• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಕರಾಳ ವಾಸ್ತವವೂ ಪರ್ಯಾಯದ ಅನಿವಾರ್ಯತೆಯೂ

ನಾ ದಿವಾಕರ by ನಾ ದಿವಾಕರ
April 30, 2024
in ದೇಶ, ವಿದೇಶ, ಶೋಧ
0
ಕರಾಳ ವಾಸ್ತವವೂ ಪರ್ಯಾಯದ ಅನಿವಾರ್ಯತೆಯೂ
Share on WhatsAppShare on FacebookShare on Telegram

 

ಕರಾಳ ವಾಸ್ತವವೂ ಪರ್ಯಾಯದ ಅನಿವಾರ್ಯತೆಯೂ

ADVERTISEMENT

ನಾ ದಿವಾಕರ

=======

ವರ್ತಮಾನ ಭಾರತದಲ್ಲಿ ಅಪಾಯದಲ್ಲಿರುವುದು ತಳಮಟ್ಟದ ಜನತೆಯ ಜೀವನ-ಜೀವನೋಪಾಯ

********

ಭಾರತದ ಪ್ರಜಾತಂತ್ರ ವ್ಯವಸ್ಥೆಯನ್ನು ಜನಕೇಂದ್ರಿತ ನೆಲೆಯಿಂದ ವ್ಯಕ್ತಿಕೇಂದ್ರಿತ ನೆಲೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಆಡಳಿತಾರೂಢ ಬಿಜೆಪಿ 2024ರ ಚುನಾವಣೆಗಳಲ್ಲಿ “ ತೀಸ್‌ರಿ ಬಾರ್‌ ಮೋದಿ ಸರ್ಕಾರ್‌ – ಅಬ್‌ ಕಿ ಬಾರ್‌ ಚಾರ್‌ ಸೌ ಪಾರ್‌ ” ಘೋಷಣೆಯನ್ನು ಟೆಂಪ್ಲೇಟ್‌ ಮಾಡಿಕೊಂಡಿದೆ. ಮೂರನೆಯ ಅವಧಿಗೆ ಆಯ್ಕೆಯಾಗುವ ಮಹತ್ವಾಕಾಂಕ್ಷೆಯೊಂದಿಗೆ ಮೂರನೆ ಎರಡರಷ್ಟು ಬಹುಮತ ಪಡೆಯುವ ಮೂಲಕ ಮುಂದಿನ ಐದು ವರ್ಷಗಳಲ್ಲಿ ದೇಶದ ಸಂಸದೀಯ ಪ್ರಜಾತಂತ್ರಕ್ಕೆ ಹೊಸ ಸ್ವರೂಪ ನೀಡುವ ಸುವ ಗುಪ್ತ ಕಾರ್ಯಸೂಚಿಯನ್ನೂ ಈ ಘೋಷಣೆಯಲ್ಲಿ ಕಾಣಬಹುದು. ಒಂದು ದೇಶ-ಒಂದು ಚುನಾವಣೆಯಂತಹ ಕಾರ್ಯಸೂಚಿಗಳು ಪ್ರಜಾಪ್ರಭುತ್ವದ ಆಶಯಗಳನ್ನು ಭಂಗಗೊಳಿಸುವಂತಿದ್ದು, ಪ್ರಸ್ತುತ ಸಂವಿಧಾನದ ಅಡಿಯಲ್ಲೇ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪಲ್ಲಟಗೊಳಿಸುವ ಆಲೋಚನೆಗಳೂ ಇಲ್ಲಿ ಕಾಣುತ್ತವೆ. ಈ ಕಾರಣಗಳಿಗಾಗಿಯೇ 2024ರಲ್ಲಿ ಬಿಜೆಪಿ ಸೋಲಬೇಕು ಎಂಬ ಸಹಜ ಆಕಾಂಕ್ಷೆಯೂ ಜನಸಾಮಾನ್ಯರಲ್ಲಿ ಗಟ್ಟಿಯಾಗಿದೆ. ಆದರೆ ಚುನಾವಣಾ ವಿಶ್ಲೇಷಣೆಗಳು ಈ ಆಶಯಗಳಿಗೆ ತದ್ವಿರುದ್ಧವಾಗಿದ್ದು, ಮೋದಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎನ್ನಲಾಗುತ್ತಿದೆ.

2019ರ ಚುನಾವಣೆಗಳಲ್ಲಿ ಪ್ರಧಾನವಾಗಿ ಕಾಣುತ್ತಿದ್ದ ʼಅಚ್ಚೇ ದಿನ್‌ʼ ಘೋಷಣೆ ಈ ಬಾರಿ ಮರೆಯಾಗಿದ್ದು, 2047ರ ಅಮೃತ ಕಾಲದ ಭಾರತವನ್ನು ಜನರ ಮುಂದಿಡಲಾಗುತ್ತಿದೆ. ಸ್ವಾತಂತ್ರ್ಯದ ನೂರನೆ ವರ್ಷದ ವೇಳೆಗೆ ಭಾರತ ಎದುರಿಸುತ್ತಿರುವ ಸಕಲ ಸಮಸ್ಯೆಗಳನ್ನೂ ಬಗೆಹರಿಸಿ ದೇಶವನ್ನು ವಿಶ್ವದ ಅಗ್ರಮಾನ್ಯ ರಾಷ್ಟ್ರವನ್ನಾಗಿ ರೂಪಿಸುವ ಈ ಚಿಂತನೆಯ ಹಿಂದೆ ಆರ್ಥಿಕ ಕಾರ್ಯಸೂಚಿಗಳು, ಕಾರ್ಪೋರೇಟ್‌ ಮಾರುಕಟ್ಟೆಯ ಹಿತಾಸಕ್ತಿಗಳು ಹಾಗೂ ನವ ಉದಾರವಾದಿ ಬಂಡವಾಳಶಾಹಿಯ ಆಶಯಗಳು ಪ್ರಧಾನವಾಗಿ ಕಾಣುತ್ತವೆ. ಆದರೆ ಕಳೆದ ಹತ್ತು ವರ್ಷಗಳಲ್ಲಿ ಬಿಜೆಪಿ ಸರ್ಕಾರ ಅನುಸರಿಸಿದ ಆರ್ಥಿಕ ಮಾದರಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಇದೇ ಹಾದಿಯಲ್ಲಿ ಮುಂದುವರೆದರೆ 2047ರ ಭಾರತ ಅಪಾರ ಸಮೃದ್ಧತೆಯ ನಡುವೆಯೇ ತಳಸಮಾಜದ ಅಪಾರ ಸಂಖ್ಯೆಯ, ಬಹುಸಂಖ್ಯಾತ ಶ್ರಮಜೀವಿಗಳ ನಿರ್ಗತಿಕತೆಯನ್ನೂ ಎದುರಿಸಬೇಕಾಗುತ್ತದೆ. ಒಂದೆಡೆ ಮಾರುಕಟ್ಟೆ ಮತ್ತೊಂದೆಡೆ ಹಿಂದೂರಾಷ್ಟ್ರದ ಭಾವನಾತ್ಮಕತೆಯಲ್ಲಿ ತಮ್ಮ ಬಡತನವನ್ನೂ ಒಪ್ಪಿಕೊಂಡು ಭ್ರಮಾಧೀನರಾಗುವ ದೊಡ್ಡ ಜನಸಂಖ್ಯೆಯೊಂದಿಗೆ ಭಾರತ ಶತಮಾನವನ್ನು ಪೂರೈಸುತ್ತದೆ.

ಬಿಜೆಪಿ ಆಳ್ವಿಕೆಯ ಲಕ್ಷಣಗಳು

ಹತ್ತು ವರ್ಷಗಳ ಬಿಜೆಪಿ ಆಳ್ವಿಕೆಯನ್ನು ಎರಡು ನೆಲೆಗಳಲ್ಲಿ ನಿಂತು ನೋಡಬೇಕಿದೆ.

ಮೊದಲನೆಯದಾಗಿ, ಕಾರ್ಪೋರೇಟ್‌ (ಆಪ್ತ) ಬಂಡವಾಳಶಾಹಿ ಮತ್ತು ಮಾರುಕಟ್ಟೆಯ ಆವರಣದಲ್ಲಿ ನಿಂತು ನೋಡಿದಾಗ ಭಾರತ ಆರ್ಥಿಕವಾಗಿ ಮುನ್ನಡೆಯುತ್ತಿರುವ ಒಂದು ಬೃಹತ್‌ ದೇಶವಾಗಿ ಕಾಣುವುದು ಸಹಜ. ಜಿಡಿಪಿ ಆಧಾರಿತ ಅಭಿವೃದ್ಧಿ ಮಾನದಂಡಗಳು ಇದನ್ನೇ ನಿರೂಪಿಸಲು ಶತಪ್ರಯತ್ನ ಮಾಡುತ್ತಿವೆ. ವಿಶ್ವ ಮಾರುಕಟ್ಟೆಗೆ ಮತ್ತು ಔದ್ಯಮಿಕ ವಲಯಕ್ಕೆ ಅತಿಹೆಚ್ಚು ಶ್ರಮಿಕರನ್ನು ಒದಗಿಸುವ ಅವಕಾಶ ಭಾರತಕ್ಕಿದೆ. ಈ ಶ್ರಮಸಂಪತ್ತನ್ನು ಬಂಡವಾಳಶಾಹಿ ಮಾರುಕಟ್ಟೆ ಹೇಗೆ ಬಳಸಿಕೊಳ್ಳುತ್ತದೆ ಎನ್ನುವುದರ ಮೇಲೆ ದೇಶದ ಭವಿಷ್ಯವೂ ನಿರ್ಧಾರವಾಗಲಿದೆ. ಈ ಹಾದಿಯಲ್ಲಿ ಸಾಗುತ್ತಲೇ 2047ರ ವೇಳೆಗೆ ಭಾರತದ ಎಲ್ಲ ಸಾರ್ವಜನಿಕ ಸಂಪತ್ತು ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನೂ ಮಾರುಕಟ್ಟೆಗೆ ಒಪ್ಪಿಸಲಾಗುತ್ತದೆ. ಈಗಾಗಲೇ Monetisation ಅಂದರೆ ನಗದೀಕರಣ ಪ್ರಕ್ರಿಯೆಗೆ ಒಳಗಾಗಿರುವ ಸಾರ್ವಜನಿಕ ಔದ್ಯೋಗಿಕ-ಹಣಕಾಸು ಸಂಸ್ಥೆಗಳು, ರೈಲು-ರಸ್ತೆ-ವಿಮಾನ-ಕಡಲ ಸಾರಿಗೆ ವ್ಯವಸ್ಥೆ, ಸಂವಹನ-ಸಂಪರ್ಕ ಸಾಧನಗಳು ಹಾಗೂ ನೆಲ-ಜಲ-ಅರಣ್ಯ ಸಂಪನ್ಮೂಲಗಳು ಮಾರುಕಟ್ಟೆಯ ಆಧಿಪತ್ಯಕ್ಕೆ ಒಳಪಡುತ್ತವೆ. ಈ ಕನಸಿನ ಭಾರತಕ್ಕೆ ಕಾರ್ಪೋರೇಟ್‌ ಬಂಡವಾಳದ ಬಲ ಇರುವುದು ಪ್ರಸ್ತುತ ಚುನಾವಣೆಗಳಲ್ಲಿ ನಿರ್ಣಾಯಕ ಅಂಶ.

ಎರಡನೆಯದಾಗಿ ಭವಿಷ್ಯದ ಭಾರತವನ್ನು ದುಡಿಯುವ ವರ್ಗಗಳ, ತಳಸಮುದಾಯಗಳ, ಬುಡಕಟ್ಟು-ಆದಿವಾಸಿಗಳ, ಗ್ರಾಮೀಣ ಬಡಜನರ ಹಾಗೂ ಅತ್ಯಂತ ಕೆಳಸ್ತರದ ಶ್ರಮಜೀವಿಗಳ ನೆಲೆಯಲ್ಲಿ ನಿಂತು ನೋಡಿದಾಗ, ಭಾರತದ ಚಿತ್ರಣ 50 ವರ್ಷದಷ್ಟು ಹಿಂದಕ್ಕೆ ಸಾಗುತ್ತದೆ. 1970ರ ದಶಕದಲ್ಲಿ ಕಂಡಿದ್ದ ನಿರುದ್ಯೋಗ, ನಿರ್ವಸತಿ, ಬಡತನ, ಹಸಿವು, ತಾರತಮ್ಯ‌ ಮತ್ತು ಬಡವ ಶ್ರೀಮಂತರ ನಡುವಿನ ಅಪಾರ ಅಂತರ ಎಲ್ಲವೂ ಇಂದಿಗೂ ಸಹ ಕಾಣುತ್ತಿದೆ. ಅಂದರೆ ಭಾರತ ಅಭಿವೃದ್ಧಿಯಾಗಿಲ್ಲ ಎಂದರ್ಥವಲ್ಲ, ಅಭಿವೃದ್ಧಿ ಫಲಾನುಭವಿಗಳು ದುಡಿಯುವ ವರ್ಗಗಳಾಗಿಲ್ಲ ಎನ್ನುವುದು ವಾಸ್ತವ. ಆರೇಳು ದಶಕಗಳ ಕಾಲ ಈ ದೇಶದ ಶ್ರಮಿಕರು ಕಟ್ಟಿ ಬೆಳೆಸಿದ ಔದ್ಯೋಗಿಕ-ಹಣಕಾಸು ಸಂಸ್ಥೆಗಳೆಲ್ಲವೂ ಕಾರ್ಪೋರೇಟ್‌ ಬಂಡವಾಳಿಗರ ಪಾಲಾಗುತ್ತಿದೆ. ಮತ್ತೊಂದೆಡೆ ಈ ಶ್ರಮಿಕ ವರ್ಗದ ಮುಂದಿನ ತಲೆಮಾರು, ಅಂದರೆ ಪ್ರಸ್ತುತ ಜನಸಂಖ್ಯೆ, ನಿರುದ್ಯೋಗ-ಬೆಲೆಏರಿಕೆ-ಅನಿಶ್ಚಿತ ಭವಿಷ್ಯವನ್ನು ಎದುರಿಸುತ್ತಿದೆ. ಅರಣ್ಯ ಮತ್ತು ಇತರ ನೈಸರ್ಗಿಕ ಸಂಪತ್ತು-ಸಂಪನ್ಮೂಲಗಳನ್ನು ಖಾಸಗಿ ಕಾರ್ಪೋರೇಟ್‌ ಉದ್ಯಮಿಗಳಿಗೆ ಪರಭಾರೆ ಮಾಡುವ ಮೂಲಕ ದೇಶದ ಆದಿವಾಸಿ ಸಮುದಾಯಗಳ ಬದುಕುವ ಹಕ್ಕನ್ನೇ ಕಸಿದುಕೊಳ್ಳುವ ಆ‍ರ್ಥಿಕ ನೀತಿಗಳು ಜಾರಿಯಾಗುವ ಸಾದ್ಯತೆಗಳಿವೆ. ತಮ್ಮ ಶತಮಾನಗಳ ಮೂಲ ನೆಲೆಯಿಂದ ಉಚ್ಛಾಟಿತರಾಗುವ ಆದಿವಾಸಿಗಳು ನಗರಪ್ರದೇಶಗಳ ವಲಸೆ ಕಾರ್ಮಿಕರಾಗಿ ಜೀವನೋಪಾಯದ ಮಾರ್ಗಗಳನ್ನು ಕಂಡುಕೊಳ್ಳಬೇಕಾಗುತ್ತದೆ. ಈಗಾಗಲೇ ಈ ಪ್ರಕ್ರಿಯೆ ಜಾರಿಯಲ್ಲಿದ್ದು, ಮುಂಬರುವ ವರ್ಷಗಳಲ್ಲಿ ಆವೇಗ ಪಡೆದುಕೊಳ್ಲಲಿದೆ.

ನೆಲದ ವಾಸ್ತವಗಳು ಭಿನ್ನವಾಗಿವೆ

ಆದರೆ ಬಿಜೆಪಿ ಸರ್ಕಾರ ಕಳೆದು ಹತ್ತು ವರ್ಷಗಳಿಂದ ಅನುಸರಿಸುತ್ತಿರುವ ಕಾರ್ಪೋರೇಟ್‌ ಮಾರುಕಟ್ಟೆ ಪ್ರೇರಿತ ನವ ಉದಾರವಾದಿ ಆರ್ಥಿಕ ನೀತಿಗಳು ಭಾರತದ ತಳಸಮಾಜದ ಬದುಕನ್ನು ಹೈರಾಣಾಗಿಸಿರುವುದು ಸ್ಪಷ್ಟವಾಗುತ್ತಿದೆ. ಇತ್ತೀಚಿನ ಸಿಎಸ್‌ಡಿಎಸ್-ಲೋಕನೀತಿ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ವ್ಯಕ್ತವಾಗಿರುವ ಜನಾಭಿಪ್ರಾಯವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ತಳಮಟ್ಟದ ಸಮಾಜದಲ್ಲಿ ಇರುವ ಅಸಮಾಧಾನದ ಅಂತಃಪ್ರವಾಹವನ್ನು(undercurrent) ಸ್ಪಷ್ಟವಾಗಿ ಗುರುತಿಸಬಹುದು. ಬೃಹದಾರ್ಥಿಕ ಆರ್ಥಿಕತೆಯ ಸೂಚಕಗಳು ಆಶಾದಾಯಕವಾಗಿ ಕಂಡರೂ, ಸಾಮಾಜಿಕ ಪಿರಮಿಡ್ಡಿನ ತಳಮಟ್ಟದಲ್ಲಿರುವ ಜನಸಮುದಾಯಗಳ ಜೀವನ ಮತ್ತು ಜೀವನೋಪಾಯ ದುಸ್ಥಿತಿಯಲ್ಲಿರುವುದು ವ್ಯಕ್ತವಾಗಿದೆ. ವರ್ಗದ ನೆಲೆಯಲ್ಲಿ ನಿಂತು ನೋಡಿದಾಗ ಸುಧಾರಿತ-ಹಿತವಲಯದ ಮೇಲ್‌ವರ್ಗಗಳು ನವ ಉದಾರವಾದದ ಮುಖ್ಯ ಫಲಾನುಭವಿಗಳಾಗಿ ಕಂಡುಬಂದರೆ, ತಳಮಟ್ಟದ ದುಡಿಮೆಯ ವರ್ಗಗಳು ಮತ್ತಷ್ಟು ಬಡತನ ಮತ್ತು ನಿರ್ಗತಿಕತೆಯನ್ನು ಎದುರಿಸುತ್ತಿರುವುದು ಸ್ಪಷ್ಟವಾಗುತ್ತದೆ.

ಶೇ. 62ರಷ್ಟು ಜನರು ಉದ್ಯೋಗಾವಕಾಶಗಳೇ ಇಲ್ಲದಿರುವುದನ್ನು ಗುರುತಿಸಿದ್ದಾರೆ. ಇದು ಗ್ರಾಮ ಮತ್ತು ನಗರ ಪ್ರದೇಶಗಳಲ್ಲಿ ಸಮಾನವಾದ ಅಭಿಪ್ರಾಯವಾಗಿದೆ. ಸಾಮಾಜಿಕ ಸ್ತರದಲ್ಲಿ ಮೇಲ್ಜಾತಿಯ ಶೇ. 57ರಷ್ಟು ಜನರು ಉದ್ಯೋಗ ದೊರೆಯುವುದು ದುಸ್ತರವಾಗಿದೆ ಎಂದು ಹೇಳಿದ್ದರೆ, ಅನ್ಯ ಜಾತಿಗಳು-ಅಲ್ಪಸಂಖ್ಯಾತರಲ್ಲೂ ಸರಾಸರಿ ಶೇ. 62ರಷ್ಟು ಜನರು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿರುವುದನ್ನು ಶೇ. 71ರಷ್ಟು ಜನರು ದೃಢೀಕರಿಸಿದ್ದಾರೆ. ಗ್ರಾಮೀಣ ಜನರು ಮತ್ತು ನಗರದ ಬಡಜನತೆ ಬೆಲೆ ಏರಿಕೆಯಿಂದ ಹೆಚ್ಚು ಬಾಧಿತರಾಗಿರುವುದು ಸಮೀಕ್ಷೆಯಲ್ಲಿ ಸ್ಪಷ್ಟವಾಗಿದೆ. ಹೆಚ್ಚಿನ ಸಂಖ್ಯೆಯ ಜನರು ಬೆಲೆ ಏರಿಕೆಗೆ ಕೇಂದ್ರ ಸರ್ಕಾರವನ್ನೇ ಹೊಣೆಯಾಗಿಸಿದ್ದಾರೆ. ಶೇ. 35ರಷ್ಟು ಜನರು ತಮ್ಮ ಜೀವನ ಮಟ್ಟ ಕುಸಿದಿದೆ ಎಂದು ಹೇಳಿದ್ದರೆ, ಶೇ. 36 ರಷ್ಟು ಜನರು ಉಳಿತಾಯ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. (ಹೆಚ್ಚಿನ ವಿವರಗಳಿಗೆ  ದ ಹಿಂದೂ ಪತ್ರಿಕೆಯಲ್ಲಿ ಏಪ್ರಿಲ್‌ 11-12-13ರಂದು ಪ್ರಕಟವಾದ ಸಿಎಸ್‌ಡಿಎಸ್-ಲೋಕನೀತಿ ಸಮೀಕ್ಷೆಯನ್ನು ನೋಡಬಹುದು.)

ಈ ಸಮೀಕ್ಷೆಯ ಮಾನದಂಡಗಳನ್ನು, ಫಲಿತಾಂಶ ಮತ್ತು ಅಂಕಿಅಂಶಗಳನ್ನು ಬದಿಗಿಟ್ಟು ನೋಡಿದರೂ ಕಾರ್ಪೋರೇಟ್‌ ಮಾರುಕಟ್ಟೆ ಆರ್ಥಿಕ ನೀತಿಗಳ ಪರಿಣಾಮವಾಗಿ ಉದ್ಯೋಗಾವಕಾಶಗಳು ಕುಂಠಿತವಾಗುತ್ತಿರುವುದು ಮೇಲ್ನೋಟಕ್ಕೇ ಕಾಣುತ್ತದೆ.  2016ರಲ್ಲಿ ಶೇ. 6.64ರಷ್ಟಿದ್ದ ನಿರುದ್ಯೋಗ ಪ್ರಮಾಣ 2023ರಲ್ಲಿ ಶೇ. 8.1ಕ್ಕೆ ಏರಿದೆ.  2023ರ ಅಕ್ಟೋಬರ್‌ ವೇಳೆಗೆ 4.2 ಕೋಟಿ ನಿರುದ್ಯೋಗಿಗಳನ್ನು ಗುರುತಿಸಲಾಗಿದ್ದು, ಉತ್ಪಾದನಾ ವಲಯದಲ್ಲಿ ಉದ್ಯೋಗ ಪ್ರಮಾಣ ಸತತವಾಗಿ ಕುಸಿಯುತ್ತಿದೆ.  ಆಹಾರ ಧಾನ್ಯಗಳ ಬೆಲೆಗಳು ಶೇ. 22ರಷ್ಟು ಹೆಚ್ಚಳವಾಗಿದ್ದರೆ, ಕೃಷಿ ಮತ್ತು ಕಟ್ಟಡ ಕಾರ್ಮಿಕರ  ಕೂಲಿ ಕ್ರಮವಾಗಿ ಶೇ. 12 ಮತ್ತು ಶೇ. 10ರಷ್ಟು ಹೆಚ್ಚಳವಾಗಿದೆ. ಉತ್ತರ ಪ್ರದೇಶದಲ್ಲಿ ಪೊಲೀಸ್‌ 60 ಸಾವಿರ ಕಾನ್ಸ್‌ಟೆಬಲ್‌ ಹುದ್ದೆಗಳಿಗೆ 50 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿರುವುದು ನಿರುದ್ಯೋಗ ಪ್ರಮಾಣದ ಸೂಚಕವಾಗಿದೆ. ಮಾಸಿಕ 15 ರಿಂದ 30 ಸಾವಿರ ರೂಗಳ ವೇತನಕ್ಕಾಗಿ ಹೊರ ರಾಜ್ಯಗಳಿಗೆ ವಲಸೆ ಹೋಗುವವರ ಪ್ರಮಾಣವೂ ಹೆಚ್ಚಾಗಿದೆ. ಅಲ್ಪ ವೇತನಕ್ಕಾಗಿ ಉತ್ತರ ಪ್ರದೇಶ ಮತ್ತು ಹರಿಯಾಣದಲ್ಲಿ ನಿರುದ್ಯೋಗಿ ಯುವಕರು ಯುದ್ಧಪೀಡಿತ ಇಸ್ರೇಲ್‌ ನಲ್ಲಿ ಗುತ್ತಿಗೆ ನೌಕರಿ ಪಡೆಯಲೂ ಸಾಲುಗಟ್ಟಿ ನಿಂತಿದ್ದಾರೆ.

ನಿರುದ್ಯೋಗ ಮತ್ತು ಬೆಲೆಏರಿಕೆಯಿಂದ ಕೆಳಮಧ್ಯಮ ವರ್ಗಗಳು, ಬಡಜನತೆ ತತ್ತರಿಸುತ್ತಿರುವಾಗಲೇ ತೆರಿಗೆಯ ಹೊರೆಯನ್ನೂ ಅನುಭವಿಸಬೇಕಾಗಿದೆ.  2014ರಲ್ಲಿ ಕೇಂದ್ರದ ಒಟ್ಟು ತೆರಿಗೆ ಸಂಗ್ರಹದಲ್ಲಿ ಕಾರ್ಪೋರೇಟ್‌ ತೆರಿಗೆ ಶೇ . 34.5ರಷ್ಟೂ, ಆದಾಯ ತೆರಿಗೆ ಶೇ. 20.8ರಷ್ಟೂ ಇತ್ತು. 2024-25ರ ವೇಳೆಗೆ ಕಾರ್ಪೋರೇಟ್‌ ತೆರಿಗೆ ಸಂಗ್ರಹ ಶೇ 27.2ಕ್ಕೆ ಕುಸಿದಿದ್ದು, ಅದಾಯ ತೆರಿಗೆ ಶೇ. 30.2ಕ್ಕೆ ಏರಿದೆ. ಹೊಸ ತೆರಿಗೆ ನೀತಿಯಿಂದ ಕೇಂದ್ರದ ತೆರಿಗೆ ಸಂಗ್ರಹ ಪ್ರಮಾಣ ಹೆಚ್ಚಾಗಿರುವುದು ವಾಸ್ತವವೇ ಆದರೂ, ಜನಸಾಮಾನ್ಯರೇ ಹೆಚ್ಚಿನ ತೆರಿಗೆ ಪಾವತಿಸುತ್ತಿರುವುದು ಸ್ಪಷ್ಟವಾಗಿದೆ. 2016ರಲ್ಲಿ ಮೋದಿ ಸರ್ಕಾರ ಸಂಪತ್ತಿನ ತೆರಿಗೆಯನ್ನು ರದ್ದುಪಡಿಸಿದ ನಂತರ ಸಿರಿವಂತರ ಸಂಪತ್ತು ಗಗನಕ್ಕೇರಿದ್ದು, 2023ರ ವೇಳೆಗೆ ದೇಶದ ಶೇ. 1ರಷ್ಟು ಜನರ ಬಳಿ ಸಂಪತ್ತಿನ ಶೇ. 40ರಷ್ಟು ಸಂಗ್ರಹವಾಗಿದೆ. ಇದೇ ಶ್ರೀಮಂತ ವರ್ಗವೇ ದೇಶದ ಒಟ್ಟು ಆದಾಯದ ಶೇ. 22ರಷ್ಟನ್ನು ಕಬಳಿಸುತ್ತಿದೆ.

ನೀತಿ ಆಯೋಗದ ಮಾಹಿತಿಯ ಅನುಸಾರ ಶೇ 5ರಷ್ಟು ಜನಸಂಖ್ಯೆಯನ್ನು ಬಡತನದ ರೇಖೆಯ ಕೆಳಗಿನವರೆಂದು ಗುರುತಿಸಲಾಗಿದ್ದರೂ, ಇತ್ತೀಚೆಗೆ ಬಿಡುಗಡೆಯಾದ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತ 125 ರಾಷ್ಟ್ರಗಳ ಪೈಕಿ  2022ರಲ್ಲಿ 107ನೆಯ ಸ್ಥಾನದಲ್ಲಿದ್ದುದು 2023ರಲ್ಲಿ 111ನೆಯ ಸ್ಥಾನಕ್ಕೆ ಕುಸಿದಿದೆ. ಈ ಅಂಕಿಅಂಶಗಳನ್ನು, ಸೂಚ್ಯಂಕಗಳನ್ನು ಕೇಂದ್ರ ಸರ್ಕಾರ ನಿರಾಕರಿಸಿದರೂ, 80 ಕೋಟಿ ಜನರಿಗೆ ಪ್ರತಿತಿಂಗಳೂ ಉಚಿತ ಪಡಿತರ ನೀಡುವ ಕೋವಿಡ್‌ ಕಾಲದ ಯೋಜನೆಯನ್ನು ಇಂದಿಗೂ ಮುಂದುವರೆಸಿರುವುದು ವಾಸ್ತವದ ಸೂಚನೆಯಾಗಿ ಕಾಣುತ್ತದೆ. 2024ರ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ಈ ಉಚಿತ ಪಡಿತರ ವಿತರಣೆಯನ್ನು ಮತ್ತಷ್ಟು ವಿಸ್ತರಿಸುವುದಾಗಿ ಹೇಳಿರುವುದು, ಬಡ ಭಾರತದ ಕರಾಳ ಚಿತ್ರಣವನ್ನು ಸೂಚಿಸುತ್ತದೆ.  ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 9.5 ಲಕ್ಷ ಹುದ್ದೆಗಳು ಖಾಲಿ ಇರುವುದು, ಬ್ಯಾಂಕ್-ವಿಮೆ-ರೈಲ್ವೆ-ತಯಾರಿಕಾ ವಲಯದ ಸಾರ್ವಜನಿಕ ಉದ್ದಿಮೆಗಳಲ್ಲಿ ನೇಮಕಾತಿ ಪ್ರಮಾಣ ಕುಸಿದಿರುವುದು, ಭಾರತದ ಆರ್ಥಿಕತೆಯ ವಸ್ತುಸ್ಥಿತಿಯನ್ನು ಪ್ರಚುರಪಡಿಸುತ್ತದೆ.

ಈ ಕರಾಳ ಪರಿಸ್ಥಿತಿಯ ನಡುವೆಯೂ ಬಿಜೆಪಿ ಸರ್ಕಾರ ಸಾರ್ವಜನಿಕ ಉದ್ದಿಮೆಗಳ Monetisation ಅಂದರೆ ನಗದೀಕರಣ ಪ್ರಕ್ರಿಯೆಯನ್ನು ಚಾಲ್ತಿಯಲ್ಲಿರಿಸಿದೆ. ಮುಂದಿನ ಐದು ವರ್ಷಗಳಲ್ಲಿ ಇಡೀ ಹಣಕಾಸು ವಲಯ ಮತ್ತು ರೈಲ್ವೆಯನ್ನು ಕಾರ್ಪೋರೇಟೀಕರಗೊಳಿಸುವ ನೀಲನಕ್ಷೆ ಬಹುಶಃ ಈ ವೇಳೆಗಾಗಲೇ ಸಿದ್ಧವಾಗಿರುತ್ತದೆ. ದೇಶದ ಶ್ರಮಿಕರ ದಶಕಗಳ ದುಡಿಮೆಯ ಸಾರ್ವಜನಿಕ ಸಂಪತ್ತನ್ನು ಹರಾಜು ಮಾಡುವ ಒಂದು ಮಾರುಕಟ್ಟೆ ಪ್ರಕ್ರಿಯೆಗೆ ಸುಂದರವಾದ Monetisation ಎಂಬ ಪದವನ್ನು ಬಳಸಲಾಗುತ್ತಿದೆ. ಈ ದುರವಸ್ಥೆ ಮತ್ತು ವಿಷಮ ಸನ್ನಿವೇಶದ ಹಿನ್ನೆಲೆಯಲ್ಲೇ ಬಿಜೆಪಿಯ 2024ರ ಚುನಾವಣಾ ಪ್ರಣಾಳಿಕೆಯನ್ನೂ ಗಮನಿಸಬೇಕಿದೆ.

ಪ್ರಣಾಳಿಕೆಯ ಭ್ರಮಾಲೋಕ

ಹಾಲಿ ಜಾರಿಯಲ್ಲಿರುವ ಜನಕಲ್ಯಾಣ ಯೋಜನೆಗಳನ್ನು ವಿಸ್ತರಿಸುವುದನ್ನು ಹೊರತುಪಡಿಸಿ ಬಿಜೆಪಿಯ ಪ್ರಣಾಳಿಕೆಯಲ್ಲಿ ಹೊಸತೇನೂ ಕಾಣುವುದಿಲ್ಲ. ತನ್ನ ಹತ್ತು ವರ್ಷಗಳ ಆಳ್ವಿಕೆಯ ವೈಫಲ್ಯಗಳನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲದ ಬಿಜೆಪಿ ಸರ್ಕಾರ ಈಗಲೂ ಸಹ 2014ರ ಪೂರ್ವದ ಯುಪಿಎ ಆಡಳಿತವನ್ನು, ನೆಹರೂ ಆರ್ಥಿಕತೆಯನ್ನು ಟೀಕಿಸುತ್ತಿರುವುದು ಪಲಾಯನವಾದ ಎಂದಷ್ಟೇ ಹೇಳಬಹುದು. 2047ರ ವೇಳೆಗೆ ಭಾರತವನ್ನು ಸಕಲ ಸಮೃದ್ಧ ರಾಷ್ಟ್ರವನ್ನಾಗಿ ಮಾಡುವ ಆಶ್ವಾಸನೆ ಹೊತ್ತಿರುವ ಪ್ರಣಾಳಿಕೆಯಲ್ಲಿ ಸಂಪತ್ತಿನ ತೆರಿಗೆಯನ್ನು ಮರಳಿ ಜಾರಿಗೊಳಿಸುವ ಬಗ್ಗೆಯಾಗಲೀ, 2018-19ರಲ್ಲಿ ಶೇ 30 ರಿಂದ ಶೇ 22ಕ್ಕೆ ಇಳಿಸಲಾದ ಕಾರ್ಪೋರೇಟ್‌ ತೆರಿಗೆಯನ್ನು ಹೆಚ್ಚಿಸುವ ಪ್ರಸ್ತಾಪವಾಗಲೀ ಕಂಡುಬರುವುದಿಲ್ಲ. ಆದರೂ “ ನಮ್ಮ ಆರ್ಥಿಕತೆಗೆ ಅಗತ್ಯವಾದ ರೀತಿಯಲ್ಲಿ ನೇರ-ಪರೋಕ್ಷ ತೆರಿಗೆ ನೀತಿಯಲ್ಲಿ ಬದಲಾವಣೆ ತರುತ್ತೇವೆ ” ಎಂದು ಹೇಳಲಾಗಿದೆ. ಕಾರ್ಪೋರೇಟ್‌ ತೆರಿಗೆ ದರವನ್ನು ಇಳಿಸಿದ ಮೊದಲೆರಡು ವರ್ಷಗಳಲ್ಲಿ ಸರ್ಕಾರದ ಬೊಕ್ಕಸಕ್ಕೆ 1.84 ಲಕ್ಷ ಕೋಟಿ ರೂಗಳ ನಷ್ಟವಾಗಿದೆ. ಸಂಪತ್ತಿನ ತೆರಿಗೆ ರದ್ದತಿಯಿಂದ ಸರ್ಕಾರಕ್ಕೆ 30 ಸಾವಿರ ಕೋಟಿ ರೂಗಳ ನಷ್ಟವಾಗಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

2024ರ ಪ್ರಣಾಳಿಕೆಯಲ್ಲೂ ಸಹ ಬಿಜೆಪಿ ತನ್ನ ಆಪ್ತ ಬಂಡವಾಳಶಾಹಿ ನೀತಿಯನ್ನು ಪುನರುಚ್ಛರಿಸಿದೆ.  ಮುಂದಿನ ಐದು ವರ್ಷಗಳಲ್ಲಿ ಮೂರು ಕೋಟಿ ಗ್ರಾಮೀಣ ಮಹಿಳೆಯರನ್ನು                           ʼಲಕ್‌ಪತಿ ದೀದಿʼ ಅಂದರೆ ಲಕ್ಷಾಧಿಪತಿಗಳಾಗಿ ಮಾಡುವ ಆಶ್ವಾಸನೆ ಬಹುಶಃ ಕೈಗೆಟುಕದ ಹುಳಿ ದ್ರಾಕ್ಷಿಯಷ್ಟೇ ಆಗಲಿದೆ. ಭಾರತದ ಆರ್ಥಿಕತೆಯನ್ನು ನವ ಉದಾರವಾದದ ಪ್ರಯೋಗಶಾಲೆಯಾಗಿ ಮಾಡುವ ಯೋಜನೆಗಳು ಕೃಷಿ ಮತ್ತು ಕೈಗಾರಿಕಾ ವಲಯದಲ್ಲಿ ಸ್ಪಷ್ಟವಾಗಿ ಕಾಣುತ್ತವೆ. ರೈತರ ನಿರಂತರ ಹೋರಾಟದ ಹೊರತಾಗಿಯೂ, ರದ್ದಾದ ಕೃಷಿ ಕಾಯ್ದೆಯನ್ನು ಮರಳಿ ತರುವ ಸಾಧ್ಯತೆಗಳಿವೆ. ಇದರಿಂದ ಸೃಷ್ಟಿಯಾಗುವ ಅಸಮಾನತೆಗಳನ್ನು ಸರಿದೂಗಿಸುವ ಸಲುವಾಗಿ ಉಚಿತ ಪಡಿತರ, ಮುದ್ರಾ, ಕಿಸಾನ್‌ ಸಮ್ಮಾನ್‌, ಆಯುಷ್ಮಾನ್‌ ಮುಂತಾದ ಜನಕಲ್ಯಾಣ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಲಾಗಿದೆ. ಶೇ.40ರಷ್ಟು ಯುವ ಸಮೂಹವನ್ನು ಹೊಂದಿರುವ ನವ ಭಾರತದಲ್ಲಿ ಉದ್ಯೋಗಾವಕಾಶಗಳು ಕುಸಿಯುತ್ತಿರುದಷ್ಟೇ ಅಲ್ಲದೆ, ಸುಸ್ಥಿರ ಬದುಕು ಕಲ್ಪಿಸುವ ಉದ್ಯೋಗಳು ಬಹುಮಟ್ಟಿಗೆ ಇಲ್ಲವಾಗಿದೆ. ಬಿಜೆಪಿ ಸರ್ಕಾರ ಜಾರಿಗೊಳಿಸಿರುವ ನೂತನ ಕಾರ್ಮಿಕ ಸಂಹಿತೆಗಳು ಈ ಉದ್ಯೋಗಿಗಳ ಮುಷ್ಕರದ‌ ಹಕ್ಕುಗಳನ್ನೂ ಕಸಿದುಕೊಳ್ಳಲಿದೆ. ಈ ನವ ಉದಾರವಾದಿ ಆರ್ಥಿಕ ನೀತಿಗಳನ್ನು ಜಾರಿಗೊಳಿಸುವ ಸಲುವಾಗಿಯೇ ಬಿಜೆಪಿ 400 ಸ್ಥಾನಗಳಿಗಾಗಿ ಹಂಬಲಿಸುತ್ತಿದೆ.

ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೊಳಿಸುವ ಆಶ್ವಾಸನೆ ನೀಡಲಾಗಿದೆಯಾದರೂ, ಈ ಚುನಾವಣೆಗಳ ಮೊದಲ ಹಂತದವರೆಗೆ ಶೇ 8ರಷ್ಟು ಮಹಿಳೆಯರಿಗೆ ಅವಕಾಶ ನೀಡಲಾಗಿದೆ. ಇದು ಹೆಚ್ಚಾಗುವ ಸಾಧ್ಯತೆಗಳೂ ಇಲ್ಲ. ಮಣಿಪುರ, ಸಾಕ್ಷಿ ಮಲ್ಲಿಕ್‌, ಹಾಥ್ರಸ್‌ ಮುಂತಾದ ಪ್ರಕರಣಗಳ ಮೂಲಕ ಲಿಂಗ ಸೂಕ್ಷ್ಮತೆ-ಸಂವೇದನೆ ಇಲ್ಲದ ಸರ್ಕಾರ ಎಂದು ಸಾಕ್ಷೀಕರಿಸಿರುವ ಬಿಜೆಪಿ ʼ ನಾರಿ ಶಕ್ತಿ‌ ವಂದನ್‌ ಅಧಿನಿಯಮ ʼವನ್ನು ಬಲಪಡಿಸುವ ಆಶ್ವಾಸನೆ ನೀಡುವುದು ಹಾಸ್ಯಾಸ್ಪದವಾಗಿ ಕಾಣುತ್ತದೆ. ಸಂವಿಧಾನವನ್ನು ಬದಲಾಯಿಸಲು ಸ್ವತಃ ಅಂಬೇಡ್ಕರ್‌ ಬಂದರೂ ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಭಾರತದ ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸುವ ಭರವಸೆ ನೀಡುವ ಬಿಜೆಪಿ, ತನ್ನ ಪ್ರಣಾಳಿಕೆಯಲ್ಲಿ ಪ್ರಜಾತಂತ್ರ ಆಳ್ವಿಕೆಯ ಮೂಲ ಸ್ತಂಭಗಳಾದ ಜಾರಿ ನಿರ್ದೇಶನನಾಲಯ, ಸಿಬಿಐ, ಚುನಾವಣಾ ಆಯೋಗ, ಆದಾಯ ತೆರಿಗೆ ಇಲಾಖೆ ಮುಂತಾದ ಸಂಸ್ಥೆಗಳನ್ನು ಸ್ವಾಯತ್ತಗೊಳಿಸುವ ಬಗ್ಗೆ ಪ್ರಸ್ತಾಪಿಸುವುದೂ ಇಲ್ಲ.  ಸಂವಿಧಾನವನ್ನು ಬದಲಿಸದೆಯೂ, ಅದರ ಮೂಲ ಆಶಯಗಳಾದ ಜಾತ್ಯತೀತತೆ, ಬಹುತ್ವ ಮತ್ತು ಸಮನ್ವಯದ ನೆಲೆಗಳನ್ನು ಧ್ವಂಸ ಮಾಡುವ ಕಾನೂನುಗಳನ್ನು ಈಗಾಗಲೇ ಪ್ರಾಯೋಗಿಕವಾಗಿ ಜಾರಿಮಾಡಲಾಗಿದೆ. 400ರ ಹಂಬಲದ ಹಿಂದೆ ಇದನ್ನು ಸಾಂಸ್ಥೀಕರಿಸುವ ಉದ್ದೇಶವೂ ಇರುವುದನ್ನು ಗಮನಿಸಬೇಕಿದೆ.

2014ರ ಚುನಾವಣೆಗಳಲ್ಲಿ ಬಹಳಷ್ಟು ಸದ್ದುಮಾಡಿದ ʼಲೋಕಪಾಲ್‌ʼ ಈ ಬಾರಿ ಕಾಣೆಯಾಗಿದೆ. ಶತಮಾನದ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಕಾರಣವಾಗಿರುವ ಚುನಾವಣಾ ಬಾಂಡ್‌ ಯೋಜನೆಯನ್ನು ಸುಪ್ರೀಂಕೋರ್ಟ್‌ ಅಸಾಂವಿಧಾನಿಕ ಎಂದು ಘೋಷಿಸಿದ್ದರೂ ಪುನಃ ಆ ಯೋಜನೆಯನ್ನು ಜಾರಿಗೊಳಿಸುವುದಾಗಿ ವಿತ್ತಸಚಿವರು ಹೇಳಿರುವುದು ಬಿಜೆಪಿಯ ದ್ವಂದ್ವ ನೀತಿಯ ಪ್ರತೀಕವಾಗಿದೆ. ಚುನಾವಣಾ ಬಾಂಡ್-ರಾಜಕೀಯ ದೇಣಿಗೆ-ಕಾರ್ಪೋರೇಟ್‌ ಜಗತ್ತು-ಆಪ್ತ ಬಂಡವಾಳಿಗರ ಸಮೀಕರಣವನ್ನು ಈಗಾಗಲೇ ದೇಶ ಕಂಡಾಗಿದೆ. ಶಿಕ್ಷಣ, ಆರೋಗ್ಯ, ಯೋಗಕ್ಷೇಮ ಹಾಗೂ ಎಲ್ಲ ರೀತಿಯ ಮೂಲ ಸೌಕರ್ಯಗಳನ್ನು ಕಾರ್ಪೋರೇಟೀಕರಣಗೊಳಿಸುವ ಮೂಲಕ ಭಾರತವನ್ನು ಪರಿಪೂರ್ಣವಾದ ಬಂಡವಾಳಶಾಹಿ ರಾಷ್ಟ್ರವನ್ನಾಗಿ ರೂಪಿಸುವುದು ಬಿಜೆಪಿಯ ಪ್ರಣಾಳಿಕೆಯಿಂದ ಸ್ಪಷ್ಟವಾಗುತ್ತದೆ.

ಪರ್ಯಾಯ ಆಳ್ವಿಕೆ ಬೇಕಾಗಿದೆ

ಈ ನವ ಭಾರತದಲ್ಲಿ ಉಂಟಾಗುವ ಹಸಿವು, ನಿರುದ್ಯೋಗ ಹಾಗೂ ಅಸಮಾನತೆಗಳನ್ನು ಸರಿದೂಗಿಸುವ ಪ್ರಯತ್ನಗಳು ನಡೆಯಬಹುದೇ ಹೊರತು ನಿವಾರಣಾ ಕ್ರಮಗಳನ್ನು ಊಹಿಸಲೂ ಸಾಧ್ಯವಿಲ್ಲ. ತಳಮಟ್ಟದ ಸಮಾಜದಲ್ಲಿ ಈ ಅಸಮಾನತೆಗಳಿಂದ ತತ್ತರಿಸುವ ಜನತೆಯನ್ನು ರಾಷ್ಟ್ರೀಯತೆಯ ಭಾವನಾತ್ಮಕತೆಯಲ್ಲಿ ಮುಳುಗಿಸಲೆಂದೇ ಹಿಂದೂ ಬಹುಸಂಖ್ಯಾವಾದದ ಎಲ್ಲ ಆಯಾಮಗಳನ್ನೂ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತದೆ. ಇಲ್ಲಿ ತಮ್ಮ ಅಸ್ತಿತ್ವ, ಅಸ್ಮಿತೆ ಮತ್ತು ಭವಿಷ್ಯವನ್ನು ಕಳೆದುಕೊಳ್ಳಲಿರುವ ದಲಿತರು, ಅಸ್ಪೃಶ್ಯರು, ತಳಸಮುದಾಯಗಳು, ಆದಿವಾಸಿಗಳು, ಬಹುಸಂಖ್ಯೆಯ ಮಹಿಳೆಯರು, ಅಲ್ಪಸಂಖ್ಯಾತರು ಹಾಗೂ ಅವಕಾಶವಂಚಿತ-ಅಂಚಿಗೆ ತಳ್ಳಲ್ಪಟ್ಟ ಜನಸಮುದಾಯಗಳು ಭಾರತದ ಪ್ರಜಾಪ್ರಭುತ್ವ ಮತ್ತು ಸಮಸಮಾಜವನ್ನು ಕಟ್ಟಬಯಸುವ ಸಂವಿಧಾನವನ್ನು ರಕ್ಷಿಸುವ ಸಲುವಾಗಿ ಒಂದು ಹೊಸ ಪರ್ಯಾಯ ಆಳ್ವಿಕೆಯನ್ನು ಆಯ್ಕೆ ಮಾಡಬೇಕಿದೆ. ಬಿಜೆಪಿ ಸೋಲಬೇಕಿದೆ.  2024ರ ಚುನಾವಣೆಗಳಲ್ಲಿ ಮತದಾರರ ಮುಂದಿರುವ ಜಟಿಲ ಸವಾಲು, ಬಹುದೊಡ್ಡ ಸಾಂವಿಧಾನಿಕ ಜವಾಬ್ದಾರಿಯೂ ಆಗಿದೆ.

2024ರ ಚುನಾವಣೆಗಳಲ್ಲಿ ತಮ್ಮ ʼಪವಿತ್ರʼ ಮತ ಚಲಾಯಿಸುವ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರ ಮನಸ್ಸಿನಲ್ಲೂ ಈ ವಿವೇಕ ಮತ್ತು ವಿವೇಚನೆ ಜಾಗೃತಾವಸ್ಥೆಯಲ್ಲಿರಬೇಕಿದೆ. ಆಗಲೇ ನವ ಭಾರತ ಹೊಸ ದಿಕ್ಕಿನಲ್ಲಿ ಸಾಗಲು ಸಾಧ್ಯ.

Tags: Congress Partyಎಚ್ ಡಿ ಕುಮಾರಸ್ವಾಮಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

“ರಂಗಸ್ಥಳ” ಸಿನಿಮಾ ತಂಡ ಹೇಳಿದ್ದೇನು..??

Next Post

ವರ್ಗಪ್ರಜ್ಞೆಯ ಕೊರತೆಯೂ ಶ್ರಮಿಕರ ಐಕ್ಯತೆಯೂ

Related Posts

ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..
Top Story

ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..

by ಪ್ರತಿಧ್ವನಿ
April 16, 2026
0

ನವದೆಹಲಿ :  ಕೇಂದ್ರ ಸರ್ಕಾರ ಕರೆದಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಇಂದು ಮೂರು ಪ್ರಮುಖ ಮಸೂದೆಗಳನ್ನು ಮಂಡಿಸಲಾಗಿದೆ. ವಿಪಕ್ಷಗಳ ಗದ್ದಲ ಹಾಗೂ ಕೋಲಾಹಲದ ನಡುವೆಯೇ ಕೇಂದ್ರ ಸಚಿವ ಅರ್ಜುನ್‌...

Read moreDetails
ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

April 16, 2026
ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

April 16, 2026
ಚೀನಾದ ಕ್ಸಿ ಜಿನ್‌ಪಿಂಗ್‌ಗೆ ಹಗ್‌ ಮಾಡಲು ಎದುರು ನೋಡುತ್ತಿದ್ದೇನೆ : ಇರಾನ್‌ ಎದುರು ಸೋತ ಟ್ರಂಪ್‌ ಹೊಸ ವರಸೆ..

ಚೀನಾದ ಕ್ಸಿ ಜಿನ್‌ಪಿಂಗ್‌ಗೆ ಹಗ್‌ ಮಾಡಲು ಎದುರು ನೋಡುತ್ತಿದ್ದೇನೆ : ಇರಾನ್‌ ಎದುರು ಸೋತ ಟ್ರಂಪ್‌ ಹೊಸ ವರಸೆ..

April 16, 2026
ಅಮೆರಿಕ–ಇರಾನ್ ಸಂಘರ್ಷಕ್ಕೆ ತಾತ್ಕಾಲಿಕ ವಿರಾಮ?

ಅಮೆರಿಕ–ಇರಾನ್ ಸಂಘರ್ಷಕ್ಕೆ ತಾತ್ಕಾಲಿಕ ವಿರಾಮ?

April 15, 2026
Next Post
ಕರಾಳ ವಾಸ್ತವವೂ ಪರ್ಯಾಯದ ಅನಿವಾರ್ಯತೆಯೂ

ವರ್ಗಪ್ರಜ್ಞೆಯ ಕೊರತೆಯೂ ಶ್ರಮಿಕರ ಐಕ್ಯತೆಯೂ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada