ಮಂಜಿನ ನಗರಿಯಲ್ಲಿ ಸುಮಾರು 5 ದಶಕಗಳ ಹಿಂದೆ ಆಂಬುಲೆನ್ಸ್ ಇರಲೇ ಇಲ್ಲ, ಇನ್ನು ಹೆಣ ಸಾಗಾಟಕ್ಕೆ ಸೂಕ್ತ ಸಾರಿಗೆ ವ್ಯವಸ್ಥೆ ಇರಲೇ ಇಲ್ಲ. ಇಂದಿಗೂ ಕೂಡ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ಇಲ್ಲ ಎಂದರೆ ಆಗಿನ ಕಾಲದಲ್ಲಿ ಹೇಗಿದ್ದಿರಬಹುದು ಊಹಿಸಿಕೊಳ್ಳಿ. ಆಗ ಹೆಣಗಳನ್ನು ಹೊರಗೆ ಸಾಗಿಸೋದು ಎಂದರೆ ಬಹಳ ದುಬಾರಿ ಆಗಿರುತಿತ್ತು. ಮೊದಲಿಗೆ ಹೆಣ ಸಾಗಿಸಲು ಯಾರೂ ಮುಂದೆ ಬರುತ್ತಿರಲಿಲ್ಲ. ಕೊನೆಗೆ ಯಾರನ್ನಾದರೂ ಒಪ್ಪಿಸಿದರೂ ಅವರು ಕೇಳಿದಷ್ಟು ಹಣ ನೀಡಬೇಕಿತ್ತು. ಶವ ಸಾಗಿಸಲಾರದೆ ಎಷ್ಟೋ ವೇಳೆ ಶವ ಇದ್ದ ಊರಿನಲ್ಲೇ ಮಣ್ಣು ಮಾಡಿದ ನಿದರ್ಶನಗಳೂ ನೂರಾರಿವೆ. ಆ ಸಂದರ್ಭದಲ್ಲಿ ಬಡವರಿಗೆ ಆಪದ್ಭಾಂಧವನಾಗಿ ಬಂದಿದ್ದೇ ಜೀನತ್ ಹಸನ್. ಇವರು ಪ್ರವಾಸಿಗರಿಗಾಗಿ ಟ್ಯಾಕ್ಸಿ ಇಟ್ಟಿದ್ದರೂ ಹೆಚ್ಚು ಸಾಗಿಸಿದ್ದು ಹೆಣಗಳನ್ನೇ.
ಮಡಿಕೇರಿಯ ಹಳೇ ಖಾಸಗಿ ಬಸ್ ನಿಲ್ದಾಣ ಆಗ ಖಾಸಗಿ ಬಸ್ ನಿಲ್ದಾಣ ಮಾತ್ರವಲ್ಲ.. ಮಡಿಕೇರಿಯ ಹೖದಯ ಸ್ಥಾನ ಕೂಡ ಹೌದು. ಇಲ್ಲಿನ ಬಾಡಿಗೆ ಕಾರ್ ಸ್ಟಾಂಡ್ ನಲ್ಲಿ ಕಪ್ಪು, ಹಳದಿ ಬಣ್ಣದ ಅಂಬಾಸಿಡರ್ ಕಾರ್ ನೊಂದಿಗೆ ನಿಂತಿರುತ್ತಿದ್ದ ಮುಗ್ದ ಜೀವಿಯೇ ಹಸನ್.. ಕಾರಿನ ಮೇಲ್ಬದಿಯಲ್ಲಿ ಜೀನತ್ ಎಂದು ದೊಡ್ಡದಾಗಿ ಬರೆಸಿಕೊಂಡಿದ್ದರು. ತನ್ನ ಪ್ರೀತಿಯ ತಂಗಿ ಜೀನತ್ ಹೆಸರನ್ನೇ ಹಸನ್ ಕಾರ್ ಗೆ ಕೂಡ ಇರಿಸಿದ್ದರು. ಹೀಗಾಗಿ ಕಾರ್ ಹೆಸರಿನೊಂದಿಗೆ ಜೀನತ್ ಹಸನ್ ಎಂದೇ ಇವರೂ ಗುರತಿಸಿಕೊಂಡರು. ಮಡಿಕೇರಿ ಮಾತ್ರವಲ್ಲ, ಕೊಡಗಿನಲ್ಲಿಯೇ ಹೆಣ ಸಾಗಿಸುವ ವಾಹನವನ್ನು ಬಾಡಿಗೆಗೆ ನೀಡಿದ್ದು ಇದೇ ಹಸನ್.. ಹೆಣ ಸಾಗಿಸಲು ಯಾರೂ ಮುಂದೆ ಬಾರದಿದ್ದ ಕಾಲದಲ್ಲಿ, ಹೆಣ ಎಂದರೆ ಭಯಬೀತರಾಗುತ್ತಿದ್ದ ದಿನಗಳಲ್ಲಿ ತನ್ನ ಅಂಬಾಸಿಡರ್ ಕಾರ್ ನ್ನೇ ಹೆಣ ಸಾಗಿಸಲು ಬಳಸಿ, ಸಾವನ್ನಪ್ಪಿದವರ ಕುಟುಂಬಕ್ಕೆ ವರದಾನವಾಗಿದ್ದವರು ಈ ಜೀನತ್ ಹಸನ್.

ಮಡಿಕೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಬೇರೆ ಊರಿನವರು, ಹೊರಜಿಲ್ಲೆಗಳ ಕಾರ್ಮಿಕರು, ಹೊರ ರಾಜ್ಯದವರೂ ವಿವಿಧ ಕಾರಣಗಳಿಂದ ಸಾವನ್ನಪ್ಪುತ್ತಿದ್ದರು. ಜಿಲ್ಲೆಯಲ್ಲಿ ಅಂಬ್ಯುಲೆನ್ಸ್ ವ್ಯವಸ್ಥೆ ಇಲ್ಲದ ಕಾಲದಲ್ಲಿ ಇಂಥವರ ಮೖತದೇಹಗಳನ್ನು ಕುಟುಂಬದವರು ಇದ್ದ ಕಡೆ ಸಾಗಿಸಲು ಜೀನತ್ ಹಸನ್ ಕಾರ್ ನೆರವಾಗುತ್ತಿತ್ತು. ಜೀನತ್ ಕಾರ್ ನ ಹಿಂಬದಿ ಸೀಟ್ ಈ ರೀತಿ ಸಾವನ್ನಪ್ಪಿದವರಿಗೆ ಕೊನೇ ಪಯಣದ ಹಾಸಿಗೆಯಂತಿರುತ್ತಿತ್ತು. ಸುಮಾರು 40 ವರ್ಷಗಳ ಕಾಲ ಈ ರೀತಿ ಜೀನತ್ ಹಸನ್ ಸಾಗಿಸಿರಬಹುದಾದ ಮೖತದೇಹಗಳ ಸಂಖ್ಯೆ 2500 ಮೀರಿದೆ. ಯಾರೂ ನಂಬದ ರೀತಿಯಲ್ಲಿ ಜೀನತ್ ಹಸನ್ ಕೊನೆ ಉಸಿರೆಳೆದವರ ದೇಹಗಳನ್ನು ಕೊಂಡೊಯ್ದಿದ್ದಾರೆ. ಕೆಲವು ವರ್ಷಗಳಿಂದ ಅಂಬ್ಯುಲೆನ್ಸ್ ವಾಹನಗಳನ್ನು ಖರೀದಿಸಿ ಪುತ್ರನನ್ನೂ ಇದೇ ವೃತ್ತಿಯಲ್ಲಿ ಹಸನ್ ಸಕ್ರಿಯಗೊಳಿಸಿದ್ದರು.
ಹಸನ್ ಅವರ ಈ ಸೇವಾ ಕಾರ್ಯಕ್ಕೆ ಕೈತುಂಬಾ ಹಣವಂತೂ ಸಿಕ್ಕುತ್ತಲೇ ಇರಲಿಲ್ಲ. ಬಾಡಿಗೆ ಕಾರ್ ನಲ್ಲಿ ಹೆಣ ಸಾಗಿಸಿದರೆ ಮೖತನ ಸಂಬಂಧಿಕರು ಚೌಕಾಸಿ ಮಾಡಿ ದುಡ್ಡು ಕೊಡುತ್ತಿದ್ದರು. ಹೀಗಾಗಿ ಹಸನ್ ಹೆಣ ಸಾಗಿಸಿ ಕೈ ಸುಟ್ಟುಕೊಂಡ ಪ್ರಸಂಗವೇ ಜಾಸ್ತಿ.. ಇದೆಲ್ಲದರ ಜತೆಗೆ ಬಾಡಿಗೆ ಕಾರ್ ಇಟ್ಟುಕೊಂಡಿದ್ದರೂ ಹೆಣ ಸಾಗಿಸುವ ಕಾರ್ ಎಂಬ ಹೆಸರು ಬಂದದ್ದರಿಂದಾಗಿ ಹೆಣ ಬಿಟ್ಟರೆ ಬೇರೆ ಯಾರೂ ಇವರ ಕಾರ್ ಹತ್ತುತ್ತಿರಲಿಲ್ಲ.. ವೈದ್ಯರು ಆಸ್ಪತ್ರೆಯಿಂದ ಏರಿಸುತ್ತಿದ್ದ ಹೆಣಗಳಿಗಷ್ಟೇ ಹಸನ್ ಅವರ ಕಾರು ಮೀಸಲಾಗಿತ್ತು. ಹೆಣ ಸಾಗಿಸಿ ಸಾಗಿಸಿ ಹಸನ್ ಹೈರಾಣಾಗಿದ್ದರು. ಸಾಕಪ್ಪಾ ಸಾಕು ಈ ವೃತ್ತಿ ಎಂದು ಹಲವು ಬಾರಿ ಅನ್ನಿಸುತ್ತಿತ್ತು. ಆದರೆ ಮತ್ತೊಂದು ಹೆಣ ಸಾಗಿಸಲು ಬುಲಾವ್ ಬಂದಾಗ ಹಸನ್ ಅಲ್ಲಿ ಸೇವೆಗೆ ಸಿದ್ದರಿರುತ್ತಿದ್ದರು. ಎಷ್ಟೋ ವೇಳೆ ಕೊಳೆತ ಹೆಣಗಳನ್ನು ಸಾಗಿಸಿದಾಗ ಅದರಿಂದ ಬರುತಿದ್ದ ವಾಸನೆಗೆ ಇವರಿಗೆ ಊಟ ಸೇರುತ್ತಿರಲಿಲ್ಲ ಎಂದು ಹೇಳುತಿದ್ದರು.

ಎರಡು ದಶಕಗಳ ಹಿಂದೆ ಅದೊಂದು ದಿನ ಮಡಿಕೇರಿಯ ವಕೀಲರೋರ್ವರು ಹತ್ಯೆಯಾದರು. ಅವರ ಶವ ಸಾಗಿಸಲು ಜೀನತ್ ಕಾರ್ ನೊಂದಿಗೆ ಶವಾಗಾರದ ಬಳಿ ಹಸನ್ ಬಂದರು. ಮೃತ ದೇಹಕ್ಕೆ ಅಂತಿಮ ನಮನ ಸಲ್ಲಿಸಲು ಮಾಜಿ ಕಾನೂನು ಸಚಿವ ಎಂ.ಸಿ.ನಾಣಯ್ಯ ಕೂಡ ಅಲ್ಲಿಗೆ ಬಂದಿದ್ದರು. ಆಗ ಹಸನ್ ಜೀವನದ ಕಥೆ ಅವರಿಗೆ ಹೇಳಿ ಇವರಿಗೆ ಏನಾದರೂ ಸಹಾಯ ಮಾಡಿ ಅಣ್ಣಾ ಎಂದಿದ್ದೆ. ಸ್ಪಂದಿಸಿದ ನಾಣಯ್ಯ ಹಸನ್ ಅಂಬ್ಯುಲೆನ್ಸ್ ಖರೀದಿಸಲು ನೆರವಾದರು ಎಂದು ಮಡಿಕೇರಿಯ ಹಿರಿಯ ವೈದ್ಯ ಡಾ.ಕೆ.ಬಿ.ಸೂರ್ಯಕುಮಾರ್ ಸ್ಮರಿಸಿಕೊಂಡರು. ನಾವು ಜಿಲ್ಲಾಸ್ಪತ್ರೆಯಲ್ಲಿದ್ದಾಗ ಹಸನ್ ನಮಗೆ ಆಪತ್ಬಾಂದವನಾಗಿದ್ದರು. ಶವಾಗಾರದಲ್ಲಿದ್ದ ಶವಗಳನ್ನು ಹಸನ್ ಆಗ ಸಾಗಿಸದೇ ಇದ್ದಲ್ಲಿ ಸಮಸ್ಯೆಯಾಗುತ್ತಿತ್ತು. ಎಂದೂ ಸಮಸ್ಯೆ ಹೇಳಿಕೊಳ್ಳದೇ ನಕಾರ ಹೇಳದೇ ಹಸನ್ ಶವಾಗಾರಕ್ಕೆ ಬಂದು ಮೃತ ಶರೀರ ಕಾರ್ ನಲ್ಲಿ ಕೊಂಡೊಯ್ಯುವ ಮೂಲಕ ಮಾನವೀಯ ಕಾರ್ಯ ಕೈಗೊಂಡಿದ್ದರು ಎಂದೂ ಸೂರ್ಯಕುಮಾರ್, ಜೀನತ್ ಹಸನ್ ಸೇವೆಯ ಬಗ್ಗೆ ಹೇಳಿದರು.
ಇಷ್ಟೂ ವರ್ಷಗಳ ಕಾಲ ತನ್ನ ಕಾರ್ಯದ ಬಗ್ಗೆ ಮರುಗದೇ ಈ ಸೇವೆಯನ್ನು ದೇವರು ಮೆಚ್ಚುವ ಸೇವೆ ಎಂದು ಭಾವಿಸಿ ಎಂದಿಗೂ ಅಸಹ್ಯ ಪಡದೇ ಹಸನ್ ಹೆಣಗಳನ್ನು ಸಾಗಿಸುತ್ತಾ ಬಂದರು. ಎರಡು ವರ್ಷಗಳಿಂದ ಹಸನ್ ಅನಾರೋಗ್ಯದಿಂದ ಬಳಲುತಿದ್ದರು. ಹಸನ್ ಕಾರ್ಯಕ್ಕೆ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಸೇರಿದಂತೆ ಅನೇಕ ಸಂಘಸಂಸ್ಥೆಗಳು ಸನ್ಮಾನದ ಗೌರವ ನೀಡಿದೆ. ಹಸನ್ ಅವರ ನಿಸ್ವಾರ್ಥ ಜನಸೇವೆಯು ಜಿಲ್ಲೆಯ ಇತಿಹಾಸದ ಪುಟಗಳಲ್ಲಿರುತ್ತದೆ. ಇಂತಹ ಅಪರೂಪದ ಸೇವಾ ಜೀವಿ ಕೋರೋನಾದಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಆಸ್ಪತ್ರೆಯಲ್ಲಿ ತನ್ನ 72 ನೇ ವಯಸ್ಸಿನಲ್ಲಿ ಮೇ 30 ರಂದು ಕೊನೆ ಉಸಿರೆಳೆದರು ಅವರ ಮೃತ ಶರೀರವನ್ನು ಅಂಬ್ಯುಲೆನ್ಸ್ ನಲ್ಲಿ ಮಡಿಕೇರಿಗೆ ತಂದು ಅಂತ್ಯಸಂಸ್ಕಾರ ನೆರವೇರಿಸಲಾಯಿತು..