
ಇಸ್ಲಾಮಾಬಾದ್: ವಾಯುವ್ಯ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದ ಸ್ವಾತ್ ಜಿಲ್ಲೆಯಲ್ಲಿ ಪವಿತ್ರ ಕುರಾನ್ ಅನ್ನು ಅಪವಿತ್ರಗೊಳಿಸಿದ್ದಾರೆ ಎಂಬ ಆರೋಪದ ಮೇಲೆ ಆಕ್ರೋಶಗೊಂಡ ಗುಂಪೊಂದು ೋರ್ವ ವ್ಯಕ್ತಿಯನ್ನು ಕೊಂದಿದ್ದು, ಈ ಗಲಭೆಯಲ್ಲಿ ಎಂಟು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಂಜಾಬ್‌ನ ಸಿಯಾಲ್‌ಕೋಟ್ ಜಿಲ್ಲೆಯ ವ್ಯಕ್ತಿ ಗುರುವಾರ ರಾತ್ರಿ ಸ್ವಾತ್‌ನ ಮದ್ಯಾನ್ ತೆಹಸಿಲ್‌ನಲ್ಲಿ ಪವಿತ್ರ ಕುರಾನ್‌ನ ಕೆಲವು ಪುಟಗಳನ್ನು ಸುಟ್ಟು ಹಾಕಿದ್ದಾನೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿ (ಡಿಪಿಒ), ಸ್ವಾತ್, ಜಹಿದುಲ್ಲಾ ಹೇಳಿದ್ದಾರೆ.
ಆರೋಪಿಯನ್ನು ವಶಕ್ಕೆ ಪಡೆದು ಮದ್ಯಾನ್ ಠಾಣೆಗೆ ಕರೆತರಲಾಗಿದೆ. ಪೊಲೀಸ್ ಠಾಣೆಯ ಹೊರಗೆ ಜಮಾಯಿಸಿದ ಗುಂಪೊಂದು ಆತನನ್ನು ಒಪ್ಪಿಸುವಂತೆ ಒತ್ತಾಯಿಸಿತು. ಇದಕ್ಕೆ ಪೊಲೀಸರು ನಿರಾಕರಿಸಿದ ಹಿನ್ನೆಲೆಯಲ್ಲಿ ಗುಂಪು ಗುಂಡಿನ ದಾಳಿ ನಡೆಸಿದ್ದು, ಪೊಲೀಸರು ಪ್ರತಿದಾಳಿ ನಡೆಸಿದ್ದಾರೆ. ಗುಂಡಿನ ಚಕಮಕಿಯಲ್ಲಿ ಒಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮದ್ಯಾನ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಡಿಪಿಒ ತಿಳಿಸಿದ್ದಾರೆ.
ನಂತರ ಗುಂಪು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿತು. ನಂತರ, ಕೆಲವರು ಪೊಲೀಸ್ ಠಾಣೆಗೆ ನುಗ್ಗಿ, ಶಂಕಿತನನ್ನು ಗುಂಡು ಹಾರಿಸಿ ಕೊಂದು ಅವನ ದೇಹವನ್ನು ಮದ್ಯನ್ ಅಡ್ಡಾಕ್ಕೆ ಎಳೆದೊಯ್ದು ಅಲ್ಲಿ ನೇಣು ಹಾಕಿದರು ಎಂದು ಜಹಿದುಲ್ಲಾ ಹೇಳಿದರು.

ಘಟನೆಯಿಂದ ಉಂಟಾದ ಗಲಭೆಯಲ್ಲಿ ಎಂಟು ಮಂದಿ ಗಾಯಗೊಂಡಿದ್ದಾರೆ. ಮದ್ಯಾನದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಪರಿಸ್ಥಿತಿ ಹತೋಟಿಗೆ ತರಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಮುಖ್ಯಮಂತ್ರಿ ಕೆಪಿಕೆ ಅಲಿ ಅಮೀನ್ ಗಂಡಾಪುರ ಅವರು ಘಟನೆಯನ್ನು ಗಮನಿಸಿದ್ದು, ಪ್ರಾಂತೀಯ ಪೊಲೀಸ್ ಮುಖ್ಯಸ್ಥರಿಂದ ವರದಿ ಕೇಳಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಐಜಿಪಿಗೆ ಸಿಎಂ ಸೂಚಿಸಿದ್ದು, ಜನರು ಶಾಂತವಾಗಿ ಮತ್ತು ಶಾಂತಿಯಿಂದ ಇರುವಂತೆ ಮನವಿ ಮಾಡಿದರು.