ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಪ್ರಾಧಿಕಾರದಲ್ಲಿನ (KIADB) ಹುಳುಕುಗಳು ಬಗೆದಷ್ಟು ಸಿಗುತ್ತವೆ. ಹೆಸರಿನಲ್ಲಿರುವಂತೆ, ಅಭಿವೃದ್ದಿ ಮಾಡಿದಷ್ಟೇ ಸಮಾನಾಗಿ ಅವ್ಯವಹಾರಗಳಲ್ಲೂ KIADBಯದು ಎತ್ತಿದ ಕೈ. ಇತ್ತೀಚಿಗಷ್ಟೇ, ಬೀದಿ ದೀಪಗಳ ಅಳವಡಿಕೆಯಲ್ಲಿ KIADBಯ ಅಧಿಕಾರಿಗಳು ನಡೆಸಿದಂತಹ ಅವ್ಯವಹಾರದ ಕುರಿತು ಪ್ರತಿಧ್ವನಿಯಲ್ಲಿ ವಿಸ್ತೃತವಾದ ವರದಿಯನ್ನು ಪ್ರಕಟಿಸಲಾಗಿತ್ತು. ಈಗ ಇದರ ಇನ್ನೊಂದು ಹುಳುಕು ಬಯಲಾಗಿದ್ದು, KIADBಯ ಅಧಿಕಾರಿಗಳ ನಿರ್ಲಕ್ಷ್ಯದಿಂದಲೋ ಅಥವಾ ಕಮಿಷನ್ ಪಡೆಯುವ ಹಪಾಹಪಿಯಿಂದಲೋ, ಮಹತ್ತರವಾದ ಯೋಜನೆಯೊಂದು ಆರಂಭವಾಗುವ ಮುಂಚೆಯೇ ಅಂತ್ಯ ಗೀತೆ ಹಾಡಿದೆ.
ಏರೋಸ್ಪೇಸ್ ಕಾಮನ್ ಫಿನಿಷಿಂಗ್ ಫೆಸಿಲಿಟಿ (ACCF) ಎಂಬ ಯೋಜನೆಯೊಂದು ಹೇಳ ಹೆಸರಿಲ್ಲದಂತಾಗಿ ನೆನೆಗುದಿಗೆ ಬಿದ್ದಿದೆ. ಅಧಿಕಾರಿಗಳ ಅಲಕ್ಷ್ಯತನದಿಂದಾಗಿ, ರಾಷ್ಟ್ರ ಮಟ್ಟದಲ್ಲಿ ಹೆಸರು ಪಡೆಯ ಬೇಕಿದ್ದ ಯೋಜನೆ ಇಂದು ಯಾವುದೇ ಫಲವಿಲ್ಲದೇ ಮುಚ್ಚಿ ಹೋಗಿದೆ ಎಂಬುದು ನಿಜಕ್ಕೂ ಬೇಸರದ ಸಂಗತಿ. ರಾಷ್ಟ್ರದಲ್ಲೇ ಪ್ರಪ್ರಥಮ ಪ್ರಯೋಗವೆಂದು ACFF ಯೋಜನೆಯನ್ನು ಬಣ್ಣಿಸಲಾಗಿತ್ತು ಹಾಗೂ ಆ ಯೋಜನೆಗೆ ಬೇಕಾದ ರೂಪು ರೇಷೆಗಳನ್ನೂ ತಯಾರಿಸಲಾಗಿತ್ತು. ದೇವನಹಳ್ಳಿಯಲ್ಲಿರುವ ಏರೋಸ್ಪೇಸ್ ಪಾರ್ಕ್‌ನ ನಿಗದಿ ಪಡಿಸಿದ ಸ್ಥಳದಲ್ಲಿ ಎರಡೆರಡು ಬಾರಿ ಭೂಮಿ ಪೂಜೆಯನ್ನೂ ಮಾಡಲಾಗಿತ್ತು. ಆದರೆ, ಯಾಕೋ ಭೂಮಿ ತಾಯಿ KIADB ಅಧಿಕಾರಿಗಳಿಗೆ ಈ ಯೋಜನೆ ಆರಂಭಿಸಲು ಆಶಿರ್ವಾದ ಮಾಡಿಲ್ಲವೆಂಬಂತೆ ಕಾಣುತ್ತಿದೆ. ವಿಮಾನಯಾನ ಕ್ಷೇತ್ರದಲ್ಲಿ ಬೆಂಗಳೂರು ಕಳಶಪ್ರಾಯವಾಗುವಂತಹ ಯೋಜನೆ ಈಗ ಬೆಂಗಳೂರಿನ ಕೈ ತಪ್ಪಿದೆ.
ಏನಿದು ACFF?
ವಿಮಾನಯಾನಕ್ಕೆ ಸಂಬಂಧಪಟ್ಟ ಎಲ್ಲಾ ಪ್ರಕ್ರಿಯೆಗಳನ್ನು ಒಂದೇ ಸೂರಿನಡಿಯಲ್ಲಿ ತರುವಂತಹ ಯೋಜನೆ ಇದು. ವಿಮಾನದ ಬಿಡಿ ಭಾಗಗಳ ತಯಾರಿಕೆಯಿಂದ ಹಿಡಿದು ಆ ಭಾಗಗಳ ವಿಶೇಷ ಸಂಸ್ಕರಣೆ ಮಾಡುವವರೆಗೂ ಎಲ್ಲಾ ಕೆಲಸಗಳನ್ನು ಬೆಂಗಳೂರಿನ ಏರೋಸ್ಪೇಸ್ ಪಾರ್ಕ್‌ನಲ್ಲಿಯೇ ಮಾಡಬೇಕೆಂಬ ಮಹತ್ವದ ಯೋಜನೆ ACFF. ಈ ಯೋಜನೆಯಲ್ಲಿ ಪಾಲ್ಗೊಳ್ಳಲು 18 ಅಕ್ಟೋಬರ್ 2016ರಲ್ಲಿ ಟೆಂಡರ್ ಕೂಡಾ ಕರೆಯಲಾಗಿತ್ತು. ಟೆಂಡರ್‌ನಲ್ಲಿ ಭಾಗವಹಿಸಿದ್ದ ಕಂಪನಿಗಳಲ್ಲಿ ನಾಲ್ಕು ಕಂಪನಿಗಳನ್ನು ಆಯ್ಕೆ ಮಾಡಿ ಅವುಗಳಿಗೆ ಅಗತ್ಯವಿರುವ ಮೂಲ ಸೌಕರ್ಯವನ್ನು ಕೂಡಾ ನೀಡುವ ಭರವಸೆಯನ್ನು ನೀಡಿತ್ತು KIADB.
ಈ ಯೋಜನೆಗೆ ತಗಲುವ ವೆಚ್ಚ 90.50 ಕೋಟಿ. ಈ ಯೋಜನೆಗೆ ಕೇಂದ್ರ ಸರ್ಕಾರವು 42.69 ಕೋಟಿ ಹಾಗೂ ರಾಜ್ಯ ಸರ್ಕಾರವು 47.81 ಕೋಟಿ ನೀಡುವುದಾಗಿ ಘೋಷಿಸಲಾಗಿತ್ತು. ಕೇಂದ್ರ ಸರ್ಕಾರವು ಮೊದಲ ಹಂತದ ಹಣವನ್ನು ಬಿಡುಗಡೆ ಮಾಡಿತ್ತು ಕೂಡ. ಇದರೊಂದಿಗೆ ರಾಜ್ಯ ಸರ್ಕಾರವೂ ತನ್ನ ಪಾಲಿನ ಹಣವನ್ನು ಬಿಡುಗಡೆ ಮಾಡಿತ್ತು. ಈ ಯೋಜನೆಯು ಸರಾಗವಾಗಿ ಸಾಗಲು ಬೇಕಾದ ಅನುದಾನವು ಅದಾಗಲೇ KIADBಯ ಬೊಕ್ಕಸಕ್ಕೆ ತಲುಪಾಗಿತ್ತು.
ಸುಮಾರು 40 ಎಕರೆ ಭೂಮಿಯನ್ನು ಗುರುತಿಸಿ ತಲಾ ಹತ್ತು ಎಕರೆಗಳಂತೆ ವಿಮಾನಯಾನಕ್ಕೆ ಸಂಬಂಧಪಟ್ಟಂತಹ ಕಂಪನಿಗಳಾದ Lean Aerospace Pvt Ltd, Aerovite, Lexial Aerospace Pvt Ltd ಮತ್ತು Uniflex ಎಂಬ ಕಂಪನಿಗಳಿಗೆ ನೀಡಲಾಗಿತ್ತು. ಈ ಕಂಪನಿಗಳೊಂದಿಗೆ KIADB ಮಾಡಿರು ಒಪ್ಪಂದ ಏನೆಂದರೆ BOT- Build, Operate and Transfer. ಈ ಕಂಪನಿಗಳು ತಮಗೆ ಗೊತ್ತು ಪಡಿಸಿದ ಜಾಗದಲ್ಲಿ ಅಗತ್ಯವಿರುವ ತಂತ್ರಜ್ಞಾನವನ್ನು ಬಳಸಿಕೊಂಡು ACCF ಕೇಂದ್ರವನ್ನು ನಿರ್ಮಿಸಿ (Build) ಆ ಕೇಂದ್ರವನ್ನು ಐದು ವರ್ಷಗಳ ಕಾಲ ನಡೆಸಿಕೊಂಡು ಹೋಗಬೇಕು(Operate). ಐದು ವರ್ಷದ ನಂತರ ಆ ಕೇಂದ್ರವನ್ನು KIADBಗೆ ಹಸ್ತಾಂತರಿಸಬೇಕು (Transfer). ಈ ಒಪ್ಪಂದದ ಮೇಲೆ ACCF ಯೋಜನೆ ಆರಂಭಗೊಳ್ಳುತ್ತದೆ.
ಮಾರ್ಚ್ 18, 2017ರಲ್ಲಿ ಕೆಲಸವನ್ನು ಆರಂಭಿಸಲು kIADBಯಿಂದ work order ಅನ್ನು ಈ ಕಂಪೆನಿಗಳು ಸ್ವೀಕರಿಸಿದ್ದವು. ಜೂನ್ 14, 2017ರಲ್ಲಿ ಈ ಕಂಪನಿಗಳು ವೈಯಕ್ತಿಕವಾಗಿ ಭೂಮಿಪೂಜೆಯನ್ನು ಕೂಡಾ ನೆರವೇರಿಸಿದ್ದವು. ಆದರೆ, ನಂತರ ನಡೆದಿದ್ದು ಮಾತ್ರ KIADB ಅಧಿಕಾರಿಗಳ ನಿರ್ಲಕ್ಷ್ಯತನದ ಪರಮಾವಧಿ.
ನಿಗದಿಪಡಿಸಿದ ಸ್ಥಳದಲ್ಲಿ ಕಂಪನಿಗಳು ಕಟ್ಟಡವನ್ನು ನಿರ್ಮಿಸಲು ಆರಂಭಿಸುತ್ತಿದ್ದಂತೇ, ಹಠಾತ್ತಾಗಿ ಯೋಜನೆಯನ್ನು ನಿಲ್ಲಿಸುವಂತೆ ಕಂಪನಿಗಳಿಗೆ ಸೂಚನೆ ನೀಡಲಾಯಿತು. ನಂತರ 40ಎಕರೆಗಳಿಗೆ ಬದಲಾಗಿ ಈ ಯೋಜನೆಗೆ ಕೇವಲ 7.45 ಎಕರೆ ಪ್ರದೇಶವನ್ನು ಮಾತ್ರ ನೀಡಲಾಯಿತು. ಖಾಸಗೀ ಕಂಪನೆಗಳು ಈವರೆಗೆ ನಡೆಸಿದ್ದ ಕಟ್ಟಡ ನಿರ್ಮಾಣ ಕಾರ್ಯವನ್ನು ಅರ್ಧದಲ್ಲಿಯೇ ಕೈಬಿಡಬೇಕಾಯಿತು. ಈ ಘಟನೆಗಳು ನಡೆದಿದ್ದು KIADBಯ ಆಗಿನ ಆಯುಕ್ತರಾಗಿದ್ದ ದರ್ಪನ್ ಜೈನ್ ಅವರ ಕಾಲದಲ್ಲಿ.
ಆಗಿದ್ದಾಗಲಿ ಎಂದು ಯೋಜನೆಯಲ್ಲಿ ಪಾಲ್ಗೊಂಡಿದ್ದ ಕಂಪನಿಗಳು ಮತ್ತೆ ಹೊಸದಾಗಿ ಕಟ್ಟಡವನ್ನು ನಿರ್ಮಿಸುವ ಕಾರ್ಯ ಕೈಗೊಳ್ಳಲು ನಿರ್ಧರಿಸಿದವು. ಈ ಸಂದರ್ಭದಲ್ಲಿ ಮತ್ತೆ ಭೂಮಿ ಪೂಜೆಯನ್ನು ನೆರವೇರಿಸಲಾಯಿತು. ಈ ಬಾರಿ ಭೂಮಿ ಪೂಜೆ ನೆರವೇರಿಸಿದವರು ಆಗಿನ ಕೈಗಾರಿಕ ಮಂತ್ರಿಯಾಗಿದ್ದ ಆರ್ ವಿ ದೇಶಪಾಂಡೆ.
ನಂತರ ಈ ಯೋಜನೆಗೆ ಸಂಬಂಧಪಟ್ಟ ಯಾವ ಕೆಲಸವೂ KIADBಯ ವತಿಯಿಂದ ನಡೆಯಲೇ ಇಲ್ಲ. ಖಾಸಗೀ ಕಂಪನಿಗಳು ನೀಡಿರುವ ಬಿಲ್‌ಗಳಿಗೆ ಹಣವನ್ನು ಕೂಡಾ ನೀಡಲಾಗಿಲ್ಲ.
KIADBಯ ಕಾರ್ಯ ಯೋಜನೆ ಏನಾಗಿತ್ತು?
KIADBಯು ಆರಂಭದಲ್ಲಿ ರಚಿಸಿದ್ದ ಕಾರ್ಯ ಯೋಜನೆಯ ಪ್ರತಿ ಇಂದು KIADBಯನ್ನು ನೋಡಿ ನಗುತ್ತಿರಬಹುದು. ಒಂದು ವೇಳೆ ಆ ಕಾರ್ಯ ಯೋಜನೆಯಲ್ಲಿ ನಮೂದಿಸಿರುವ ರೀತಿಯಲ್ಲಿ ಎಲ್ಲವೂ ಸುಸೂತ್ರವಾಗಿ ನಡೆದಿದ್ದಲ್ಲಿ, ಇಂದು Aerospace ಕ್ಷೇತ್ರದಲ್ಲಿ ಇಡೀ ಭಾರತವೇ ಬೆಂಗಳೂರನ್ನು ನೋಡುವಂತಹ ಯೋಜನೆ ಸಿದ್ದವಾಗಿರುತ್ತಿತ್ತು.
KIADBಯ ಕಾರ್ಯ ಯೋಜನೆಯ ಪ್ರಕಾರ ಮೊದಲ ACFFಗೆ ಅಗತ್ಯವಿರುವ ಎಲ್ಲಾ ಸಾಮಾಗ್ರಿಗಳೊಂದಿಗೆ ಉತ್ತಮ ಗುಣಮಟ್ಟದ ಫ್ಯಾಕ್ಟರಿಯ ಸ್ಥಾಪನೆ ಮೊದಲ ಆರು ತಿಂಗಳುಗಳ ಒಳಗೆ ಆಗಿರಬೇಕಿತ್ತು. ಮುಂದಿನ ಆರರಿಂದ ಹತ್ತು ತಿಂಗಳಲ್ಲಿ ಅಗತ್ಯವಿರುವ ಎಲ್ಲಾ ಉಪಕರಣಗಳನ್ನು ಖರೀದಿಸಿ ಅವುಗಳನ್ನು ಬಳಕೆಗೆ ಯೋಗ್ಯವಾಗಿರುವಂತೆ ನೋಡಿಕೊಳ್ಳ ಬೇಕಿತ್ತು.
Aerospace Industryಗೆ ಅನುಗುಣವಾಗಿರುವಂತಹ ಧೃಢೀಕರಣ ಪತ್ರ (AS 9100D, NADCAP) ಗಳನ್ನು ಮುಂದಿನ 24 ತಿಂಗಳುಗಳ ಒಳಗೆ ಪಡೆದುಕೊಂಡು, ಒಟ್ಟು 60 ತಿಂಗಳುಗಳಲ್ಲಿ ಸಂಪೂರ್ಣ ಯೋಜನೆಯನ್ನು ಕಾರ್ಯಗತಗೊಳಿಸುವ ಇಚ್ಚೆ KIADBಯದಾಗಿತ್ತು. ಆದರೆ, ಈ ಇಚ್ಚೆ ಕೇವಲ ದಾಖಲೆಗಳಲ್ಲಿ ಮಾತ್ರ ಉಳಿದುಕೊಂಡಿತೇ ಹೊರತು, ಅಧಿಕಾರಗಳ ಮನಸ್ಸಿನಲ್ಲಿ ಇರಲಿಲ್ಲ.
ಹಣ ವಾಪಾಸ್ ಪಡೆದ ಕೇಂದ್ರ ಹಾಗೂ ರಾಜ್ಯ ಸರ್ಕಾರ
ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಹೇಳಿದಂತೆ ಅನುದಾನವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಕಾಲದಲ್ಲಿ ನೀಡಿದ್ದವು. ಅನುದಾನ ಬಿಡುಗಡೆ ಮಾಡುವುದರಲ್ಲಿ ಯಾವುದೇ ರೀತಿಯ ತಡವಾಗಿರಲಿಲ್ಲ. ಆದರೆ, ಯೋಜನೆಯನ್ನು ಕಾರ್ಯ ರೂಪಕ್ಕೆ ತರಲು KIADB ಅಧಿಕಾರಿಗಳು ತೋರಿದ ನಿರ್ಲಕ್ಷ್ಯದಿಂದಾಗಿ ಯೋಜನೆಯು ಸಂಪೂರ್ಣವಾಗಿ ಹಾದಿ ತಪ್ಪಿತು.
ಯೋಜನೆಯ ಕುರಿತು ಕೇಂದ್ರ ಸರ್ಕಾರವು ವರದಿಯನ್ನು ಕೇಳಿದರೂ KIADB ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸದೇ ಇದ್ದುದರಿಂದ, ಯೋಜನೆಗಾಗಿ ಕೇಂದ್ರ ಸರ್ಕಾರವು ಬಿಡುಗಡೆ ಮಾಡಿದ್ದ ಮೊತ್ತ 12.81 ಕೋಟಿಯನ್ನು ವಾಪಾಸ್ ಪಡೆಯಿತು. ಅದು ಕೂಡಾ ಬಡ್ಡಿ 2.74 ಕೋಟಿ ರೂ. ಸೇರಿಸಿ. ಕೇಂದ್ರದ ದಾರಿಯನ್ನೇ ಅನುಸರಿಸಿದ ರಾಜ್ಯ ಸರ್ಕಾರ ಕೂಡಾ ಈ ಯೋಜನೆಗೆ ಸಂಬಂದಿಸಿ ಬಿಡುಗಡೆ ಮಾಡಿದ್ದ 25 ಕೋಟಿ ರೂ ಹಣವನ್ನು ವಾಪಾಸ್ ಕೇಳಿದೆ.
KIADB ಹಣವನ್ನು ವಾಪಾಸ್ ಕಳಿಸುವುದರಲ್ಲಿ ಯಾವುದೇ ತಡ ಮಾಡಲಿಲ್ಲ. ಕೇಂದ್ರದ ಆದೇಶ ಬರುತ್ತಿದ್ದಂತೆಯೇ ಯೋಜನೆಗೆ ಬಂದಿದ್ದ ಹಣವನ್ನು ವಾಪಾಸು ಮಾಡಲಾಯಿತು. ಒಂದು ವೇಳೆ ಈ ಬದ್ದತೆಯನ್ನು ಯೋಜನೆ ಅನುಷ್ಠಾನಗೊಳಿಸುವಲ್ಲಿ KIADB ಅಧಿಕಾರಿಗಳು ತೋರಿದ್ದರೆ, ಈ ಹೊತ್ತಿಗೆ ದೇಶವೇ ಮೆಚ್ಚುವಂತಹ ಯೋಜನೆ ನಮ್ಮ ಕರ್ನಾಟಕದಲ್ಲಿ ಸಿದ್ದವಾಗುತ್ತಿತ್ತು. ವಿಮಾನಯಾನ ಕ್ಷೇತ್ರದಲ್ಲಿ ಬೆಂಗಳೂರು ಮುಂಚೂಣಿಯಲ್ಲಿರುತ್ತಿತ್ತು. ವಿಮಾನದ ಬಿಡಿ ಭಾಗಗಳ ಸಂಸ್ಕರಣೆಗಾಗಿ ವಿದೇಶಗಳನ್ನು ಅವಲಂಬಿಸುವ ಬದಲು, Make in India ಅಡಿಯಲ್ಲಿ Made in India ವಿಮಾನಗಳು ದೇಶಾದ್ಯಂತ ಹಾರಾಟ ನಡೆಸುತ್ತಿದ್ದವು.