ಕೋಲಾರದಲ್ಲಿ ಕಾಂಗ್ರೆಸ್ ಪ್ರಬಲ ಪಕ್ಷ ಎಂದರೆ ಸುಳ್ಳಲ್ಲ. ಆದರೆ ಲೋಕಸಭಾ ಅಭ್ಯರ್ಥಿ ಆಯ್ಕೆ ವಿಚಾರ ಸೇರಿದಂತೆ ಎಲ್ಲಾ ವಿಚಾರಗಳಲ್ಲೂ ಕಾಂಗ್ರೆಸ್ ನಾಯಕರು ತೆಗೆದುಕೊಳ್ಳುತ್ತಿರುವ ನಿರ್ಧಾರ, ಹಾಗು ಕೋಲಾರದಲ್ಲಿ ಮನೆ ಮಾಡಿರುವ ಗೊಂದಲ ಹಾಗು ಬಣ ರಾಜಕೀಯವನ್ನು ಬಗೆಹರಿಸದೆ ರಾಜ್ಯ ನಾಯಕತ್ವ ಸೋತಿರುವ ಪರಿಣಾಮ ಈ ಬಾರಿ ಮತ್ತೆ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಆಯ್ಕೆಗೆ ರೆಡ್ ಕಾರ್ಪೆಟ್ ಹಾಕುತ್ತಿರುವ ಅನುಮಾನ ಮೂಡುತ್ತಿದೆ. ಮೈತ್ರಿ ಪಕ್ಷದ ಅಭ್ಯರ್ಥಿ ಯಾರು ಎನ್ನುವುದು ಇನ್ನೂ ತಿಳಿದಿಲ್ಲ, ಆದರೂ ಕಾಂಗ್ರೆಸ್ ಪಕ್ಷದ ನಡೆಯುತ್ತಿರುವ ಬೆಳವಣಿಗೆ ಸೋಲಿನ ಸುಳಿವು ನೀಡುತ್ತಿದೆ ಎನ್ನಬಹುದಾಗಿದೆ.
ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣ ಕ್ಷೇತ್ರದಲ್ಲಿ ಈಗಾಗಲೇ ಸುತ್ತಾಡಿದ್ದು, ರಾಜಕೀಯ ಮಾಡಲು ಉತ್ಸುಕರಾಗಿದ್ದಾರೆ. ಕೆ.ಆರ್ ಪುರದಲ್ಲಿ ರಿಜಿಸ್ಟ್ರಾರ್ ಆಗಿರುವ ಚಿಕ್ಕಪೆದ್ದಣ್ಣ, ಆರ್ಥಿಕವಾಗಿಯೂ ಸದೃಢವಾಗಿದ್ದಾರೆ. ಆದರೆ ರಮೇಶ್ ಕುಮಾರ್ ಬಣದ ಒತ್ತಡಕ್ಕೆ ಮಣಿದು ಎಲ್ ಹನುಮಂತಯ್ಯ ಅವರಿಗೆ ಟಿಕೆಟ್ ನೀಡಲಾಗುತ್ತದೆ ಎನ್ನುವ ಮಾಹಿತಿ ಹೊರಬಿದ್ದಿದ್ದು, ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಸುಲಭವಾಗಿ ಗೆಲ್ಲುವಂತೆ ಕಾಂಗ್ರೆಸ್ ನಾಯಕರು ನಿರ್ಧಾರ ತೆಗೆದುಕೊಳ್ಳುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಕಾಂಗ್ರೆಸ್ ನಾಯಕರ ನಿರ್ಧಾರ, ಕಾಂಗ್ರೆಸ್ ಕಾರ್ಯಕರ್ತರನ್ನೇ ಗೊಂದಲಕ್ಕೆ ಈಡು ಮಾಡುತ್ತಿದೆ.
ಮೈತ್ರಿ ಅಭ್ಯರ್ಥಿಗೆ ಸವಾಲಾಗ್ತಾರಾ ಎಲ್ ಹನುಮಂತಯ್ಯ..?
ಎಲ್ ಹನುಮಂತಯ್ಯ ದಲಿತ ಸಮುದಾಯಕ್ಕೆ ಸೇರಿದ ಹಿರಿಯ ಸಾಹಿತಿ. ಈಗಿನ ಚುನಾವಣಾ ರಾಜಕಾರಣದಲ್ಲಿ ಆರ್ಥಿಕ ಶಕ್ತಿಯೂ ಲೆಕ್ಕಕ್ಕೆ ಬರಲಿದ್ದು, ಜೆಡಿಎಸ್-ಬಿಜೆಪಿ ಮೈತ್ರಿ ಪಕ್ಷದ ಅಭ್ಯರ್ಥಿ ವಿರುದ್ಧ ಗೆಲುವು ಸಾಧಿಸುವ ಸಾಧ್ಯತೆಯಿದೆ ಎನ್ನುವುದು ಕಾಂಗ್ರೆಸ್ ಕಾರ್ಯಕರ್ತರ ಅಸಮಧಾನಕ್ಕೆ ಕಾರಣವಾಗಿದೆ. ಆದರೆ ಚಿಕ್ಕಪೆದ್ದಣ್ಣ ಹಾಗು ಹನುಮಂತಯ್ಯ ಇಬ್ಬರೂ ವಿದ್ಯಾವಂತರಾಗಿದ್ದು, ಕಾಂಗ್ರೆಸ್ ಟಿಕೆಟ್ ಆಯ್ಕೆ ಮೇಲೆ ಕೋಲಾರ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಅಥವಾ ಸೋಲನ್ನು ಒಪ್ಪಿಕೊಳ್ಳುವ ನಿರ್ಧಾರ ಹೊರಬೀಳಲಿದೆ. ಹಣವೊಂದೇ ಮಾನದಂಡ ಆಗುತ್ತಾ ಎಂದರೆ ಇಲ್ಲ ಎನ್ನಬಹುದು. ಆದರೆ ಮುನಿಯಪ್ಪ ಬಣದ ನಿರ್ಧಾರ ಏನಾಗಲಿದೆ ಎನ್ನುವುದು ಗಮನಿಸಬೇಕಾದ ಸಂಗತಿ.
ಸಚಿವ ಕೆ.ಹೆಚ್ ಮುನಿಯಪ್ಪ ಕೋಲಾರ ಕ್ಷೇತ್ರದಲ್ಲಿ ಅತ್ಯಂತ ಪ್ರಭಾವಶಾಲಿ ನಾಯಕರಾಗಿದ್ದು, ಇದೀಗ ದೇವನಹಳ್ಳಿಯಿಂದ ಸ್ಪರ್ಧೆ ಮಾಡಿ ಗೆದ್ದು ಸಚಿವರಾಗಿದ್ದಾರೆ. ಈಗಿರುವಾಗ ಮುನಿಯಪ್ಪ ಜೊತೆಗೆ ಸಿಎಂ ಸಿದ್ದರಾಮಯ್ಯ ಅರ್ಧ ಗಂಟೆಗೂ ಹೆಚ್ಚುಕಾಲ ಚರ್ಚೆ ಮಾಡಿದ್ದಾರೆ. ಆದರೆ ನಿಮಗೆ ಇಷ್ಟ ಬಂದವರಿಗೆ ಟಿಕೆಟ್ ಕೊಡುವುದಾರೆ ನಾನು ಕೋಲಾರ ಕ್ಷೇತ್ರಕ್ಕೆ ಹೋಗಲ್ಲ. ದೇವನಹಳ್ಳಿ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಸೇರಲಿದ್ದು, ನಾನು ಇಲ್ಲೇ ಇರುತ್ತೇನೆ ಫಲಿತಾಂಶದ ಬಗ್ಗೆ ನನ್ನ ಬಳಿ ಏನನ್ನೂ ಕೇಳುವಂತಿಲ್ಲ ಎಂದಿದ್ದಾರೆ ಎನ್ನಲಾಗ್ತಿದೆ. ಅಲ್ಲಿಗೆ ಕಾಂಗ್ರೆಸ್ ಏನಾದರೂ ರಮೇಶ್ ಕುಮಾರ್ ಬಣವನ್ನು ಒಪ್ಪಿಸಿ ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್ ಕೊಡದಿದ್ದರೆ ಮೈತ್ರಿ ಅಭ್ಯರ್ಥಿಯನ್ನು ಲೋಕಸಭೆಗೆ ಕಳುಹಿಸುವುದು ನಿಶ್ಚಿತ ಎನ್ನುವಂತಾಗಿದೆ.