ಬಿಜೆಪಿಯ ರಾಜಕೀಯ ಆಟದ ಒಳಸುಳಿಗಳನ್ನು ಅರಿಯಲು ಸೋತಿರುವ ಪಕ್ಷಗಳು ಇಂದು ವಿರೋಧ ಪಕ್ಷದ ಖುರ್ಚಿಯಲ್ಲಿ ಅಸಮಾಧಾನ ಪಡುವಂತಾಗಿದೆ. ರಾಜಕೀಯ ಪಕ್ಷವಾಗಿ ರೂಪುಗೊಂಡು ಶತಕ ಕಳೆದರೂ ಕಾಂಗ್ರೆಸ್ ಇನ್ನೂ ಕೇಂದ್ರದಲ್ಲಿ ಬಿಜೆಪಿಯ ಆಟವನ್ನು ಅರಿಯಲು ಸಾಧ್ಯವಾಗಿಲ್ಲ. ಆದರೆ, ಬಿಜೆಪಿಯ ಆಟದಲ್ಲಿ ಬಿಜೆಪಿಯನ್ನೇ ಸೋಲಿಸಿದ ಏಕೈಕ ವ್ಯಕ್ತಿ ಎಂದರೆ ಅದು ಅರವಿಂದ ಕೇಜ್ರಿವಾಲ್.
ಇದು ಉತ್ಪ್ರೇಕ್ಷೆ ಎಂದು ಅನಿಸಿದರೂ ತಪ್ಪು ಲೆಕ್ಕಾಚಾರವಲ್ಲ. ಸಾಲು ಸಾಲು ಸೋಲು ಕಂಡಿರುವ ಕಾಂಗ್ರೆಸ್, ಬಿಜೆಪಿ ವಿರುದ್ಧ ಇನ್ನೂ ಬಲವಾದ ತಂತ್ರಗಾರಿಕೆಯನ್ನು ರೂಪಿಸುವಲ್ಲಿ ವಿಫಲವಾಗಿದೆ. ಮೇಲಾಗಿ ಹಿರಿಯ ನಾಯಕರು ಒಬ್ಬರ ನಂತರ ಒಬ್ಬರು ಪಕ್ಷ ತ್ಯಾಗ ಮಾಡುತ್ತಿರುವುದರಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಆಮ್ ಆದ್ಮಿ ಪಕ್ಷದಿಂದ ಕಲಿಯುವುದು ಸಾಕಷ್ಟಿದೆ.
ರಾಷ್ಟ್ರ ರಾಜಧಾನಿಯಲ್ಲಿಯೇ ಬಿಜೆಪಿಗೆ ಸತತವಾಗಿ ತಲೆನೋವು ಕೊಡುವಲ್ಲಿ ಯಶಸ್ವಿಯಾದ ಏಕೈಕ ವ್ಯಕ್ತಿ ಅರವಿಂದ್ ಕೇಜ್ರಿವಾಲ್. ಇತ್ತೀಚಿನ ಕೆಲವು ಘಟನೆಗಳನ್ನು ನೋಡಿದರೆ, ಆಮ್ ಆದ್ಮಿ ಪಕ್ಷದ ವರ್ಷಸ್ಸಿಗೆ ಧಕ್ಕೆ ತರಲು ಬಿಜೆಪಿ ಮಾಡಿದ ಯತ್ನಗಳು ವಿಫಲವಾಗಿದೆ. ಮಿಗಿಲಾಗಿ, ಕೇಜ್ರಿವಾಲ್ ಕೈಗೆ ಕೋಲು ಕೊಟ್ಟು ಪೆಟ್ಟು ತಿನ್ನುವ ಪರಿಸ್ಥಿತಿಗೆ ಬಂದು ನಿಂತಿದೆ.
ಆಮ್ ಆದ್ಮಿ ಪಕ್ಷದ ಸಾಧನೆಗಳನ್ನು ಮರೆಮಾಚಲು, ಬಿಜೆಪಿಯು ಸಿಬಿಐ ಬಳಸಿ ಕುತಂತ್ರವನ್ನು ಮಾಡಿದ್ದೇನೋ ನಿಜ. ಆದರೆ, ಇದರಿಂದ ಆದ ಲಾಭವಾದರೂ ಏನು? ಮನೀಷ್ ಸಿಸೋಡಿಯಾಗೆ ಕೇಂದ್ರ ಸರ್ಕಾರವೇ ಕ್ಲೀನ್ ಚಿಟ್ ನೀಡಿದಂತೆ ಆಮ್ ಆದ್ಮಿ ಪಕ್ಷ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದೆ. ದೆಹಲಿ ಅಬಕಾರಿ ನೀತಿಯಲ್ಲಿ ಅವ್ಯವಹಾರ ಆಗಿದೆ ಎಂದು ಸಿಬಿಐ ದಾಳಿ ನಡೆಸಿದರೂ ಮನೀಷ್ ಸಿಸೋಡಿಯಾ ವಿರುದ್ಧ ಪ್ರಬಲವಾದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವಲ್ಲಿ ಕೇಂದ್ರ ವಿಫಲವಾಗಿದೆ.
ಇದಕ್ಕೂ ಮುಂಚೆ, ನ್ಯೂಯಾರ್ಕ್ ಟೈಮ್ಸ್ ದಿನಪತ್ರಿಕೆಯಲ್ಲಿ ದೆಹಲಿಯ ಶಿಕ್ಷಣ ನೀತಿಯನ್ನು ಹಾಡಿಹೊಗಳಿದ್ದು ಬಿಜೆಪಿ ಪಾಲಿಗೆ ನುಂಗಲಾರದ ತುತ್ತಾಗಿತ್ತು. ಈ ವರದಿಯು ಜಾಹಿರಾತಿನ ರೂಪದಲ್ಲಿದೆ ಎಂದು ಆರೋಪಿಸುವ ಪ್ರಯತ್ನವನ್ನು ಬಿಜೆಪಿ ಮಾಡಿತ್ತು. ಆದರೆ, ಇದೊಂದು ವಸ್ತುನಿಷ್ಟ ವರದಿ, ಈ ವರದಿಗಾಗಿ ಯಾವುದೇ ಹಣ ಪಡೆದಿಲ್ಲ ಎಂದು ನ್ಯೂಯಾರ್ಕ್ ಟೈಮ್ಸ್ ದಿನಪತ್ರಿಕೆಯು ಸ್ಪಷ್ಟಪಡಿಸಿದ್ದು, ಬಿಜೆಪಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗ ಉಂಟುಮಾಡಿತ್ತು. ಕೇಜ್ರಿವಾಲ್ ವಿರುದ್ಧ ರಾಜಕೀಯ ತಂತ್ರಗಾರಿಕೆ ರೂಪಿಸಲು ವಿಫಲರಾದ ಹತಾಶೆ ದೆಹಲಿ ಬಿಜೆಪಿ ನಾಯರಲ್ಲಿ ಮೂಡಿತ್ತು.
ಅರವಿಂದ್ ಕೇಜ್ರಿವಾಲ್ ಕೆಲವೇ ಕೆಲವು ವಹಿವಾಟುದಾರರ ಸುಮಾರು ಹತ್ತು ಲಕ್ಷ ಕೋಟಿ ಸಾಲವನ್ನು ‘ರೈಟ್ ಆಫ್’ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿತು. ಈ ಸಂದರ್ಭದಲ್ಲಿ ಕೇಂದ್ರ ವಿತ್ತ ಸಚಿವೆಯನ್ನೇ ಮುಂದಕ್ಕೆ ಕರೆದು ‘ರೈಟ್ ಆಫ್’ ಎಂದರೆ ಏನು? ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದರು. ಇದಕ್ಕೆ ಪ್ರಕತಿಕ್ರಿಯಿಸಿದ ವಿತ್ತ ಸಚಿವೆ ರೈಟ್ ಆಫ್ ಎಂದರೆ, ಸಾಲವನ್ನು ವಸೂಲಿ ಮಾಡುವುದಿಲ್ಲ ಎಂಬ ಅರ್ಥವನ್ನು ನೀಡುವುದಿಲ್ಲ ಎಂದು ಹೇಳಿ ಕೇಜ್ರಿವಾಲ್ ಪರವಾದ ಉತ್ತರ ನೀಡಿದ್ದರು.
ಇತ್ತೀಚಿಗೆ, ದೆಹಲಿಯಲ್ಲಿ ಕುದುರೆ ವ್ಯಾಪಾರ ನಡೆಯುತ್ತಿದೆ, ಆಪರೇಷನ್ ಕಮಲದ ಸೂಚನೆ ಸಿಗುತ್ತಿದೆ ಎಂದು ಹೊಸ ವರಸೆ ತೆಗೆದಿದ್ದ ಕೇಜ್ರಿವಾಲ್, ದೆಹಲಿ ವಿಧಾನಸಭೆಯಲ್ಲಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದರು. “ಚುನಾಯಿತ ಸರ್ಕಾರಗಳ ಸೀರಿಯಲ್ ಕಿಲ್ಲರ್” ಎಂದು ಬಿಜೆಪಿಯನ್ನು ಟೀಕಿಸಿದ್ದರು. ಮಧ್ಯಪ್ರದೇಶ, ಕರ್ನಾಟಕ, ಗೋವಾ, ಮಣಿಪುರ, ಮೇಘಾಲಯ, ಅರುಣಾಚಲಪ್ರದೇಶ, ಮಹಾರಾಷ್ಟ್ರಗಳ ಉದಾಹರಣೆ ನೀಡಿ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು. ಎಲ್ಲಕ್ಕಿಂತಲೂ ಮಿಗಿಲಾಗಿ, ಬಿಜೆಪಿಯ ಕುದುರೆ ವ್ಯಾಪಾರದ ರೀತಿಯನ್ನು ಸುಲಭವಾಗಿ ಸದನದ ಮುಂದೆ ಬಿಚ್ಚಿಟ್ಟರು.
ಬಿಜೆಪಿ ಇಲ್ಲಿಯವರೆಗೆ ಸರಿಸುಮಾರು 270ಕ್ಕೂ ಹೆಚ್ಚು ಶಾಸಕರನ್ನು ತಲಾ ರೂ. 20 ಕೋಟಿ ನೀಡಿ ಖರೀದಿಸಿದೆ. ಈ ಹಣವನ್ನು ಎಲೆಕ್ಟೋರಲ್ ಬಾಂಡ್ ಮುಖಾಂತರ ಬಿಜೆಪಿ ಗಳಿಸುತ್ತಿದೆ. ಬಿಜೆಪಿಯ ಉದ್ಯಮಿ ಸ್ನೇಹಿತರು ತಮ್ಮ ಸಾಲ ಮನ್ನಾ ಮಾಡಿದ ಕಾರಣಕ್ಕಾಗಿ ಬಿಜೆಪಿಗೆ ಎಲೆಕ್ಟೋರಲ್ ಬಾಂಡ್ ಮುಖಾಂತರ ದೇಣಿಗೆ ನೀಡುತ್ತಿದ್ದಾರೆ, ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಒಂದು ದೊಡ್ಡ ಸಮಸ್ಯೆಯನ್ನು ಶಾಲಾ ಮಕ್ಕಳಿಗೆ ಟೀಚರ್ ಬಿಡಿಸಿ ಹೇಳಿದಂತೆ ಎಲೆಕ್ಟೋರಲ್ ಬಾಂಡ್, ಅದರ ಹಿಂದಿನ ಅವ್ಯವಹಾರ, ಆ ಹಣ ಎಲ್ಲಿ ಬಳಕೆಯಾಗುತ್ತಿದೆ, ಬಿಜೆಪಿಯ ಕುತಂತ್ರ ಏನು ಎಂಬುದನ್ನು ಕೇಜ್ರಿವಾಲ್ ಅತ್ಯಂತ ಸಂಕ್ಷಿಪ್ತವಾಗಿ ಹಾಗೂ ಸರಳವಾಗಿ ವಿವರಿಸಿದ್ದಾರೆ.
ಈ ರೀತಿ ಹಲವು ಬಾರಿ ಬಿಜೆಪಿಯ ಪ್ರೊಪಗಾಂಡವನ್ನು ಎದುರಿಸಲು ಆಮ್ ಆದ್ಮಿ ಪಕ್ಷವು ಬಿಜೆಪಿಯ ತಂತ್ರಗಾರಿಕೆಯನ್ನೇ ಬಳಸಿಕೊಂಡಿದೆ. ಕಾಂಗ್ರೆಸ್’ನಂತೆ ಬಿಜೆಪಿ ತೋಡಿದ ಖೆಡ್ಡಾಕ್ಕೆ ಅಷ್ಟು ಸುಲಭದಲ್ಲಿ ಉರುಳದ ಆನೆ ಕೇಜ್ರಿವಾಲ್. ಕಾಂಗ್ರೆಸ್ ಅನ್ನು ಭೃಷ್ಟ, ಕುಟುಂಬ ರಾಜಕಾರಣದ ಮೂಲ ಮತ್ತು ಮುಸ್ಲಿಂ ಒಲೈಕೆಯ ಪಕ್ಷವೆಂದು ಬಿಜೆಪಿ ಬ್ರಾಂಡ್ ಮಾಡಿದರೂ, ಅಂತಹ ಯಾವುದೇ ವಿಚಾರವನ್ನು ಮುಂದಿಟ್ಟುಕೊಂಡು ಆಮ್ ಆದ್ಮಿ ಪಕ್ಷ ಮತ್ತು ಕೇಜ್ರಿವಾಲ್’ರನ್ನು ಮಣಿಸಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ.
ಕೇಜ್ರಿವಾಲರನ್ನು ಪ್ರತಿಬಾರಿ ನೆಲಕ್ಕೆ ತಳ್ಳಿದಾಗ ಚೆಂಡಿನಂತೆ ಮತ್ತೆ ಪುಟಿದೇಳುತ್ತಿದ್ದಾರೆ. ಮುಂದಿನ ಲೋಕಸಭಾ ಚುನಾವಣೆ ತುಂಬಾ ಹತ್ತಿರದಲ್ಲಿ ಇರುವ ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಕೇಜ್ರಿವಾಲರಿಂದ ಉಳಿದ ವಿಪಕ್ಷಗಳು ಕಲಿಯುವುದು ಬಹಳಷ್ಟಿದೆ. ಬಿಜೆಪಿಯ ಅಂಗಳದಲ್ಲಿ ಬಿಜೆಪಿಯನ್ನು ಸೋಲಿಸುವುದು ಸುಲಭವಲ್ಲ, ಆದರೆ ಅಸಾಧ್ಯವಲ್ಲ ಎಂದು ಕೇಜ್ರಿವಾಲ್ ಈಗಾಗಲೇ ನಿರೂಪಿಸಿದ್ದಾರೆ.