ಕೇರಳದ ಎರ್ನಾಕುಳಂನ ಫೆಡರಲ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿಯ (FISAT) ವಿದ್ಯಾರ್ಥಿಗಳ ಗುಂಪೊಂದು ಹೈಡ್ರೋಪೋನಿಕ್ಸ್ ಕೃಷಿಯಲ್ಲಿ ನ್ಯೂಟ್ರಿಷನಲ್ ಫಾರ್ಮುಲಾವನ್ನು ಅಭಿವೃದ್ಧಿಪಡಿಸಿದ್ದು ಇದು ಕಡಿಮೆ ನೀರು ಮತ್ತು ರಸಗೊಬ್ಬರಗಳ ಬಳಸಿ ಮೂರು ಪಟ್ಟು ಹೆಚ್ಚು ಇಳುವರಿಯನ್ನು ನೀಡುತ್ತದೆ.
ಈ ಪ್ರಾಜೆಕ್ಟ್‌ನ್ನು 2019 ರಲ್ಲಿ ಮೂವರು ಸಹಾಯಕ ಪ್ರಾಧ್ಯಾಪಕರಾದ ಮಹೇಶ್ ಸಿ, ಬಿಜೋಯ್ ವರ್ಗೀಸ್ ಮತ್ತು ರಾಜೇಶ್ ಟಿಆರ್ ನೇತೃತ್ವದಲ್ಲಿ ಪ್ರಾರಂಭಿಸಲಾಗಿತ್ತು. ಕೋವಿಡ್ ಲಾಕ್ಡೌನ್ ಕಾಲದಲ್ಲಿ ತಮ್ಮ ಸ್ವಂತ ಮನೆಗಳಲ್ಲಿ ಸಣ್ಣ ಜಮೀನಲ್ಲಿ ಅವರು ಪ್ರಯೋಗವನ್ನು ಮುಂದುವರೆಸಿದ್ದರು. ಇಂದು, ತಂಡವು ಕ್ಯಾಂಪಸ್‌ನ ಸಮೀಪವಿರುವ 1.5 ಎಕರೆ ಗುತ್ತಿಗೆ ಭೂಮಿಯಲ್ಲಿ ಅನೇಕ ವಿಧಗಳ ತರಕಾರಿಗಳನ್ನು ಬೆಳೆಯುತ್ತದೆ.
‘ಇ-ಯಂತ್ರ ಫಾರ್ಮ್ ಸೆಟಪ್ ಇನಿಶಿಯೇಟಿವ್’ (ಇಎಫ್‌ಎಸ್‌ಐ) ಎಂಬ ಕೇಂದ್ರ ಸರ್ಕಾರದ ಯೋಜನೆಯ ಭಾಗವಾಗಿ, ತಂಡವು ಐಐಟಿ ಬಾಂಬೆಯ ಬೆಂಬಲದೊಂದಿಗೆ ‘ಕೃಷಿಯಲ್ಲಿ ರೊಬೊಟಿಕ್ಸ್ ಅಪ್ಲಿಕೇಶನ್'(application of robotics in agriculture) ವಿಷಯದಲ್ಲಿ ಪ್ರಯೋಗವನ್ನು ಪ್ರಾರಂಭಿಸಿತು. “ನಾವು 2017 ರಲ್ಲಿ ಸುಸಜ್ಜಿತ ಲ್ಯಾಬ್ ಅನ್ನು ಪಡೆದುಕೊಂಡೆವು ಮತ್ತು ಸ್ಮಾರ್ಟ್ ಕೃಷಿ ಪರಿಕಲ್ಪನೆಗಳಿಗೆ ಸಂಬಂಧಿಸಿದಂತೆ ಅನೇಕ ಯಶಸ್ವಿ ಪ್ರಯೋಗಗಳನ್ನು ನಡೆಸಿದ್ದೇವೆ. ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳಲ್ಲಿ ಚಾಲ್ತಿಯಲ್ಲಿರುವ ಹೈಡ್ರೋಪೋನಿಕ್ಸ್ ಕೃಷಿಯ ಕಲ್ಪನೆಯು ಎರಡು ವರ್ಷಗಳ ನಂತರ ನಮ್ಮನ್ನು ತಟ್ಟಿತು,” ಎಂದು ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಬೆಜಾಯ್ ಹೇಳುತ್ತಾರೆ.
ಹೈಡ್ರೋಪೋನಿಕ್ಸ್ ಕೃಷಿಯ ಮೂಲ ತತ್ವವೆಂದರೆ ಕನಿಷ್ಠ ಸ್ಥಳ ಮತ್ತು ಕಚ್ಚಾ ವಸ್ತುಗಳಿಂದ ಗರಿಷ್ಠ ಉತ್ಪಾದನೆ. ಈ ನಿಟ್ಟಿನಲ್ಲಿ, ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ರೈತರಿಗೆ ಉತ್ತಮ ಇಳುವರಿಯನ್ನು ಪಡೆಯಲು ಸಹಾಯ ಮಾಡಲು ಪ್ರಯತ್ನಿಸುತ್ತಿದ್ದಾರೆ ಮತ್ತು ಕೇರಳದಲ್ಲಿ ಹೆಚ್ಚಾಗುತ್ತಿರುವ ಜನಸಂಖ್ಯೆಗೆ ಆಹಾರ ಒದಗಿಸಲು ಇತರ ರಾಜ್ಯಗಳನ್ನು ಅವಲಂಬಿಸದೆ ತಮ್ಮಲ್ಲೇ ಪರಿಹಾರವನ್ನು ಕಂಡುಕೊಳ್ಳಲು ಯತ್ನಿಸಲಾಗುತ್ತಿದೆ.
“ಕೇರಳದ ಬಹುತೇಕ ಎಲ್ಲಾ ಜಿಲ್ಲೆಗಳು ಹೆಚ್ಚಿನ ಜನಸಂಖ್ಯೆಯನ್ನು ಹೊಂದಿವೆ ಮತ್ತು ಕೃಷಿ ಉದ್ದೇಶಗಳಿಗಾಗಿ ಭೂಮಿ ಇರುವ ಯಾವುದೇ ಸಾಧ್ಯತೆಗಳಿಲ್ಲ. ನಾವು ಮಾಡಬಹುದಾದುದೆಂದರೆ, ಅಸ್ತಿತ್ವದಲ್ಲಿರುವ ಪ್ರದೇಶಗಳಿಂದ ಮಣ್ಣಿಗೆ ಹಾನಿಯಾಗದಂತೆ ಉತ್ಪಾದನೆಯನ್ನು ಹೆಚ್ಚಿಸುವುದು ಮತ್ತು ಸಾವಯವ ಗೊಬ್ಬರಗಳನ್ನು ಮಾತ್ರ ಬಳಸುವ ಮೂಲಕ ಗ್ರಾಹಕರ ಆರೋಗ್ಯಕ್ಕೆ ಆದ್ಯತೆ ನೀಡುವುದು. ಹೈಡ್ರೋಪೋನಿಕ್ಸ್ ವಿಧಾನವನ್ನು ಬಳಸುವುದು ಖಂಡಿತವಾಗಿಯೂ ಆ ಕಾರಣಕ್ಕೆ ಕೊಡುಗೆ ನೀಡುತ್ತದೆ” ಎಂದು ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಮಹೇಶ್ ವಿವರಿಸುತ್ತಾರೆ.
ಅವರ ಕೃಷಿ ಪ್ರಯೋಗವು ಎಲೆಕೋಸು / ಹೂಕೋಸುಗಳಂತಹ ಎಲೆಗಳ ತರಕಾರಿಗಳು, ಸೌತೆಕಾಯಿ / ಟೊಮೆಟೊ / ಬದನೆ ಮುಂತಾದ ಬಳ್ಳಿ ಬೆಳೆಗಳು, ಮೂಲಂಗಿ / ಟರ್ನಿಪ್ / ಆಲೂಗಡ್ಡೆಗಳಂತಹ ಬೇರು ತರಕಾರಿಗಳು ಮತ್ತು ಬ್ರಾಹ್ಮಿ / ವೆಟಿವರ್ನಂತಹ ಔಷಧೀಯ ಸಸ್ಯಗಳನ್ನು ಒಳಗೊಂಡಿದೆ.ಇವೆಲ್ಲವೂ ಸಾವಯವ ಗೊಬ್ಬರಗಳನ್ನು ಬಳಸಿ ಬೆಳೆದವು ಮತ್ತು ಸಾಮಾನ್ಯ ಕೃಷಿಗೆ ಹೋಲಿಸಿದರೆ ಕೇವಲ 10 ಪ್ರತಿಶತದಷ್ಟು ನೀರನ್ನು ಮಾತ್ರ ಬಳಸಿಕೊಂಡಿವೆ.
ಗೊಬ್ಬರಗಳನ್ನು ಫುಡ್ ಗ್ರೇಡ್ ಪೈಪ್‌ಗಳ ಮೂಲಕ ನೇರವಾಗಿ ಸಸ್ಯಗಳಿಗೆ ಸಾಗಿಸಲಾಗುತ್ತದೆ, ಇದು ಕನಿಷ್ಠ ಬಳಕೆಯನ್ನು ಖಚಿತಪಡಿಸುತ್ತದೆ. ಹೆಚ್ಚು ತಾಂತ್ರಿಕವಾಗಿ ಹೇಳುವುದಾದರೆ, ಇದು ಪ್ರೋಗ್ರಾಮೆಬಲ್ ಪೋಷಕಾಂಶದ ಚುಚ್ಚುಮದ್ದು ಆಗಿದ್ದು ಅದು ಪ್ರತಿಯೊಂದು ಬೆಳೆಗೆ ವಿಭಿನ್ನವಾಗಿರುತ್ತದೆ.
ಕೃಷಿಯಲ್ಲಿ ತಂತ್ರಜ್ಞಾನ
ಪ್ರಾಧ್ಯಾಪಕರುಗಳ ಪ್ರಕಾರ, ರೈತರನ್ನು ಸ್ಥೂಲವಾಗಿ ಎರಡು ಗುಂಪುಗಳಾಗಿ ವಿಂಗಡಿಸಬಹುದು. ಮೊದಲನೆಯದಾಗಿ, ಸಾಂಪ್ರದಾಯಿಕ ತಂತ್ರಗಳಿಗೆ ಅಂಟಿಕೊಳ್ಳುವವರು, ಇದು ಪರಿಸರ ಅಥವಾ ಮಾನವನ ಆರೋಗ್ಯಕ್ಕೆ ಹಾನಿಯಾಗುವುದಿಲ್ಲ ಆದರೆ ಅವರಿಗೆ ಸ್ಥಿರವಾದ ಆದಾಯವನ್ನು ಒದಗಿಸುವುದಿಲ್ಲ. ಎರಡನೆಯದಾಗಿ, ಮಣ್ಣಿನ ಮತ್ತು ಗ್ರಾಹಕರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ರಾಸಾಯನಿಕ ಗೊಬ್ಬರಗಳನ್ನು ಬಳಸಿ ಹೆಚ್ಚು ಇಳುವರಿ ಪಡೆಯಲು ಯತ್ನಿಸುವವರು.
“ಹೈಡ್ರೋಪೋನಿಕ್ಸ್ ಅನ್ನು ಬಳಸಿಕೊಳ್ಳುವ ಮೂಲಕ, ಈ ಎರಡೂ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಬಹುದು” ಎಂದು ಬೆಜಾಯ್ ಹೇಳುತ್ತಾರೆ. “ಈ ತಂತ್ರಜ್ಞಾನವು ಪ್ರಪಂಚದ ಅನೇಕ ಭಾಗಗಳಲ್ಲಿ ಜನಪ್ರಿಯವಾಗಿದೆ ಮತ್ತು ಯಶಸ್ವಿಯಾಗಿದ್ದರೂ ಸಹ, ಹೆಚ್ಚಿನ ಆರಂಭಿಕ ಹೂಡಿಕೆಯಿಂದಾಗಿ ನಮ್ಮ ರೈತರು ಈ ತಂತ್ರಜ್ಞಾನ ಬಳಸಲು ಹೆಚ್ಚಾಗಿ ಮುಂದೆ ಬಂದಿಲ್ಲ. ಕೇರಳದ ಹವಾಮಾನ ಪರಿಸ್ಥಿತಿಗಳು ಮತ್ತು ಮಣ್ಣಿನ ಪ್ರಕಾರಕ್ಕೆ ಸೂಕ್ತವಾದ ಪೌಷ್ಟಿಕಾಂಶದ ಸೂತ್ರವನ್ನು ಅಭಿವೃದ್ಧಿಪಡಿಸುವ ಮೂಲಕ ನಾವು ಕೆಲಸ ಮಾಡಿದ್ದೇವೆ” ಎಂದು ಅವರು ಹೇಳುತ್ತಾರೆ.
ಈ ತಂತ್ರಜ್ಞಾನವನ್ನು ಸ್ಥಾಪಿಸುವ ವೆಚ್ಚವು ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ ಆದರೆ FISAT ತಂಡದ ನ್ಯೂಟ್ರಿಷಿಯನ್ ಫಾರ್ಮುಲಾಗೆ ಕಡಿಮೆ ಹೂಡಿಕೆಯ ಅಗತ್ಯವಿರುತ್ತದೆ ಎಂದು ಅವರು ಹೇಳುತ್ತಾರೆ. “ವೆಚ್ಚವು ವಿವಿಧ ಉತ್ಪನ್ನಗಳು ಮತ್ತು ಲಭ್ಯವಿರುವ ಸ್ಥಳವನ್ನು ಅವಲಂಬಿಸಿರುತ್ತದೆ” ಎಂದು ತಂಡದ ಮುಖ್ಯಸ್ಥರಾಗಿರುವ ಬಿಜಾಯ್ ವಿವರಿಸುತ್ತಾರೆ.
ಅಂತಿಮ ವರ್ಷದ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿದ್ಯಾರ್ಥಿ ಮತ್ತು ತಂಡದ ಸಕ್ರಿಯ ಸದಸ್ಯರಾಗಿರುವ ಆರ್ದ್ರಾ ಸಾಜಿ “ಈ ವಿಧಾನದ ಸಂಶೋಧನೆ, ಅಭಿವೃದ್ಧಿ ಮತ್ತು ಅನುಷ್ಠಾನದಲ್ಲಿ ಒಟ್ಟು 20 ವಿದ್ಯಾರ್ಥಿಗಳು ತೊಡಗಿಸಿಕೊಂಡಿದ್ದಾರೆ. ಆಸಕ್ತ ರೈತರಿಗೆ ತರಬೇತಿ ನೀಡಲು ನಾವು ತಂಡವನ್ನು ಸಣ್ಣ ಗುಂಪುಗಳಾಗಿ ವಿಭಜಿಸಲು ಯೋಜಿಸುತ್ತಿದ್ದೇವೆ. ಅನುಷ್ಠಾನಕ್ಕೆ ಮೂಲಭೂತ ತಾಂತ್ರಿಕ ಜ್ಞಾನದ ಅಗತ್ಯವಿರುತ್ತದೆ, ಅದನ್ನು ತರಬೇತಿಯ ಮೂಲಕ ಸುಲಭವಾಗಿ ಪಡೆಯಬಹುದು” ಎನ್ನುತ್ತಾರೆ.
ಸರಿಯಾದ ಮಾರ್ಗದರ್ಶನ ಮತ್ತು ತರಬೇತಿ ಇಲ್ಲದೆ ಮಾಡಿದರೆ, ಈ ವಿಧಾನವು ಕೃಷಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಬಿಜಾಯ್ ಎಚ್ಚರಿಸಿದ್ದಾರೆ. ರಸಗೊಬ್ಬರಗಳನ್ನು ಸಾಗಿಸಲು ಪಿವಿಸಿ ಪೈಪ್‌ಗಳನ್ನು ಬಳಸುವ ಈ ಕೃಷಿ ವಿಧಾನವನ್ನು ಅನೇಕ ಯೂಟ್ಯೂಬ್ ವೀಡಿಯೊಗಳು ವಿವರಿಸುತ್ತಿವೆ ಎನ್ನುವ ಅವರು “ಇದು ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ” ಎನ್ನುತ್ತಾರೆ.
“ಕಳೆದ ಎರಡು ವರ್ಷಗಳಿಂದ ನಮ್ಮ ಇಳುವರಿಯನ್ನು ನೋಡಿ ಅನೇಕ ರೈತರು ಈಗಾಗಲೇ ನಮ್ಮನ್ನು ಸಂಪರ್ಕಿಸಿದ್ದಾರೆ. ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಇದು ಅತ್ಯುತ್ತಮ ಪ್ರಾಯೋಗಿಕ ಅನುಭವವಾಗಲಿದೆ ಇಂಜಿನಿಯರ್‌ಗಳಿರುವುದೇ ದೈನಂದಿನ ಚಟುವಟಿಕೆಗಳಲ್ಲಿ ತಂತ್ರಜ್ಞಾನವನ್ನು ಅಳವಡಿಸಿ ಜೀವನವನ್ನು ಸುಲಭಗೊಳಿಸುವುದಕ್ಕಾಗಿ”ಎನ್ನುತ್ತಾರೆ ಅವರು.
“ನಾವು ಕೃಷಿಯೊಂದನ್ನು ಹೊರತುಪಡಿಸಿ ಬೇರೆಲ್ಲಾ ಕ್ಷೇತ್ರಗಳಲ್ಲಿ ತಂತ್ರಜ್ಞಾನವನ್ನು ಹುಡುಕುತ್ತೇವೆ ಮತ್ತೀಗ ನಾವು ಈ ದೃಷ್ಟಿಕೋನವನ್ನು ಬದಲಾಯಿಸುವ ಸಮಯ ಬಂದಿದೆ. ಈ ತಂತ್ರಜ್ಞಾನವನ್ನು ಸ್ಥಳೀಯ ರೈತರಲ್ಲಿ ಜನಪ್ರಿಯಗೊಳಿಸಲು ಮತ್ತು ನಮ್ಮ ಮನೆಗಳಲ್ಲಿಯೂ ಅದನ್ನು ಬಳಸಿಕೊಳ್ಳಲು ನಾವು ಸಿದ್ಧರಾಗಬೇಕು” ಎನ್ನುತ್ತಾರೆ ವಿದ್ಯಾರ್ಥಿ ಆರ್ದ್ರಾ.
ಇ-ಯಂತ್ರ ಯೋಜನೆಯ 17 ವಿದ್ಯಾರ್ಥಿಗಳು ಮತ್ತು IEEE SIGHT (ಹ್ಯೂಮಾನಿಟೇರಿಯನ್ ಟೆಕ್ನಾಲಜಿಯ ವಿಶೇಷ ಆಸಕ್ತಿ ಗುಂಪು) ತಂಡದ 21 ವಿದ್ಯಾರ್ಥಿಗಳು ಸೇರಿದಂತೆ ತಂಡವು ಇದೀಗ ತಮ್ಮ ನಾಲ್ಕನೇ ಇಳುವರಿಯನ್ನು ಕೆಲವೇ ದಿನಗಳಲ್ಲಿ ಕೊಯ್ಲು ಮಾಡಲು ತಯಾರಿ ನಡೆಸುತ್ತಿದೆ.