ಕ್ರಿಕೆಟ್ ಅಭಿಮಾನಿಗಳಿಗೆ ಸೆಪ್ಟೆಂಬರ್ ತಿಂಗಳು ಭರ್ಜರಿ ರಸದೌತಣ ನೀಡುವ ನಿರೀಕ್ಷೆಯಿದೆ. 2026ರ ಮಹಿಳಾ ಟಿ20 ಏಷ್ಯಾಕಪ್‌ನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಪ್ರಕಟಿಸಿರುವ ವೇಳಾಪಟ್ಟಿಯ ಪ್ರಕಾರ, ಉಭಯ ತಂಡಗಳ ಲೀಗ್ ಹಂತದ ಪಂದ್ಯ ಸೆಪ್ಟೆಂಬರ್ 5ರಂದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.

2026ರ ಮಹಿಳಾ ಟಿ20 ಏಷ್ಯಾಕಪ್ ಆಗಸ್ಟ್ 28ರಿಂದ ಸೆಪ್ಟೆಂಬರ್ 13ರವರೆಗೆ ನಡೆಯಲಿದೆ. ಭಾರತ ಮತ್ತು ಪಾಕಿಸ್ತಾನವನ್ನು ಒಂದೇ ಗುಂಪಿನಲ್ಲಿ ಇರಿಸಲಾಗಿದ್ದು, ಸೆಪ್ಟೆಂಬರ್ 5ರಂದು ಲೀಗ್ ಹಂತದಲ್ಲೇ ಮುಖಾಮುಖಿಯಾಗಲಿವೆ. ಈ ಪಂದ್ಯ ಈಗಾಗಲೇ ಕ್ರಿಕೆಟ್ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಭಾರತ–ಪಾಕಿಸ್ತಾನ ಜತೆಗೆ ಥೈಲ್ಯಾಂಡ್ ಮತ್ತು ಹಾಂಗ್ ಕಾಂಗ್ ತಂಡಗಳು ಗುಂಪಿನಲ್ಲಿವೆ. ಗುಂಪು ಹಂತದ ನಂತರ ಅಗ್ರ ಎರಡು ತಂಡಗಳು ನಾಕೌಟ್ ಹಂತಕ್ಕೆ ಅರ್ಹತೆ ಪಡೆಯಲಿವೆ.

ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳು ಉತ್ತಮ ಪ್ರದರ್ಶನ ನೀಡಿ ನಾಕೌಟ್ ಹಂತ ಪ್ರವೇಶಿಸಿದರೆ, ಸೆಮಿಫೈನಲ್ ಅಥವಾ ಫೈನಲ್‌ನಲ್ಲಿ ಮತ್ತೊಮ್ಮೆ ಮುಖಾಮುಖಿಯಾಗುವ ಸಾಧ್ಯತೆಯಿದೆ. ಹೀಗಾಗಿ ಸೆಪ್ಟೆಂಬರ್‌ನಲ್ಲಿ ಭಾರತ–ಪಾಕಿಸ್ತಾನ ನಡುವೆ ಎರಡು ಪಂದ್ಯಗಳನ್ನು ನೋಡುವ ಅವಕಾಶ ಅಭಿಮಾನಿಗಳಿಗೆ ಸಿಗಬಹುದು.
ಸೆಮಿಫೈನಲ್ ಪಂದ್ಯಗಳು ಸೆಪ್ಟೆಂಬರ್ 10 ಮತ್ತು 11ರಂದು ನಡೆಯಲಿದ್ದು, ಫೈನಲ್ ಸೆಪ್ಟೆಂಬರ್ 13ರಂದು ನಿಗದಿಯಾಗಿದೆ. ಮಹಿಳಾ ಏಷ್ಯಾಕಪ್ ಇತಿಹಾಸದಲ್ಲಿ ಭಾರತ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿದೆ. ಹೀಗಾಗಿ ಈ ಬಾರಿಯೂ ಟೀಂ ಇಂಡಿಯಾ ಪ್ರಶಸ್ತಿ ಗೆಲ್ಲುವ ಪ್ರಮುಖ ತಂಡವಾಗಿ ಕಣಕ್ಕಿಳಿಯಲಿದೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲೂ ಭಾರತ ಗೆಲುವಿನ ನಿರೀಕ್ಷೆಯಲ್ಲಿದೆ.

ಸೆಪ್ಟೆಂಬರ್ 5ರ ಮೊದಲ ಮುಖಾಮುಖಿಯ ಬಳಿಕ ಉಭಯ ತಂಡಗಳ ಪ್ರದರ್ಶನವೇ ಮತ್ತೊಂದು ಭಾರತ–ಪಾಕ್ ಕದನ ನಡೆಯುತ್ತದೆಯೇ ಎಂಬುದನ್ನು ನಿರ್ಧರಿಸಲಿದೆ. ಹೀಗಾಗಿ ಮಹಿಳಾ ಏಷ್ಯಾಕಪ್ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಮತ್ತೊಂದು ಹೈವೋಲ್ಟೇಜ್ ಟೂರ್ನಿಯಾಗುವ ನಿರೀಕ್ಷೆಯಿದೆ.






