ಕೊಲ್ಕತ್ತಾದ ಬಿಜೆಪಿ ನಾಯಕರೊಬ್ಬರನ್ನು ಪೊಲೀಸರು ಬಲವಂತವಾಗಿ ಅವರ ಮನೆಯಿಂದ ಬಂಧಿಸಿದ್ದಾರೆ. ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಕಳ್ಳತನನಕ್ಕೆ ಸಂಬಂಧಪಟ್ಟ ಹಲವು ಪ್ರಕರಣಗಳನ್ನು ಅವರ ವಿರುದ್ದ ದಾಖಲಿಸಲಾಗಿದೆ.
ಮಾಧ್ಯಮಗಳ ಕ್ಯಾಮೆರಾ ಮುಂದೆಯೇ ಈ ಘಟನೆ ನಡೆದಿದ್ದು. ಪೊಲೀಸರು ಬಿಜೆಪಿ ನಾಯಕ ಸಜಲ್ ಘೋಷ್ ಅವರ ಮನೆಯ ಬಾಗಿಲನ್ನು ಒಡೆದು ಒಳ ನುಗ್ಗಿರುವುದು ದಾಖಲಾಗಿದೆ. ನಾನು ಯಾವುದೇ ತಪ್ಪು ಮಾಡಿಲ್ಲವಾದರೂ ನನ್ನ ಮೇಲೆ ಆರೋಪ ಹೊರಿಸಲಾಗಿದೆ. ಈ ರಾಜ್ಯದಲ್ಲಿ ಹುಟ್ಟಿರುವುದಕ್ಕೆ ನನಗೆ ನಾಚಿಕೆಯಾಗುತ್ತಿದೆ, ಎಂದು ಅವರು ಈ ಸಮಯದಲ್ಲಿ ಹೇಳಿದ್ದಾರೆ.
ಮುಚ್ಚಿಪುರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಘೋಷ್ ಅವರ ಮನೆಗೆ ಬಂದು, ಅವರ ಮೇಲೆ ಜಾಮೀನು ರಹಿತ ಪ್ರಕರಣ ದಾಖಲಾಗಿರುವುದರ ಕುರಿತು ಮಾಹಿತಿ ನೀಡಿದ್ದಾರೆ. ಪೊಲೀಸರು ಬಂಧನಕ್ಕೆ ಯತ್ನಿಸುವಾಗ ಮನೆಯ ಬಾಗಿಲು ಮುಚ್ಚಿದ್ದಾರೆ. ನಂತರ ಕಿಟಕಿಯ ಬಳಿ ಕುಳಿತು ಮಾಧ್ಯಮಗಳೊಂದಿಗೆ ಮಾತನಾಡಿದ ಘೋಷ್, ಮನೆಯ ಬಾಗಿಲು ಒಡೆದು ನನ್ನನ್ನು ಬಂಧಿಸಿ ಎಂದು ಹೇಳಿದ್ದಾರೆ.
ಹೆಚ್ಚಿನ ಸಿಬ್ಬಂದಿ ಸ್ಥಳಕ್ಕೆ ಆಗಮಿಸುತ್ತಿದ್ದಂತೆಯೇ, ಪೊಲೀಸರು ಬಾಗಿಲು ಒಡೆದು ಮನೆಯೊಳಗೆ ಪ್ರವೇಶಿಸಿದ್ದಾರೆ. ನಂತರ ಘೋಷ್ ಅವರ ಬಂಧನವಾಗಿದೆ. ಸಜಲ್ ಘೋಷ್ ಹಾಗೂ ಅವರ ತಂದೆ ಪ್ರದೀಪ್ ಘೋಷ್ ಅವರು ಕೊಲ್ಕತ್ತಾದ ಪ್ರಮುಖ ಬಿಜೆಪಿ ನಾಯಕರು. ಸಂತೋಷ್ ಮಿತ್ರಾ ಚೌಕದಲ್ಲಿ ನಡೆಯುವ ಪ್ರಸಿದ್ದ ದುರ್ಗಾ ಪೂಜೆಯ ಆಯೋಜಕರು. ಅವರ ಒಂದು ಕರೆಗೆ ನೂರಾರು ಕಾರ್ಯಕರ್ತರು ಜಮಾಯಿಸುತ್ತಾರೆ. ಪ್ರದೀಪ್ ಈ ಹಿಂದೆ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರಾಗಿದ್ದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಗುರುವಾರದಂದು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತೆಯೊಬ್ಬರು ತಮ್ಮ ಮೇಲೆ ಇಬ್ಬರು ಬಿಜೆಪಿ ಕಾರ್ಯಕರ್ತರು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ದೂರು ನೀಡಿದ್ದರು. ಪೊಲೀಸರು ಇಬ್ಬರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಲಯವು ಅವರಿಗೆ ಆಗಸ್ಟ್ 16ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿತ್ತು.
ಆ ಇಬ್ಬರು ಬಿಜೆಪಿ ಕಾರ್ಯಕರ್ತರನ್ನು ಬಿಡುಗಡೆಗೊಳಿಸಲು ಸಜಲ್ ಘೋಷ್ ಅವರು ಪೊಲೀಸ್ ಠಾಣೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ, ಟಿಎಂಸಿ ಕಾರ್ಯಕರ್ತರೊಂದಿಗೆ ತೀವ್ರ ವಾಗ್ವಾದ ನಡೆದಿತ್ತು. ಇದಾದ ಬಳಿಕ ಶುಕ್ರವಾರದಂದು, ಟಿಎಂಸಿ ಕಾರ್ಯಕರ್ತರೊಬ್ಬರು ಸಜಲ್ ವಿರುದ್ದ ಜೀವ ಬೆದರಿಕೆಯ ಪ್ರಕರಣ ದಾಖಲಿಸಿದ್ದರು.
ಐಪಿಸಿ ಸೆಕ್ಷನ್ 324 (ಸ್ವಇಚ್ಚೆಯಿಂದ ಮಾರಕಾಯುಧ ಬಳಸಿ ಹಲ್ಲೆ) 341, 506 (ಬೆದರಿಕೆ), 380 (ಕಳ್ಳತನ) ಮತ್ತು ಅಕ್ರಮ ಶಸ್ತ್ತಾಸ್ತ್ರ ಕಾಯ್ದೆಯ ಕಲಂ 25(1)(a) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆ ಬಳಿಕ ಸಜಲ್ ಘೋಷ್ ಅವರ ಬಂಧನವಾಗಿದೆ.
ಸಜಲ್ ಘೋಷ್ ಅವರ ಪತ್ನಿ ತಾನಿಯಾ ಘೋಷ್ ಅವರು, ಸ್ಥಳೀಯ ಪೊಲೀಸ್ ಅಧೀಕಾರಿಗಳ ವಿರುದ್ದವೇ ಪ್ರಕರಣ ದಾಖಲಿಸಿದ್ದಾರೆ. ಬಲವಂತವಾಗಿ ಮನೆಯ ಬಾಗಿಲು ಮುರಿದು ಒಳಗೆ ಪ್ರವೇಶಿಸಿದ್ದು ಹಾಗೂ ಯಾವುದೇ ಮಹಿಳಾ ಅಧಿಕಾರಿಯಿಲ್ಲದೇ ಮನೆಯೊಳ್ಗೆ ಪ್ರವೇಶಿದ್ದರ ಕುರಿತು ತನಿಖೆ ನಡೆಯಬೇಕೆಂದು ಆಗ್ರಹಿಸಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ ಎಂದು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಅವರು ಹೇಳಿದ್ದಾರೆ.
“ಇದು ದುರದೃಷ್ಟಕರ ಘಟನೆ. ತ್ರಿಪುರದ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನಾಡಿ, ಇಲ್ಲಿ ಬಿಜೆಪಿ ಕಾರ್ಯಕರ್ತರ ಮನೆಯ ಬಾಗಿಲು ಒಡೆಯುತ್ತಿದ್ದಾರೆ. ದೆಹಲಿಯಲ್ಲಿ ಪ್ರಜಾತಂತ್ರ ಆಂದೋಲನ ನಡೆಸುತ್ತಾರೆ. ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆಯೇ ಇಲ್ಲ. ಬಿಜೆಪಿಯ ಎಲ್ಲರ ಹಿಂದೆ ಮುಗಿಬೀಳುತ್ತಿದ್ದಾರೆ,” ಎಂದು ಆರೋಪಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಟಿಎಂಸಿ ವಕ್ತಾರ ಕುನಾಲ್ ಘೋಷ್ ಅವರು, ಸಜಲ್ ಅವರು ವಿನಾಕಾರಣ ವಿಷಯವನ್ನು ಬೆಟ್ಟದಷ್ಟು ದೊಡ್ಡದು ಮಾಡಿದ್ದಾರೆ. ಅವರು ಪೊಲೀಸರೊಂದಿಗೆ ಸಹಕರಿಸಿ ಅವರ ಮನೆಯಿಂದ ಹೊರಬರಬೇಕಿತ್ತು. ಪೊಲೀಸರು ಏಕೆ ಅವರ ಬಾಗಿಲು ಒಡೆಯುತ್ತಿದ್ದರು?, ಎಂದು ಪ್ರಶ್ನಿಸಿದ್ದಾರೆ.