ರಾಜ್ಯ ರಾಜಕೀಯದಲ್ಲಿ ಮತ್ತೊಂದು ಮಹಾ ಬದಲಾವಣೆಗೆ ಮುಹೂರ್ತ ನಿಗದಿಯಾಗಿದೆ. ಸಿಎಂ ಸ್ಥಾನದಿಂದ ಯಡಿಯೂರಪ್ಪ ಇಳಿದ ಬಳಿಕ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಪಟ್ಟಕ್ಕೇರಿದ್ದಾರೆ. ಜುಲೈ 28ರಂದು ಸಿಎಂ ಆಗಿ ಅಧಿಕಾರ ಸ್ವೀಕರಿಸಿರೋ ಬೊಮ್ಮಾಯಿ ಕಳೆದ ನಾಲ್ಕೂವರೆ ತಿಂಗಳಿಂದ ಕಾರ್ಯನಿರ್ವಹಿಸ್ತಿದ್ದಾರೆ. ಆದರೆ ಸಿಎಂ ಸ್ಥಾನದಿಂದ ಬೊಮ್ಮಾಯಿಯವರನ್ನು ಕೆಳಗಿಳಿಯುತ್ತಾರೆ ಅನ್ನೋ ಚರ್ಚೆ ಬಿಜೆಪಿ ವಲಯದಲ್ಲಿ ನಡೆಯುತ್ತಿದೆ.
ಅಂತ್ಯವಾಗುತ್ತಾ ನಾಲ್ಕೂವರೆ ತಿಂಗಳ ಬೊಮ್ಮಾಯಿ ಅಧಿಕಾರ?
ಹೌದು, ಇಂಥದ್ದೊಂದು ಚರ್ಚೆ ರಾಜ್ಯ ಬಿಜೆಪಿ ಪಾಳಯದಲ್ಲಿ ಜೋರಾಗೇ ನಡೆಯುತ್ತಿದೆ. ಸಿಎಂ ಬಸವರಾಜ ಬೊಮ್ಮಾಯಿಯವರ ತಮ್ಮ ಸ್ಥಾನದಿಂದ ಕೆಳಗಿಳಿಯುತ್ತಾರೆ ಎಂಬ ಬಿಸಿಬಿಸಿ ಚರ್ಚೆಯಾಗುತ್ತಿದೆ. ಈ ಮೂಲಕ ರಾಜ್ಯ ರಾಜಕೀಯದಲ್ಲಿ ಮತ್ತೊಂದು ಭಾರಿ ಬದಲಾವಣೆ ಆಗುತ್ತದೆ ಎನ್ನಲಾಗಿದೆ. ಒಂದು ವೇಳೆ ಸಿಎಂ ಬೊಮ್ಮಾಯಿ ರಾಜೀನಾಮೆ ನೀಡೋದು ಪಕ್ಕಾ ಆದ್ರೆ, ಯಾವ ಕಾರಣಕ್ಕೆ ರಾಜೀನಾಮೆ ನೀಡ್ತಾರೆ ಅನ್ನೋ ಬಗ್ಗೆ ಈ ಮುಖ್ಯ ಚರ್ಚೆಯಲ್ಲಿದೆ.
ರಾಜೀನಾಮೆ ನೀಡ್ತಾರಾ ಸಿಎಂ?
ಜನವರಿಯಲ್ಲಿ ಸಿಎಂ ಸ್ಥಾನಕ್ಕೆ ಬೊಮ್ಮಾಯಿ ರಾಜೀನಾಮೆ ಸಾಧ್ಯತೆ ಇದೆ. ಈ ಮೂಲಕ ಇನ್ನೊಂದು ತಿಂಗಳಲ್ಲಿ ರಾಜ್ಯದ ರಾಜಕೀಯದಲ್ಲಿ ಭಾರೀ ಬೆಳವಣಿಗೆ ನಡೆಯುವ ಸಾಧ್ಯತೆ ಇದೆ. ಯಾಕೆಂದರೆ ಮಂಡಿ ನೋವಿನಿಂದ ಸಿಎಂ ಹುದ್ದೆಗೆ ಬೊಮ್ಮಾಯಿ ರಾಜೀನಾಮೆ ಕೊಡಲಿದ್ದಾರೆ ಎನ್ನಲಾಗಿದೆ. ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಮಂಡಿ ನೋವು ಕಾಡುತ್ತಿದೆ. ಹೀಗಾಗಿ ಸಿಎಂ ಬಸವರಾಜ ಬೊಮ್ಮಾಯಿ ಅಮೆರಿಕಾಕ್ಕೆ ತೆರಳಲಿದ್ದಾರೆ. ಈಗಾಗಲೇ ಅಲ್ಲಿನ ವೈದ್ಯರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿರೋ ಸಿಎಂ, ಅಮೆರಿಕಾಕ್ಕೆ ತೆರಳಿ, ಮಂಡಿ ನೋವಿಗೆ ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರಂತೆ. ಇನ್ನು ಈಗಾಗಲೇ ಅಮೆರಿಕಾಗೆ ತೆರಳಲು ವೀಸಾಗೆ ಅರ್ಜಿ ಹಾಕಿರುವ ಸಿಎಂ ಬೆಳಗಾವಿಯ ಅಧಿವೇಶನ ಮುಗಿಯುವುದರೊಳಗೆ ವೀಸಾಗೆ ಅನುಮತಿ ಪಡೆಯಲಿದ್ದಾರೆನ್ನಲಾಗಿದೆ.
ರಾಜೀನಾಮೆಗೆ ಕಾರಣವೇನು?
ಜನವರಿ ಅಂತ್ಯದೊಳಗೆ ಸಿಎಂ ಬೊಮ್ಮಾಯಿ ರಾಜೀನಾಮೆ ನೀಡಿ ಅಮೆರಿಕಾಗೆ ಪಯಣ ಬೆಳೆಸುತ್ತಾರೆ. ಶಸ್ತ್ರ ಚಿಕಿತ್ಸೆಯ ನಂತರ 3 ತಿಂಗಳು ಬೆಡ್ ರೆಸ್ಟ್ ಕಡ್ಡಾಯ ಎಂದು ಈಗಾಗಲೇ ಸಿಎಂ ಬೊಮ್ಮಾಯಿ ಅವರಿಗೆ ವೈದ್ಯರು ಸೂಚನೆ ನೀಡಿದ್ದು, ಈ 3 ತಿಂಗಳು ಸಿಎಂ ಇಲ್ಲದೆಯೇ ಎಲ್ಲ ನಿಭಾಯಿಸುವುದು ಕಷ್ಟ ಎಂದು ಬೊಮ್ಮಾಯಿ ರಾಜೀನಾಮೆ ನೀಡುವ ಸಾಧ್ಯತೆಗಳು ಹೆಚ್ಚಿದೆ ಎಂದು ಹೇಳಲಾಗಿದೆ.

ಮಂಡಿನೋವಿಗೆ ‘ಪದತ್ಯಾಗ’ ಮದ್ದು!
2023ಕ್ಕೆ ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಅಖಾಡ ಸಜ್ಜಾಗಿದೆ. ಹೀಗಾಗಿ ಸರ್ಕಾರದ ವರ್ಚಸ್ಸು, ಅಧಿಕಾರದ ಸದ್ಭಳಕೆ ಸಮಾನಾಂತರವಾಗಿರಬೇಕು. ಜೊತೆಗೆ ಸಂಘಟನೆಯೂ ಬಲವರ್ಧನೆ ಆಗಬೇಕು ಅಂತಾ ಕಮಲ ‘ಹೈ’ ಪ್ಲಾನ್ ಮಾಡಿಕೊಂಡಿದೆ. ಮುಂದಿನ ವರ್ಷ ಪೂರ್ತಿ ಚುನಾವಣೆಗಾಗಿ ಓಡಾಟ ಮಾಡಬೇಕಾಗುತ್ತೆ. ಇದು ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗೋ ಸಿಎಂ ಬೊಮ್ಮಾಯಿಗೆ ಕಷ್ಟವಾಗಬಹುದು.
ಈಗಾಗಲೇ ಸಿಎಂ ಶಸ್ತ್ರಚಿಕಿತ್ಸೆ ವಿಚಾರ ನಾಯಕರ ಗಮನಕ್ಕೆ ತಂದಿದ್ದಾರೆ. ಹೀಗಾಗಿ ಸಿಎಂ ಸ್ಥಾನವನ್ನೂ ತ್ಯಜಿಸಲು ಸಿದ್ಧ ಎಂದಿದ್ದಾರಂತೆ ಬೊಮ್ಮಾಯಿ. ಈ ಮಾತನ್ನು ಖುದ್ದು ಸಿಎಂ ಬಸವರಾಜ ಬೊಮ್ಮಾಯಿಯೇ ಹೇಳಿದ್ದಾರೆ ಅನ್ನೋ ಮಾತು ಕಮಲ ಪಾಳಯದಲ್ಲಿ ಕೇಳಿಬರ್ತಿದೆ. ಹೀಗಾಗಿ ಹೈಕಮಾಂಡ್ ನಾಯಕರು ದೃಢ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ.
ಬೊಮ್ಮಾಯಿ ರಾಜೀನಾಮ ಆನಿವಾರ್ಯವಾದ್ರೆ ಹೈಕಮಾಂಡ್ ನಾಯಕರು ನೂತನ ಮುಖ್ಯಮಂತ್ರಿ ಆಯ್ಕೆ ಮಾಡಲಿದ್ದಾರೆ. ಇದರ ಬೆನ್ನಲ್ಲೇ ಈ ಬಗ್ಗೆ ರಾಜ್ಯ ಬಿಜೆಪಿ ಪಾಳಯದಲ್ಲಿ ಬಿಸಿ ಬಿಸಿ ಚರ್ಚೆ ಕೂಡಾ ಆರಂಭವಾಗಿದೆ.
ಒಟ್ನಲ್ಲಿ ನಾಲ್ಕೂವರೆ ತಿಂಗಳ ಹಿಂದಷ್ಟೇ ಯಡಿಯೂರಪ್ಪರ ಉತ್ತರಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿರೋ ಬೊಮ್ಮಾಯಿ ಸಿಎಂ ಪಟ್ಟದಿಂದ ಕೆಳಗಿಳಿಯುತ್ತಾರೆ ಅನ್ನೋ ಚರ್ಚೆ ನಡೀತಿದೆ. ತಮ್ಮ ವೈಯಕ್ತಿಕ ಕಾರಣದಿಂದ ಬೊಮ್ಮಾಯಿ ಪದತ್ಯಾಗಕ್ಕೆ ಮುಂದಾಗಿದ್ದು, ಜನವರಿ ತಿಂಗಳಲ್ಲಿ ರಾಜ್ಯ ರಾಜಕೀಯದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ಆಗೋದ್ರಲ್ಲಿ ಯಾವುದೇ ಡೌಟಿಲ್ಲ.