ಸಂಘಟಿತ ಪ್ರದರ್ಶನ ನೀಡಿದ ಕೋಲ್ಕತಾ ನೈಟ್ ರೈಡರ್ಸ್ 7 ವಿಕೆಟ್ ಗಳಿಂದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸಿ ಐಪಿಎಲ್ ಟಿ-20 ಟೂರ್ನಿಯಲ್ಲಿ ಗೆಲುವಿನ ಹಾದಿಗೆ ಮರಳಿದೆ.
ಮುಂಬೈನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್ ಗಳಲ್ಲಿ 5 ವಿಕೆಟ್ ಗೆ 153 ರನ್ ಗಳಿಸಿತು. ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಕೆಕೆಆರ್ 19.1 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಈ ಗೆಲುವಿನೊಂದಿಗೆ ಕೆಕೆಆರ್ ಆಡಿದ 10 ಪಂದ್ಯಗಳಿಂದ 4 ಜಯ ಹಾಗೂ 6 ಸೋಲಿನೊಂದಿಗೆ 8 ಅಂಕ ಸಂಪಾದಿಸಿ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿತು. ರಾಜಸ್ಥಾನ್ ರಾಯಲ್ಸ್ 10 ಪಂದ್ಯಗಳಿಂದ 6 ಜಯ ಹಾಗೂ 4 ಸೋಲಿನೊಂದಿಗೆ 12 ಅಂಕ ಗಳಿಸಿ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.

ಒಂದು ಹಂತದಲ್ಲಿ ಸಮಸ್ಥಿತಿಯಲ್ಲಿದ್ದ ಪಂದ್ಯವನ್ನು ನಿತಿನ್ ರಾಣಾ ಮತ್ತು ರಿಂಕು ಸಿಂಗ್ ಮುರಿಯದ 4ನೇ ವಿಕೆಟ್ ಗೆ 6.2 ಓವರ್ ಗಳಲ್ಲಿ 66 ರನ್ ಜೊತೆಯಾಟ ನಿಭಾಯಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.
ನಿತಿನ್ ರಾಣಾ 37 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 48 ರನ್ ಗಳಿಸಿ ಔಟಾಗದೇ ಉಳಿದರೆ, ರಿಂಕು ಸಿಂಗ್ 23 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ ಅಜೇಯ 42 ರನ್ ಬಾರಿಸಿದರು. ನಾಯಕ ಶ್ರೇಯಸ್ ಅಯ್ಯರ್ 34 ರನ್ ಬಾರಿಸಿದರು.