ಬೆಂಗಳೂರು, ಡಿಸೆಂಬರ್ 25: ಬೆಳಗಾವಿ ಹಮ್ಮಿಕೊಂಡಿರುವ ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ಆಚರಣೆಯ ಹಿನ್ನೆಲೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸ್ಮರಣೆಯು ಚಿರಕಾಲ ಇರಲು ರಾಜ್ಯ ಸರ್ಕಾರಿ ಅಧಿಕಾರಿಗಳು, ನೌಕರರು/ ನಿಗಮ ಮಂಡಳಿಯ ಅಧಿಕಾರಿಗಳು, ನೌಕರರು ಕೆಲಸದ ದಿನಗಳಲ್ಲಿ ವಾರದಲ್ಲಿ ಒಂದು ದಿನ ಕಡ್ಡಾಯವಾಗಿ ಖಾದಿ ಧರಿಸಬೇಕು ಎಂಬ ಆದೇಶವನ್ನು ಹೊರಡಿಸಲು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು ಮನವಿ ಮಾಡಿದ್ದಾರೆ.
‘ಖಾದಿ ಎಂಬುದು ಕೇವಲ ಬಟ್ಟೆಯಲ್ಲಿ ಅದೊಂದು ಜೀವನ ಪದ್ಧತಿ ಸ್ವಾವಲಂಬಿ ಬದುಕಿನ ರೂಪಕ ಖಾದಿ ತೊಟ್ಟವರಿಗೆ ಸತ್ಯ ಮತ್ತು ಅಹಿಂಸೆ ಕೂಡ ಒಂದು ಪ್ರತ ಎನ್ನುವ ಹಿರಿಯರ ನುಡಿಯಿರುತ್ತದೆ. ಗಾಂಧೀಜಿಯವರಿಗೆ ಸ್ವಾತಂತ್ರ್ಯ ಹೋರಾಟಕ್ಕೆ ಹಾಗು ಸ್ವದೇಶಿ ಚಳವಳಿಯಲ್ಲಿ ಖಾದಿ ತಯಾರಿಕೆ ಮತ್ತು ಉಪಯೋಗಿಸುವುದು ಪ್ರಬಲ ಅಸ್ತ್ರವಾಗಿತ್ತು ಗಾಂಧೀಜಿಯವರು ಗ್ರಾಮ ಸ್ವರಾಜ್ಯದ ಬಗ್ಗೆ ದೊಡ್ಡ ಕನಸು ಹೊಂದಿದ್ದರು. ಖಾದಿಯ ಜೊತೆಗೆ ಗಾಂಧೀಜಿಯವರ ಆದರ್ಶ ಹಾಗು ಸ್ವಾತಂತ್ರ್ಯ ಚಳವಳಿಯ ನೆನಪುಗಳು ಎಲ್ಲ ಕಾಲಕ್ಕೂ ಅಗತ್ಯವಾದ ನೈತಿಕತೆಯನ್ನು ಸೂಚಿಸುವಂತಿವೆ ಎಂದು ಹೇಳಿದ್ದಾರೆ.
1924 ರಲ್ಲಿ ಬೆಳಗಾವಿಯಲ್ಲಿ ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವವು ನಾಳೆಯಿಂದ ಮೂರು ದಿನ ಬೆಳಗಾವಿಯಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ವಾರದಲ್ಲಿ ಒಂದು ದಿನ ಕಡ್ಡಾಯವಾಗಿ ಖಾದಿ ಧರಿಸಬೇಕು ಎಂಬ ಆದೇಶ ಹೊರಡಿಸಿದರೆ ಸೂಕ್ತವಾಗಿರುತ್ತದೆ ಎಂಬ ಆಶಯ ನನ್ನದು ಎಂದು ತಿಳಿಸಿದ್ದಾರೆ.