2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೌಂಟ್‌ಡೌನ್ ಶುರುವಾಗಿದೆ. ಈಗಾಗಲೇ ಪಕ್ಷದ ನಾಯಕರು, ಮುಖಂಡರು ಆಯಾ ಪಕ್ಷಗಳ ಭರ್ಜರಿ ಮತ ಪ್ರಚಾರ ಮಾಡ್ತಿದ್ದಾರೆ. ಬಿಜೆಪಿ ಪರ ಅದರಲ್ಲೂ ಸಿಎಂ ಬಸವರಾಜ ಬೊಮ್ಮಾಯಿ ಪರ ಪ್ರಚಾರ ಮಾಡುವುದಾಗಿ ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಈ ಹಿಂದೆ ಘೋಷಿಸಿದ್ದರು.

ಇಂದು ಸಿಎಂ ಬಸವರಾಜ ಬೊಮ್ಮಾಯಿಯವರು ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ನಟ ಕಿಚ್ಚ ಸುದೀಪ್, ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಉಪಸ್ಥಿತರಿದ್ದರು. ಬಳಿಕ ಮಾತ್ನಾಡಿದ ನಟ ಕಿಚ್ಚ ಸುದೀಪ್, ಬೊಮ್ಮಾಯಿ ಮಾಮಾನನ್ನು ಮತ್ತೊಮ್ಮೆ ಗೆಲ್ಲಿಸಿ ಅಂತ ಶಿಗ್ಗಾಂವಿ ಮತದಾರರಲ್ಲಿ ಮನವಿ ಮಾಡಿದರು.

ಸಿಎಂ ಬೊಮ್ಮಾಯಿ ಅವರ ರೋಡ್ ಶೋ ನಡೆಸಿ ಬಹಿರಂಗ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾಮಾನಿಗೆ ಸಿಕ್ಕಿರುವ ಅವಧಿ ಬಹಳ ಕಡಿಮೆ. ಇಷ್ಟು ಜನ ಸೇರಿದ್ದೀರಿ ಅಂದರೆ ಅವರು ಮಾಡಿದ ಕೆಲಸ ಗೊತ್ತಾಗುತ್ತದೆ. ಅವರ ಪರವಾಗಿ ನಾನು ಬಂದಿದ್ದೇನೆ. ಜನರಿಗೆ ಒಳ್ಳೆಯದು ಆಗಬೇಕಬೇಕಾದರೆ ಮತ್ತೊಮ್ಮೆ ನೀವು ಅವರನ್ನು ಗೆಲ್ಲಿಸಬೇಕು ಎಂದು ವಿನಂತಿ ಮಾಡಿದರು.

ಮೊದಲ ಸಲ ನಾನು ಈ ಊರಿಗೆ ಬಂದಿದ್ದೇನೆ. ಬಹಳ ಸುಂದರವಾಗಿ ನನ್ನನ್ನು ಸ್ವಾಗತ ಮಾಡಿದ್ದೀರಿ. ಸಂತ ಶಿಶುನಾಳ ಶರೀಫರ ಭೂಮಿಯಲ್ಲಿ ಪ್ರಚಾರ ಆರಂಭಿಸಿದ್ದು ಬಹಳ ಸಂತಸ ತಂದಿದೆ. ಗೆದ್ದೇ ಗೆಲ್ಲುವೆ ಒಂದು ದಿನ. ಅಭಿವೃದ್ಧಿ ಆಗಬೇಕೆಂದರೆ ಮತ್ತೆ ಬೊಮ್ಮಾಯಿ ಅವರಿಗೆ ಮತ್ತೊಂದು ಅವಕಾಶ ನೀಡಿ ಅಂತ ಕಿಚ್ಚ ಸುದೀಪ್ ಕೇಳಿಕೊಂಡರು.