ನಡುವೆ ಕಾಣುವಷ್ಟೇ ಢಾಳಾಗಿ ಹಳ್ಳಿಗಾಡಿನ ಒಣಬೇಸಾಯ ಭೂಮಿಗಳಲ್ಲೂ ಕಾಣಬಹುದಾಗಿದೆ. ಇದರ ನಡುವೆ ಇರುವ ಒಂದು ಬೃಹತ್‌ ಮಹಿಳಾ ಸಮೂಹ ಯಾವುದೇ ಸಾಂಘಿಕ ಶಕ್ತಿ ಇಲ್ಲದೆ ಕೂಲಿರಹಿತ ದುಡಿಮೆಯಲ್ಲಿ ತೊಡಗಿರುವುದನ್ನು ಕಾರ್ಮಿಕ ಚಳುವಳಿಗಳು ಗಮನಿಸಬೇಕಿದೆ. ನಗರೀಕರಣ-ಮೆಟ್ರೋಪಾಲಿಟನ್‌ ಸಂಸ್ಕೃತಿಗೆ ಮರುಳಾಗಿ ತಮ್ಮ ಸಂಘಟನಾತ್ಮಕ ಸಾಧನೆಗಳಲ್ಲಿ ಮೈಮರೆತಿರುವ ಒಂದು ಬೃಹತ್‌ ಶ್ರಮಿಕ ಸಮಾಜವು ತನ್ನ ಪೂರ್ವಾಶ್ರಮದ ಹೆಜ್ಜೆಗಳನ್ನು ಮರೆತು, ತಾವು ಕಟ್ಟಿದ ಸೌಧಗಳು ಕುಸಿಯುತ್ತಿದ್ದರೂ ನಿರುಮ್ಮಳವಾಗಿರುವ ಸನ್ನಿವೇಶವನ್ನು ನಾವು ಎದುರಿಸುತ್ತಿದ್ದೇವೆ. ಮತ್ತೊಂದೆಡೆ 1970ರ ದಶಕದಿಂದಾಚೆಗೆ ನೆಹರೂ ಆರ್ಥಿಕತೆಯ ಫಲಾನುಭವಿಗಳಾಗಿ ಕಾರ್ಮಿಕ ಸಂಘಟನೆಗಳ ಕಾಲಾಳುಗಳಾಗಿ ಸಂಘಟಿತ ಕಾರ್ಮಿಕರ ಬದುಕಿಗೆ ಹೊಸ ಆಯಾಮವನ್ನು ನೀಡಿದ ಒಂದು ಬೃಹತ್‌ ವರ್ಗ ಇಂದು ಮಧ್ಯಮ ವರ್ಗದ ಪ್ರತಿನಿಧಿಗಳಾಗಿದ್ದು, ಬದಲಾಗುತ್ತಿರುವ ಭಾರತದ ಬಲಪಂಥೀಯ ರಾಜಕಾರಣ ಹಾಗೂ ಕಾರ್ಮಿಕ ವಿರೋಧಿ ನವ ಉದಾರವಾದದ ಪ್ರಸರಣಾಧಿಕಾರಿಗಳಾಗಿ ಸಕ್ರಿಯರಾಗಿರುವುದನ್ನೂ ಗಮನಿಸಬೇಕಿದೆ. ಈ ಸಮಾಜದ ನಿಷ್ಕ್ರಿಯತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸ್ಥಾಪಿತ ಕಾರ್ಮಿಕ ಸಂಘಟನೆಗಳು ಸೋತಿವೆ.

ಕಾರ್ಮಿಕ ಚಳುವಳಿಯ ವಿಭಿನ್ನ ಆಯಾಮ

ಶ್ರಮ ಮತ್ತು ಶ್ರಮಶಕ್ತಿಯ ಸಾಮಾಜಿಕ-ಸಾಂಸ್ಕೃತಿಕ ಹಾಗೂ ಸಾಮುದಾಯಿಕ ಆಯಾಮಗಳನ್ನು ಅರಿತು, ಅಲ್ಲಿನ ನೋವು ತಲ್ಲಣಗಳಿಗೆ ಸ್ಪಂದಿಸುವ ವಿವೇಚನೆ ಬೆಳೆಸಿಕೊಳ್ಳದೆ ಹೋದರೆ ಆಚರಣಾತ್ಮಕ ನೆಲೆಯಲ್ಲಿ Ritualisitc ಆಗಿ ಪುನರುಚ್ಛರಿಸಲ್ಪಡುವ ʼವರ್ಗಪ್ರಜ್ಞೆʼ ಅರ್ಥಹೀನವಾಗಿಬಿಡುತ್ತದೆ. ಇಂದಿಗೂ ಭಾರತೀಯ ಸಮಾಜವನ್ನು ಕಾಡುತ್ತಿರುವ ಜಾತೀಯತೆ, ಅಸ್ಪೃಶ್ಯತೆ, ಪಿತೃಪ್ರಧಾನತೆ ಮತ್ತು ಊಳಿಗಮಾನ್ಯ ಚಿಂತನಾವಾಹಿನಿಗಳನ್ನು ಭೇದಿಸದೆ ಹೋದರೆ ಈ ವರ್ಗಪ್ರಜ್ಞೆಯ ಸೈದ್ಧಾಂತಿಕ ನೆಲೆಗಳು ವಿವಿಧ ಸ್ತರಗಳ ಜಾತಿ ಶ್ರೇಣಿಗಳಲ್ಲೇ ಕರಗಿಹೋಗುತ್ತವೆ. ನೂರು ವರ್ಷಗಳ ಇತಿಹಾಸವಿರುವ ಭಾರತದ ಕಾರ್ಮಿಕ ಚಳುವಳಿಗಳಲ್ಲಿ “ ಕಾರ್ಮಿಕರಲ್ಲಿ ವರ್ಗಪ್ರಜ್ಞೆಯನ್ನು ಬೆಳೆಸುವ ” ಪ್ರಯತ್ನಗಳು ನಡೆದಿವೆಯಾದರೂ, ಈ ಪ್ರಜ್ಞೆಯ ಆವರಣದಲ್ಲಿ ಇರಬೇಕಾದ ಸಾಂಸ್ಕೃತಿಕ ಅರಿವು, ಸಾಮಾಜಿಕ ತುಡಿತ ಹಾಗೂ ತಳಸಂಸ್ಕೃತಿಯ ಸಂವೇದನೆಗಳು ಇಲ್ಲದಿದ್ದುದರಿಂದ, ಇಂತಹ ಪ್ರಯತ್ನಗಳೆಲ್ಲೂ ಕೇವಲ Academic Excercise ಗಳಾಗಿವೆ.

ಹಾಗಾಗಿಯೇ ಇಂದು ತಮ್ಮ ಆರ್ಥಿಕತೆಗಾಗಿ ಕೆಂಬಾವುಟ ಹಿಡಿಯುವ ಕೈಗಳು ನಾಳೆ ಕೇಸರಿ ಪಡೆಗಳ ಕೈವಶವಾಗುತ್ತವೆ. ಕಾರ್ಮಿಕರ ರಾಜಕೀಯ ಪ್ರಜ್ಞೆಯನ್ನು ಕೇವಲ ಚುನಾವಣಾ ರಾಜಕಾರಣಕ್ಕೆ ಸೀಮಿತಗೊಳಿಸುವುದರಿಂದ, ಅಧಿಕಾರ ರಾಜಕಾರಣದ ಅನಿವಾರ್ಯತೆಗಳಿಗೆ ಶ್ರಮಿಕರು ಸುಲಭತುತ್ತಾಗುತ್ತಾರೆ. ವಿಶಾಲ ತಳಹದಿಯ ರಾಜಕೀಯ ಪ್ರಜ್ಞೆ ಎಂದರೆ,  ತಮ್ಮ ಶ್ರಮಶಕ್ತಿಯಿಂದಲೇ ನಿರ್ಮಾಣವಾಗುವ ಸಂಪತ್ತಿನ ಮೇಲೆ ಒಡೆತನ ಸಾಧಿಸುವ ಬಂಡವಾಳಶಾಹಿಯನ್ನು ಗುರುತಿಸುವುದು, ಈ ಯಜಮಾನಿಕೆಯನ್ನು ಪೋಷಿಸುವ ಮಾರುಕಟ್ಟೆ ಪ್ರೇರಿತ ಆಳ್ವಿಕೆಯನ್ನು ಗಮನಿಸುವುದು ಹಾಗೂ ಉತ್ಪಾದನಾ ಸಾಧನಗಳ ಮೇಲಿನ ಈ ಒಡೆತನವನ್ನು ಕಾಪಾಡಲು ಬಳಸಲಾಗುವ ಸಾಂಸ್ಕೃತಿಕ-ಧಾರ್ಮಿಕ ಶಕ್ತಿಗಳನ್ನು ಎದುರಿಸಿ ಹೋರಾಡುವುದೇ ಆಗಿರುತ್ತದೆ. ಈ ಅರ್ಥೈಸುವಿಕೆ ಮತ್ತು ಹೋರಾಟಕ್ಕೆ  ಬುನಾದಿಯಾಗಿ ನಮಗೆ ಮಾರ್ಕ್ಸ್‌ ಮತ್ತು ಏಂಜೆಲ್ಸ್‌ ಅವರ ಆರ್ಥಿಕ ಚಿಂತನೆಗಳು, ಡಾ. ಬಿ.ಆರ್.‌ ಅಂಬೇಡ್ಕರ್‌ ಅವರ ಬೌದ್ಧಿಕ ಆಲೋಚನೆಗಳು ನೆರವಾಗುತ್ತವೆ.

ಮತ್ತೊಂದೆಡೆ ಕಾರ್ಮಿಕ ಸಂಘಟನೆಗಳಲ್ಲಿ ಪ್ರಜಾಸತ್ತಾತ್ಮಕ ನೀತಿಗಳನ್ನು ಆಚರಣೆಯ ನೆಲೆಯಲ್ಲಿ ಜಾರಿ ಮಾಡುವ ತುರ್ತು ನಮಗೆ ಎದುರಾಗಿದೆ. ನೂರು ವರ್ಷಗಳ ಹಿಂದೆ ಲೆನಿನ್‌ ಪ್ರತಿಪಾದಿಸಿದ Democratic Centralism,  2024ರ ಸಂದರ್ಭದಲ್ಲಿ ಮರುವಿಮರ್ಶೆಗೊಳಗಾಗಬೇಕಿದೆ. ತಂತ್ರಜ್ಞಾನ ಯುಗದ ಹೊಸ ಪೀಳಿಗೆಯನ್ನು ಮುಂಚೂಣಿಗೆ ತರುವ ನಿಟ್ಟಿನಲ್ಲಿ ಕಾರ್ಮಿಕ ಸಂಘಟನೆಗಳ ಆಲೋಚನಾ ಕ್ರಮಗಳು ಹಾಗೂ ಕಾರ್ಯವಿಧಾನಗಳು ಬದಲಾಗುವ ಅವಶ್ಯಕತೆ ಎದುರಾಗಿದೆ. ತಳಮಟ್ಟದ ಕಾರ್ಮಿಕರ ಪ್ರಜಾಸತ್ತಾತ್ಮಕ ಅಭಿವ್ಯಕ್ತಿಗೆ ಮುಕ್ತ ಅವಕಾಶ ನೀಡುವಂತಹ ವಾತಾವರಣದ ಅಗತ್ಯತೆಯನ್ನು ಮನಗಂಡು, ಮೇಲಿನಿಂದ ಅಭಿಪ್ರಾಯಗಳನ್ನು ಹೇರುವ ಕೇಂದ್ರೀಕೃತ ಚಿಂತನಾ ಕ್ರಮವನ್ನು ಕೈಬಿಡುವ ಸಂದರ್ಭ ಎದುರಾಗಿದೆ. ಈ ವಿಚಾರಗಳ ಸುತ್ತ ಗಂಭೀರವಾದ ಮುಕ್ತ ಚಿಂತನೆ ನಡೆಸಬೇಕಾದ ಸನ್ನಿವೇಶದಲ್ಲಿ ಭಾರತದ ಶ್ರಮಿಕ ವರ್ಗ ನವ ಉದಾರವಾದದ ದಬ್ಬಾಳಿಕೆ ಮತ್ತು ದೌರ್ಜನ್ಯವನ್ನು ಎದುರಿಸುತ್ತಿದೆ.

ಸೀಮಿತ ಆರ್ಥಿಕತೆಯ ಚೌಕಟ್ಟಿನಿಂದ ಹೊರಬಂದು ಸಾಮಾಜಿಕ-ಸಾಂಸ್ಕೃತಿಕ ಪ್ರಜಾಪ್ರಭುತ್ವದ ನೆಲೆಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಶ್ರಮಿಕ ವರ್ಗಗಳ ಮಹತ್ವದ ಪಾತ್ರವನ್ನು ಗಮನದಲ್ಲಿಟ್ಟು ನೋಡಿದಾಗ, ಮೇ 1ರ ಕಾರ್ಮಿಕ ದಿನಾಚರಣೆಯ ಸಂದರ್ಭದಲ್ಲಿ ಸ್ಥಾಪಿತ ಕಾರ್ಮಿಕ ಸಂಘಟನೆಗಳ ಜವಾಬ್ದಾರಿ ಹಿಮಾಲಯದಷ್ಟಿರುವುದು ಸ್ಪಷ್ಟವಾಗುತ್ತದೆ. ಸೈದ್ಧಾಂತಿಕ ಅಸ್ಮಿತೆ, ಸ್ಥಾಪಿತ ಅಸ್ತಿತ್ವ ಹಾಗೂ ಸಂಕುಚಿತ ಮಡಿವಂತಿಕೆಯಿಂದ ಹೊರಬಂದು, ಹಳ್ಳಿಗಾಡಿನ ಕೃಷಿ ಕಾರ್ಮಿಕನಿಂದ ನಗರ ವಲಯದ ಗಿಗ್‌ ಕಾರ್ಮಿಕರವರೆಗೆ ಬಹುದೊಡ್ಡ ಕ್ಯಾನ್ವಾಸಿನಲ್ಲಿ ಹರಡಿರುವ, ಕಾರ್ಮಿಕ ವರ್ಗವನ್ನು  ಹಾಗೂ ಇದರೊಳಗಿನ ಶೋಷಿತ ಮಹಿಳಾ ಸಮೂಹವನ್ನು ಕಾರ್ಪೋರೇಟ್‌ ಮಾರುಕಟ್ಟೆಯ ಕ್ರೂರ ಸರಪಳಿಗಳಿಂದ ವಿಮೋಚನೆಗೊಳಿಸುವುದು ಕಾರ್ಮಿಕ ಸಂಘಟನೆಗಳ ಆದ್ಯತೆಯಾಗಬೇಕಿದೆ. ಆಗ ಮಾತ್ರವೇ “ ವಿಶ್ವ ಕಾರ್ಮಿಕರೇ ಒಂದಾಗಿ ” ಎಂಬ ಘೋಷಣೆ ಅರ್ಥಪೂರ್ಣವಾದೀತು. ಈ ಮರುವಿಮರ್ಶೆಯತ್ತ ಸಾಗುವ ವಿವೇಕ, ವಿವೇಚನೆ ವ್ಯಾಪಕವಾಗಿ ಮೂಡಲಿ ಎಂಬ ಆಶಯದೊಂದಿಗೇ ಮತ್ತೊಂದು ಮೇ ದಿನವನ್ನು ಆಚರಿಸೋಣ.

Tags: BJPCongress Partyನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಕರಾಳ ವಾಸ್ತವವೂ ಪರ್ಯಾಯದ ಅನಿವಾರ್ಯತೆಯೂ

Next Post

24 ಗಂಟೆಯೊಳಗೆ ವಿಚಾರಣೆಗೆ ಹಾಜರಾಗಿ ! ಪ್ರಜ್ವಲ್ ಗೆ SIT ನೋಟೀಸ್ ! 

Related Posts

Top Story

Lakshmi Hebbalkar: ವಿಶೇಷ ಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 5, 2025
0

ಬೀದರ್ ಜಿಲ್ಲಾ ಪಂಚಾಯತ್ ಆವರಣದಲ್ಲಿ ವಿತರಣೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು, ವಿಶೇಷ ಚೇತನರಿಗೆ ವಿವಿಧ ಸವಲತ್ತುಗಳನ್ನು ವಿತರಿಸಿದರು. ಬೀದರ್...

Read moreDetails

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

July 5, 2025

HD Kumarswamy: ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ

July 5, 2025

DK Shivakumar: ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

July 5, 2025

Mallikarjuna Kharge: ರಾಜ್ಯದಲ್ಲಿ ಅರಣ್ಯ ಪ್ರದೇಶ ಬೆಳಸಿ ಪರಿಸರ ಉಳಿಸಿ: ಮಲ್ಲಿಕಾರ್ಜುನ ಖರ್ಗೆ ಒತ್ತಾಸೆ.

July 5, 2025
Next Post
ಪ್ರಜ್ವಲ್​ ರೇವಣ್ಣ ವಿರುದ್ಧ ದಾಖಲಾಯ್ತು ದೂರು.. ರೇವಣ್ಣಗೂ ಸಂಕಷ್ಟ..

24 ಗಂಟೆಯೊಳಗೆ ವಿಚಾರಣೆಗೆ ಹಾಜರಾಗಿ ! ಪ್ರಜ್ವಲ್ ಗೆ SIT ನೋಟೀಸ್ ! 

Please login to join discussion

Recent News

Top Story

Lakshmi Hebbalkar: ವಿಶೇಷ ಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 5, 2025
Top Story

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

by ಪ್ರತಿಧ್ವನಿ
July 5, 2025
Top Story

HD Kumarswamy: ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ

by ಪ್ರತಿಧ್ವನಿ
July 5, 2025
Top Story

DK Shivakumar: ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
July 5, 2025
Top Story

Vijay Raghavendra: ಸಿನಿಮಾ ವಿಭಾಗದಲ್ಲಿ ಪ್ರಕಟಿಸಲು ಕೋರಿಜುಲೈ 25ಕ್ಕೆ ‘ಸ್ವಪ್ನಮಂಟಪ’ ಬಿಡುಗಡೆ

by ಪ್ರತಿಧ್ವನಿ
July 5, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Lakshmi Hebbalkar: ವಿಶೇಷ ಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 5, 2025

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

July 5, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada