ಶಿವಮೊಗ್ಗ:ಆಜಾನ್ ವಿರುದ್ಧ ಮಂಗಳೂರಿನಲ್ಲಿ ಗುಡಗಿದ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಶಿವಮೊಗ್ಗದಲ್ಲಿ ಮೂರು ದಿನಗಳ ಹಿಂದೆ ಶಿವಮೊಗ್ಗ ಮುಸ್ಲಿಂ ಮುಖಂಡರನ್ನ ಮನೆಯಲ್ಲಿ ಭೇಟಿ ಮಾಡಿದ್ದಾರೆ. ಇದಷ್ಟೇ ಆಗಿದ್ದರೆ ಪರವಾಗಿರಲಿಲ್ಲ, ಮುಖಂಡರೊಂದಿಗೆ ಮಾತನಾಡುತ್ತಾ, ಹಿಂದೂಗಳಲ್ಲಿಯೂ ಮುಸ್ಲಿಂರಂತೆ ತಲೆಹರಟೆಗಳಿದ್ದಾರೆ ಎಂದು ಹೇಳಿರುವ ವಿಡಿಯೋ ಶಿವಮೊಗ್ಗದ ಜನರ ವಾಟ್ಸ್ ಆ್ಯಪ್ ಲ್ಲಿ ಹರಿದಾಡುತ್ತಿದೆ.
ವಕ್ಫ್ ಬೋರ್ಡ್ ಅಧ್ಯಕ್ಷ ಶಫಿ, ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಘಟಕದ ನಾಯಕರು ಹಾಗೂ ಮಹಿಳೆಯರು ಶುಕ್ರವಾರ ಸಂಜೆ ಈಶ್ವರಪ್ಪ ಮನೆಯಲ್ಲಿ ಸೇರಿ, ಮಾಜಿ ಸಚಿವ ಹಾಗೂ ತಮ್ಮ ಶಾಸಕರಿಗೆ ಹಲವು ಬೇಡಿಕೆಗಳನ್ನ ಇಟ್ಟರು. ಈ ಸಂದರ್ಭದಲ್ಲಿ ಈಶ್ವರಪ್ಪ ತಾವು ಮುಸ್ಲಿಂ ವಿರೋಧಿ ಅಲ್ಲ, ಶಿವಮೊಗ್ಗ ಮುಸ್ಲಿಂರು ಒಳ್ಳೇಯರವು ಎಂದರು.
ವಿಡಿಯೋ ಸಾರಾಂಶ ಹೀಗಿದೆ..,
ಒಂದು ತಿಳಿದುಕೊಳ್ಳಿ, ಶಿವಮೊಗ್ಗದಲ್ಲಿರುವಂತಹ ಮುಸ್ಲಿಂರು ಗಲಾಟೆ ಮಾಡುವವರಲ್ಲ. ಹಿಂದೂಗಳಲ್ಲೂ ಕೆಲ ತಲೆಹರಟೆಗಳಿದ್ದಾರೆ. ನಾನು ಇಲ್ಲ ಎನ್ನುವುದಿಲ್ಲ. ಆದರೆ ಏನು ಪ್ರಶ್ನೆ …? ಹಿಂದೂಗಳು ತಲೆಹರಟೆ ಮಾಡಿದ್ರೂ, ಮುಸ್ಲಿಂ ತಲೆ ಹರಟೆ ಮಾಡಿದ್ರೂ ಇಂಥಹ ಗಲಾಟೆಗಳು ಶುರುವಾಗುತ್ತೆ. ಅಲ್ಲೊಂದು ನಾಲ್ಕು ಜನ, ಇಲ್ಲೊಂದು ನಾಲ್ಕು ಜನರಿಂದ ಗಲಾಟೆ. ನಾನು ತಪ್ಪು ಮಾಡಿದ್ದರೆ ಇದೇ ಸಭೆಯಲ್ಲಿ ಹೇಳಿ. ನಾನು ಯಾಕೆ ಗಲಾಟೆ ಮಾಡ್ತೀನಿ ಎಂದರೆ ಸಮಾಜದಲ್ಲಿ ಅಶಾಂತಿ ತಲೆದೋರಿದಾಗ ಮಾತ್ರ ಎಂದರು.
ಸಮಾಜದಲ್ಲಿ ಅಣ್ಣತಮ್ಮಂದಿರಂತೆ ಇರುತ್ತೇವೆ. ನಾನು ಯಾವಾಗ ಗಲಾಟೆ ಮಾಡಿದ್ದು.? ಶಿವಪ್ಪ ನಾಯಕ ವೃತ್ತದ ಬಳಿ ಎಸ್ ಡಿ ಪಿಐ ಸಮಾವೇಶ ನಡೆದಾಗ ಪಾಕಿಸ್ತಾನ್ ಜಿಂದಾಬಾದ್ ಎಂದು ಯಾವನೋ ಕೂಗಿದ. ಇದನ್ನ ನೀವೂ ವಿರೋಧಿಸುತ್ತೀರಾ..! ನೀವು ಸುಮ್ಮನಿರ್ತೀರಾ ಆದರೆ ನಾನು ವಿರೋಧಿಸುತ್ತೇನೆ. ಗಾಜನೂರಿನಲ್ಲಿ ತಲವಾರ್ ಬೀಸಿದರು. ಇದನ್ನ ಯಾರು ಖಂಡಿಸುತ್ತಾರೆ? ಇವರೆಲ್ಲಾ ಶಿವಮೊಗ್ಗದವಾ? ಬಿಜೆಪಿಯಲ್ಲಿರುವ ಅನೇಕರು ಇದನ್ನ ವಿರೋಧಿಸುವುದೇ ಇಲ್ಲ. ಆದರೆ ನಾನು ವಿರೋಧಿಸುತ್ತೇನೆ ಎಂದರು.
ಹಿಂದೂ ಹರ್ಷನನ್ನ ಕೊಲೆ ಮಾಡಿದರು. ನಿಮ್ಮ ಮಕ್ಕಳನ್ನಾದರೆ ಬಿಡ್ತೀರಾ? ಅದೇ ರೀತಿ ನಾನು ಎಲ್ಲರನ್ನೂ ವಿರೋಧಿಸಲ್ಲ. ಇಂತಹ ಕಿಡಿಗೇಡಿಗಳನ್ನ ವಿರೋಧಿಸುತ್ತೇನೆ. ಇದನ್ನೇ ಈಶ್ವರಪ್ಪ ಮುಸ್ಲಿಂ ವಿರೋಧಿ ಎಂದು ಕರೆದರೆ ಏನು ಮಾಡಬೇಕು..? ಯಾರು ಗೂಂಡಾ ವರ್ತನೆ ತೋರುತ್ತಾರೆ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದರು.
ಈ ವಿಡಿಯೋ ತುಣುಕನ್ನ ಮುಸ್ಲಿಂ ಮುಖಂಡ ಶಫಿ ಫೇಸ್‌ಬುಕ್ ಲೈವ್ ಮಾಡಿದ್ದ. ಈಗ ಈಶ್ವರಪ್ಪ ಆಡಿದ ಮಾತುಗಳು ಸಖತ್ ವೈರಲ್ ಆಗಿವೆ. ಮುಸ್ಲಿಂ ಮುಖಂಡರ ಬಳಿ ಹಿಂದೂಗಳಲ್ಲಿಯೂ ತಲೆಹರಟೆಗಳಿದ್ದಾರೆ ಎಂದು ಈಶ್ವರಪ್ಪ ಹೇಳಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಸ್ಲಿಂ ಓಟುಗಳೇ ಬೇಡ ಎನ್ನುತ್ತಿದ್ದ ಈಶ್ವರಪ್ಪ ಮುಸ್ಲಿಂ ಮುಖಂಡರ ಜೊತೆ ಕೂತು ಈ ತರಹದ ಹೇಳಿಕೆ ನೀಡುವುದು ಎಷ್ಟು ಸರಿ ಎಂದು ವಾಟ್ಸ್ ಆ್ಯಪ್, ಫೇಸ್‌ಬುಕ್ ಪೋಸ್ಟ್ ಮಾಡುತ್ತಿದ್ದಾರೆ.