ಕೇರಳದ ಎರ್ನಾಕುಲಂ ಜಿಲ್ಲೆಯ ಕುಂಬಳಂಗಿ ಗ್ರಾಮ ದೇಶದ ಮೊದಲ ಸ್ಯಾನಿಟರಿ ಪ್ಯಾಡ್ ಮುಕ್ತ ಹಳ್ಳಿಯಾಗಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಕುಂಬಳಂಗಿಯ ಮಹಿಳೆಯರು ಮುಟ್ಟಾದಾಗ ಬಳಸುವ ಸ್ಯಾನಿಟರಿ ಪ್ಯಾಡ್‌ಗೆ ಬದಲಾಗಿ ಮೆನ್ಸ್ಟ್ರುಯಲ್ ಕಪ್ ಅಥವಾ ಮುಟ್ಟಿನ ಬಟ್ಟಲು ಬಳಸುವಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.
ಕುಂಬಳಂಗಿಯನ್ನು ದೇಶದಲ್ಲೇ ನ್ಯಾಪ್ಕಿನ್ ಮುಕ್ತ ಗ್ರಾಮವೆಂದು ಗುರುವಾರ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅಧಿಕೃತವಾಗಿ ಘೋಷಿಸಿದ್ದು, “ಸುಂದರ ಗ್ರಾಮ ಕುಂಬಳಂಗಿ ಇತರರಿಗೆ ಮಾದರಿಯಾಗಲಿದೆ. ಇಂತಹ ಯೋಜನೆಗಳು ಮಹಿಳೆಯರನ್ನು ಸಬಲೀಕರಣಗೊಳಿಸುತ್ತವೆ. ಹಳ್ಳಿಗಳು ಅಭಿವೃದ್ಧಿಯಾದರೆ ನಮ್ಮ ದೇಶ ಅಭಿವೃದ್ಧಿಯಾಗುತ್ತದೆ” ಎಂದು ಹೇಳಿದ್ದಾರೆ.
“ಅವಳಿಗಾಗಿ (Avalkayi)” ಎಂಬ ಅಭಿಯಾನದಡಿಯಲ್ಲಿ 18 ವರ್ಷ ಹಾಗೂ ಮೇಲ್ಪಟ್ಟ ಮಹಿಳೆಯರಿಗೆ 5000 ಮುಟ್ಟಿನ ಬಟ್ಟಲು (menstrual cup) ಅನ್ನು ವಿತರಿಸಿದ್ದು, ಮುಟ್ಟಾದ ಸಂಧರ್ಭದಲ್ಲಿ ಸ್ಯಾನಿಟರಿ ಪ್ಯಾಡ್ ಬದಲಾಗಿ ಈ ಬಟ್ಟಲುಗಳನ್ನು ಹೇಗೆ ಬಳಸಬೇಕೆಂದು ತರಬೇತಿ ನೀಡಲಾಗಿದೆ.
ಎರ್ನಾಕುಲಂ ಸಂಸದ ಹಿಬಿ ಈಡೆನ್ ಈ ಅಭಿಯಾನ ಮುನ್ನಡೆಸಿದರೆ, ಹೆಚ್‌ಎಲ್‌ಎಲ್ ಮ್ಯಾನೇಜ್‌ಮೆಂಟ್ ಅಕಾಡೆಮಿ ಹಾಗೂ ಇಂಡಿಯನ್ ಆಯಿಲ್ ಕಾರ್ಪೊರೇಶನ್ ಅಭಿಯಾನದ ಪಾಲುದಾರರಾಗಿದ್ದಾರೆ. ಅಭಿಯಾನದ ಸ್ವಯಂ ಕಾರ್ಯಕರ್ತರು ಹಾಗೂ ಆಯೋಜಕರು ಮಹಿಳೆಯರಿಗೆ ಮುಟ್ಟಿನ ಬಟ್ಟಲುಗಳ ಪ್ರಯೋಜನ ಹಾಗೂ ಬಳಕೆಯ ಕುರಿತು ತರಬೇತಿ ನೀಡಿದ್ದಾರೆ.
ಈ ಕಾರ್ಯಕ್ರಮವು ಪರಿಸರ ನೈರ್ಮಲ್ಯಕ್ಕೆ ಪ್ರಯೋಜನಕಾರಿಯಾಗಿದ್ದು, ಸಿಂಥೆಟಿಕ್ ಸ್ಯಾನಿಟರಿ ಪ್ಯಾಡ್‌ಗಳಿಂದಾಗುವ ಮಾಲಿನ್ಯವನ್ನು ತಡೆಗಟ್ಟುತ್ತದೆ, ಹಾಗೂ ವಿದ್ಯಾರ್ಥಿನಿಯರು ಮತ್ತು ಕೆಲಸ ಮಾಡುವ ಮಹಿಳೆಯರಿಗೆ ವೈಯಕ್ತಿಕ ನೈರ್ಮಲ್ಯಕ್ಕೆ ಸ್ಯಾನಿಟರಿ ಪ್ಯಾಡ್‌ಗಳಿಗಿಂತಲೂ ಹೆಚ್ಚು ಅನುಕೂಲಕರ ಎಂದು ಸಂಸದರಾದ ಹಿಬಿ ಈಡೆನ್ ಹೇಳಿದ್ದಾರೆ.
“ನಾವು ಅನೇಕ ಶಾಲೆಗಳಲ್ಲಿ ನ್ಯಾಪ್ಕಿನ್-ವಿತರಣಾ ಯಂತ್ರಗಳನ್ನು ಸ್ಥಾಪಿಸಿದ್ದೇವೆ. ಆದರೆ ಪದೇ ಪದೇ ಅವು ಸಮಸ್ಯೆಗಳನ್ನು ಸೃಷ್ಟಿಸುತ್ತವೆ. ಬಳಿಕ ಈ ಆಲೋಚನೆ ಬಂದಿದ್ದು, ನಾವು ಇದರ ಬಗ್ಗೆ ವಿವರವಾಗಿ ಅಧ್ಯಯನ ಮಾಡಿದ್ದೇವೆ ಮತ್ತು ತಜ್ಞರ ಸಲಹೆಯನ್ನು ಕೇಳಿದ್ದೇವೆ. ತಜ್ಞರು ಕಪ್ ಅನ್ನು ಹಲವು ವರ್ಷಗಳವರೆಗೆ ಮರುಬಳಕೆ ಮಾಡಬಹುದು, ಸ್ಯಾನಿಟರಿಗಿಂತ ಇದು ಹೆಚ್ಚು ಆರೋಗ್ಯಕರವಾಗಿದೆ ಎಂದು ತಿಳಿಸಿರುವುದನ್ನು ಸಂಸದರು ಹೇಳಿದ್ದಾರೆ.
ಏನಿದು ಮುಟ್ಟಿನ ಬಟ್ಟಲು? ಪ್ರಯೋಜನವೇನು?
ತಿಂಗಳ ಋತುಸ್ರಾವದ ಸಮಯದಲ್ಲಿ, ರಕ್ತವು ಹೊರಗೆ ಸ್ರವಿಸಿ ಬಟ್ಟೆ ಕಲೆಯಾಗಬಾರದು ಎಂಬ ಕಾರಣಕ್ಕೆ ಪ್ಯಾಡ್, ನ್ಯಾಪ್ಕಿನ್ ಮುಂತಾದವುಗಳನ್ನು ಬಳಸಲಾಗುತ್ತದೆ. ಇದು ಒಮ್ಮೆ ಮಾತ್ರ ಬಳಸಬಹುದಾಗಿದ್ದು, ಪದೇ ಪದೇ ಬಳಸುವಂತಿಲ್ಲ. ಒಮ್ಮೆ ಬಳಸಲ್ಪಟ್ಟ ಪ್ಯಾಡ್‌ಗಳನ್ನು ವಿಲೇವಾರಿ ಮಾಡುವುದು ಕಷ್ಟ. ಹಾಗಾಗಿಯೇ ಪ್ಯಾಡ್‌ಗಳಿಗಿಂತ ಹೆಚ್ಚು ಆರೋಗ್ಯಕರವು, ಪರಿಸರ ಸ್ನೇಹಿಯೂ ಆಗಿರುವ ಕಪ್‌ಗಳನ್ನು ಬಳಸಲು ತಜ್ಞರು ಸಲಹೆ ನೀಡುತ್ತಾರೆ.
ಬಹುತೇಕ ಮಹಿಳೆಯರಿಗೆ ಈಗಲೂ ಮುಟ್ಟಿನ ಬಟ್ಟಲು ಕುರಿತು ಹೆಚ್ಚಿನ ತಿಳುವಳಿಕೆಯಿಲ್ಲದ ಕಾರಣ ಇದು ವ್ಯಾಪಕ ಬಳಕೆಗೆ ಬಂದಿಲ್ಲ. ಇದನ್ನು (ಮುಟ್ಟಿನ ಬಟ್ಟಲು) ವೈದ್ಯಕೀಯ ದರ್ಜೆಯ ‘ಸಿಲಿಕಾನ್’ ಎಂಬ ಸಂಯುಕ್ತ ಪದಾರ್ಥದಿಂದ ತಯಾರಿಸಲಾಗುತ್ತದೆ. ಇಂತಹ ಸಿಲಿಕಾನ್‌ಗಳಿಂದ ಯಾವುದೇ ಸೋಂಕುಗಳು ಉಂಟಾಗುವುದಿಲ್ಲ ಎನ್ನುವುದಕ್ಕೆ ವೈದ್ಯಕೀಯ ಪುರಾವೆಗಳಿದೆ. ಹಾಗಾಗಿ, ಶುಚಿಗೊಳಿಸಿ ಮರು ಬಳಕೆ ಮಾಡುವುದರಿಂದ ಯಾವುದೇ ಸಮಸ್ಯೆ ಇಲ್ಲ. ಸ್ಯಾನಿಟರಿ ಪ್ಯಾಡ್‌ಗಳಿಗೆ ಹೋಲಿಸಿದರೆ ಇದರ ಖರ್ಚೂ ಕಮ್ಮಿ.
ದಿ ಕನ್ವರ್ಸೇಷನ್ ವರದಿ ಪ್ರಕಾರ ಈಗಿರುವ ಎಲ್ಲಾ ವಿಧಾನಗಳಿಗಿಂತಲೂ ಮುಟ್ಟಿನ ಬಟ್ಟಲು ಬಹಳ ಪ್ರಯೋಜನಾಕಾರಿ ಹಾಗೂ ಪರಿಣಾಮಕಾರಿ. ವಿಭಿನ್ನ ಮುಟ್ಟಿನ ಉತ್ಪನ್ನಗಳಿಗೆ ಹೋಲಿಸಿದರೆ ಕಪ್‌ಗಳ ಬಳಕೆ ಉತ್ತಮ ಆಯ್ಕೆ ಎಂದು ವಿವಿಧ ಅಧ್ಯಯನ ವರದಿಗಳು ಹೇಳುತ್ತವೆ.
ಭಾರತದಲ್ಲಿ ಮುಟ್ಟನ್ನು ನಿಷಿದ್ಧವೆಂಬಂತೆ ಅನಾದಿ ಕಾಲದಿಂದಲೂ ಕಾಣಲಾಗುತ್ತಿದೆ. ಬಹುತೇಕ ಗ್ರಾಮೀಣ ಭಾಗದಲ್ಲಿ ಈಗಲೂ ಮುಟ್ಟಾದ ಮಹಿಳೆಯರನ್ನು ಮನೆಯಿಂದ ಹೊರ ಇರಿಸುವುದು, ಅಸ್ಪಶ್ಯರನ್ನಾಗಿಸುವುದು ನಡೆಯುತ್ತಲೇ ಇದೆ. ಮುಟ್ಟಿನ ಕುರಿತ ಯೋಚನೆಗಳು ನಿಧಾನಗತಿಯಲ್ಲಿ ಬದಲಾಗುತ್ತಿದ್ದರೂ ಮುಟ್ಟನ್ನು ಟಬೂ ಎಂಬಂತೆ ಪರಿಗಣಿಸುವುದು ಇವತ್ತಿಗೂ ಸಂಪೂರ್ಣ ಬದಲಾಗಿಲ್ಲ.
ಕುಂಬಳಂಗಿ ಗ್ರಾಮ ಸಾಧಿಸಿರುವಂತಹ ಸಾಧನೆಗಳು, ಮುಟ್ಟು ಸಂಬಂಧಿತ ಇಂತಹ ಚೇತೋಹಾರಿ ಸುದ್ದಿಗಳು ಮುಟ್ಟಿನ ಕುರಿತ ಚರ್ಚೆಗಳನ್ನು ಇನ್ನಷ್ಟು ಸಹಜಗೊಳಿಸಿ, ಮುಟ್ಟಿ ಸುತ್ತ ಮುಕ್ತವಾದ ಆಲೋಚನೆಗಳು ಹುಟ್ಟಿಕೊಳ್ಳುವಂತಹ ವಾತಾವರಣಕ್ಕೆ ಪ್ರೇರಣೆಯಾಗಬಹುದು. ಆ ನಿಟ್ಟಿನಲ್ಲಿ ಕುಂಬಳಂಗಿ ಗ್ರಾಮ ಸಾಧಿಸಿರುವುದು ಸಣ್ಣ ಮೊತ್ತದ ಸಾಧನೆಯೇನಲ್ಲ.
ಕರ್ನಾಟಕದಲ್ಲೂ ಅಭಿಯಾನ
ಕಳೆದ ಎರಡು ವರ್ಷಗಳ ಹಿಂದೆ ಮುಟ್ಟಿನ ಬಟ್ಟಲುಗಳ ಕುರಿತು ಕರ್ನಾಟಕದಲ್ಲೂ ಅಭಿಯಾನ ನಡೆದಿದ್ದು, “ಗುಟ್ಟಿನಿಂದ ಬಟ್ಟಲಿನೆಡೆಗೆ ದಿಟ್ಟ ನಡಿಗೆ-ಪ್ರವಾಹ ಸಂತ್ರಸ್ತ ಸಹೋದರಿಯೆಡಗೆ ನಾವು” ಹೆಸರಿನಲ್ಲಿ ಮಹಿಳಾ ಹೋರಾಟಗಾರ್ತಿಯರ ಸಣ್ಣ ತಂಡವೊಂದು ಕೊಡಗು ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ 1000 ಮುಟ್ಟಿನ ಬಟ್ಟಲುಗಳನ್ನು ಹಂಚಿ, ಅದರ ಬಳಕೆ ಕುರಿತು ತರಬೇತಿ ನೀಡಿದ್ದರು.
ಬಹುತೇಕ ಮಂದಿಗೆ ಈ ಅಭಿಯಾನದಿಂದಲೇ ಮುಟ್ಟಿನ ಬಟ್ಟಲು ಎಂಬ ಉತ್ಪನ್ನವೊಂದು ಇರುವ ವಿಚಾರವೇ ಅರಿವಿಗೆ ಬಂದಿತ್ತು. ಈ ಅಭಿಯಾನದ ಭಾಗವಾಗಿದ್ದ ಸಂಜ್ಯೋತಿ ಅವರು ಕುಂಬಳಂಗಿ ಗ್ರಾಮದ ಸಾಧನೆ ಕುರಿತು ‘ಪ್ರತಿಧ್ವನಿ’ಯೊಂದಿಗೆ ಪ್ರತಿಕ್ರಿಯಿಸಿದ್ದು, “ಕೇರಳದ ಕುಂಬಳಂಗಿ ಹಳ್ಳಿಯಲ್ಲಿ ಸರ್ಕಾರ ಅಲ್ಲಿನ ಹೆಣ್ಣು ಮಕ್ಕಳಿಗೆ 5000 ಮುಟ್ಟಿನ ಬಟ್ಟಲುಗಳನ್ನು ಹಂಚಿ ಅದರ ಬಳಕೆಯ ಬಗೆಗೆ ತರಬೇತಿಯಿತ್ತಿದೆ ಎಂಬ ಸುದ್ದಿ ಕೇಳಿ ಬಹಳ ಖುಷಿಯೆನಿಸಿತು ಎಂದಿದ್ದಾರೆ.
ಇದು ಅತ್ಯಂತ ಪ್ರಗತಿಪರ ಹೆಜ್ಜೆ. ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ಎಂಟರಿಂದ ಹತ್ತು ಗಂಟೆಗಳಿಗೊಮ್ಮೆ ಸ್ವಚ್ಛಗೊಳಿಸಿ ಬಳಸಬಹುದಾದ ಈ ಮುಟ್ಟಿನ ಬಟ್ಟಲು ನೀಡುವ ಸ್ವಾತಂತ್ರ್ಯ ತುಂಬ ದೊಡ್ಡದು. ಈಗಿರುವ ಯಾವುದೇ ಪರ್ಯಾಯಗಳಿಗಿಂತಲೂ ಮುಟ್ಟಿನ ಬಟ್ಟಲು ಅತಿ ಹೆಚ್ಚು ಸುರಕ್ಷಿತ ಮತ್ತು ಆರಾಮದಾಯಕವಾದದ್ದು. ಜೊತೆಗೆ ಆರ್ಥಿಕವಾಗಿಯೂ ಬಹಳ ಉಳಿತಾಯದಾಯಕವಾದದ್ದು. ಕೇವಲ 4-5 ತಿಂಗಳಿನಲ್ಲಿ ಅಗ್ಗದ ಸ್ಯಾನಿಟರಿ ಪ್ಯಾಡಿಗೆ ಖರ್ಚು ಮಾಡುವಷ್ಟು ಹಣದಲ್ಲಿ ಒಂದು ಮುಟ್ಟಿನ ಬಟ್ಟಲು ಕೊಳ್ಳಬಹುದು ಮತ್ತು ಅದನ್ನು ಏಳರಿಂದ ಎಂಟು ವರ್ಷಗಳವರಗೆ ಮರುಬಳಕೆ ಮಾಡಬಹುದು ಎಂದು ವಿವರಿಸಿದರು.
“ಇದು ಕೇವಲ ಮಹಿಳಾಪರವಾದ ನಡೆ ಮಾತ್ರವಲ್ಲ, ಪರಿಸರ ರಕ್ಷಣೆಯ ಕಡೆಗೂ ಇದೊಂದು ದೊಡ್ಡ ಹೆಜ್ಜೆ. ಒಬ್ಬ ಮಹಿಳೆ ಪ್ರತಿ ಋತು ಚಕ್ರದಲ್ಲಿ ದಿನಕ್ಕೆ ಸರಾಸರಿ 4 ಸ್ಯಾನಿಟರಿ ಪ್ಯಾಡಿನಂತೆ 5-6 ದಿನಗಳಲ್ಲಿ 20-24 ಪ್ಯಾಡ್ ಬಳಸಿದರೆ ಒಟ್ಟು ಪರಿಸರಕ್ಕೆ ಸೇರುವ ಟನ್’ಗಟ್ಟಲೆ ಪ್ಲಾಸ್ಟಿಕ್ ಮತ್ತು ಇತರ ಘನಕಸದ ಪ್ರಮಾಣವನ್ನು ಅಂದಾಜಿಸಿದರೆ ಮುಟ್ಟಿನ ಬಟ್ಟಲನ್ನು ಉಪಯೋಗಿಸುವುದರ ಅಪಾರ ಉಪಯುಕ್ತತೆ ಅರಿವಿಗೆ ಬರುತ್ತದೆ. ಸರ್ಕಾರ ಇಂತಹ ಕಾರ್ಯಕ್ರಮ ಕೈಗೊಂಡಾಗ ಅದರ ಉಪಯೋಗ ಮಹಿಳೆಯರಿಗಷ್ಟೇ ಸೀಮಿತವಾಗಿರದೆ ಎಲ್ಲ ಜನರಿಗೂ ಮತ್ತು ಒಟ್ಟಾರೆ ಪರಿಸರಕ್ಕೂ ದಕ್ಕುತ್ತದೆ. ಹಾಗಾಗಿ ಇದು ಮಹಿಳಾಪರ, ಜನಪರ ಮತ್ತು ನಿಜ ಅರ್ಥದಲ್ಲಿ ಪ್ರಗತಿಪರವಾದ ನಡೆ ಎನ್ನುತ್ತಾರೆ ಸಂಜ್ಯೋತಿ.
ಮುಂದುವರೆದು, “2019 ರ ಪ್ರವಾಹದ ಸಂದರ್ಭದಲ್ಲಿ ಕೇರಳದ ಇಂತಹದೇ ಮಾದರಿಯನ್ನಿಟ್ಟುಕೊಂಡು ನಾವು ಕೆಲ ಗೆಳತಿಯರು ಸಹೃದಯರ ಸಹಾಯದೊಂದಿಗೆ “ಗುಟ್ಟಿನಿಂದ ಬಟ್ಟಲೆಡೆಗೆ ದಿಟ್ಟಹೆಜ್ಜೆ” ಅಭಿಯಾನ ಮಾಡಿ, ಕೊಡಗು ಸೇರಿದಂತೆ ಉತ್ತರ ಕರ್ನಾಟಕದ ಹಲವು ಪ್ರವಾಹಪೀಡಿತ ಜಿಲ್ಲೆಗಳಲ್ಲಿ 1000 ಮುಟ್ಟಿನ ಬಟ್ಟಲುಗಳನ್ನು ಹಂಚಿ, ಆ ಹೆಣ್ಣು ಮಕ್ಕಳಿಗೆ ಅದರ ಬಳಕೆಯ ತರಬೇತಿಯಿತ್ತದ್ದು ಒಂದು ಸಾರ್ಥಕ ನೆನಪು ಎಂದರು.
“ಕರ್ನಾಟಕ ಸರ್ಕಾರವೂ ಮತಾಂತರ ನಿಷೇಧ ಕಾನೂನು, ಗೋರಕ್ಷಣೆ ಎಂಬಂತ ದ್ವೇಷಪೂರಿತ, ಜನವಿರೋಧಿ, ಸಂವಿಧಾನವಿರೋಧಿ ನಡೆಗಳನ್ನು ಬದಿಗಿಟ್ಟು ಇಂತಹ ಮಹಿಳಾಪರ, ಜನಪರ ಹಾಗೂ ಪರಿಸರ ಕಾಳಜಿಯುಳ್ಳ ವಿಷಯಗಳಿಗೆ ಇನ್ನಾದರೂ ಪ್ರಾಮುಖ್ಯತೆ ನೀಡಲಿ..” ಎನ್ನುವುದು ಸಂಜ್ಯೋತಿ ಒತ್ತಾಯವಾಗಿದೆ.