RCB ತಂಡವು ಈ ಐಪಿಎಲ್ ಋತುವಿನಲ್ಲಿ ಉತ್ತಮ ಪ್ರದರ್ಶನ ತೋರಿಸುತ್ತಿದ್ದರೂ, ಇದೀಗ ತಂಡಕ್ಕೆ ಪ್ರಮುಖ ಸವಾಲಾಗಿ ವಿರಾಟ್ ಕೊಹ್ಲಿ ಅವರ ಫಿಟ್‌ನೆಸ್ ಸಮಸ್ಯೆ ಎದುರಾಗಿದೆ. ಮುಂದಿನ ಲಖನೌ ವಿರುದ್ಧದ ಮಹತ್ವದ ಪಂದ್ಯಕ್ಕೂ ಮುನ್ನ ಈ ಬೆಳವಣಿಗೆ ಚಿಂತೆಗೆ ಕಾರಣವಾಗಿದೆ.ಮೂಲಗಳ ಪ್ರಕಾರ, ಕೊಹ್ಲಿ ಅವರ ಎಡಗಾಲಿಗೆ ಸಣ್ಣ ಮಟ್ಟಿನ ಗಾಯವಾಗಿದ್ದು, ಅಭ್ಯಾಸದ ವೇಳೆ ಕಾಲಿಗೆ ಬ್ಯಾಂಡೇಜ್ ಹಾಕಿಕೊಂಡಿರುವುದು ಗಮನಸೆಳೆದಿದೆ.

ಮುಂಬೈ ಇಂಡಿಯನ್ಸ್ ವಿರುದ್ಧದ ಹಿಂದಿನ ಪಂದ್ಯದಲ್ಲಿಯೂ ಅವರು ಸಂಪೂರ್ಣ ಫಿಟ್ ಆಗಿರಲಿಲ್ಲ. ಆ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದರೂ, ಅವರ ಬ್ಯಾಟಿಂಗ್‌ನಲ್ಲಿ ಸಾಮಾನ್ಯ ಚುರುಕುತನ ಕಾಣಿಸಿರಲಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ಎರಡನೇ ಇನ್ನಿಂಗ್ಸ್‌ನಲ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿತ್ತು.ಇದೀಗ ಗಾಯದ ಬಗ್ಗೆ ಅಧಿಕೃತ ಮಾಹಿತಿ ಹೊರಬಾರದಿದ್ದರೂ, ಅರ್ಧ ಫಿಟ್ ಸ್ಥಿತಿಯಲ್ಲಿ ಕಣಕ್ಕಿಳಿಯುವುದು ಅಪಾಯಕಾರಿಯೇ ಎಂಬ ಆತಂಕ ತಂಡದಲ್ಲಿ ಮೂಡಿದೆ. ಗಾಯ ಮತ್ತಷ್ಟು ತೀವ್ರವಾದರೆ ಮುಂದಿನ ಪಂದ್ಯಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ಲಕ್ನೋ ವಿರುದ್ಧದ ಪಂದ್ಯದಲ್ಲಿ ಕೊಹ್ಲಿಗೆ ವಿಶ್ರಾಂತಿ ನೀಡುವ ಬಗ್ಗೆ ತಂಡ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಈ ಸೀಸನ್‌ನಲ್ಲಿ ಕೊಹ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, 4 ಪಂದ್ಯಗಳಲ್ಲಿ 179 ರನ್ ಗಳಿಸಿ 59.67 ಸರಾಸರಿ ಹಾಗೂ 162.73 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಆದಾಗ್ಯೂ, ತಂಡ ಕೇವಲ ಅವರ ಮೇಲೆ ಅವಲಂಬಿತವಾಗಿಲ್ಲ ಎಂಬುದನ್ನು ಮುಂಬೈ ವಿರುದ್ಧದ ಪಂದ್ಯದಲ್ಲಿ ಸಾಬೀತುಪಡಿಸಿದೆ. ಇತರೆ ಬ್ಯಾಟರ್‌ಗಳ ಕೊಡುಗೆಯಿಂದ 240 ರನ್‌ಗಳ ಬೃಹತ್ ಮೊತ್ತ ಕಟ್ಟಿ, ಆ ಪಂದ್ಯದಲ್ಲಿ ಗೆಲುವು ಸಾಧಿಸಿತ್ತು.

ರಾಜಸ್ಥಾನ ರಾಯಲ್ಸ್ ವಿರುದ್ಧದ ಒಂದೇ ಒಂದು ಸೋಲನ್ನು ಹೊರತುಪಡಿಸಿದರೆ, ಈ ಬಾರಿ ಆರ್‌ಸಿಬಿ ಸಮತೋಲನದ ತಂಡವಾಗಿ ಕಾಣಿಸುತ್ತಿದೆ. ಈಗ ಲಕ್ನೋ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಆಡಲಾರರಾ ಅಥವಾ ವಿಶ್ರಾಂತಿ ಪಡೆಯಲಾರರಾ ಎಂಬುದರ ಮೇಲೆ ಅಭಿಮಾನಿಗಳ ಕಣ್ಣಿದೆ.






