ರಾಜ್ಯ ರಾಜಕಾರಣ ಮತ್ತೊಂದು ಮಗ್ಗುಲಿಗೆ ಹೊರಳುವ ಲಕ್ಷಣ ಕಾಣಿಸುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆ ನಡೆಯುವಾಗ ಸಾವಿರಾರು ಜನರು ಪಾದಯಾತ್ರೆಯಲ್ಲಿ ಭಾಗಿಯಾಗುತ್ತಿದ್ದರು. ಆದರೆ ಆ ಯಾತ್ರೆಗೆ ಇಂತಿಷ್ಟು ಕ್ಷೇತ್ರದಿಂದ ಜನರನ್ನು ಕರೆದುಕೊಂಡು ಬರಬೇಕು ಅನ್ನೋ ಯೋಜನೆ ಮಾಡಲಾಗಿತ್ತು. ಮಾರ್ಗದುದ್ದಕ್ಕು ಹಣ್ಣು ಹಂಪಲು, ಊಟ, ಕುಡಿಯಲು ಜ್ಯೂಸ್, ನೀರಿನ ವ್ಯವಸ್ಥೆ ಮಾಡಲಾಗಿತ್ತು. ಜನರು ದೊಡ್ಡ ಮಟ್ಟದಲ್ಲೇ ಸೇರುತ್ತಿದ್ದರು. ಕಾಂಗ್ರಸೆ್ ಕೂಡ ಭಾರತ್ ಜೋಡೋ ಯಾತ್ರೆ ಯಶಸ್ಸು ಕಂಡಿದೆ ಎಂದು ಘೋಷಣೆ ಮಾಡಿದ್ದರು. ಆಗಿನ ಸಂದರ್ಭಕ್ಕೆ ನೋಡಿದವರಿಗೂ ದೊಡ್ಡ ಮಟ್ಟದಲ್ಲಿ ಜನರು ಸೇರುತ್ತಿದ್ದಾರೆ ಎಂದೇ ಅನಿಸಿತ್ತು. ಆದರೆ ಈಗ ಜೆಡಿಎಸ್ ಪಕ್ಷದಿಂದ ನಡೆಯುತ್ತಿರುವ ಯಾತ್ರೆಯನ್ನು ನೋಡಿದಾಗ ಕಾಂಗ್ರೆಸ್ ಯಾತ್ರೆ ಇದರ ಮುಂದೆ ಸೊರಗಿತೇ..? ಎನ್ನುವ ಪ್ರಶ್ನೆಯನ್ನು ಒಂದು ಬಾರಿ ಕೇಳಿಕೊಳ್ಳುವಂತೆ ಮಾಡುತ್ತಿದೆ.
ಕೋಲಾರದ ಮುಳಬಾಗಿಲುವಿನಿಂದ ಆರಂಭವಾದ ಕುಮಾರಸ್ವಾಮಿಯ ಕನಸಿನ ಯೋಜನೆ ಪಂಚರತ್ನ ಯಾತ್ರೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಈಗ ತುಮಕೂರು ಕ್ಷೇತ್ರದಲ್ಲಿ ಸಾಗುತ್ತಿದೆ. ಕುಮಾರಸ್ವಾಮಿ ಹೋದ ಕಡೆಯಲ್ಲಿ ಜನರು ಸೇರುತ್ತಿದ್ದಾರೆ. ಅದ್ಧೂರಿ ಸ್ವಾಗತ ಸಿಗುತ್ತಿದೆ. ತಮ್ಮ ಪಾಡಿಗೆ ತಾವು ಹೋಗುತ್ತಿದ್ದು, ಮಧ್ಯ ಮಧ್ಯ ಊರುಗಳಲ್ಲಿ ಮೊದಲೇ ಸಿದ್ಧವಾಗಿರುವ ವೇದಿಕೆಯಲ್ಲಿ ನಿಂತು ಕುಮಾರಸ್ವಾಮಿ ಭಾಷಣ ಮಾಡುತ್ತಿದ್ದಾರೆ. ಕಾರಿನಲ್ಲಿ ಕುಮಾರಸ್ವಾಮಿ ಹೋಗುತ್ತಿದ್ದರೆ ರಸ್ತೆಯುದ್ದಕ್ಕೂ ನಿಂತು ಜನರ ಆಶೀರ್ವಾದ ಮಾಡುತ್ತಿದ್ದಾರೆ. ‘ನೀನೇ ಮುಖ್ಯಮಂತ್ರಿ ಆಗಬೇಕು ಕಣಪ್ಪ’ ಎಂದು ಹರಸುತ್ತಿದ್ದಾರೆ. ಇದೊಂದು ರೀತಿಯಲ್ಲಿ ರಾಜಕೀಯ ವರಿವರ್ತನೆ ರೀತಿಯಲ್ಲಿ ಕಾಣಿಸುತ್ತಿದ್ದು, ಕುಮಾರಸ್ವಾಮಿಗೆ ಸಿಗುತ್ತಿರುವ ಜನರ ಬೆಂಬಲ ಮತಗಳಾಗಿ ಪರಿವರ್ತನೆ ಆಗುವ ಎಲ್ಲಾ ಸಾಧ್ಯತೆಗಳೂ ಕಾಣಿಸುತ್ತಿದೆ. ಅದಕ್ಕಾಗಿ ಕುಮಾರಸ್ವಾಮಿ ಟೀಂ ಕೆಲಸ ಮಾಡುತ್ತಿದೆ.
ಪಂಚರತ್ನ ರಥಯಾತ್ರೆ ವೇಳೆ ಜನರನ್ನು ಮಾತನಾಡಿ, ಸಮಸ್ಯೆ ಹಾಗು ಪರಿಹಾರದ ಬಗ್ಗೆ ಜನರಿಂದಲೇ ಮಾಹಿತಿ ಪಡೆಯಲಾಗ್ತಿದೆ. ಕುಮಾರಸ್ವಾಮಿ ಮಾಡಿದ ಕೆಲಸ ಹಾಗು ಮಾಡಬೇಕಿರುವ ಕೆಲಸ, ಜನರು ಈ ಬಾರಿ ಯಾರಿಗೆ ಮತ ಹಾಕಬೇಕು ಅಂದುಕೊಂಡಿದ್ದಾರೆ. ಯಾವ ಕ್ಷೇತ್ರದಲ್ಲಿ ಯಾವ ಕೆಲಸ ಆಗಬೇಕು. ಕುಮಾರಸ್ವಾಮಿ ಅವರ ಕನಸಿನ ಯೋಜನೆ ಜನರಿಗೆ ಸಹಕಾರಿ ಆಗಲಿದೆ ಎನ್ನುವ ಬಗ್ಗೆಯೂ ಜನರಿಗೆ ಅರಿವು ಮೂಡಿಸಲಾಗ್ತಿದೆ. ಕುಮಾರಸ್ವಾಮಿ ರಥಯಾತ್ರೆ ಮುಂದಕ್ಕೆ ಹೋದ ಬಳಿಕ ಎರಡನೇ ಬಾರಿಗೆ ಜನರನ್ನು ಮಾತನಾಡಿಸಿ, ಕ್ಷೇತ್ರ ಹಾಗು ಗ್ರಾಮದಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ಜನರಿಂದ ಅಹವಾಲು ಸ್ವೀಕಾರ ಮಾಡಲಾಗ್ತಿದೆ. ಈ ಕೆಲಸ ಜನರ ಮನಸ್ಸಿಗೆ ಹತ್ತಿರ ಆಗುವುದಕ್ಕೆ ಸಹಕಾರಿ ಆಗಿದೆ. ಅಷ್ಟೇ ಅಲ್ಲದೆ ಈಗಾಗಲೇ ಕಾಂಗ್ರೆಸ್, ಬಿಜೆಪಿಗೆ ಸ್ವತಂತ್ರವಾಗಿ ಸರ್ಕಾರ ಮಾಡುವುದಕ್ಕೆ ಕೊಟ್ಟಾಗಿದೆ. ಕುಮಾರಸ್ವಾಮಿಗೆ ಒಮ್ಮೆ ಅವಕಾಶ ಯಾಕೆ ಕೊಡಬಾರದು ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ಕಳೆದ 2 ಬಾರಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದರು. ಆದರೆ ಎರಡೂ ಬಾರಿಯೂ ಮೈತ್ರಿ ಸರ್ಕಾರ ಅನ್ನೋದು ವಿಶೇಷ. ಒಮ್ಮೆ ಬಿಜೆಪಿ ಜೊತೆಗೆ ಸೇರಿಕೊಂಡು ಸರ್ಕಾರ ರಚನೆ ಮಾಡಿದ್ದಾಗ ಭಾಗ್ಯಲಕ್ಷ್ಮೀ ಯೋಜನೆ, ಮಕ್ಕಳಿಗೆ ಬೈಸಿಕಲ್ ಯೋಜನೆ ಸೇರಿದಂತೆ ಭರಪೂರ ಕೊಡುಗೆ ಕೊಟ್ಟಿದ್ದ ಕುಮಾರಸ್ವಾಮಿ ಆ ಬಳಿಕ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡುವಲ್ಲಿ ಮೋಸ ಮಾಡಿದ್ರು ಅನ್ನೋ ಕಾರಣಕ್ಕೆ ಸೋಲು ಅನುಭವಿಸಬೇಕಾಯ್ತು. ಆ ಬಳಿಕ ಕಾಂಗ್ರೆಸ್ ಸರ್ಕಾರದ ಜೊತೆಗೆ ಮತ್ತೆ ಕುಮಾರಸ್ವಾಮಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಮಾತು ಕೊಟ್ಟಂತೆ ರೈತರ ಸಾಲ ಮನ್ನಾ ಮಾಡಿದ್ದರು. ಬೀದಿ ವ್ಯಾಪಾರಿಗಳಿಗೆ ಬಡ್ಡಿ ಇಲ್ಲದೆ ಸಾಲು ಕೊಡುವ ಯೋಜನೆ ಜಾರಿ ಮಾಡಿದ್ದರು. ಇದೀಗ ಪಂಚ ರತ್ನ ಯೋಜನೆ ಜಾರಿ ಮಾಡಲು ಕನಿಷ್ಟ 5 ವರ್ಷಗಳ ಅವಕಾಶವನ್ನು ಕೊಡಿ, ನಾನು ಕೊಟ್ಟ ಮಾತು ಉಳಿಸಿಕೊಳ್ಳದಿದ್ದರೆ ಜೆಡಿಎಸ್ ಪಕ್ಷವನ್ನೇ ವಿಸರ್ಜನೆ ಮಾಡ್ತೇನೆ ಎನ್ನುವ ಚಾಲೆಂಜ್ ಹಾಕಿ ರಾಜ್ಯ ಸುತ್ತುತ್ತಿದ್ದಾರೆ. ಸದ್ಯದ ಪ್ರಕಾರ ಮೈತ್ರಿ ಸರ್ಕಾರ ಬರುವ ಮಾತುಗಳು ಕೇಳಿ ಬರುತ್ತಿವೆ. ಜನರ ಬೆಂಬಲ ನೋಡಿದರೆ ಜನತಾ ಸರ್ಕಾರವೇ ಬಂದರೂ ಅಚ್ಚರಿ ಇಲ್ಲ ಎನ್ನಬಹುದು.
ಕೃಷ್ಣಮಣಿ