ಬಿಗ್ ಬಾಸ್ ಓಟಿಟಿಯಲ್ಲಿ ಪಾಲ್ಗೊಂಡಿದ್ದ ನಟ, ರಾಜಕಾರಣಿ ಅರ್ಜುನ್ ರಮೇಶ್ ನಾಯಕನಾಗಿ ನಟಿಸಿರುವ “ಕೌಟಿಲ್ಯ” ಚಿತ್ರ ಆಗಸ್ಟ್ 26 ರಂದು ಬಿಡುಗಡೆಯಾಗುತ್ತಿದೆ.
ನಿರ್ದೇಶಕ ಪ್ರಭಾಕರ್ ಶೇರಖಾನೆ ಮಾತನಾಡಿ ವಿಭಿನ್ನ ಕಥಾಹಂದರ ಹೊಂದಿರುವ ನಮ್ಮ ಚಿತ್ರಕ್ಕೆ ನೀವು, ಆರಂಭದಿಂದಲೂ ನೀಡುತ್ತಿರುವ ಪ್ರೋತ್ಸಾಹಕ್ಕೆ ನನ್ನ ಧನ್ಯವಾದ. ಈಗಾಗಲೇ ಬಿಡುಗಡೆಯಾಗಿರುವ ನಮ್ಮ ಚಿತ್ರದ ಟ್ರೇಲರ್ ಪ್ರೇಕ್ಷಕರ ಮನ ತಲುಪಿದೆ. ರಕ್ಷಿತ್ ಶೆಟ್ಟಿ, ನಿರ್ದೇಶಕ ಸೂರಿ ಸೇರಿದಂತೆ ಸಾಕಷ್ಟು ಗಣ್ಯರು ಸಹ ಟ್ರೇಲರ್ ಬಗ್ಗೆ ಉತ್ತಮ ಮಾತುಗಳಾಡಿದ್ದಾರೆ ಎಂದು ತಿಳಿಸಿದ್ದಾರೆ.
ನಾನು ಈ ಹಿಂದೆ “ಶನಿ” ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾಗಿನಿಂದಲೂ ನೀವು ನೀಡುತ್ತಿರುವ ಪ್ರೋತ್ಸಾಹ ಈ ಚಿತ್ರಕ್ಕೂ ಮುಂದುವರೆದಿದೆ. ನನ್ನದು ಈ ಚಿತ್ರದಲ್ಲಿ ಆರ್ಕಿಟೆಕ್ಟ್ ಇಂಜಿನಿಯರ್ ಪಾತ್ರ. ಒಬ್ಬ ಇಂಜಿನಿಯರ್ ಚಾಣಕ್ಯನ ತಂತ್ರಗಳನ್ನು ಯಾವ ರೀತಿ ಬಳಸಿಕೊಳ್ಳುತ್ತಾನೆ ಎನ್ನುವುದನ್ನು ಈ ಚಿತ್ರದಲ್ಲಿ ನೋಡಬಹುದು ಎಂದು ನಾಯಕ ಅರ್ಜುನ್ ರಮೇಶ್ ತಮ್ಮ ಪಾತ್ರ ಹಾಗೂ ಚಿತ್ರದ ಕುರಿತು ಮಾಹಿತಿ ನೀಡಿದ್ದಾರೆ.

ನಾಯಕಿ ಪ್ರಿಯಾಂಕ ಚಿಂಚೋಳಿ ಮಾತನಾಡಿ ನಾನು ಈ ಚಿತ್ರದಲ್ಲಿ ಪತ್ರಕರ್ತೆಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ನನ್ನನ್ನು ಧಾರಾವಾಹಿಗಳಲ್ಲಿ ಮುಗ್ಧ ಹುಡುಗಿಯ ಪಾತ್ರದಲ್ಲಿ ನೋಡಿದ್ದೀರಿ. ಇದರಲ್ಲಿ ಸ್ವಲ್ಪ ಡಿಫರೆಂಟ್ ಪಾತ್ರ ಮಾಡಿದ್ದೇನೆ ವಿಭಿನ್ನ ಪಾತ್ರ ನೀಡಿರುವ ನಿರ್ದೇಶಕರಿಗೆ ಧನ್ಯವಾದ ಎಂದು ಹೇಳಿದ್ದಾರೆ.
ನಂತರ ಮಾತನಾಡಿದ ನಿರ್ಮಾಪಕ ವಿಜೇಂದ್ರ.ಬಿ.ಎ ಚಿತ್ರ ಉತ್ತಮವಾಗಿ ಮೂಡಿಬರಲು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ.